ಸಂಪಾದಕೀಯ

ಪತ್ರಪ್ರಭ

Published On :

ಯುವಕರಿಗೆ ಉದ್ಯೋಗ ಬೇಕು
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಅನ್ನಭಾಗ್ಯ, ಕ್ಷೀರಭಾಗ್ಯ ,ಮನಸ್ವನಿ, ಯಶ್ವಸಿನಿ, ಶಾದಿಭಾಗ್ಯದಂಥ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದರೆ ಸರ್ಕಾರ ಆರಂಭದ ದಿನದಲ್ಲಿ ಯುವಕರಿಗಾಗಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿತ್ತು ಹಾಗೂ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುವುದಾಗಿ ಮಾತನಾಡಿತ್ತು. ಆದರೆ ಮುಖ್ಯಮಂತ್ರಿಗಳು ಅಂದು ತಾವಾಡಿದ ಮಾತನ್ನು ಮರೆತಂತಿದೆ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಿದೆ. ಇಂದು ಓದು ಮುಗಿಸಿ ಸಾವಿರಾರು ಯುವಕರು ಮನೆಯಲ್ಲಿ ಕುಳಿತಿದ್ದಾರೆ. ಸರ್ಕಾರಿ ಕೆಲಸಗಳು ಸಿಕ್ಕವರಿಗೆ ಸಿರೂಂಡೆಯಂತಾಗಿದ್ದು, ಸಾಮಾನ್ಯ ಜನರಿಗೆ ಕನಸಿನ ಮಾತಾಗಿದೆ. ವಿದ್ಯಾವಂತ ಯುವಕರಿಗೆ ಉಪಯೋಗವಾಗುವಂತೆ ಉದ್ಯೋಗ ಮೇಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಎಲ್ಲಾ ವರ್ಗದ ಯುವಕರಿಗೂ ಅನೂಕೂಲವಾದೀತು.  
-ಶಬ್ಬೀರ್ ನಿಡಗುಂದಿ, ದಾವಣಗೆರೆ
ಅರ್ಥವಾಗದ್ದನ್ನು ಪರೀಕ್ಷಿಸುವುದಾದರೂ ಹೇಗೆ?
ಕರ್ನಾಟಕ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಿಸಿರುವ ಜಾಹೀರಾತಿನಲ್ಲಿ, ಗ್ರಾಹಕರು ಕೊಳ್ಳುವಾಗ ಮೋಸ ಹೋಗಬಾರದೆಂದೂ, ಪ್ರಮಾಣ ಪತ್ರ ಇತ್ಯಾದಿ ವಿವರಗಳು ಇವೆಯೇ ಎಂದು ಪರೀಕ್ಷಿಸಬೇಕು ಎಂದು ತಿಳಿಸಿದೆ. ವಸ್ತುವಿನ ಮೇಲೆ ಸರಿಯಾದ ಮಾಹಿತಿ ಇರಬೇಕೆಂಬುದು ಸರಿ. ಆದರೆ ಅದು ಗ್ರಾಹಕನ ಭಾಷೆಯಲ್ಲಿರಬೇಕು ಎಂಬುದನ್ನು ಈ ಇಲಾಖೆಗೆ ಯಾರು ಹೇಳುವುದು? ಅರ್ಥವಾಗದ ಭಾಷೆಯಲ್ಲಿ ವಿವರಗಳನ್ನು ಕೊಡುವುದು ಮಾಹಿತಿಯನ್ನು ಕೊಡದಿರುವುದಕ್ಕೆ ಸಮವಲ್ಲವೇ?  ಔಷದಿ, ಪಟಾಕಿ, ರಾಸಾಯನಿಕ ಮೊದಲಾದ ಹಾನಿಕಾರಕ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬಳಕೆಯ ಅಥವ ಗುಣಮಟ್ಟದ ಅಥವಾ ಎಚ್ಚರಿಕೆಯ ಬಗೆಗಿನ ವಿವರಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕೆಂದು ಇವರುಗಳಿಗೆ ತಿಳಿದಿಲ್ಲವೇ? ಅರ್ಥವಾಗದಿದ್ದ ಮೇಲೆ ಅದನ್ನು ಪರೀಕ್ಷಿಸುವುದಾದರೂ ಹೇಗೆ?
-ಗಿರೀಶ್ ಕಾರ್ಗದ್ದೆ
ಅತ್ತ ದರಿ - ಇತ್ತ ಪುಲಿ
"ಸರ್ಕಾರದ ಯಾವುದೇ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ" ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಎರಡೆರಡು ಬಾರಿ ಚಾಟಿ ಬೀಸಿದೆ. ಆದರೂ ಕರ್ನಾಟಕ ಸರ್ಕಾರ "ಆಧಾರ್‌" ಆಧಾರಿತ ಎಲ್.ಪಿ.ಜಿ. ಗ್ಯಾಸ್‌ನ ಸಬ್ಸಿಡಿ ನೇರ ವರ್ಗಾವಣೆ ಯೋಜನೆಯನ್ನು ಈಗಾಗಲೇ ತುಮಕೂರು, ಮೈಸೂರು, ಉಡುಪಿ, ಧಾರವಾಡ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಗೆ ತಂದಿದ್ದು, ಇದೀಗ ಬರುವ ಜನವರಿಯಿಂದ ಇನ್ನೂ 2 ಜಿಲ್ಲೆಗಳಿಗೆ ವಿಸ್ತರಿಸಲು ಭರದ ಸಿದ್ಧತೆ ನಡೆಸಿದೆ. ಮುಖ್ಯ ಪ್ರಶ್ನೆಯೆಂದರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲವೇ? ಇದು ನ್ಯಾಯಾಂಗ ನಿಂದನೆಯಲ್ಲವೇ?   ಕಾರ್ಯಾಂಗ - ಶಾಸಕಾಂಗ - ನ್ಯಾಯಾಂಗಗಳ ಪುನಃ ಪುನಃ ತಿಕ್ಕಲಾಟದಲ್ಲಿ ಬಡಪಾಯಿ ಜನರಿಗೆ "ಆಧಾರ್‌" ಬೇಕೇ ಬೇಡವೇ ಎಂಬ ಚಿಂತೆಯಲ್ಲಿ ಯಲ್ಲಿ "ಅತ್ತ ದರಿ - ಇತ್ತತ ಪುಲಿ" ಎಂಬ ಅತಂತ್ರ ಸ್ಥಿತಿ ಉಂಟಾಗಿದೆ. ನಮ್ಮನ್ನಾಳುವ ಪ್ರಭುಗಳೇ ದಯವಿಟ್ಟು ಸಮಸ್ಯೆ ಪರಿಹರಿಸುವಿರಾ?
- ಕೆ. ಶ್ರೀನಿವಾಸರಾವ್, ಹರಪನಹಳ್ಳಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.