ನರೇಂದ್ರ ಮೋದಿಯ ದಾಪುಗಾಲು
ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ರಾಷ್ಟ್ರೀಯ ರಾಜಕೀಯ ಪಕ್ಷಗಳು ತಮ್ಮ ಪ್ರಧಾನಿ ಪೀಠದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಬೇಕೋ ಬೇಡವೋ ಎನ್ನುವ ವಿಚಾರ ಈಗ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿದೆ.
ದೇಶದ ಅತಿ ದೊಡ್ಡ ಹಾಗೂ ಅತಿ ಹಿರಿಯ ಪಕ್ಷವಾದ ಕಾಂಗ್ರೆಸ್ಸಿಗೆ ಆ ಸಮಸ್ಯೆ ಇರಲೇ ಇಲ್ಲ. ರಾಹುಲ ಗಾಂಧಿ ಅವರ ಹೆಸರು ಎಂದೋ ತೀರ್ಮಾನವಾಗಿದ್ದು, ಈಗ ಅದು ಅನುಮಾನಕ್ಕೆ ಆಸ್ಪದವೇ ಇಲ್ಲದ ರೀತಿಯಲ್ಲಿ ಪ್ರಕಟವಾಗಿದೆ.
ಭಾರತೀಯ ಜನತಾ ಪಾರ್ಟಿಯಲ್ಲಿ ಪಕ್ಷದ ಅತ್ಯಂತ ಪ್ರಖರ-ಪ್ರಭಾವಿ ವಾಗ್ಮಿ- ನಾಯಕ ಅಟಲ ಬಿಹಾರಿ ವಾಜಪೇಯಿ ಸಕ್ರಿಯ ರಾಜಕೀಯದಲ್ಲಿ ಇದ್ದಷ್ಟು ದಿನವೂ ಆ ಪ್ರಶ್ನೆ ಇರಲೇ ಇಲ್ಲ. ಪಕ್ಷಕ್ಕಿಂತ ಎತ್ತರವಾಗಿ ಬೆಳೆದು ನಿಂತ ನಾಯಕ ವಾಜಪೇಯಿ. ಈಗ ಪಕ್ಷಕ್ಕೆ ಹೊಸ ನಾಯಕನ ಅನ್ವೇಷಣೆ ಅನಿವಾರ್ಯ ಹಾಗೂ ಅಗತ್ಯ.
ನಿಜ. ಯಾವ ದೃಷ್ಟಿಯಿಂದ ನೋಡಿದರೂ ಭಾರತೀಯ ಜನತಾ ಪಾರ್ಟಿ ಏಕ ವ್ಯಕ್ತಿ ನಾಯಕತ್ವದ ಪಕ್ಷವಲ್ಲ. ಪಕ್ಷದಲ್ಲೂ ನಿಯಂತ್ರಣ ವ್ಯವಸ್ಥೆ ಇದೆ. ಪಕ್ಷವೂ ಭಾಗಿಯಾಗಿರುವ ಸಂಘ ಪರಿವಾರದಲ್ಲೂ ಕಟ್ಟುನಿಟ್ಟಾದ ವ್ಯವಸ್ಥೆ ಇದೆ. ಆದ್ದರಿಂದ ಇಲ್ಲಿ ನಿರಂಕುಶ ನಾಯಕತ್ವದ ವ್ಯವಸ್ಥೆ ಸಾಧ್ಯವೇ ಇಲ್ಲ.
ಈಗ ಸಂಸತ್ತಿನಲ್ಲಿ ಪ್ರಾತಿನಿಧ್ಯವಿರುವ ಎಲ್ಲ ಪ್ರಮುಖ ಪಕ್ಷಗಳಿಗೂ ನಾಯಕರು ಇದ್ದಾರೆ. ಎಲ್ಲ ಪಕ್ಷಗಳಲ್ಲೂ ಸಂಸದೀಯ ಪಕ್ಷದ ನಾಯಕರ ಆಯ್ಕೆ ಒಂದು ಔಪಚಾರಿಕ ಪ್ರಕ್ರಿಯೆ ಅಷ್ಟೇ. ಅದೇನೂ ಬದಲಾಗುವಂತಹ ವ್ಯವಸ್ಥೆ ಅಲ್ಲ.
ಈ ಹಿನ್ನೆಲೆಯಲ್ಲಿ ಶುಕ್ರವಾರ- ಶನಿವಾರ ದೆಹಲಿಯ ತಾಲಕಟೋರ ಒಳಾಂಗಣದ ಕ್ರೀಡಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿಯ ನೀತಿ ನಿರ್ದೇಶಕ ಸಂಸ್ಥೆಯಾದ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶದಲ್ಲಿ ಪಕ್ಷದ ಪ್ರಧಾನಿಯ ಅಭ್ಯರ್ಥಿಯ ಸ್ಥಾನಕ್ಕೆ, ಗುಜರಾತಿನಲ್ಲಿ ವಿಧಾನ ಸಭೆ ಚುನಾವಣೆಯ ಹ್ಯಾಟ್ರಿಕ್ ವೀರ, ಪಕ್ಷದ ರಾಷ್ಟ್ರೀಯ ಸಮಿತಿಯಲ್ಲಿ ಸಾಕಷ್ಟು ಪ್ರಭಾವವಿರುವ ನರೇಂದ್ರ ಮೋದಿ ಅವರ ಹೆಸರೇ ಕೇಳಿ ಬಂದಿದ್ದು ತೀರ ಸಹಜವಾದ ರಾಜಕೀಯ ಪ್ರಕ್ರಿಯೆ.
ಆ ಹೆಸರು ಅಧಿಕೃತವಾಗಿ ಪ್ರಸ್ತಾಪವಾಗದೇ ಇರಬಹುದಾಗಿತ್ತು. ಈಗಲೂ ಆ ಪ್ರಸ್ತಾಪಕ್ಕೆ ಪಕ್ಷದ ಅಧಿಕೃತ ಅಂಗೀಕಾರದ ಮುದ್ರೆ ಬಿದ್ದಿಲ್ಲ. ಆದರೆ ಪಕ್ಷದ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳ ಕೂಟದಲ್ಲಿ ಒಂದೇ ಸಮನೆ ಎಲ್ಲ ದಿಕ್ಕುಗಳಿಂದ ನರೇಂದ್ರ ಮೋದಿ- ನರೇಂದ್ರ ಮೋದಿ ಅವರ ಹೆಸರೇ ಸಾಮೂಹಿಕ ಮಂತ್ರದಂತೆ ಕೇಳಿ ಬಂದಿದ್ದು ಒಂದು ಅಸಾಮಾನ್ಯ ರಾಜಕೀಯ ಬೆಳವಣಿಗೆ. ಅದೇ ನಿರ್ಣಾಯಕವಾಯಿತು.
ಅಧಿವೇಶನದ ಇಡೀ ದಿನ, ನರೇಂದ್ರ ಮೋದಿ ತಮ್ಮ ತುಟಿಯನ್ನು ಎರಡು ಮಾಡಲಿಲ್ಲ. ಪಕ್ಷದ ನೂತನ ಅಧ್ಯಕ್ಷ ರಾಜನಾಥ ಸಿಂಗ್ ಅವರು ವೇದಿಕೆಯ ಮೇಲೆ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಾಗ ಕೇಳಿಸಿದ ಪ್ರಚಂಡ ಕರತಾಡನಕ್ಕೆ ಪೂರ್ವ ಸಿದ್ಧತೆ ನಡೆದಂತೆ ಕಂಡುಬಂದಿರಲಿಲ್ಲ. ರಾಜನಾಥ ಸಿಂಗ್ ನರೇಂದ್ರ ಮೋದಿಗೆ ಹಾಕಿದ ಆಳೆತ್ತರದ ಹೂವಿನ ಮಾಲೆಯ ಗಾತ್ರ ಹಾಗೂ ಸೌಂದರ್ಯವೇ ನರೇಂದ್ರ ಮೋದಿ ಅವರ ಹೆಸರಿಗೆ ಪಕ್ಷದ ಬೇರು ಮಟ್ಟದ ಸಂಘಟನೆಯ ನಾಯಕರ ಸಮುದಾಯದ ಸರ್ವಾನುಮತದ ಒಪ್ಪಿಗೆಗೆ ಸಾಕ್ಷಿಯಾಗಿತ್ತು.
ಇದು ಯಾವುದಕ್ಕೆ ಸಾಕ್ಷಿ? ಸದ್ಯಕ್ಕೆ ಬಿಜೆಪಿಯ ಪರವಾಗಿ ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳಲ್ಲಿ ನರೇಂದ್ರ ಮೋದಿ ಸಕ್ರಿಯವಾಗಿ ಪಾಲುಗೊಳ್ಳಲು ಪಕ್ಷ ನೀಡಿದ ಅಧಿಕಾರಕ್ಕೆ ಸಾಕ್ಷಿ ಅಷ್ಟೇ. ಅದು ಮೇಲ್ನೋಟದ ಮಾತು. ಆದರೆ ಪಕ್ಷದಲ್ಲಿ, ನರೇಂದ್ರ ಮೇದಿಯ ಆರಾಧಕರಿಗೂ ಗೊತ್ತು, ಅವರ ಬೆಂಬಲಿಗರಿಗೂ ಗೊತ್ತು ಹಾಗೂ ವಿರೋಧಿಗಳಿಗೂ ಗೊತ್ತಾಗಿರುವ ವಿಚಾರ ಎಂದರೆ, ಇನ್ನು ಮುಂದೆ ನರೇಂದ್ರ ಮೋದಿ ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖವಾದ ಪಾತ್ರಧಾರಿಯಾಗಿ ಬಿಜೆಪಿಯ ನಾಯಕರಾಗಿ ವರ್ತಿಸುತ್ತಾರೆ ಎನ್ನುವುದು.
ರಾಷ್ಟ್ರೀಯ ರಾಜಕೀಯ ಎಂದರೆ ಕೇವಲ ಸಂಸದೀಯ ರಾಜಕೀಯ ಅಷ್ಟೇ ಅಲ್ಲ. ಅದು ದೆಹಲಿ ಮೂಲದ ನಾಯಕರಿಗೇ ಸೀಮಿತವಾಗಿರಬೇಕು ಎಂದೇನೂ ಅಲ್ಲ.
ಬದಲಾದ ರಾಷ್ಟ್ರೀಯ ರಾಜಕೀಯದಲ್ಲಿ ಪ್ರಾದೇಶಿಕ ನಾಯಕರು, ಪಕ್ಷಗಳು ತಮ್ಮ ಅಸ್ತಿತ್ವವನ್ನು ಅನುಮಾನಕ್ಕೆ ಆಸ್ಪದವೇ ಇಲ್ಲದಂತಹ ರೀತಿಯಲ್ಲಿ ಪ್ರದರ್ಶಿಸುತ್ತಿರುವುದು ನಿಜ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಈಗ ಬಿಜೆಪಿಯ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿರುವುದನ್ನು ಎಲ್ಲರೂ ಒಪ್ಪಲೇಬೇಕು. ಅವರ ಆ ಸ್ಥಾನ-ಮಾನಕ್ಕೆ ಅಧಿಕೃತವಾದ ಮುದ್ರೆಯೂ ಸದ್ಯದಲ್ಲೇ ಲಭ್ಯವಾಗಬಹುದು. ಪಕ್ಷದ ಸಂಸದೀಯ ಮಂಡಳಿಯ ಅಧ್ಯಕ್ಷ ಸ್ಥಾನ ಅವರಿಗೆ ಲಭ್ಯವಾಗಲೂಬಹುದು.
ಅಲ್ಲಿಗೆ 2014ರ ಲೋಕಸಭೆ ಚುನಾವಣೆ ಸಮಯದ ವೇಳೆಗೆ ನರೇಂದ್ರ ಮೋದಿಯೇ ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ಎನ್ನುವುದು ತೀರ್ಮಾನವಾದ ವಿಚಾರ ಎಂದಾಯಿತು. ಆ ದಿಕ್ಕಿನಲ್ಲಿ ಶನಿವಾರ ನರೇಂದ್ರ ಮೋದಿ ದಾಪುಗಾಲು ಹಾಕಿದ್ದಾರೆ. ನಿಜ. ಅದೇ ಅಂತಿಮ ಹೆಜ್ಜೆ ಅಲ್ಲ. ಬಿಜೆಪಿ ನೇತೃತ್ವದ ಕೂಟದಲ್ಲಿ ಆ ವಿಚಾರದ ಪ್ರಸ್ತಾಪ ಇನ್ನೂ ಆಗಿಲ್ಲ. ಕಾಲಕ್ರಮದಲ್ಲಿ ಆ ಕೂಟದಲ್ಲಿ ವಿಷಯದ ಪ್ರಸ್ತಾಪವಾದರೂ ಆಗಬಹುದು. ಅದು ಲೋಕಸಭೆ ಚುನಾವಣೆಯ ಸಮಯದಲ್ಲಿ ಹೊಂದಾಣಿಕೆಯ ವಿಚಾರದ ಪ್ರಸ್ತಾಪವಾದಾಗ ತೀರ್ಮಾನವಾಗಬೇಕಾದ ಪ್ರಶ್ನೆ.
ಬಿಜೆಪಿ ನೇತೃತ್ವದ ಕೂಟದಲ್ಲಿ ಅಧಿಕೃತವಾಗಿ ಪ್ರಸ್ತಾಪವಾಗುವವರೆಗೂ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ನಾಯಕರಾಗಿಯೇ ಉಳಿಯಬೇಕಾಗುವುದು ಎನ್ನುವ ಮಾತು ನಿಜ. ಅದು ಸದ್ಯದಲ್ಲೇ ಅವಸರದಲ್ಲಿ ತೀರ್ಮಾನವಾಗಬೇಕಾದ ವಿಚಾರವೇನೂ ಅಲ್ಲ. ಬಿಜೆಪಿಯ ಸಂಘಟಕರಿಗೆ ತನ್ನ ಒಲವನ್ನು ನಿಖರವಾಗಿ, ನಿರ್ದಿಷ್ಟವಾಗಿ ಪ್ರಕಟಿಸುವ ಹಾದಿಯಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಮುಂದಿನ ಮಾತು ಬೇರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

