ಸಂಪಾದಕೀಯ

ಮತದಾರನ ಗೆಲುವು ಭ್ರಷ್ಟಾಚಾರದ ಸೋಲು (ಪತ್ರಗಳು)

Published On :

ಕರ್ನಾಟಕದ ಮತದಾರ ಸದಾ ಎಚ್ಚರ ಪ್ರವೃತ್ತಿಯುಳ್ಳವನು! ರಾಜ್ಯದ ಮತದಾರ ಪ್ರಬುದ್ಧನಿದ್ದಾನೆ. ಮತದಾರರನ್ನು ಹಣ, ಹೆಂಡ, ಖಂಡಗಳಿಂದ ವಶಪಡಿಸಿಕೊಳ್ಳಬಲ್ಲವೆಂಬ ಭ್ರಮೆ ಬೇಡ ಎಂಬ ಸ್ಪಷ್ಟ ಸಂದೇಶವನ್ನು ರಾಜಕಾರಣಿಗಳಿಗೆ ನೀಡಿದ್ದಾನೆ. ಗದ್ದುಗೆಯೇರುತ್ತಿರುವ ಕಾಂಗ್ರೆಸ್ ಮತ್ತೊಮ್ಮೆ ಸೇವೆ ಮಾಡುವ ಅವಕಾಶವನ್ನು ಪಡೆದಿದೆಯೇ ವಿನಾ ಬೀಗುವಂತಹ ಭಾರಿ ಬಹುಮತವನ್ನು ಪಡೆದಿಲ್ಲ.  ಸರಳ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದ ಧುರೀಣರು ಬಿಜೆಪಿ, ಕೆಜೆಪಿ, ಬಿಎಸ್ಆರ್ ಪಕ್ಷ ಹಾಗೂ ಅವಕಾಶವಾದಿ ಪಕ್ಷೇತರರಿಗೆ ಮತದಾರನು ತೋರಿಸಿದ ದಾರಿಯನ್ನು ಕಂಡು ಕಲಿಯಬೇಕಾದುದು ಬಹಳವಿದೆ!
ವ್ಯಕ್ತಿ ಪ್ರಧಾನ ರಾಜಕಾರಣವನ್ನು ಕರ್ನಾಟಕದ ಮತದಾರ ತಿರಸ್ಕರಿಸಿದ್ದಾನೆ. ಬಿಜೆಪಿಯ ಸ್ವಯಂಕೃತ ಅಪರಾಧಗಳಿಂದ ಒಬ್ಬರ ನಂತರ ಒಬ್ಬರು ಎಂಬಂತೆ ತಲೆದಂಡಗಳನ್ನು ಒಪ್ಪಿಸಿಕೊಂಡರು. ಮುಖ್ಯಮಂತ್ರಿಗಳಾಗಿದ್ದವರೇ ಭ್ರಷ್ಟಾಚಾರದ ಆರೋಪದ ಕಳಂಕ ಹೊತ್ತು ಸೆರೆಮನೆ ಸೇರಿ ಇತಿಹಾಸವಾದರು. ಪರಿಣಾಮದ ಫಲವಾಗಿ ಪ್ರಾದೇಶಿಕವೆಂಬ ಹೆಸರಲ್ಲಿ ಕೆಜೆಪಿ ಪಕ್ಷ ಉದಯವಾಯಿತು. ಸರ್ಕಾರ ರಚನೆಯಲ್ಲಿ ತಮ್ಮ ಪಕ್ಷವೇ 'ನಿರ್ಣಾಯಕ ಪಾತ್ರ' ವಹಿಸುತ್ತದೆ ಎಂದು ವೀರಾವೇಶದಿಂದ ಹೇಳತೊಡಗಿದರು. ಪಕ್ಷ ನಿಷ್ಠೆ, ಸೇವಾ ನಿಷ್ಠೆಗಳನ್ನು ಬದಿಗಿರಿಸಿ ಮತದಾರನನ್ನು ಲಘುವಾಗಿರಿಸಿ, ಮತದಾರನನ್ನು ಕಡೆಗಣಿಸಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಜಿಗಿದಾಡುತ್ತಾ ಹಾರಾಡುತ್ತಾ ಅಂದಾದುಂಧಿ ಮಾಡಿದ ರಾಜಕಾರಣಿಗಳನ್ನು ಗುಡಿಸಿ ಪಕ್ಷಕ್ಕೆ ಸರಿಸಿದ ಮತದಾರನಿಗೆ ಹ್ಯಾಟ್ಸ್ ಆಫ್!
ಬಿಜೆಪಿ ಆಡಳಿತದಲ್ಲಿ ಅದೆಷ್ಟೋ ಹಗರಣಗಳು, ಭ್ರಷ್ಟಾಚಾರಗಳು, ಭೂ ಮಾಫಿಯಾ ಉರುಳುಗಳು ಕಾಡಿದರೂ ಇವುಗಳ ನಡುವೆಯೂ ಮತದಾರನ ಬೆವರಿನ ಮತದ ಬೆಲೆಯನ್ನು ಮರೆಯದೆ ಪರಿಶ್ರಮಿಗಳಾದ ಕೆಲಸಗಾರರಾದ ಶಾಸಕರನ್ನು, ಮಂತ್ರಿಗಳನ್ನೇ ಮತದಾರ ಮರೆಯಲಿಲ್ಲ. ಪಕ್ಕಕ್ಕೆ ಸರಿಸಿಲ್ಲ. ಕೆಲಸಗಾರರಾದ ಸ್ವಚ್ಛ ಚಾರಿತ್ರ್ಯವುಳ್ಳ ಸುರೇಶ್ಕುಮಾರ್ ಅವರನ್ನು ಮತದಾರ ಕೈ ಬಿಡಲಿಲ್ಲ. ಶೋಭಾ ಕರಂದ್ಲಾಜೆ ಬಲಿಪಶುವಾದರು. ಅವರು ಕರ್ತೃತ್ವ ಶಕ್ತಿಯುಳ್ಳ ಕೆಲಸಗಾರರೆಂದರೂ ಸುರೇಶ್ಕುಮಾರ್ ಎದುರು ನಿಲ್ಲಿಸಿ ಕೆಜೆಪಿಯ ಸ್ವಯಂಕೃತ ಅಪರಾಧದ ಬಲಿಪಶು ಶೋಭಾ ಆದರು. ಜೆಡಿಎಸ್ನ ಜಮೀರ್ ಅಹ್ಮದ್ ಕ್ಷೇತ್ರದ ಜನತೆಯನ್ನು, ಮತದಾರನನ್ನೂ ಮರೆಯದ ಕಾರಣ ಮತದಾರನೂ ಅವರನ್ನು ಮರೆಯಲಿಲ್ಲ. ಹಾಲಾಡಿ ಶ್ರೀನಿವಾಸಶೆಟ್ಟರು ಅನುಕಂಪದಿಂದಲೇ ಗೆದ್ದರೆಂದರೆ ಸುಳ್ಳಾದೀತು. ಅವರು ಪರಿಶುದ್ಧ ಚಾರಿತ್ರ್ಯವುಳ್ಳವರು, ಕೆಲಸಗಾರರು. ಕಾಂಗ್ರೆಸ್ನ ಹೆಚ್.ಕೆ. ಪಾಟೀಲ್ ಕೆಲಸಗಾರರು, ಪಕ್ಷ ನಿಷ್ಠೆಯುಳ್ಳವರು. ಮತ್ತೊಮ್ಮೆ ಮತದಾರ ಕೈ ಹಿಡಿದಿದ್ದಾನೆ. ಕೆಜೆಪಿಯ ಉದಾಸೀ, ರೇಣುಕಾಚಾರ್ಯ, ಸೋಮಣ್ಣ, ಬ್ಲೂಫಿಲಂ ವೀಕ್ಷಿಸಿದ ಶಾಸಕರು, ಮಾಲೂರಿನ ಕೃಷ್ಣಯ್ಯ ಶೆಟ್ರು ಇವರೆಲ್ಲರ ಸೋಲಿಗೆ ಕಾರಣವನ್ನು ಅವರೂ ಅವಲೋಕನ ಮಾಡಿಕೊಳ್ಳಬೇಕು. ಗದ್ದುಗೆ ಏರುವವರು ಇದನ್ನು ಮರೆಯಬಾರದು. ಮಳೆ ಹುಡುಗಿ ಪೂಜಾಗಾಂಧಿಯವರು ಸಿನಿಮೀಯ ಓಡಾಟವೂ ಕೆಲಸ ಮಾಡಲಿಲ್ಲ. ಸಮರ್ಥ ನಾಯಕರಾದ ಸಮತೂಕ ವ್ಯಕ್ತಿತ್ವದ ಕಾಂಗ್ರೆಸ್ನ ಬಿ.ಎಲ್. ಶಂಕರ್ ಸೋಲು ನಿಜಕ್ಕೂ ವಿಪಕ್ಷಗಳಿಗೂ ಅರಗಿಸಿಕೊಳ್ಳುವುದು ಕಷ್ಟ. ಕಾಂಗ್ರೆಸ್ ಅಧ್ಯಕ್ಷರಾದ ಪರಮೇಶ್ವರ್ ಅವರ ಸೋಲು ಅನಿರೀಕ್ಷಿತ! ಇನ್ನಾದರೂ ರಾಜಕಾರಣಿಗಳು ಪಕ್ಷದ ಆಂತರಿಕ ವಿಷಯಗಳ ನಡುವೆ ಮುಳುಗಿ ಮತದಾರರನ್ನು ಮರೆಯದಿರಲಿ ಎಂದು ಪ್ರಾರ್ಥನೆ. ಭ್ರಷ್ಟಾಚಾರ-ಹಗರಣಗಳು ಮತದಾರನನ್ನು ಮರೆತುದದರ ವಿರುದ್ಧವಾಗಿ ಮತದಾರ ಚಾಟಿ ಬೀಸಿದ್ದಾನೆ.
-ಕೊಕ್ಕಡ ವೆಂಕಟ್ರಮಣಭಟ್, ಮಂಡ್ಯ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.