ರುಪಾಯಿ ಮೌಲ್ಯ ಕುಸಿತ: ವಿದೇಶೀ ಹಣ ಪಲಾಯನ
ಡಾಲರ್ ಮೌಲ್ಯದ ಜತೆಯ ಹೋಲಿಕೆಯಲ್ಲಿ ರುಪಾಯಿಯ ಮೌಲ್ಯದ ಕುಸಿತ ಕಳೆದ ಹಲವಾರು ವರ್ಷಗಳಿಂದಲೂ ಕಂಡು ಬರುತ್ತಿದೆ. ಅದರ ಪರಿಣಾಮವನ್ನು ಜನ ಬೆಲೆಗಳ ಏರಿಕೆಯ ಬಿಸಿಯ ರೂಪದಲ್ಲಿ ಅನುಭವಿಸುತ್ತಿದ್ದಾರೆ. ಈ ವಿಚಾರದಲ್ಲಿ ಉದ್ಯಮಿಗಳು ತಮ್ಮ ಗೋಳನ್ನು ಹೇಳಿಕೊಳ್ಳುತ್ತಿದ್ದರೂ ಕೇಳುವವರು ಯಾರೂ ಇರಲಿಲ್ಲ.
ಆದರೆ, ಈಗ ಒಂದು ಡಾಲರ್ಗೆ ಸುಮಾರು ಅರವತ್ತು ರುಪಾಯಿಗಳ ವಿನಿಮಯದರದ ಗೆರೆಯನ್ನು ದಾಟುವ ಸಂಭವವಿದೆ ಎನ್ನುವ ವರದಿಗಳು ಪ್ರಕಟವಾದ ಕೂಡಲೇ ವಿತ್ತೀಯ ಪ್ರಪಂಚದಲ್ಲಿ ಅಲ್ಲಕಲ್ಲೋಲವೇ ಕಂಡು ಬಂದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅರವತ್ತು ರುಪಾಯಿ ಗೆರೆಗೆ ಪಾವಿತ್ರ್ಯವೇನೂ ಇಲ್ಲ. ಅಬ್ಬಬ್ಬಾ ಎಂದರೆ ಅದೊಂದು ಮಾನಸಿಕ ಅನಿಸಿಕೆ ಅಷ್ಟೇ. ಈಗಾಗಲೇ ಅನೇಕ ಪಂಡಿತರು ರುಪಾಯಿಯ ಮೌಲ್ಯದ ಕುಸಿತದ ಪರಿಣಾಮ ಕುರಿತು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾಗಿದೆ. ಸ್ಥೂಲವಾಗಿ ಹೇಳುವುದಾದರೆ, ವಿದೇಶಿ ಸಂಸ್ಥೆಗಳು ಹೂಡಿದ್ದ ಹಣವನ್ನು, ಅದರಲ್ಲೂ ಸರ್ಕಾರದ ಸಾಲಪತ್ರಗಳಲ್ಲಿ ಹೂಡಿದ್ದ ಹಣವನ್ನು ಹಿಂದಕ್ಕೆ ಪಡೆದರೆ, ಉದ್ಯಮ ವಲಯ ಬಂಡವಾಳದ ಅಭಾವದಿಂದ ನರಳುವಂತಾಗಬಹುದು. ಈಗಾಗಲೇ ರಿಸರ್ವ್ ಬ್ಯಾಂಕ್, ತನ್ನಲ್ಲಿರುವ ಡಾಲರ್ಗಳನ್ನು ಪೇಟೆಯಲ್ಲಿ ಮಾರಿದರೆ, ಡಾಲರ್ಗಿರುವ ಬೇಡಿಕೆ ಕಡಿಮೆಯಾಗಿ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಆಸೆ ಇದೆ. ಆದರೆ ಅದಕ್ಕೆ ಮಿತಿ ಇದೆ.
ಒಂದು ಅಪ್ಪಟ ಆರ್ಥಿಕ ಬಿಕ್ಕಟ್ಟಿಗೆ ವಿತ್ತೀಯ ಪರಿಹಾರವನ್ನು ನಂಬುವುದಕ್ಕೂ ಇತಿ-ಮಿತಿ ಇದೆ. ಮೂಲತಃ ಇದು ಸರ್ಕಾರದ ವಿತ್ತೀಯ ನೀತಿಗೆ ಸಂಬಂಧಿಸಿದ ವಿಷಯ. ರಿಸರ್ವ್ ಬ್ಯಾಂಕಿನ ಕ್ರಮಗಳಿಂದ ಸರ್ಕಾರಕ್ಕೆ, ಪೇಟೆಗೆ ಸ್ವಲ್ಪಮಟ್ಟಿಗೆ ನೆರವು ಸಿಗಬಹುದಷ್ಟೇ. ಆದರೆ ಆರ್ಥಿಕ ಸಮಸ್ಯೆಗೆ ಅದೇ ಮದ್ದಾಗಲಾರದು.
ಸರ್ಕಾರ, ಆರ್ಥಿಕ ಸುಧಾರಣೆಗಳನ್ನು ಕುರಿತು ವಿಪರೀತ ಮಾತಾಡಿ ಅದನ್ನು ಜಾರಿಗೊಳಿಸುವುದರಲ್ಲಿ ವಿಪರೀತ ವಿಳಂಬ ಮಾಡಿದ್ದು ಈಗಿನ ಸಮಸ್ಯೆಯ ಪರಿಹಾರವನ್ನು ದೊರಕಿಸಿಕೊಡುವ ವಿಧಾನವಲ್ಲ. ಈ ವಿಳಂಬದಿಂದಲೇ ಇತ್ತೀಚಿನ ದಿನಗಳಲ್ಲಿ ವಿದೇಶೀ ಸಂಸ್ಥೆಗಳು ಸುಮಾರು 35,500 ಕೋಟಿ ರುಪಾಯಿಗಳಷ್ಟು ಮೌಲ್ಯದ ಸಾಲದ ಬಾಂಡ್ಗಳನ್ನು 10,000 ಕೋಟಿ ರುಪಾಯಿಗಳಷ್ಟು ಷೇರು ಬಂಡವಾಳದ ರೂಪದಲ್ಲಿ ಹಿಂದಕ್ಕೆ ಪಡೆದಿವೆ ಎನ್ನುವ ಪ್ರಕಟಿತ ವರದಿಗಳಿವೆ. ರಿಸರ್ವ್ ಬ್ಯಾಂಕ್ ಮಾಡಬೇಕಾದ ಕೆಲಸ ಬೇರೆ. ಸರ್ಕಾರ ತಾನು ಮಾಡಬೇಕಾದ ಕೆಲಸವನ್ನು ಮೊದಲು ಮಾಡಬೇಕು. ಸಾಧ್ಯವಿರುವಷ್ಟೂ ವಿತ್ತೀಯ ಕೊರತೆಯ ನಿಯಂತ್ರಣದ ಮೂಲಕ ಹಣದ ಅತಿ ಪ್ರಸರಣದ ಬೇಗೆಯನ್ನು ಕಡಿಮೆ ಮಾಡಬಹುದು. ಆದರೆ ಕೊಡುಗೆ - ಉಡುಗೊರೆಗಳು ಅದನ್ನು ಅಳಿಸಿ ಹಾಕುವುದು ಖಚಿತ.
ಸರ್ಕಾರ ಸ್ವೇಚ್ಛೆಯಿಂದ, ಹಲವು ಹತ್ತು ಯೋಜನೆಗಳ ಮೇಲೆ ಹಣವನ್ನು ಸುರಿದು, ಅದರ ಪರಿಣಾಮವಾಗಿ ಹಣದ ಬಳಕೆಯ ಸ್ವರೂಪವನ್ನೇ ವಿರೂಪಗೊಳಿಸಿದರೆ, ಬಂಡವಾಳ ಹೂಡಿಕೆಗೆ ಉತ್ತೇಜನವೇ ಉಳಿಯಲಿಕ್ಕಿಲ್ಲ. ಈಗಾಗಲೇ ಹಲವಾರು ವಲಯಗಳಲ್ಲಿ ಬಂಡವಾಳ ಹೂಡಿಕೆ ಸ್ಥಗಿತವಾಗಿದೆ. ಇದರಿಂದ ಹಣದ ಅತಿಪ್ರಸರಣದ ವೇಗ ಹೆಚ್ಚಿ, ರುಪಾಯಿಯ ಮೌಲ್ಯದ ಕುಸಿತಕ್ಕೆ ತಡೆಯೇ ಇಲ್ಲದಂತೆ ಆಗುವುದು ನಿಜ.
ಸರ್ಕಾರಕ್ಕೆ ಈ ವಿಚಾರ ಗೊತ್ತಿಲ್ಲ ಎಂದೇನೂ ಅಲ್ಲ. ಆದರೆ ರಾಜಕೀಯ ಕಾರಣಗಳಿಂದಾಗಿ, ನಿರ್ದಿಷ್ಟವಾದ ದಿಟ್ಟ ಹೆಜ್ಜೆಗಳನ್ನಿಡಲು ಹಿಂದೆ- ಮುಂದೆ ನೋಡುವ ನೀತಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

