ಕ್ರೀಡಾ ಭಾವನೆ ಎಂದರೆ ಹೀಗಿರಬೇಕು

Updated on: 

ವಿಜಯ್ ಮರ್ಚೆಂಟ್ ಅವರ ಹೆಸರು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಹೆಸರು. 1929ರಿಂದ 1951 ರವರೆಗೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದ ಈ ಕ್ರೀಡಾಪಟು ಡಾನ್ ಬ್ರಾಡ್ಮ್‌ನ್ ಬಿಟ್ಟರೆ ಮೊದಲ ದರ್ಜೆ ಕ್ರಿಕೆಟ್‌ನ ರನ್ ಸರಾಸರಿಯಲ್ಲಿ ಎರಡನೆಯವರು. ಆಡಿದ್ದು ಕೇವಲ ಹತ್ತು ಟೆಸ್ಟ್‌ಗಳಾದರೂ ಆಗಿನ ಕಾಲದಲ್ಲಿ ಅವರೊಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದರು. ಕೆಲವೊಮ್ಮೆ ಬೌಲಿಂಗ್ ಸಹ ಮಾಡಿದ್ದರು. ಮೊದಲ ದರ್ಜೆ ಕ್ರಿಕೆಟ್‌ನಲ್ಲಿ 65 ವಿಕೆಟ್‌ಗಳನ್ನು ಪಡೆದ ಖ್ಯಾತಿ ಅವರದು. ಹಾಗೆಯೇ ಉತ್ತಮ ಫೀಲ್ಡರ್ ಸಹ ಆಗಿದ್ದ ಮರ್ಚೆಂಟ್ ಎಲ್ಲರೊಡನೆ ಸ್ನೇಹದಿಂದ ಬೆರೆಯುವ ಮನೋಭಾವದವರೂ ಆಗಿದ್ದರು. 1936 ರಲ್ಲಿ ಭಾರತದ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ನಡೆಸಿತು. ಲಿವರ್‌ಪೂಲ್‌ನ ಐಗ್ ಬರ್ತ್ ಮೈದಾನದಲ್ಲಿ ಲಂಕಾಷೈರ್ ಕ್ರಿಕೆಟ್ ತಂಡದೊಡನೆ ಆಡಿದ ಆಟ ಚಿರಸ್ಮರಣೀಯ. ಏಕೆಂದರೆ ಆ ಮೈದಾನದಲ್ಲಿ ಇಪ್ಪತ್ತೇಳು ವರ್ಷಗಳಿಂದ ಲಂಕಾಷೈರ್ ತಂಡ ಸೋತಿರಲೇ ಇಲ್ಲ. ಆ ದಾಖಲೆಯನ್ನು ಮುರಿದ ಕೀರ್ತಿ ಭಾರತದ ಆಟಗಾರರಿಗೆ ಸಲ್ಲುತ್ತದೆ.
ಲಂಕಾಷೈರ್ ಚೆನ್ನಾಗಿ ಆಡಿತಾದರೂ ಮೊದಲ ಇನ್ನಿಂಗ್ಸ್‌ನಲ್ಲಿ ಮೂವತ್ತೇಳು ರನ್ನುಗಳ ಹಿನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಗೆಲ್ಲಲು ಕೇವಲ ಎಂಭತ್ತು ರನ್ನುಗಳು ಬೇಕಿದ್ದಾಗ ನಾಯಕ ಲೆಸ್ಟರ್ ಬಾರಿಸಿದ ಚೆಂಡು ನೇರವಾಗಿ ವಿಜಯ್ ಮರ್ಚೆಂಟ್ ಅವರ ಕೈಸೇರಿತು. ಅದನ್ನು ನೋಡಿದ ಅಂಪೈರ್ ಔಟ್ ಘೋಷಿಸಿದರು. ಈಗಿನ ಹಾಗೆ ಕ್ಯಾಮರಾದಿಂದ ಪರಾಮರ್ಶೆ ಮಾಡುವ ಅವಕಾಶವಿರಲಿಲ್ಲ. ಆದರೆ ಆ ಚೆಂಡು ನೆಲಕ್ಕೆ ತಾಗಿ ಮರ್ಚೆಂಟ್ ಅವರ ಕೈಸೇರಿತ್ತು. ಅದನ್ನು ಅಂಪೈರ್ ಸರಿಯಾಗಿ ನೋಡಿರಲಿಲ್ಲ. ಹೀಗಾಗಿ ಲೆಸ್ಟರ್ ಪೆವಿಲಿಯನ್ ಕಡೆಗೆ ಹೊರಟೇ ಬಿಟ್ಟರು. ಆದರೆ ಮರ್ಚೆಂಟ್ ಒಬ್ಬ ಒಳ್ಳೆಯ ಕ್ರೀಡಾಪಟುವಾದ್ದರಿಂದ ಅಲ್ಲಿಂದಲೇ ಅದು ಕ್ಯಾಚಲ್ಲ, ನೆಲಕ್ಕೆ ತಾಗಿದೆ. ನಾನು ನೆಲದಿಂದ ಅದನ್ನು ತೆಗೆದುಕೊಂಡಿದ್ದೇನೆ ಎಂದು ಕೂಗಿ ಹೇಳಿದರು. ಕ್ಯಾಚ್ ಹಿಡಿದ ಆಟಗಾರನೇ ಹೀಗೆ ಹೇಳಿದ ಮೇಲೆ ಅಂಪೈರ್ ಏನುತಾನೇ ಮಾಡಬಲ್ಲ? ಅವರು ಲೆಸ್ಟರ್‌ನನ್ನು ವಾಪಸ್ಸು ಕರೆದು ಬ್ಯಾಟ್ ಮಾಡಲು ಅನುವುಮಾಡಿಕೊಟ್ಟರು. ಆಟದಲ್ಲಿ ಪ್ರಾಮಾಣಿಕತೆ ಪ್ರದರ್ಶಿಸಿದ ವಿಜಯ್ ಮರ್ಚೆಂಟ್ ಅವರ ಸತ್ಯಸಂಧತೆ ಮತ್ತು ಕ್ರೀಡಾ ಮನೋಭಾವವನ್ನು ಕಂಡು ಪ್ರೇಕ್ಷಕರು ಪುಳಕಿತರಾದರು. ಇಂಗ್ಲೆಂಡ್ ಆಟಗಾರರು ಅವರನ್ನು ಅಭಿನಂದಿಸಿದರು. ಅಂಪೈರ್‌ಗಳು ಮುಕ್ತ ಕಂಠದಿಂದ ಹೊಗಳಿದರು, ಸಹ ಆಟಗಾರರಿಗೆ ಅದು ಹೆಮ್ಮೆಯ ಸಂಗತಿಯಾಗಿತ್ತು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com