ಆಡ್ವಾಣಿ ಬಾಂಬ್ ಸಿಡಿಯಲಿಲ್ಲ ಆತಂಕದಲ್ಲಿ ಎನ್.ಡಿ.ಎ.
ಭಾರತೀಯ ಜನತಾ ಪಾರ್ಟಿಯ ಅತಿ ಹಿರಿಯ ನಾಯಕ ಲಾಲ್ಕೃಷ್ಣ ಆಡ್ವಾಣಿ ಪಕ್ಷದ ಅತ್ಯುನ್ನತ ಸಮಿತಿಗಳ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಸುದ್ದಿ ಕೇಳಿದಾಗ, ಗೋವೆಯಲ್ಲಿ ಸೇರಿದ್ದ ನಾಯಕರಲ್ಲಿ ಬಹುಮಂದಿ ಮೌನಕ್ಕೆ ಶರಣಾಗಿದ್ದರ ಹಿನ್ನೆಲೆಯಲ್ಲಿ ಇದ್ದಿದ್ದು, ಪಕ್ಷದ ಸದಸ್ಯತ್ವಕ್ಕೇನೂ ರಾಜಿನಾಮೆ ಕೊಟ್ಟಿಲ್ಲವಲ್ಲ, ಸಮಿತಿಗಳಲ್ಲಿ ಇದ್ದರೆಷ್ಟು, ಬಿಟ್ಟರೆಷ್ಟು ಎನ್ನುವ ಭಾವನೆ.
ಈ ಸಂಬಂಧದಲ್ಲಿ ಬಿಜೆಪಿಯ ಮೌನವನ್ನು ಪಕ್ಷದಲ್ಲಿನ ಅನೇಕ ನಾಯಕರೇ, ಆಡ್ವಾಣಿ ಅವರು ಇಳಿ ವಯಸ್ಸಿನಲ್ಲಿ ಈ ರೀತಿ ತಮ್ಮ ವ್ಯಕ್ತಿತ್ವದ ಪ್ರದರ್ಶನಕ್ಕೆ ಹೊರಡಬಾರದಾಗಿತ್ತು ಎನ್ನುವ ಅರ್ಥ ಬರುವ ರೀತಿಯಲ್ಲೂ ಮಾತಾಡಿದ್ದಾರೆ.
ಇಂತಹ ಪ್ರತಿಕ್ರಿಯೆಯನ್ನು ಆಡ್ವಾಣಿ ಅವರು ನಿರೀಕ್ಷಿಸಿರಲಿಲ್ಲ. ಆಡ್ವಾಣಿಯ ಸಮೀಪವರ್ತಿಗಳನ್ನು ಬಿಟ್ಟರೆ ಹಿರಿಯರೆಲ್ಲ ಸುಮ್ಮನಿದ್ದರು.
ಆರಂಭದಲ್ಲಿ ರಾಜಿನಾಮೆಯನ್ನು ಹಿಂದಕ್ಕೆ ಪಡೆಯಲು ಮಾಡಿದ ಮನವಿಗಳನ್ನೆಲ್ಲ ತಿರಸ್ಕರಿಸಿದ್ದ ಆಡ್ವಾಣಿ ಅವರಿಗೆ ನಿಜವಾಗಲೂ ಏನು ಬೇಕಾಗಿತ್ತು ಎನ್ನುವುದನ್ನು ಯಾರೂ ಬಾಯಿ ಬಿಟ್ಟು ವಿವರಿಸಲೇ ಇಲ್ಲ.
ಪಕ್ಷದ ಅನೇಕ ಸದಸ್ಯರು ಆದರ್ಶಹೀನರಾಗಿದ್ದರೆ, ಪಕ್ಷದ ಸಮಿತಿಗಳಿಗೆ ರಾಜಿನಾಮೆ ಕೊಟ್ಟರೆ ಸಿಗುವ ಫಲವಾದರೂ ಏನು? ವಾಸ್ತವದಲ್ಲಿ ಆಡ್ವಾಣಿ ಅವರಿಗೆ ನರೇಂದ್ರ ಮೋದಿ ರಾಷ್ಟ್ರೀಯ ವೇದಿಕೆಯನ್ನು ಏರುವುದು ಇಷ್ಟವಿರಲಿಲ್ಲ. ಅದರಿಂದ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟ ಒಂದಾಗಿ ಉಳಿಯಲಿಕ್ಕಿಲ್ಲವೆಂದೇ ಅವರ ಭಾವನೆ. ಅದು ನಿಜ ಇದ್ದರೂ ಇರಬಹುದು. ಅಂತಹ ಪ್ರಮೇಯವನ್ನು ಇತರರೂ ಊಹಿಸಿ, ಆ ಪರಿಣಾಮವನ್ನು ಎದುರಿಸಲು ಸಿದ್ಧರಾಗಿದ್ದರು.
ಬಿಜೆಪಿಯ ನೂತನ ನಾಯಕತ್ವವೂ ಆಡ್ವಾಣಿ ಅವರು ರಾಜಿನಾಮೆಯನ್ನು ಹಿಂದಕ್ಕೆ ಪಡೆಯಲು, ಗೌರವದಿಂದ ಇಟ್ಟ ಹೆಜ್ಜೆಯನ್ನು ಹಿಂದಿಡಲು, ಒಂದು ಊರುಗೋಲನ್ನು ಅಪೇಕ್ಷಿಸಿದ್ದು ಗೊತ್ತಿದ್ದರೂ ಸುಮ್ಮನಿತ್ತು. ವಾಸ್ತವದಲ್ಲಿ ಈ ಹಂತದಲ್ಲಿ ಆಡ್ವಾಣಿ ಅಥವಾ ಬಿಜೆಪಿ ನಾಯಕತ್ವಗಳಲ್ಲಿ ಯಾರು ಮೊದಲು ಕಣ್ಣು ಮಿಟುಕಿಸುತ್ತಾರೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಪರಿಸ್ಥಿತಿಯನ್ನೇ ಅನೇಕರು ಆಡ್ವಾಣಿ ಗ/ಡ ಬಿಜೆಪಿ ಎಂದು ವರ್ಣಿಸಿದ್ದು. ಕೊನೆಗೂ ಬಿಜೆಪಿ ತನ್ನ ಮೌನವನ್ನು ಮುರಿಯಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರೇ ಆಡ್ವಾಣಿ ಅವರಿಗೆ ಟೆಲಿಫೋನ್ ಮೂಲಕ ರಾಜಿನಾಮೆಯನ್ನು ಹಿಂದಕ್ಕೆ ಪಡೆಯಲು ಹೇಳಿದಾಗ ಪರಿಸ್ಥಿತಿ ತಿಳಿಯಾಯಿತು. ಆಡ್ವಾಣಿ ಸರಸಂಘ ಚಾಲಕರ ಆದೇಶವನ್ನು ಮೀರುವ ಸ್ಥಿತಿಯಲ್ಲಿ ಇರಲಿಲ್ಲ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಗೋವಾ ಅಧಿವೇಶನದ ಎಲ್ಲ ಕಾರ್ಯಕ್ರಮಗಳನ್ನು ಆಡ್ವಾಣಿ ರಾಜಿನಾಮೆ ಪತ್ರದ ಪ್ರಕರಣ ನುಂಗಿ ಹಾಕಿತ್ತು. ಬಿಜೆಪಿ ನಾಯಕತ್ವ, ಆಡ್ವಾಣಿ ಅವರಿಗೂ ಯಾವ ಆಶ್ವಾಸನೆಯನ್ನೂ ನೀಡಿಲ್ಲ, ನರೇಂದ್ರ ಮೋದಿ ಅವರಿಗೂ ಪಕ್ಷದ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷರ ಸ್ಥಾನವನ್ನು ಕೊಟ್ಟು, ರಾಷ್ಟ್ರೀಯ ವೇದಿಕೆಯಲ್ಲಿ ಸ್ಥಾನವನ್ನು ಒದಗಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ವಿಶೇಷ ಆಶ್ವಾಸನೆಯನ್ನೂ ನೀಡಿಲ್ಲ.
ಈ ವಿಚಾರದಲ್ಲಿ ಆಡ್ವಾಣಿ- ನರೇಂದ್ರ ಮೋದಿ ಅವರಿಬ್ಬರೂ ಸಮಾನ ಸಂತ್ರಸ್ತರು ಅಥವಾ ಸಂತೃಪ್ತರು. ಪಕ್ಷದ ಪ್ರಧಾನಿ ಸ್ಥಾನದ ಅಭ್ಯರ್ಥಿಯ ವಿಚಾರ ಇನ್ನೂ ನಿರ್ಧಾರವಾಗಿಲ್ಲ ಎನ್ನುವ ಸ್ಥಿತಿಯೇ ಮುಂದುವರಿದಿದೆ. ಆದರೆ ನರೇಂದ್ರ ಮೋದಿ, ಅಪೇಕ್ಷಿಸಿದ್ದ ರಾಷ್ಟ್ರೀಯ ಮನ್ನಣೆಯನ್ನು ನಿಸ್ಸಂದೇಹವಾಗಿ ಪಡೆದಿದ್ದಾರೆ.
ನಿರೀಕ್ಷಿಸಿದಂತೆಯೇ ಈಗ ಬಿಜೆಪಿಯ ಇತ್ತೀಚಿನ ಹೆಜ್ಜೆ, ರಾಷ್ಟ್ರೀಯ ಜನತಾಂತ್ರಿಕ ಕೂಟದ ಅಸ್ತಿತ್ವವನ್ನೇ ಪ್ರಶ್ನಿಸುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿದಂತಾಗಿದೆ. ಕೂಟದ ಏಕೈಕ ಸೆಕ್ಯುಲರ್ ಅಂಗಪಕ್ಷವಾದ ಸಂಯುಕ್ತ ಜನತಾದಳ, ಕೂಟದಿಂದ ನಿರ್ಗಮಿಸಲು ಸಜ್ಜಾಗುತ್ತಿರುವುದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ತನೆಯಿಂದಲೇ ಪ್ರಕಟವಾಗಿದೆ.
ಪ್ರಕಟಿತ ವರದಿಗಳಂತೆ, ಬಿಜೆಪಿಯನ್ನು ಹೊರಗಿಟ್ಟೂ, ಬಿಹಾರದಲ್ಲಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಹಲವು ಪಕ್ಷೇತರ ಶಾಸಕರ ಜತೆ ಮಾತುಕತೆಯನ್ನು ನಿತೀಶ್ಕುಮಾರ್ ಆರಂಭಿಸಿದ್ದಾರೆ. ಈಗಿನ ಗಣಿತದ ಪ್ರಕಾರ ಅದು ಸಾಧ್ಯವಾದರೂ ಆಗಬಹುದೇನೋ. ಆದರೆ ತಮ್ಮ ಈ ವರ್ತನೆಯನ್ನು ಬಿಹಾರದಲ್ಲಿ ಜನಸಮುದಾಯಗಳ ಮುಂದೆ ಸಮರ್ಥಿಸಿಕೊಳ್ಳುವುದು ಕಷ್ಟ. ಅವರೇನೂ ಇತ್ತೀಚೆಗೆ ಬಿಜೆಪಿ ನೇತೃತ್ವದ ಕೂಟಕ್ಕೆ ಬಂದವರಲ್ಲ. ಸಮತಾ ಪಕ್ಷದ ಕಾಲದಿಂದಲೂ ನಿತೀಶ್ ಕುಮಾರ್ ಬಿಹಾರದ ರಾಜಕೀಯದಲ್ಲಿ ಬಿಜೆಪಿಯ ಸಹವಾಸದಲ್ಲೇ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದು. ಸರ್ಕಾರ ರಚಿಸಲು ಬಹುಮತವನ್ನು ಗಳಿಸಿದ್ದು. ಇದುವರೆಗೂ ಸುಪ್ತವಾಗಿದ್ದ ಅವರ ಸೆಕ್ಯುಲರ್ ಪ್ರಜ್ಞೆ, ಈಗ ನರೇಂದ್ರ ಮೋದಿ ಬಿಜೆಪಿಯ ರಾಷ್ಟ್ರೀಯ ವೇದಿಕೆಗೆ ಬಂದ ಕೂಡಲೇ ಜಾಗೃತವಾಯಿತೇನು ಎಂದು ಜನರು ಕೇಳುವ ಪ್ರಶ್ನೆಗೆ ಉತ್ತರಿಸಲು ನಿತೀಶ್ಗೆ ಸಾಧ್ಯವಾಗಬಹುದು. ಆದರೆ ಮೈದಾನದ ರಾಜಕೀಯದಲ್ಲಿ ಲಾಲೂ ಪ್ರಸಾದ ಯಾದವ್ ಇಂತಹದ್ದೇ ಸವಾಲನ್ನು ಎಸೆದಾಗ ಅದನ್ನು ಎದುರಿಸುವುದು ಸುಲಭವಲ್ಲ.
ಸದ್ಯದಲ್ಲಿ ಬಿಹಾರದ ವಿಧಾನ ಸಭೆ ಚುನಾವಣೆ ಇಲ್ಲ. ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟ ದುರ್ಬಲವಾದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಎದುರಾಳಿಯೇ ಇಲ್ಲದಂತೆ ಆದೀತು. ಮತ್ತೆ ಓನಾಮದಿಂದಲೇ ರಾಜಕೀಯ ಆರಂಭವಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

