ಕರ್ನಾಟಕ ಎಫ್ಐಆರ್ ಹಿಂತೆಗೆದುಕೊಳ್ಳಬಾರದು
ಏಪ್ರಿಲ್ ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್. ಪಾಟೀಲ್ ಬೆಳಗಾವಿಗೆ ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದಾಗ ಕನ್ನಡಿಗರ ವಿರುದ್ಧ ದ್ವೇಷಮಯ ಭಾಷಣ ಮಾಡಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಆದೇಶದಂತೆ ಬೆಳಗಾವಿಯ ಪೊಲೀಸರು ಆರ್.ಆರ್. ಪಾಟೀಲ್ ವಿರುದ್ಧ ಐಪಿಸಿ ಸೆಕ್ಷನ್ 153 (ಎ) ಅಡಿ ಎಫ್ಐಆರ್ ದಾಖಲಿಸಿದ್ದರು. ಕೋರ್ಟಿನಲ್ಲಿ ಈ ಆರೋಪ ಸಾಬೀತಾದರೆ ಮುಂದೆ ಅದು ಮಹಾರಾಷ್ಟ್ರದವರೆಲ್ಲರಿಗೂ ದೊಡ್ಡ ಅವಮಾನಕರ ಪ್ರಸಂಗವಾಗಿ ಪರಿಗಣಿಸಿ ಮರಾಠಿಗರ ಅಭಿಮಾನಕ್ಕೆ ದೊಡ್ಡ ಪೆಟ್ಟು ಬೀಳಬಹುದೆಂದು ಮುಂಚಿತವಾಗಿಯೇ ಅಪಾಯವನ್ನು ಗ್ರಹಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವೀರಾಜ್ ಚವ್ಹಾಣ್ ಕರ್ನಾಟಕದ ತನ್ನದೇ ಆದ ಪಕ್ಷದ ಮುಖ್ಯಮಂತ್ರಿಗೆ ಎಫ್ಐಆರ್ ಹಿಂತೆಗೆಯುವಂತೆ ಇತ್ತೀಚಿಗೆ ಆಗ್ರಹಿಸಿದ್ದಾರಂತೆ. ಆದರೆ ಮರಾಠಿಗರ ಭಾಷಾ ದುರಭಿಮಾನಕ್ಕೆ ಹಾಗೂ ನಿರಂತರ ಜಗಳಗಂಟತನಕ್ಕೆ ಸರಿಯಾದ ಪಾಠ ಕಲಿಸುವ ಅವಕಾಶ ಈಗ ಸಲೀಸಾಗಿ ಸಿಕ್ಕಿರುವುದನ್ನು ಕರ್ನಾಟಕ ಕಳೆದುಕೊಳ್ಳದೇ ಐದು ದಶಕಗಳ ಮರಾಠಿಗರ ಕಿರುಕುಳಕ್ಕೆ ಮರ್ಮಾಘಾತದ ಪೆಟ್ಟು ಕೊಡುವಂತಹ ಸದವಕಾಶವನ್ನು ಉಪಯೋಗಿಸಬೇಕು ಹಾಗೂ ಎಫ್ಐಆರ್ ಹಿಂತೆಗೆದುಕೊಳ್ಳಬಾರದು.
ಹೊರಗಿನ ಮರಾಠಿಗರು ಕರ್ನಾಟಕಕ್ಕೆ ಬಂದು ತಮ್ಮ ಭಾಷಾ ದುರಭಿಮಾನ ತೋರಿಸುವುದಲ್ಲದೇ ಕರ್ನಾಟಕದೊಳಗೆಯೇ ಕನ್ನಡಿಗರು ತಮ್ಮ ಕನ್ನಡ ಅಭಿಮಾನ ತೋರಿಸಿದರೂ ಅವರಿಂದ ಸಹಿಸಿಕೊಳ್ಳಲಾಗುವುದಿಲ್ಲ. ಮಹಾರಾಷ್ಟ್ರ (ಮುಂಬೈ) ಮೂಲದ ರಾಷ್ಟ್ರೀಕೃತ ಬ್ಯಾಂಕಿನ ಬೆಂಗಳೂರು ಡಿವಿಜನ್ನಿನಲ್ಲಿ ನಿವೃತ್ತಿಯಾಗುತ್ತಿರುವ ಅಧಿಕಾರಿಯೊಬ್ಬ ತಮ್ಮ ಬ್ಯಾಂಕಿನಲ್ಲಿ ಕನ್ನಡ ಭಾಷೆಯ ಉಪಯೋಗದ ಪರವಾಗಿ ಹಾಗೂ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಭಾಷಣ ಮಾಡಿದರೆಂದು ನಿವೃತ್ತಿಯ ನಂತರ ಅವರ ಮೇಲೆ ಬೇರೆ ಯಾವುದೋ ನೆಪದಲ್ಲಿ ಸೈಬರ್ ಕ್ರೈಂ ಕೇಸು ದಾಖಲಿಸಿ ಆ ಬ್ಯಾಂಕಿನವರು ಕಿರುಕುಳ ಕೊಟ್ಟಿರುವ ಪ್ರಕರಣ ಇನ್ನೂ ಹಸಿರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್. ಪಾಟೀಲ್ ವಿರುದ್ಧ ಯಾವುದೇ ವಿನಾಯಿತಿ ತೋರದೇ ಬೆಳಗಾವಿಯಲ್ಲಿಯ ಕೇಸನ್ನು ನಮ್ಮ ಸರ್ಕಾರ ಮುಂದುವರಿಸಲೇಬೇಕು. ಕೇಸು ಹಿಂಪಡೆದರೆ ಅದು ಬೆಳಗಾವಿ ಕನ್ನಡಿಗರಿಗೆ ಮಾಡಿದ ದ್ರೋಹ.
- ಪ್ರಶೀಸ್. ಕೆ.ಶರ್ಮ
ಶಿಸ್ತುಕ್ರಮ: ವಿಶ್ವಾಸ ಹುಟ್ಟಿಸಲಿ
ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ (ಕ.ಪ್ರ. 29.5.13). ಈಗಾಗಲೇ ಲೋಕಾಯುಕ್ತರು ಹಲವಾರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಸರ್ಕಾರದ ಅನುಮತಿಯ ಸಲುವಾಗಿ ವರ್ಷಗಳಿಂದ ಕಾಯುತ್ತಿದ್ದಾರೆ. ಈ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯನವರು ಅನುಮತಿ ನೀಡಿ ತಾವು ಹೇಳುವುದನ್ನು ಮಾಡಿ ತೋರಿಸುತ್ತೇನೆಂದು ಜನರಿಗೆ ಮನದಟ್ಟು ಮಾಡಿ ತೋರಿಸಲಿ.
- ಪ.ರಾ. ಸಿದ್ಧೇಶ್ವರ, ಜಿ-195, ಸಹಕಾರ ನಗರ, ಬೆಂಗಳೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

