ಕೇವಲ ರಾಷ್ಟ್ರೀಯ ನಾಯಕರ ಹೆಸರೇಕೆ?
ಬಿಜೆಪಿಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಣಾಳಿಕೆಯಲ್ಲಿ ಅಟಲ್, ದಯಾಳ್ ಹೆಸರಿನಲ್ಲಿ ಯೋಜನೆಗಳು. ಕರ್ನಾಟಕಕ್ಕೆ ಸಂಬಂಧವೇ ಇರದ ಬಿಜೆಪಿ ನಾಯಕರ ಹೆಸರುಗಳನ್ನು ಕರ್ನಾಟಕದಲ್ಲಿನ ಯೋಜನೆಗಳಿಗೆ ಇಡುತ್ತಿರುವುದನ್ನು ನೋಡಿದರೆ ರಾಷ್ಟ್ರೀಯ ನಾಯಕರ ದೆಹಲಿ ದಾಸ್ಯ ಅಸಹ್ಯ ತರಿಸುವಂತಿದೆ. ಕರ್ನಾಟಕದ ಸಾರಿಗೆಗೂ ಅಟಲ್ಗೂ, ಬೆಂಗಳೂರಿನ ಮೇಲ್ಸೇತುವೆಗೂ ದೀನ ದಯಾಳರಿಗೂ ಎಲ್ಲಿಯ ಸಂಬಂಧ? ಕಾಂಗ್ರೆಸ್ ಪಕ್ಷವೂ ಸಹ ಇದಕ್ಕೆ ಹೊರತಾಗಿಲ್ಲ. ಅವರ ಪ್ರಣೀತ ಯೋಜನೆಗಳೆಲ್ಲ ರಾಜೀವ್, ಇಂದಿರಾಮಯ! ಕರ್ನಾಟಕದ ಏಕೀಕರಣಕ್ಕೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಆಲೂರು ವೆಂಕಟರಾಯರು, ಅಂದಾನೆಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ ಪಾಟೀಲರು, ಹುತಾತ್ಮ ರಂಜಾನ್ ಸಾಬ್, ಅ.ನ.ಕೃ. ಅವರಂತಹ ಮಹನೀಯರ ಹೆಸರುಗಳು ಇವರಿಗೆ ಎಂದಿಗೂ ಹೊಳೆಯುವುದಿಲ್ಲ. ಒಟ್ಟಾರೆಯಾಗಿ ನಾಡು-ನುಡಿ-ನಾಡಿಗರ ಹಿತ ಕಾಯುವ ಪ್ರಬಲ ಪ್ರಾದೇಶಿಕ ಪಕ್ಷಗಳು ಹುಟ್ಟದಿದ್ದರೆ ಕನ್ನಡಿಗರಿಗೆ, ಕನ್ನಡತನಕ್ಕೆ ಉಳಿಗಾಲವಿಲ್ಲ.
- ಮಲ್ಲೇಶ ಬೆಳವಾಡಿ, ಬೆಂಗಳೂರು
ನಿಯಮವೇಕೆ ಗಾಳಿಗೆ?
ಬೆಂಗಳೂರಿನಾದ್ಯಂತ ಸರಿಯಾಗಿ ಕಣ್ ಹಾಯಿಸಿ ನೋಡಿದರೆ ದಿನೇ ದಿನೇ ಕನ್ನಡೇತರ ಜಾಹೀರಾತು ಫಲಕಗಳು ಹೆಚ್ಚಾಗುತ್ತಿರುವುದು ಕಾಣಸಿಗುತ್ತದೆ. ಸರ್ಕಾರದ ವಾಣಿಜ್ಯ ಕಾಯಿದೆ 24ಎ ನಿಯಮದ ಅನ್ವಯ ವಾಣಿಜ್ಯ ಸಂಸ್ಥೆಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಪ್ರಾಮುಖ್ಯ ಕೊಡಬೇಕು ಅಂತ ಹೇಳಿದೆ. ಆದರೆ ಹಲವಾರು ವಾಣಿಜ್ಯ ಸಂಸ್ಥೆಗಳು ಈ ನಿಯಮವನ್ನು ಗಾಳಿಗೆ ತೂರಿವೆ. ಹೀಗಿದ್ದರೂ ಸರಕಾರ ನಿಯಮ ಮೀರಿರುವವರ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ. ಈ ರೀತಿ ಮೊದಲಿಂದಲೂ ನಿರಂತರವಾಗಿ ಕಾನೂನು ಮುರಿಯಲಾಗುತ್ತಿದ್ದು ಇಂದಿಗೂ ಇದರ ವಿರುದ್ಧ ಜನಸಾಮಾನ್ಯರು ಪ್ರತಿಭಟನೆ ನಡೆಸಬೇಕಾದ ದಯನೀಯ ಸ್ಥಿತಿ ಇದೆ. ಇದಕ್ಕಿಂತಲೂ ವಿಪರ್ಯಾಸದ ಸಂಗತಿಯೋ ಅಥವ ಕನ್ನಡಿಗರ ದುರಾದೃಷ್ಟವೆಂಬಂತೆ, ಕಾನೂನು ಮುರಿಯುತ್ತಿರುವವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವ ಸರ್ಕಾರ, ಬದಲಾಗಿ ಇದರ ವಿರುದ್ಧ ಪ್ರತಿಭಟಿಸಿದವರನ್ನೇ ಕಾನೂನು ಮುರಿದರೆಂದು ಆರೋಪಿಸಿ ಬಂಧಿಸುವ ಕಾರ್ಯಕ್ಕೆ ಯಾವಾಗಲೂ ಮುಂದಾಗುತ್ತದೆ. ಹಾಗಾಗಿ ಸರ್ಕಾರವು ನಿಯಮ ಉಲ್ಲಂಘಿಸಿದವರ ವಿರುದ್ದ ಸೂಕ್ತ ಕ್ರಮ ಜರುಗಿಸಿ ಮತ್ತೆ ಈ ರೀತಿ ಪದೇ-ಪದೆ ನಿಯಮ ಉಲ್ಲಂಘನೆ ಮಾಡದ ಹಾಗೆ ಕ್ರಮ ಕೈಗೊಳ್ಳಬೇಕು.
- ಜಯಂತ ಸಿದ್ದಮಲ್ಲಪ್ಪ, ಬೇಗೂರು
ಇಂತಹ ಘಟನೆ ಮರುಕಳಿಸದಿರಲಿ
ರಾಮನಗರದಲ್ಲಿ ಸರ್ಕಾರಿ ಅವ್ಯವಸ್ಥೆಗೆ ಮನನೊಂದು ರೈತ ಗಂಗಯ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಸರ್ಕಾರ ಜನರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಅವು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿವೆಯೋ ಗೊತ್ತಿಲ್ಲ. ಆದರೆ ಅಲ್ಲೊಂದು ಇಲ್ಲೊಂದು ನಡೆಯುವ ಇಂತಹ ಘಟನೆಗಳು ಸರ್ಕಾರದ ಅವ್ಯವಸ್ಥೆಗೆ ಕೈಗನ್ನಡಿ ಆಗುತ್ತಿವೆ. ವೃದ್ಧರೊಬ್ಬರು ಕಷ್ಟಪಟ್ಟು ಕಚೇರಿಗೆ ಅಲೆಯುತ್ತಿದ್ದರೂ ಅವರ ಕೆಲಸ ಮಾಡಿಕೊಡಬೇಕೆನ್ನುವ ಕಿಂಚಿತ್ ಕರುಣೆ ಇಲ್ಲದ ಸರ್ಕಾರಿ ಅಧಿಕಾರಿಗಳೇ ಈ ಘಟನೆಗೆ ಹೊಣೆ. ಇಂತಹ ಘಟನೆ ನಡೆದಾಗ ಒಂದೆರಡು ಪ್ರತಿಭಟನೆಗಳಾಗುತ್ತವೆ. ಈಗಲೂ ಆಗುತ್ತಿವೆ. ಪ್ರತಿಭಟನೆಗೆ ಮಣಿದು ಪರಿಹಾರ ನೀಡಿ ಸರ್ಕಾರ ಸುಮ್ಮನಾಗಿಬಿಡಬಾರದು.ಅದರೊಟ್ಟಿಗೆ ಅಗತ್ಯ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು.
- ಮಂಜ ಎನ್, ದ್ವಿತೀಯ ಎಂ.ಎ., ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

