ಸಂಪಾದಕೀಯ

ಹಾಜಬ್ಬ ಹೆಸರು ಆಕ್ಷೇಪಿಸುವುದು ಸಣ್ಣತನ

Published On :

ಕನ್ನಡಪ್ರಭದಲ್ಲಿ "ಶಾಲೆ ಬೇಕು ಹಾಜಬ್ಬರ ಹೆಸರು ಬೇಡ" ಎಂಬ ಸುದ್ದಿ ಓದಿ ಮನಸ್ಸಿಗೆ ತುಂಬಾ ಖೇದವಾಗುತ್ತದೆ. ಎಸ್‌ಡಿಎಂಸಿ ಸದಸ್ಯರು ಐದು ಸಾವಿರಪ ರುಗಳನ್ನು ಶಾಲೆಗೆ ದೇಣಿಗೆ ಕೊಡಲು ಯೋಗ್ಯತೆ ಇಲ್ಲದಿದ್ದರೂ ಹಾಜಬ್ಬರ ಹೆಸರು ಬೇಡವೆನ್ನಲು ಇವರಿಗೆ ಏನು ಯೋಗ್ಯತೆ ಇದೆ ಎಂದು ಪ್ರಶ್ನಿಸಬೇಕಾಗುತ್ತದೆ. ತಮಗೆ ಬಂದ ಬಹುಮಾನದ ಹಣ 5 ಲಕ್ಷವನ್ನೂ ಸಹ ಶಾಲೆಗೆ ದೇಣಿಗೆ ನೀಡಿದ ಈ ಅಕ್ಷರ ಸಂತನನ್ನು ರಾಷ್ಟ್ರಪತಿಗಳು ಚಹಾಕೂಟಕ್ಕೆ ಕರೆಸಿ ಸನ್ಮಾನಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಹಾಜಬ್ಬರು ಬೇರೆಯವರ ಹತ್ತಿರ ಬೇಡಿ ಹಣ ಮಾಡಿದ್ದು, ಇವರು ಏನು ಮಾಡಿದ್ದಾರೆ ಎನ್ನುವ ಅಹಮಿಕೆಗೆ ಮಾತೂ ಸಹ ಇವರಿಂದ ಬಂದಿದೆ. ಈ ಮಧ್ಯೆ ಇಂದಿರಾಗಾಂಧಿ ಹೆಸರನ್ನು ಹಾಕಬೇಕೆಂಬ ಸಲಹೆ ಬೇರೆ. ದೇಶದಲ್ಲಿ ಇಂದಿರಾಗಾಂಧಿ- ರಾಜೀವಗಾಂಧಿ ಹೆಸರಿನ ಶಾಲೆ ಕಾಲೇಜು, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಇತ್ಯಾದಿಗಳನ್ನು ಕೇಳಿ ಸಾಕಾಗಿದೆ. ಇನ್ನಾದರೂ ಸಾಮಾಜಿಕ ಕಾರ್ಯಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟವರ ಹೆಸರುಗಳು ಈ ರೀತಿಯಾಗಿ ಬಳಕೆಗೆ ಬರಲಿ.
-ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ

ಇಂಟರ್ನೆಟ್ ಬಳಕೆಗೆ ಮಿತಿ ಇರಲಿ

ಇತ್ತೀಚೆಗೆ ಎಲ್ಲರ ಬಳಿಯೂ ಮೊಬೈಲ್ ಅದರಲ್ಲಿ ಫೇಸ್‌ಬುಕ್, ಆರ್ಕುಟ್‌ನಂತಹ ಜಾಲ ತಾಣಗಳಲ್ಲಿ ತಮ್ಮ ಬಹಳಷ್ಟು ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುಪಾಲು ವಿದ್ಯಾರ್ಥಿಗಳು ಯುವಕ ಯುವತಿಯರು. ಕಾಲೇಜು ಸಮಯದಲ್ಲಿ ತರಗತಿಗಳಲ್ಲಿ ಕದ್ದು ಮುಚ್ಚಿ ಇಂತಹ ಜಾಲತಾಣಗಳನ್ನು ಬಳಸುವುದನ್ನು ಕಂಡಿದ್ದೇವೆ. ಇದರಿಂದ ಏಕಾಗ್ರತೆಗೆ ಹೆಚ್ಚು ಧಕ್ಕೆಯಾಗುತ್ತಿರುವುದು ಸುಳ್ಳಲ್ಲ. ಇಂತಹ ತಾಣಗಳಿಂದ ಅಪಾಯಗಳಾದ ಸಾಕಷ್ಟು ಉದಾಹರಣೆಗಳನ್ನು ನಾವು ಪೇಪರಿನಲ್ಲಿ, ಟಿವಿಯಲ್ಲಿ ನೋಡಿದ್ದೇವೆ. ಹಾಗೆಂದು ಬಳಸುವುದು ಅಪರಾಧವಲ್ಲ. ಆದರೆ ಅದನ್ನು ಬಳಸುವುದರಲ್ಲಿಯೂ ಇತಿಮಿತಿ ಇದ್ದರೆ ಆಗ ಖಂಡಿತಾ ನಮಗದು ಒಳಿತಾಗುತ್ತದೆ.
-ಕೆ. ಸಂಜಯ್,ಹಗರಿಬೊಮ್ಮನಹಳ್ಳಿ

ಚಾಲಕನ ತಡೆರಹಿತ ಹರಟೆ

ತಾ. 24.5.2013ರ ಶುಕ್ರವಾರ ಸಂಜೆ ನಾನು ಮತ್ತು ನನ್ನ ಶ್ರೀಮತಿ ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ತಡೆರಹಿತ ಬಸ್ ಏರಿದೆವು. (ಬಸ್ ನಂ. ಕೆಎ-40-ಎಫ್ 516) ಸದರಿ ಬಸ್ಸಿನ ಚಾಲಕ ಮಹಾಶಯನಿಗೆ ಹರಟುವ ಚಾಳಿ ವಿಪರೀತ. ತನ್ನ ಗೆಳೆಯನೊಬ್ಬನನ್ನು ಬಾನೆಟ್ ಬಳಿ ಕೂರಿಸಿಕೊಂಡು ಬೆಂಗಳೂರಿನಲ್ಲಿ ಪ್ರಾರಂಭಿಸಿದ ಹರಟೆಯನ್ನು ಮದ್ದೂರು (10 ನಿಮಿಷ ನಿಲುಗಡೆ) ನಿಲ್ದಾಣ ತಲುಪುವ ತನಕ ತನ್ನ ಹಿಂದೆ ಬಂದ ವಾಹನಗಳಿಗೆಲ್ಲಾ ಮುಂದೆ ಹೋಗಲು ಬಿಟ್ಟು ತಡೆರಹಿತ ಹರಟೆ ಮುಂದುವರಿಸಿ ಪ್ರಯಾಣಿಕರಿಗೆ ತುಂಬಾ ಕಿರಿಕಿರಿ ಉಂಟು ಮಾಡಿದ. ನನ್ನ ಸಹ ಪ್ರಯಾಣಿಕರೊಬ್ಬರಂತೂ ಈ ಹರಟೆಯ ಕಿರಿಕಿರಿ ತಡೆಯಲಾರದೆ ಮದ್ದೂರಿನಲ್ಲಿ ಇಳಿದು ಬೇರೆ ಬಸ್ ಹತ್ತಿ ಮೈಸೂರಿಗೆ ಹೊರಟರು. ಕರ್ನಾಟಕ ಸಾರಿಗೆ ಸಂಸ್ಥೆ ತನ್ನ ಚಾಲಕರಿಗೆ ಬಸ್ಸನ್ನು ತಡೆರಹಿತವಾಗಿ ಓಡಿಸಲು (ತಡೆರಹಿತ ಹರಟೆಯನ್ನಲ್ಲ) ಸೂಕ್ತ ಸಲಹೆ ಕೊಡಲೆಂದು ನನ್ನ ಮನವಿ.
-ಕೃಷ್ಣನ್, ಮೈಸೂರು

ಸರ್ಕಾರ ವಹಿಸಿಕೊಳ್ಳಬೇಕಿರುವುದೇನನ್ನು?

ಮಠ-ಮಂದಿರಗಳನ್ನು ವಶಪಡಿಸಿಕೊಳ್ಳುವ ಬದಲು ಖಾಸಗಿ ಶಾಲೆ-ಆಸ್ಪತ್ರೆಗಳನ್ನು ಸರ್ಕಾರವೇ ವಹಿಸಿಕೊಳ್ಳಲಿ. ತೀರ್ಥ-ಪ್ರಸಾದ-ಆಶೀರ್ವಚನಗಳಿಗಿಂತ ಜನರಿಗೆ ವಿದ್ಯೆ-ಆರೋಗ್ಯ ಮುಖ್ಯ. ಸರ್ಕಾರಕ್ಕೆ ಆದಾಯವೇ ಮುಖ್ಯವಾದರೆ... ಬಾರ್ ಮತ್ತು ವೈನ್‌ಸ್ಟೋರ್‌ಗಳನ್ನು ವಶಪಡಿಸಿಕೊಳ್ಳಲಿ.
-ಪಿ.ಜೆ. ರಾಘವೇಂದ್ರ, ಮೈಸೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.