ಸಂಪಾದಕೀಯ

ಹಾನಿಯೆಸಗಲಿರುವ ಹೊಸ ನಿಯಮಗಳು

Published On :

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಅನ್ನುವುದು ನಾವು ಓದಿಕೊಂಡಿರುವ ಸಂಗತಿ. ಸತತವಾಗಿ ಕೇಂದ್ರ ಸರ್ಕಾರ ಮತ್ತು ಅದರ ಇಲಾಖೆಗಳು ನಮಗೆ ಕೊಡುವ ಕೊಡಲಿ ಪೆಟ್ಟನ್ನು ನೋಡಿದರೆ, ನಿಜವಾಗಿಯೂ ನಾವು ಒಕ್ಕೂಟದಲಿದ್ದೇವೆಯೇ ಅನ್ನುವ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗನನ್ನು ಕಾಡದೆ ಬಿಡದು. ಕನ್ನಡದ ಸಾವಿರಾರು ಅಭ್ಯರ್ಥಿಗಳು  ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಐ.ಎ.ಎಸ್, ಐ.ಪಿ.ಎಸ್, ಐ.ಎಫ್.ಎಸ್ ಮುಂತಾದ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ಹಂಬಲ ಕನ್ನಡಿಗರಿಗೂ ಸಹಜವಾಗಿ ಇರುತ್ತದೆ. ಆದರೆ ಲೋಕಸೇವಾ ಆಯೋಗ ಇತ್ತೀಚೆಗೆ ಹೇರಿರುವ ನಿರ್ಬಂಧಗಳು ಕನ್ನಡಿಗರನ್ನು ತಬ್ಬಿಬ್ಬುಗೊಳಿಸಿವೆ. ಡಿಗ್ರಿಯಲ್ಲಿ ಓದಿದ ಮಾಧ್ಯಮದಲ್ಲೇ ಪರೀಕ್ಷೆ ಬರೆಯಬೇಕು ಅನ್ನುವ ನಿಯಮ ಮಾಡಲಾಗಿದೆ. ಇಂಜಿನಿಯರಿಂಗ್, ಕಾನೂನು, ಬಿಎಸ್ಸಿ, ಬಿಕಾಂ ಮುಂತಾದ ಪದವಿಗಳನ್ನು ಕನ್ನಡಿಗರೂ ಸಹ ಇವತ್ತು ಇಂಗ್ಲಿಷಿನಲ್ಲಿ ಪಡೆದಿರುತ್ತಾರೆ. ಆದರಿಂದ ಅವರಾರೂ ಕನ್ನಡದಲ್ಲಿ ಪರೀಕ್ಷೆ ಬರೆಯಬಾರದಂತೆ.
ಕನ್ನಡ ಸಾಹಿತ್ಯದ ವಿಷಯವನ್ನು ಐಚ್ಛಿಕವಾಗಿ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೆಗೆದುಕೊಳ್ಳಬೇಕೆಂದರೆ, ಕನ್ನಡ ಸಾಹಿತ್ಯದಲ್ಲಿಯೇ ಸ್ನಾತಕ್ಕೋತ್ತರ ಪದವಿ ಪಡೆದಿರಬೇಕಂತೆ. ಇದ್ಯಾವ ನ್ಯಾಯ? ಕನ್ನಡ ಸಾಹಿತ್ಯದ ಬಗ್ಗೆ ಒಲವು ಇರುವ ಯಾರಾದರೂ ಆ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಳ್ಳುವ ಅವಕಾಶ ಸಹಜವಾಹಿ ಇರಬೇಕಲ್ಲವೇ? ಕನಿಷ್ಠ 25 ಅಭ್ಯರ್ಥಿಗಳು ಒಂದು ಭಾಷೆಯ ಪರೀಕ್ಷೆ ಬರೆಯಲು ಇರಲೇಬೇಕಂತೆ, ಇಲ್ಲವಾದರೆ ಆ ಭಾಷೆಯಲ್ಲಿ ಪರೀಕ್ಷೆಯನ್ನೇ ರದ್ದುಗೊಳಿಸಲಾಗುತ್ತದೆ ಅನ್ನುತ್ತದೆ ಹೊಸ ನಿಯಮ. ಒಟ್ಟಾರೆ ಈ ಎಲ್ಲ ಕಟ್ಟುಪಾಡುಗಳನ್ನು ನೋಡುತ್ತಿದ್ದರೆ, ಕನ್ನಡ ಮತ್ತುಳಿದ ಭಾಷಾ ಸಮುದಾಯಗಳಿಗೆ ಲೋಕಸೇವಾ ಆಯೋಗದ ಬಗಿಲು ಮುಚ್ಚುವ ಹುನ್ನಾರ ಮಾಡಿರುವುದು ಗೋಚರವಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಲ್ಲ ಅಥವಾ ಆ ಮಾಧ್ಯಮಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮಾತ್ರವೇ ವಿಶೇಷ ಸೌಲಭ್ಯಗಳಿರುವುದು ಭಾಷಾ ವೈವಿಧ್ಯತೆ ಹೊಂದಿರುವ ಭಾರತದಂತಹ ದೇಶದಲ್ಲಿ ದೊಡ್ಡ ದುರಂತವೇ ಸರಿ. ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಅಲ್ಲಿನ ರಾಜಕಾರಣಿಗಳು, ಸಂಸದರು ಇದರ ಬಗ್ಗೆ ಉಗ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕರ್ನಾಟಕ ಸಂಸದರು ಎಂದಿನಂತೆ ಗಾಢ ನಿದ್ರೆಗೆ ಜಾರಿದ್ದಾರೆ.
ಇನ್ನಾದರೂ ನಮ್ಮ ಸಂಸದರು ಕಣ್ತೆರೆದು ನಾಡಿನ ಜನರಿಗಾದ ಅನ್ಯಾಯದ ವಿರುದ್ಧ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕೂಗೆತ್ತಲಿ ಎಂದು ಮನವಿ ಮಾಡಿಕೊಳ್ಳುತ್ತಿದೇನೆ.
-ಅಮರನಾಥ್ ಶಿವಶಂಕರ್, ಬೆಂಗಳೂರು
ರಕ್ಷಿಸುವವರಿಗೇ ರಕ್ಷಣೆ ಇಲ್ಲ!
'ಕೊಂದು ಕೇಕೇ ಹಾಕಿದವರಿಗೆ ಕುಣಿಕೆಯೇ ಸರಿ' ಲೇಖನವನ್ನು ಓದಿ ನ ಅಯ್ಯೋ ಎನಿಸಿತು. ಇಲ್ಲಿ ಒಂದು ವಿಷಯವನ್ನು ಸೂಕ್ಷ್ಮವಾಗಿ ಚಿಂತಿಸಬೇಕು. ಯಾವುದೇ ಧರ್ಮ, ಜಾತಿ, ಮತವನ್ನು ಗಣನೆಗೆ ತೆಗೆದುಕೊಳ್ಳದೇ, "ಅಪರಾಧಿಗೆ ಶಿಕ್ಷೆ" ಆಗಬೇಕು ಎಂಬುವ ನಂಬಿಕೆ ಬರಬೇಕು. ಅಚಾತುರ್ಯದಿಂದ ಆದ ತಪ್ಪಿಗೂ, ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೂ ಅಜಗಜಾಂತರ ವ್ಯತ್ಯಾಸವಿದೆ.
ಇನ್ನು ದೇಶಕ್ಕಾಗಿ, ಜನರ ಹಿತರಕ್ಷಣೆಗಾಗಿ, ಹೋರಾಡುವ ಸೈನಿಕರ ಪ್ರಾಣಕ್ಕೆ ಬೆಲೆಯೇ ಇಲ್ಲ. ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಯುದ್ಧದಲ್ಲಿ ನನ್ನ ಸ್ನೇಹಿತ ಪಿ.ಎಂ. ಮಧುರನ್ನು ಕಳೆದುಕೊಂಡ ನಾನು ಇನ್ನೂ ಅದೇ ಗುಂಗಿನಲ್ಲಿದ್ದೇನೆ. ಇನ್ನು ಅವರ ಕುಟುಂಬದವರ ಸ್ಥಿತಿ ಏನಾಗಿರಬಹುದು ಯೋಚಿಸಿ. ಇಂತಹವರ ಪ್ರಾಣ ತ್ಯಾಗಕ್ಕೆ ಬೆಲೆಯೇ ಇಲ್ಲ. ಪೊಲೀಸರ ಸ್ಥಿತಿಯಂತೂ ಇನ್ನೂ ಹೀನಾಯ. ಅದಕ್ಕೆ ರಾಜಕಾರಣಿಗಳೇ ಹೊಣೆಗಾರರು.
ನಿವೃತ್ತ ಎ.ಸಿ.ಪಿ. ಬಿ.ಬಿ. ಅಶೋಕ್ ಕುಮಾರ್ ರವರು ಪ್ರಶ್ನಿಸುವ ಹಾಗೆ, ಆರೋಪಿಗಳಿಗೆ ಅಯ್ಯೋ ಎನ್ನುವ ಈ ಬುದ್ಧಿ ಜೀವಿಗಳು ಅವರಿಂದಾಗಿ ಪ್ರಾಣ ಕಳೆದುಕೊಂಡ ಪೊಲೀಸರಿಗೆ, ಸೈನಿಕರಿಗೆ, ಏಕೆ ಕರುಣೆ ತೋರಿಸುವುದಿಲ್ಲ?
-ಎ.ಪಿ. ರಂಗನಾಥ್, ಮೈಸೂರು

-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.