ಸಂಪಾದಕೀಯ

ಇಂಥ ಮೋಸದಾಟ ಬೇಕೇ?

Published On :

ಕ್ರಿಕೆಟ್ ಎಂದರೆ ಒಂದು ಥ್ರಿಲ್. ಚಕ್ಕರ್ ಹೊಡೆದು, ರಜಾ ಹಾಕಿ ನೋಡುವಂತಾ ಮೋಡಿ ಆಟ. ಸಿಕ್ಸರ್ ಬಾರಿಸಿದರೆ ಲಕ್ಷ, ಶತಕ ದಾಟಿದರೆ ಕೋಟಿ. ಜೊತೆಗೆ ಜನಾಭಿಮಾನ. ಈ ಭಾಗ್ಯ ಆಟಗಾರನಿಗೆ! ಯಾರಿಗುಂಟು ಯಾರಿಗಿಲ್ಲ? ಆದರೂ ಜನರ ನಂಬಿಕೆಗೆ ದ್ರೋಹ ಬಗೆದು ಆಟಗಾರ ಹಾದರಕ್ಕಿಳಿದರೆ? ಇವನಿಗೆ ಜೀವಾವಧಿ ಜೈಲಾಗಬೇಕು. ದೋಚಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಟಗಾರ ನಮ್ಮ ರಾಜ್ಯದವನು ಎಂದು ಹಿಂದೂ ಮುಂದೂ ತಿಳಿಯದೆ ರಕ್ಷಣೆಗೆ ಧಾವಿಸುವ ಸಚಿವರೇ ಇದ್ದಾರೆ ಎಂದರೆ ನಮ್ಮ ಯೋಗ್ಯತೆಗೆ ನಾವೇ ನಾಚಬೇಕು? ನಮ್ಮವರು ಏನು ಮಾಡಿದರೂ ಕ್ಷಮಿಸಬೇಕು ಎನ್ನುವ ಜಾತಿಧರ್ಮ ಭಾಷಾವಾದಿಗಳು ನಾವು. ಈ ಆಟ ಅನ್ ಪ್ರಿಡಕ್ಟಬಲ್. ಇಲ್ಲಿ ಮೋಸಕ್ಕೆ ಇರುವಷ್ಟು ಅವಕಾಶ ಎಲ್ಲಿಯೂ ಇಲ್ಲ. ನಮ್ಮ ರಾಷ್ಟ್ರಕ್ಕಂತೂ ಹೇಳಿ ಮಾಡಿಸಿದ ಆಟ. ಹಗರಣದ ಹಿಂದೆ ಸರ್ಕಾರ ಸರ್ಕಾರವೇ ಇರುವಂತೆ ಇಲ್ಲಿಯೂ ದೊಡ್ಡವರ ದಂಡೇ ಇದೆ. ಕೈವಾಡವೂ ಇದೆ, ಪಾಲೂ ಇದೆ. ಎಲ್ಲಿ ಆಟ ಫಿಕ್ಸ್ ಆಗಿದೆ ಎಂಬ ಅನುಮಾನ ಸಾಧಾರಣ ವೀಕ್ಷಕನಿಗೂ ಬರುವಾಗ ನಾಯಕ, ಸಹ ಆಟಗಾರ, ಕಾಮೆಂಟೇಟರ್‌ಗೆ ಗೊತ್ತಾಗುವುದಿಲ್ಲವೇ? ಗೊತ್ತಾಗುವುದಿಲ್ಲ ಎಂದು ತಪ್ಪಿಸಿಕೊಳ್ಳಬಹುದು. ಏಕೆಂದರೆ ಅದು ಅನಿಶ್ಚಿತ ಗೇಮ್. ತನಿಖೆ ಆಗುವುದಿಲ್ಲ. ಆದರೂ ಸತ್ಯ ಹೊರಬರುವುದಿಲ್ಲ. ಇದು ಮುಂದುವರಿಯುತ್ತದೆ. ಮೋಸದ ಮೊತ್ತ ನೋಡಿ ಸರ್ಕಾರವೂ ಪುಲಕಗೊಂಡು ಇದಕ್ಕೆ ಇಳಿಯಬಹುದು ಅಥವಾ ಪಾಲು ಕೇಳಬಹುದು. ಈ ನಾಟಕದಂತಾ ಆಟ ನೋಡಲು ಇದೆಲ್ಲ ಬಯಲಾದ ಮೇಲೂ ಜನ ನೂಕುನುಗ್ಗಲು ಎಂದರೆ? ಇದು ಆಟದ ಹುಚ್ಚೇ, ಅಥವ ಜನ ಇರುವುದೇ ಹೀಗಾ? ಹೆಂಡಕ್ಕೂ ಹೆಚ್ಚು ಆಕರ್ಷಕ. ಜನರ ಜೀವ ಹಿಂಡುವ ಹೆಂಡವನ್ನೇ ನಿಯಂತ್ರಿಸಿಲ್ಲ. ಇನ್ನೂ ಈ ಆಟ ನಿಯಂತ್ರಣ ಬಹಿಷ್ಕಾರ ಸಾಧ್ಯವೇ? ಜನರೇ ಬೇಡ ಎನ್ನಬೇಕು. ಆಗ ಮಾತ್ರ ಸಾಧ್ಯ!
-ಸತ್ಯಬೋಧ, ಬೆಂಗಳೂರು

ಅಡ್ಡ ಪರಿಣಾಮ ನಿಶ್ಚಿತ

ಮುಖ್ಯಮಂತ್ರಿಗಳ ಪ್ರಾರಂಭಿಕ ನಡೆ ನುಡಿ ನೋಡುತ್ತಿದ್ದರೆ ಒಳಿತು ಕೆಡಕುಗಳ ಮಿಶ್ರಣದಂತೆ ತೋರುತ್ತದೆ. ಸಾಮಾನ್ಯವಾಗಿ ಸರ್ಕಾರ ಯಾವುದೇ ಯೋಜನೆ ಹಾಕಿಕೊಂಡರೂ ಅದು ಜನಸಾಮಾನ್ಯರ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಚರ್ಚಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ "ಅಗ್ಗದ ಮದ್ಯ ಮಾರಾಟ" ಜನಸಾಮಾನ್ಯರ ಮೇಲೆ ಅಡ್ಡ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಕಡಿಮೆ ಕಾಸಿನ ಮದ್ಯ ಎಂದರೆ, ಇದಕ್ಕೆ ನೇರ ಬಲಿ ಸಮಾಜದ ಅತ್ಯಂತ ಕಟ್ಟ ಕಡೆಯ ಕೂಲಿ ಕಾರ್ಮಿಕ. ಇಂತಹ ಕಾರ್ಯಕ್ರಮ ಹಿಂದುಳಿದ ದಲಿತರ ಪರವಿರುವ ಮುಖ್ಯಮಂತ್ರಿಗಳಿಗೆ ಬೇಕಾ? ಅತ್ಯಂತ ಕೆಳಹಂತದ ಜನರ ಮೇಲಿನ ಅತಿಯಾದ ಪ್ರೀತಿಯಿಂದಲೇ ಏನೋ ಆ ಜನರ ಭವಿಷ್ಯ ಮತ್ತು ಬದುಕಿಗೆ ಮಾರಕವಾಗುವಂತಹ ದುಡುಕು ನಿರ್ಧಾರ ಪ್ರಕಟಿಸಿ ಬಿಟ್ಟಿದ್ದಾರೆ. ಗ್ರಾಮೀಣ ಜನರ ಅದರಲ್ಲೂ ಕೆಳಸ್ತರದ ಜನರ ವಸ್ತುಸ್ಥಿತಿ ಅರಿವಿರುವ ಮುಖ್ಯಮಂತ್ರಿಗಳ ಈ ನಿರ್ಧಾರ ಕೈಬಿಡಲೇಬೇಕು. ಮಾನ್ಯರೇ ನೀವು ಮಾಡುತ್ತಿರುವ "ಅಗ್ಗದ ಮದ್ಯಮಾರಾಟ" ಜನೋಪಯೋಗಿಯಂತೂ ಅಲ್ಲವೇ ಅಲ್ಲ. ಇದರಿಂದ ಬಡವರಿಗೆ/ದಲಿತರಿಗೆ ಅಪಾಯವೇ ಹೆಚ್ಚು. ಇಂದಿನ ದಿನದಲ್ಲೂ ಕೂಡ ಸಮಾಜದಲ್ಲಿನ ಹಲವಾರು ರೀತಿಯ ಶೋಷಣೆಗಳ ಹೊರತಾಗಿಯೂ ದಲಿತರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಾ ಅರೆಪ್ರಜ್ಞಾವಸ್ಥೆಯಲ್ಲಿದ್ದಾರೆ. ಈಗ ನೀವು ಅಗ್ಗದ ಸಾರಾಯಿಗೆ ರಹದಾರಿ ನೀಡಿ ಬಿಟ್ಟರೆ ಅವರು ಪೂರ್ಣ ಪ್ರಜ್ಞಾಹೀನರಾಗುವುದಿಲ್ಲವೆ? ಮದ್ಯ ಕುಡಿಸಿ ಮನರಂಜನೆ ನೋಡುವ ಕೆಲಸ ಖಂಡಿತ ಬೇಡ. ಮದ್ಯ ಕುಡಿಯಲೇ ಬೇಕು ಎಂಬ ನಿಯಮವೇನೂ ಇಲ್ಲ. ಬದಲಾಗಿ ಅವರಿಗಾಗಿ ಅವರ ಮಕ್ಕಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ಪರ್ಯಾಯ ಯೋಜನೆ ರೂಪಿಸಿ. ಆಗ ದಲಿತರ ಹಿಂದುಳಿದವರ ಮೇಲಿರುವ ಕಾಳಜಿ ಸಾರ್ಥಕಗೊಳ್ಳುತ್ತದೆ. ನಿಜವಾಗಿಯೂ ದಲಿತರ ಬಗ್ಗೆ ಕಳಕಳಿಯುಳ್ಳ ಕ್ರಿಯಾಶೀಲ ಮುಖ್ಯಮಂತ್ರಿ ನೀವಾದರೆ ದಯವಿಟ್ಟು "ಕಡಿ-ಕುಡಿ" ಸಂಸ್ಕೃತಿಯಿಂದ ದಲಿತರನ್ನು ಮುಕ್ತರನ್ನಾಗಿಸಿ ಪುಣ್ಯ ಕಟ್ಟಿಕೊಳ್ಳಿ. ಈ ಕೆಟ್ಟ ಸಂಸ್ಕೃತಿಯಿಂದ ಇಂದಿಗೂ ಕೂಡ ಹಳ್ಳಿಗಳಲ್ಲಿ ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರನ್ನು ನಿಮ್ಮ ಅವಧಿಯಲ್ಲಾದರೂ ಮೇಲೆತ್ತುವ ಪ್ರಯತ್ನ ಮಾಡಿ.
-ಕೆ.ಎಂ. ಸತೀಶ್ ಕಲ್ಕುಣಿ, ಮೈಸೂರು.

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.