ಅನಿವಾರ್ಯದ ಏರಿಕೆ
ರಾಜ್ಯದಲ್ಲಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ಬಸ್ಗಳ ಪ್ರಯಾಣ ದರವನ್ನು ಹೆಚ್ಚಿಸಿದೆ. ಕೆಎಸ್ಆರ್ಟಿಸಿ ವೇಗದೂತ ಮತ್ತು ರಾಜಹಂಸ ಬಸ್ಗಳಲ್ಲಿ ಶೇ.10.5ರಷ್ಟು ಮತ್ತು ಬೆಂಗಳೂರು ನಗರ ಸಾರಿಗೆ ಬಸ್ಗಳಲ್ಲಿ ಶೇ.16ರಷ್ಟು ಏರಿಕೆ ಮಾಡಿರುವುದು ಬಡ ಪ್ರಯಾಣಿಕರಿಗೆ ಹೊರೆಯೇ ಆಗಿದೆ.
ಡೀಸೆಲ್ ದರ ಕಳೆದ ಜನವರಿಯಿಂದೀಚೆ ಸರ್ಕಾರ ಐದು ಬಾರಿ ಪರಿಷ್ಕರಣೆ ಮಾಡಿರುವುದು ಹಾಗೂ ಸಾರಿಗೆ ಸಿಬ್ಬಂದಿಯ ವೇತನ ಹೆಚ್ಚಳ ಮಾಡಬೇಕಿರುವುದು ಈ ಏರಿಕೆಗೆ ಕಾರಣ ಎಂದು ಸರ್ಕಾರ ಹೇಳಿದೆ. ಆದರೆ ಚುನಾವಣೆಗೆ ಸ್ವಲ್ಪ ಮುಂಚೆ ಬಿಜೆಪಿ ಸರ್ಕಾರವು ಬಸ್ ಪ್ರಯಾಣ ದರವನ್ನು ಏರಿಸಿತ್ತು.
ಸಾರ್ವಜನಿಕ ಸಾರಿಗೆಯನ್ನು ಜನಪ್ರಿಯಗೊಳಿಸಬೇಕು ಎಂಬುದು ಒಂದು ಪರಿಕಲ್ಪನೆ. ಸುಗಮ ಮತ್ತು ಸುಖಕರ ಪ್ರಯಾಣದ ಜೊತೆಗೆ ಕಿಸೆಗೆ ಭಾರವೆನಿಸದ ಟಿಕೆಟ್ ದರವೂ ಇದಕ್ಕೆ ಪೂರಕವಾಗಿರಬೇಕು. ಬಡವರು ಮತ್ತು ಮಧ್ಯಮವರ್ಗದವರೇ ಈ ಬಿಎಂಟಿಸಿ ಬಸ್ಗಳ ಪ್ರಯಾಣಿಕರು. ದ್ವಿಚಕ್ರ ವಾಹನಗಳಲ್ಲಿ ತೆರಳುವುದು ಬಸ್ ಪ್ರಯಾಣಕ್ಕಿಂತ ಒಳ್ಳೆಯದು ಎನ್ನುವ ಸ್ಥಿತಿಗೆ ತಲುಪಬಾರದು. ವಿದ್ಯಾರ್ಥಿಗಳ ಬಸ್ಪಾಸ್ ದರವನ್ನು ಹೆಚ್ಚಿಸದೆ ಇರುವುದು ಸ್ವಾಗತಾರ್ಹವಾಗಿದೆ. ಅಲ್ಲದೆ ಅವರ ಪ್ರಯಾಣದ ದೂರವನ್ನು 50 ಕಿ.ಮೀ.ನಿಂದ 60 ಕಿ.ಮೀಟರ್ಗೆ ಹೆಚ್ಚಿಸಲಾಗಿದೆ.
ಡಾಲರ್ ಎದುರು ರುಪಾಯಿಯ ಮೌಲ್ಯ ಕುಸಿದಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದೆ. ಇದರಿಂದ ದೇಶದಲ್ಲಿಯೂ ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗೆ ಪ್ರಯಾಣದ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಸಾರಿಗೆ ಸಂಸ್ಥೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣವನ್ನು ಹಾಕಬೇಕು. ಆದಾಯ ಸೋರಿಕೆಯನ್ನು ತಡೆಯಬೇಕು. ಇದರಿಂದ ಸಂಸ್ಥೆ ಇನ್ನಷ್ಟು ಆರ್ಥಿಕವಾಗಿ ಸಬಲವಾಗುವುದು. ಇದರ ಬೆನ್ನಲ್ಲೇ ಖಾಸಗಿ ಸಾರಿಗೆಯವರೂ ತಮ್ಮ ಪ್ರಯಾಣ ದರವನ್ನು ಹೆಚ್ಚಿಸಲಿದ್ದಾರೆ. ಕ್ಯಾಬ್ಗಳು, ರಿಕ್ಷಾಚಾಲಕರೂ ದರ ಏರಿಕೆಗೆ ಪಟ್ಟುಹಿಡಿಯಬಹುದು. ಪರ್ಯಾಯ ಇಂಧನ ಮೂಲದ ಸಂಶೋಧನೆಗೆ ಮತ್ತು ಬಳಕೆಗೆ ಸರ್ಕಾರ ಆದ್ಯತೆ ನೀಡಬೇಕು. ಎಥನಾಲ್ ಬಳಕೆಯನ್ನು ಹೆಚ್ಚಿಸಬೇಕು. ಬಯೋಡೀಸೆಲ್ ತಯಾರಿಕೆಗೆ ಪ್ರೋತ್ಸಾಹ ನೀಡಬೇಕು. ಬೃಹತ್ ಸಾರಿಗೆ ಸಂಸ್ಥೆಯಲ್ಲಿ ಇವುಗಳ ಬಳಕೆಯಿಂದ ಪ್ರಯಾಣದ ಭಾರವನ್ನು ತಗ್ಗಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

