ಮತದಾರರ ಪಟ್ಟಿಯ ಅವಾಂತರಕ್ಕೆ ಹೊಣೆ ಯಾರು?
ನಗರ ಮತ್ತು ಸಂಸ್ಥೆಗಳ ಚುನಾವಣೆ ಮುಗಿದು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಸಾಕಷ್ಟು ಮತದಾರರಿಗೆ ಕಳೆದ ಚುನಾವಣೆಯಲ್ಲಿ ತಮ್ಮ ಹೆಸರೇ ಪಟ್ಟಿಯಿಂದ ನಾಪತ್ತೆಯಾಗಿದ್ದು ತಮ್ಮ ಸಂವಿಧಾನಬದ್ಧ ಹಕ್ಕಾದ ಮತದಾನದಿಂದ ವಂಚಿತರಾಗಿ ಚಿಂತಿತರಾಗಿದ್ದರು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ತೀರಿ ಹೋಗಿರುವವರು, ಊರು ಬಿಟ್ಟು ಹೋಗಿರುವವರು ಇನ್ನೂ ತಮ್ಮ ಸ್ಥಾನಮಾನವನ್ನು ಕಾಪಾಡಿಕೊಂಡಿದ್ದರು. ಕೆಲವೆಡೆ ಯಾವುದೋ ವಾರ್ಡಿನ ಮತದಾರರು ಇನ್ನಾವುದೋ ಸಂಬಂಧವಿಲ್ಲದ ವಾರ್ಡಿನ ಮತದಾರರಾಗಿರುವ ಜಾದುವೂ ನಡೆದಿತ್ತು. ಇನ್ನೊಂದು ವಿಪರ್ಯಾಸವೆಂದರೆ ಯಾರದೋ ಹೆಸರಿಗೆ ಯಾರದೋ ಭಾವಚಿತ್ರ ಕುಳಿತು ರಾರಾಜಿಸುತ್ತಿತ್ತು. ಹಲವಾರು ವರ್ಷಗಳಿಂದ ಮತ ಚಲಾಯಿಸುತ್ತಿದ್ದವರ ಹೆಸರುಗಳು ದಿಢೀರ್ ಕಣ್ಮರೆಯಾಗಿದ್ದು ಒಟ್ಟಿನಲ್ಲಿ ಮತದಾರರ ಪಟ್ಟಿಯೇ ಅವಾಂತರಗಳ ಗೂಡಾಗಿದ್ದು, ಈ ಪಟ್ಟಿಯ ಆಧಾರದ ಮೇಲೆ ಚುನಾವಣೆ ಎಷ್ಟರ ಮಟ್ಟಿಗೆ ಸರಿ? ಪ್ರಜಾಪ್ರಭುತ್ವದ ಜೀವನಾಡಿಯಾಗಿರುವ ಚುನಾವಣೆಯ ಈ ಅವಾಂತರಗಳಿಗೆ ಹೊಣೆ ಯಾರು? ಪಟ್ಟಿಯನ್ನು ಪರಿಷ್ಕರಿಸುವ ಸಿಬ್ಬಂದಿಗಳೇ ಅಥವಾ ಮುದ್ರಣಾಲಯದಲ್ಲಾಗುವ ತಪ್ಪುಗಳೇ ಎಂಬುದು ತಿಳಿಯದಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಸಂಚನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಮತದಾರರು ಸಂವಿಧಾನಬದ್ಧ ಹಕ್ಕಿನಿಂದ ಪ್ರತಿ ಬಾರಿಯೂ ವಂಚಿತರಾಗುತ್ತಲೇ ಬಂದಿದ್ದಾರೆ. ಇದು ಒಂದು ಊರಿನ ಕಥೆಯಲ್ಲ. ಬಹಳಷ್ಟು ಕಡೆ ನಡೆಯುವ ಅವಾಂತರ. ಈಗಿರುವ ಪದ್ಧತಿಯಂತೆ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ವಿಧಾನಸಭೆ ಮತ್ತು ಲೋಕಸಭೆಗೆ ಪ್ರತ್ಯೇಕ ಮತದಾರರ ಯಾದಿಯನ್ನು ಸಿದ್ಧಪಡಿಸಲಾಗುತ್ತದೆ ಹಾಗೂ ಮತದಾನ ಕೇಂದ್ರವೂ ಸಹ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗೆ ಬೇರೆ ಬೇರೆಯಾಗಿರುತ್ತದೆ. ಒಂದು ಸಲಹೆಯೆಂದರೆ, ಸ್ಥಳೀಯ ಸಂಸ್ಥೆಗಳ ಹಾಗೂ ವಿಧಾನಸಭೆಗಳಿಗೆ ಪ್ರತ್ಯೇಕ ಮತದಾರರ ಪಟ್ಟಿಗಳನ್ನು ತಯಾರಿಸುವುದನ್ನು ಬಿಟ್ಟು ಎಲ್ಲಾ ಚುನಾವಣೆಗೂ ಒಂದೇ ಮತದಾರರ ಯಾದಿ ಹಾಗೂ ಮತದಾನ ಮಾಡುವ ಸ್ಥಳವೂ ಒಂದೇ ಆಗಿದ್ದರೆ ಮತದಾರರಿಗೂ ಯಾವುದೇ ಗೊಂದಲಗಳಾಗುವುದಿಲ್ಲ.
- ಎಸ್.ಎನ್. ವಾಸುದೇವ, ಶ್ರೀರಂಗಪಟ್ಟಣ
ಇದೆಂಥ ವ್ಯರ್ಥಾಲಾಪ?
ನಿರೀಕ್ಷೆಯಂತೆ ನಮ್ಮ ಜಾತ್ಯತೀತ ಬುದ್ಧಿಜೀವಿಗಳು (?) ಸಂಜಯ್‌ದತ್ ಪರ ಬ್ಯಾಟ್ ಬೀಸ ತೊಡಗಿದ್ದಾರೆ. ಇಪ್ಪತ್ತು ವರ್ಷಗಳಿಂದ ದತ್ ಸಫರಿಂಗಂತೆ. ಸಿನಿಮಾಗಳ ಯಶಸ್ಸನ್ನು ಆನಂದಿಸಿದ್ದು,. ಮೂರನೇ ಮದುವೆಯಾಗಿ ಅವಳಿ-ಮಕ್ಕಳ ತಂದೆಯಾಗಿದ್ದು, ವಿದೇಶಗಳಿಗೆ ಹೋಗಿ ಬಂದಿದ್ದು, ಅರಮನೆಯಂಥ ಮನೆ ಕೊಂಡಿದ್ದು- ಇವೆಲ್ಲಾ ಸಫರಿಂಗುಗಳಾ? ಬಹುಕೋಟಿಗಳ ಒಡೆಯನಿಗೆ ಬ್ಯಾಂಕ್ ಲೋನು, ಬಾಡಿಗೆ ಮನೆಗಳು ಯಾಕೆ ಬೇಕು ಕಟ್ಜೂ ಸಾಹೇಬರೇ...?
ದತ್ ಯಾವತ್ತೂ ನಾಗರೀಕ ಸಮಾಜದ ಸದಸ್ಯನಂತೆ ವರ್ತಿಸಿದ್ದಿಲ್ಲ. ಎಷ್ಟು ಯುವತಿಯರು ಇವನಿಂದ ರೆಕ್ಕೆ ಸುಟ್ಟುಕೊಂಡ ಪತಂಗಗಳಂತೆ ಮಣ್ಣು ಪಾಲಾಗಿದ್ದಾರೆ. ಡ್ರಗ್ ಸೇವಿಸುವ ಚಟವೂ ದತ್‌ಗೆ ಇತ್ತು. ಇನ್ನು ಮೂರು ವರ್ಷ ಜೈಲಿನಲ್ಲಿದ್ದು ಬಂದರೆ ಆ ದಾಂಢಿಗನೇನೂ ಸವೆದು ಹೋಗುವುದಿಲ್ಲ. ಹೊರಬಂದು ಮತ್ತೆ ಕ್ಯಾರೆಕ್ಟರ್ ರೋಲ್‌ಗಳಲ್ಲಿ ಮಾಡಲಾರಂಭಿಸುತ್ತಾನೆ. ಪತ್ನಿಗೆ ಎಲ್ಲಾ ರೀತಿಯ ಸುರಕ್ಷತೆಗಳಿವೆ. ಮಕ್ಕಳು ಮಾತು ಕಲಿತು ಹಲೋ ಡ್ಯಾಡಿ ಎಂದು ಸ್ವಾಗತ ಕೋರುತ್ತಾರೆ. ಮನೆ ತುಂಬಾ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡವನು ಅದನ್ನು ಯಾರ ಮೇಲೂ ಪ್ರಯೋಗಿಸುವುದಿಲ್ಲ ಎಂದು ಬುದ್ಧಿಜೀವಿಗಳು ಯಾವ ಆಧಾರದ ಮೇಲೆ ಪಲುಕುತ್ತಿದ್ದಾರೋ... ಕುಡಿದು ಕಾರೋಡಿಸಿ ಕೂಲಿಕಾರರ ಪ್ರಾಣ ತೆಗೆದ ಸಲ್ಮಾನ್‌ನನ್ನೂ ದತ್‌ನೊಂದಿಗೆ ಜೈಲಿಗೆ ತುರುಬಿದರೆ ಮಾತ್ರ ನಮ್ಮ ನ್ಯಾಯ ವ್ಯವಸ್ಥೆಯ ಘನತೆ ಹೆಚ್ಚುತ್ತದೆ.
- ಕಸ್ತೂರಿ, ತುಮಕೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

