ಸಂಪಾದಕೀಯ

ಶೆಲ್ಡನ್ ಪೊಲಾಕ್‌ರ ಕನ್ನಡ ಪ್ರೀತಿ

Published On :

ಭಾರತೀಯ ಸಂಸ್ಕೃತಿಯ ಬಗ್ಗೆ, ಇಲ್ಲಿನ ಭಾಷೆಯ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡ ಅನೇಕ ವಿದೆಶೀಯರಿದ್ದಾರೆ. ಭಾಷೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ವಿಶಿಷ್ಠ ಕಾಣಿಕೆಯನ್ನು ನೀಡಿದ್ದಾರೆ. ಅವರಲ್ಲಿ ಶೆಲ್ಡನ್ ಪೊಲಾಕ್ ಸಹ ಒಬ್ಬರು. ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪದವೀಧರರಾಗಿ ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡವರು. ಸಂಸ್ಕೃತ ಅವರ ಅಚ್ಚು ಮೆಚ್ಚಿನ ಭಾಷೆ. ಹೀಗಾಗಿ ಸಂಸ್ಕೃತ ಮತ್ತು ಭಾರತೀಯ ಅಧ್ಯಯನ ವಿಷಯದಲ್ಲಿ ಪ್ರಖ್ಯಾತ ಹಾರ್ವರ್ಡ್‌ನ ಸಂಸ್ಕೃತ ವಿದ್ವಾಂಸ ಡೇನಿಯಲ್ ಇಂಗಲ್ಸ್ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪದವಿ ಗಳಿಸಿದರು. ಚಿಕಾಗೋ ವಿಶ್ವ ವಿದ್ಯಾನಿಲಯದಲ್ಲಿ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೂರಾರು ವಿದೇಶೀಯರಿಗೆ ಸಂಸ್ಕೃತವನ್ನು ಬೋಧಿಸಿದರು. ಶೆಲ್ಡನ್‌ಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಬರೆದ ಕೆಲವು ಗ್ರಂಥಗಳ ಪೈಕಿ, ದಿ ಲಾಂಗ್ವೇಜ್ ಆಫ್ ದಿ ಗಾಡ್ಸ್, ಇನ್ ದಿ ವರ್ಲ್ಡ್ ಆಫ್ ಮೆನ್ ಕೃತಿ ಪ್ರಮುಖವಾದವು. ಅದರಲ್ಲವರು ಸಂಸ್ಕೃತದ ಪ್ರಾಮುಖ್ಯತೆ, ಅದರ ಉನ್ನತಿ ಮತ್ತು ಅವನತಿಯ ಬಗ್ಗೆ ಸಂಶೋಧನೆ ನಡೆಸಿ ಉಪಯುಕ್ತ ಸಂಶೋಧನಾ ಮಾಹಿತಿಗಳನ್ನು ನೀಡಿದ್ದಾರೆ. ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಭಾಷೆಗಳ ಬಗ್ಗೆ ಅತೀವ ಪ್ರೇಮ. ಹೀಗಾಗಿ ಒಮ್ಮೆ ಕರ್ನಾಟಕಕ್ಕೂ ಬಂದರು ಮತ್ತು ಕನ್ನಡ ಭಾಷೆಯನ್ನೂ ಕಲಿತರು. ಇವರಿಗೆ ಕನ್ನಡ ಕಲಿಸಿದವರು ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು. ಪೊಲಾಕ್ ಅವರ ಕಲಿಕೆಯ ಆಸಕ್ತಿಯೆಷ್ಟಿತ್ತೆಂದರೆ ಅವರು ಹಳೆಗನ್ನಡವನ್ನು ಕಲಿತು, ಪ್ರಾಚೀನ ಕಾವ್ಯಗಳನ್ನು ಅಭ್ಯಸಿಸಿದರು. ಅದರಲ್ಲೂ ಮುಖ್ಯವಾಗಿ ಕವಿರಾಜ ಮಾರ್ಗವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಸಂಶೋಧನೆಯನ್ನೂ ಕೈಗೊಂಡರು. ಅದರಲ್ಲಿರುವ ಇತಿಹಾಸ ಮತ್ತು ಸಂಸ್ಕೃತಿಗೆ ಮಾರು ಹೋಗಿ ಹೀಗೆ ಹೇಳಿದ್ದಾರೆ- "ಇಡೀ ಪ್ರಪಂಚದಲ್ಲಿ ಮಾರ್ಗಭಾಷೆಯ ಜೊತೆಯಲ್ಲಿ ದೇಶಭಾಷೆಯೊಂದು ಎದ್ದುನಿಂತು, ತಾನೂ ಒಂದು ಮಾರ್ಗಭಾಷೆಯಾಗುವ ಅಥವಾ ಒಂದು ಭಾಷಾ ಜನಪದವಾಗುವ ಒಂದು ಕ್ರಿಯೆ ಮೊದಲ ಸಲ ಕನ್ನಡದಲ್ಲಾಯಿತು" . ಇದು ನಮ್ಮ ಕನ್ನಡದ ಭಾಷಾ ಸಂಪತ್ತಿನ ಮಹತ್ವವನ್ನು ಸೂಚಿಸುತ್ತದೆ. ಆದರೆ ನಮ್ಮ ದೌರ್ಭಾಗ್ಯ, ಇಂತಹ ಶ್ರೀಮಂತ ಭಾಷೆಯನ್ನು ನಮ್ಮ ಕನ್ನಡಿಗರೇ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಉಪೇಕ್ಷಿಸುತ್ತಿದ್ದಾರೆ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.