ಸಂಪಾದಕೀಯ

ವಿವೇಕದ ನಿರ್ಧಾರ

Published On :

ಬಡತನದ ರೇಖೆಗಿಂತ ಕೆಳಗಿರುವವರಿಗೆ ಒಂದು ರುಪಾಯಿಗೆ ಒಂದು ಕಿಲೋದಂತೆ 30 ಕಿಲೋ ಅಕ್ಕಿಯನ್ನು ನೀಡುವ ನಿರ್ಧಾರದಲ್ಲಿ ಸರ್ಕಾರ ಅಲ್ಪ ಬದಲಾವಣೆಯನ್ನು ಮಾಡಿಕೊಂಡಿದೆ. ಇದೊಂದು ವಾಸ್ತವವನ್ನು ಅರಿತ ಬಳಿಕ ಕೈಗೊಂಡ ವಿವೇಕದ ತೀರ್ಮಾನ ಎಂದೇ ಹೇಳಬೇಕು.
 ಈ ಯೋಜನೆ ಈ ತಿಂಗಳಲ್ಲಿಯೇ ಜಾರಿಯಾಗಬೇಕಿತ್ತು. ಸಾಕಷ್ಟು ಪೂರ್ವ ತಯಾರಿ ಇಲ್ಲದ ಕಾರಣ ಅದನ್ನು ಮುಂದೂಡಲಾಗಿತ್ತು. ಇದು ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯ ಭಾಗವೇ ಆಗಿತ್ತು. ಪ್ರಮಾಣ ವಚನ ಸ್ವೀಕರಿಸಿದ ನಂತರ ಹೊಸ ಘೋಷಣೆಯನ್ನು ಮುಖ್ಯಮಂತ್ರಿಯವರು ಮಾಡಿಯೇ ಬಿಟ್ಟರು. ಅದು ಏಕವ್ಯಕ್ತಿ ಸಂಪುಟದ ನಿರ್ಧಾರವಾಗಿತ್ತು.
ಪಡಿತರ ವ್ಯವಸ್ಥೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಕೊಡುವುದಕ್ಕೆ ಎಷ್ಟು ಅಕ್ಕಿ ಬೇಕಾಗುತ್ತದೆ ಮತ್ತು ನಮ್ಮಲ್ಲಿ ಎಷ್ಟು ಅಕ್ಕಿಯ ಸಂಗ್ರಹ ಇದೆ ಎಂಬ ಲೆಕ್ಕವನ್ನು ಹಾಕಿರಲಿಲ್ಲ. ಕೇಂದ್ರದಿಂದ ಎಷ್ಟು ಅಕ್ಕಿ ದೊರೆಯಲಿದೆ ಎಂಬ ಲೆಕ್ಕವೂ ಇದ್ದಿರಲಿಲ್ಲ. ಅಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಇದ್ದರೂ ಅಕ್ಕಿಯನ್ನು ಪಡೆಯುವುದು ಸಿದ್ದರಾಮಯ್ಯನವರಿಗೆ ಸಾಧ್ಯವಾಗಲಿಲ್ಲ. ಮುಕ್ತಪೇಟೆಯಲ್ಲಿ ಅಕ್ಕಿಯನ್ನು ಖರೀದಿಸಬೇಕಾಗುತ್ತದೆ.
ಇದಕ್ಕೆ ಪ್ರತಿಪಕ್ಷಗಳಿಂದ ಮಾತ್ರವಲ್ಲ ಸಾರ್ವಜನಿಕರಿಂದಲೂ ಅಪಸ್ವರ ಕೇಳಿಬಂದಿತ್ತು. ಅಕ್ಕಿಯನ್ನು ಕೊಡುವ ಬದಲು ಅಕ್ಕಿಯನ್ನು ಖರೀದಿಸುವ ಸಾಮರ್ಥ್ಯ ಒದಗಿಸುವಂಥ ಉದ್ಯೋಗವನ್ನು ನೀಡಿ ಎಂಬ ಮಾತು ಕೇಳಿ ಬಂದಿತ್ತು. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಯಾರೂ ಉಪವಾಸ ಸಾಯಬಾರದು ಎಂಬುದು ತಾತ್ವಿಕವಾಗಿ ನಿಜ. ಜನರ ಬಡತನವನ್ನು ತೊಲಗಿಸುವಂತಹ ಗ್ರಾಮೀಣ ಉದ್ಯೋಗಖಾತ್ರಿ ಮೊದಲಾದ ಯೋಜನೆಗಳಿವೆ. ಆದರೆ ಅವೆಲ್ಲ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.
 ಇನ್ನು, ಪಡಿತರ ಚೀಟಿಯನ್ನು ಆನ್‌ಲೈನ್ ಮೂಲಕ ನೀಡುತ್ತಿದ್ದಾರೆ. ಈ ಆನ್‌ಲೈನ್‌ಗೇ ಕನ್ನಹಾಕಿ ನಕಲಿ ಪಡಿತರ ಚೀಟಿ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದಾವಣಗೆರೆಯಲ್ಲಿ ಈಗಾಗಲೆ ಇಂಥ ಒಂದು ಪ್ರಕರಣ ಪತ್ತೆಯಾಗಿದ್ದು ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ. ರಾಜ್ಯದ ಇತರ ಕಡೆಗಳಲ್ಲೂ ಇಂಥ ಪ್ರಕರಣಗಳು ನಡೆದಿರಬಹುದು.
ಸುಲಭದಲ್ಲಿ ಸರ್ಕಾರದ ಸವಲತ್ತು ಸಿಗುವುದೆಂದು ಒಂದೇ ಮನೆಯಲ್ಲಿಯೇ ಎರಡು ಮೂರು ಪಡಿತರ ಚೀಟಿಗಳನ್ನು ಮಾಡಿಸಿಕೊಂಡಿರುವ ಸಾಧ್ಯತೆಯೂ ಇದೆ. ಪುಕ್ಕಟೆ ಸಿಕ್ಕರೆ ತನಗೊಂದು, ತನ್ನ ಅಪ್ಪನಿಗೊಂದು ಎನ್ನುವವರಿದ್ದಾರೆ. ಇಂಥ ನೈತಿಕತೆಯನ್ನು ಕಳೆದುಕೊಂಡಿರುವ ಪ್ರಜಾಸಮುದಾಯ ಇರುವಾಗ ಸರ್ಕಾರದ ಜನೋಪಯೋಗಿ ಯೋಜನೆಗಳು ಅರ್ಹರನ್ನು ತಲುಪುದೇ ಕಷ್ಟ. ಒಬ್ಬನೇ ವ್ಯಕ್ತಿಯು ಇರುವ ಪಡಿತರ ಚೀಟಿಗಳ ಸಂಖ್ಯೆ ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಅಧಿಕ ಎಂಬ ಮಾಹಿತಿ ಮೇಲಿನ ಹೇಳಿಕೆಯನ್ನು ಸಮರ್ಥಿಸುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಏಕ ವ್ಯಕ್ತಿಯ ಕಾರ್ಡಿಗೆ 10 ಕಿಲೋ, ಇಬ್ಬರಿದ್ದರೆ 20 ಕಿಲೋ ಮತ್ತು ಮೂವರು ಮತ್ತು ಅದಕ್ಕೂ ಹೆಚ್ಚಿದ್ದರೆ 30 ಕಿಲೋ ನೀಡುವ ತೀರ್ಮಾನ ಸರ್ಕಾರದ ಹೊರೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಿದೆ. ಈ ಎಲ್ಲ ಸಾಧಕ ಬಾಧಕಗಳನ್ನು ಮೊದಲೇ ಆಲೋಚಿಸಿ ಹೇಳಿಕೆ ನೀಡಿದ್ದರೆ ಮುಖ್ಯಮಂತ್ರಿ ಇನ್ನೂ ಹೆಚ್ಚು ಪ್ರಬುದ್ಧರು ಎನ್ನಿಸಿಕೊಳ್ಳುತ್ತಿದ್ದರು.
 ಬಡತನ ರೇಖೆಗಿಂತ ಮೇಲಿರುವವರಿಗೂ ಇದುವರೆಗೆ ರಿಯಾಯಿತಿ ದರದಲ್ಲಿ ಅಕ್ಕಿ ದೊರೆಯುತ್ತಿತ್ತು. ಅದನ್ನು ಈಗ ನಿಲ್ಲಿಸಿದ್ದಾರೆ. ಹೀಗಾಗಿ ಆ ವರ್ಗದ ಜನರಿಗೆ ಅಸಮಾಧಾನ ಆಗಬಹುದು. ಪಡಿತರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇವನ್ನು ತಡೆಗಟ್ಟುವುದಕ್ಕೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪಡಿತರ ಅಂಗಡಿಗಳು ತಿಂಗಳಲ್ಲಿ ರಜಾ ದಿನ ಹೊರತು ಪಡಿಸಿ ಉಳಿದೆಲ್ಲ ದಿನ ತೆರೆದಿರುವಂತೆ ಆದೇಶಿಸಬೇಕು. ಅಕ್ಕಿಯ ಬಳಕೆ ಕಡಿಮೆ ಇರುವ ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಕ್ರಮವಾಗಿ ಜೋಳ ಮತ್ತು ರಾಗಿಯನ್ನು ವಿತರಿಸುವ ಉದ್ದೇಶವನ್ನು ಸರ್ಕಾರ ಪ್ರಕಟಿಸಿದೆ. ಅಕ್ಕಿಯ ಹೊರೆಯನ್ನು ಇದು ತಗ್ಗಿಸಲಿದೆ. ಇದೂ ಸ್ವಾಗತಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.