ಪ್ರಧಾನಿಗೇ ಗೊತ್ತಿಲ್ಲದ ದಾಳಿ
ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ಕೆಲಸದ ಹೊಣೆಗಾರಿಕೆ ಪ್ರಧಾನಿ ಕಾರ್ಯಾಲಯದ್ದೇ. ಅದಕ್ಕೊಬ್ಬ ವಿಶೇಷ ಸಹಾಯಕ ಸಚಿವರೇ ಇದ್ದಾರೆ. ಈಗ ತಮಿಳುನಾಡಿನ ನಾರಾಯಣ ಸ್ವಾಮಿ ಸಿಬಿಐ ಮಂತ್ರಿ.
ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಗುರುವಾರ ಕರುಣಾನಿಧಿ ಪುತ್ರಿ, ಡಿಎಂಕೆ ನಾಯಕ, ಸ್ಟಾಲಿನ್ ಮನೆ ಮೇಲೆ ತೆರಿಗೆ ತಪ್ಪಿಸಿ ಮಾರಾಟವಾಗಿದ್ದ ಕಾರಿನ ಪತ್ತೆಗಾಗಿ ಸಿಬಿಐ ನಡೆಸಿದ ದಾಳಿ ದೊಡ್ಡ ರಾಜಕೀಯ ವಿವಾದದ ಕೇಂದ್ರವಾಗಿರುವುದು ಸಹಜ.
ಆಳುವ ಸರ್ಕಾರಗಳು ತಮಗೆ ಬೇಕಾದಾಗಲೆಲ್ಲ ಸಿಬಿಐ ತನಿಖೆಯ ಬ್ರಹ್ಮಾಸ್ತ್ರವನ್ನು ಬಳಸಿಕೊಂಡಿರುವುದು ರಹಸ್ಯವೇನೂ ಅಲ್ಲ. ಪ್ರಾಯಶಃ ಆ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ- ಜನತಾ ಪರಿವಾರಕ್ಕೆ ನಿಖರವಾದ ಹಾಗೂ ಸ್ಪಷ್ಟವಾದ ಮಾಹಿತಿ ಇದೆ.
ಆದರೆ ಡಿಎಂಕೆ ಒಂದು ರಾಜಕೀಯ ಪಕ್ಷವಾಗಿ, ತನ್ನದೇ ಆದ ವಿಶೇಷ ಕಾರಣದಿಂದ (ಶ್ರೀಲಂಕಾ ತಮಿಳರ ದಮನ) ಆಳುವ ಕೂಟದಿಂದ ಹೊರಗೆ ಬಂದು ಸರ್ಕಾರದ ಭವಿಷ್ಯವೇ ತೂಗುಯ್ಯಾಲೆಯಲ್ಲಿ ಸಿಕ್ಕಿಬಿದ್ದಂತೆ ಮಾಡಿದ ಮರುದಿನವೇ ಡಿಎಂಕೆಯ ಘೋಷಿತ ನಂಬರ್ ಟೂ ನಾಯಕ ಸ್ಟಾಲಿನ್ ಮನೆಯ ಮೇಲೆ ದಾಳಿ ನಡೆಸಿರುವುದು ಸರ್ಕಾರದ ಪ್ರಮುಖರಿಗೆ ಗೊತ್ತೇ ಇರಲಿಲ್ಲ ಎಂದರೆ ನಂಬುವುದು ಕಷ್ಟ. ಆದರೂ ಅದು ನಿಜವೇನೋ ಎನ್ನುವ ಅನುಮಾನವಿದೆ. ಆದರೆ ಸಿಬಿಐ ಪ್ರಕಾರ ದೇಶದಲ್ಲಿ ತೆರಿಗೆ ತಪ್ಪಿಸಿ ಮೂವತ್ಮೂರು ಅತಿ ದುಬಾರಿ ವಿದೇಶಿ ಕಾರುಗಳನ್ನು ಮಾರಿರುವುದರಿಂದ ಸುಮಾರು 48 ಕೋಟಿ ರುಪಾಯಿಗಳ ತೆರಿಗೆ ನಷ್ಟವಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ನಡೆದ ತನಿಖೆಯಲ್ಲಿ ತಮಿಳುನಾಡಿನ ಹದಿನೆಂಟು ಕಡೆ ದಾಳಿಯಾಗಿದ್ದು ನಿಜ. ಅದರಲ್ಲಿ ಹದಿನೇಳು ಕಾರುಗಳು ಸಿಕ್ಕಿವೆ. ಈ ವಿಚಾರದಲ್ಲಿ ಸಿಬಿಐಗೆ ದೂರು ಬಂದಿದ್ದು ಬುಧವಾರವೇ.
ಸಿಬಿಐ ಮೂಲದ ಹೇಳಿಕೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಪ್ರಧಾನಿ, ವಿತ್ತಮಂತ್ರಿ ಹಾಗೂ ತಮಿಳುನಾಡಿನ ಶಿವಗಂಗೆಯಿಂದ ಆಯ್ಕೆಯಾದ ಲೋಕಸಭೆ ಸದಸ್ಯ ಪಿ. ಚಿದಂಬರಮ್ ಹಾಗೂ ಹಿರಿಯ ಮಂತ್ರಿಗಳಲ್ಲಿ ಯಾರಿಗೂ ಸುಳಿವೇ ಸಿಗದಂತೆ, ಸರ್ಕಾರದ ರಾಜಕೀಯ ಬಿಕ್ಕಟ್ಟಿನ ಮರುದಿನವೇ ದಾಳಿ ನಡೆದಿದ್ದು ಜನರ ಮನಸ್ಸಿನಲ್ಲಿ ಕೆಟ್ಟ ಭಾವನೆ ಮೂಡಿಸಬಹುದೆಂದು ಕಾಂಗ್ರೆಸ್ ನಾಯಕರು ಹೆದರಿದ್ದರೆ ಅದು ಸಹಜ. ಈಗಲೂ ಕಾಂಗ್ರೆಸ್ ನಾಯಕರು, ಬಹಿರಂಗವಾಗಿ ಡಿಎಂಕೆ ಆಳುವ ಕೂಟದ ವಿರುದ್ಧ ಹೋಗಿದ್ದರೂ, ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲಾರದೆನ್ನುವ ಆಸೆಯನ್ನು ಇಟ್ಟುಕೊಂಡಿರುವಂತಿದೆ.
ನಿಜ. ಶ್ರೀಲಂಕಾದ ತಮಿಳರ ಮೇಲಿನ ದೌರ್ಜನ್ಯವನ್ನು ಖಂಡಿಸುವುದರಲ್ಲಿ ಜಯಲಲಿತಾ, ಕರುಣಾನಿಧಿ ಅವರ ಡಿಎಂಕೆ, ಹಿರಿಯ ರಾಜಕಾರಣಿ ವೈಕೋ ಅವರ ನಡುವೆ ತೀವ್ರ ಸ್ಪರ್ಧೆ ಇದೆ. ತಮಿಳುನಾಡಿನಲ್ಲಿ ಅದು ರಾಜಕೀಯವಾಗಿ ನಡೆಯುವ ನಾಣ್ಯ. ಡಿಎಂಕೆ ಕೇಂದ್ರದಲ್ಲಿ ಆಳುವ ಕೂಟದ ಪ್ರಬಲ ಶಕ್ತಿಯಾಗಿದ್ದರೂ ಒಂದು ಖಂಡನಾ ನಿರ್ಣಯವನ್ನಾದರೂ ಸಂಸತ್ತು ಅಂಗೀಕರಿಸುವಂತೆ ಮಾಡುವುದರಲ್ಲೂ ವಿಫಲವಾಗಿರುವುದನ್ನು ಜಯಲಲಿತಾ ತಮ್ಮ ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದು ರಾಜಕೀಯವಾಗಿ ಸಹಜವೇ. ಕೇಂದ್ರ ಸರ್ಕಾರದಿಂದ ಹೊರಬರುವುದಕ್ಕೆ ಡಿಎಂಕೆಗೆ ಇದ್ದ ಕಾರಣ ಅದೇ. ಇಲ್ಲಿ ಬೇರೆ ರೀತಿಯ ರಾಜಕಾರಣಕ್ಕೆ ಅವಕಾಶವಿರಲಿಲ್ಲ. ಸಂಸತ್ತಿನಲ್ಲಿ ಶ್ರೀಲಂಕಾ ತಮಿಳರ ವಿಚಾರದಲ್ಲಿ ಒಂದು ನಿರ್ಣಯದ ಅಂಗೀಕಾರಕ್ಕೆ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಒಪ್ಪಿಗೆ ಸಿಗಲಿಲ್ಲ. ಆದರೆ ಭಾರತದ ಪ್ರತಿನಿಧಿ ಜಿನೀವಾದಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಭೆಯಲ್ಲಿ ಶ್ರೀಲಂಕಾ ಸರ್ಕಾರದ ವಿರುದ್ಧ ಅಮೆರಿಕ ಮಂಡಿಸಿದ ನಿರ್ಣಯದ ಪರವಾಗಿ ಮತ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದ್ದು ಸರ್ಕಾರದ ಆದೇಶದ ಮೇರೆಗಲ್ಲ ಎನ್ನುವುದನ್ನು ನಂಬಬಹುದು. ಸಿಬಿಐ ದಾಳಿಯ ವಿಚಾರ ಮಂತ್ರಿಗೆ ಗೊತ್ತಿಲ್ಲದೇ ಇರುವುದೂ ಸಾಧ್ಯವಿರಬಹುದು- ಇದು ದಾಳಿಯ ಪ್ರಸ್ತಾಪವಲ್ಲ. ದಾಳಿ ನಡೆದ ಸಮಯದಲ್ಲಿ ವಿಚಾರದ ವಿವಾದ. ಸಿಬಿಐ ದಾಳಿಯನ್ನು ಒಂದೆರಡು ದಿನ ಮುಂದಕ್ಕೆ ಹಾಕಬಹುದಾಗಿತ್ತೇನೋ. ಅದು ಘಟನೆ ನಡೆದ ಅನಂತರದ ಚಿಂತನೆಯ ಧಾಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

