ಅಂದು ದನಗಾಹಿ, ಇಂದು ಟೀಂ ಲೀಡರ್
ದನಗಾಹಿಯಾಗಿದ್ದ ರಮೇಶನಿಗೆ ಪ್ರಪಂಚವೆಂದರೆ ಒಂದಿಷ್ಟು ದನಕರುಗಳಷ್ಟೇ ಆಗಿತ್ತು. ತಂದೆ ತಿಮ್ಮಪ್ಪ ಮತ್ತು ತಾಯಿ ಬಸಮ್ಮ ಬಡತನದ ಬೇಗೆಯಲ್ಲಿ ಬೆಂದವರು. ಸೆಪ್ಟೆಂಬರ್ 2007ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಎಲ್ಲವನ್ನೂ ಅಚ್ಚರಿಯಿಂದ, ಗಾಬರಿಯಿಂದ ಆತ ನೋಡುತ್ತಿದ್ದ. ದೂರದ ರಾಯಚೂರಿನ ಒಂದು ಕುಗ್ರಾಮದಿಂದ ಬಂದ ರಮೇಶ್ ನಿರಕ್ಷರ ಕುಕ್ಷಿ. ಹೆಸರನ್ನೂ ಬರೆಯಲಾಗದ, ಎಂದೂ ಶಾಲೆಯ ಮುಖವನ್ನೇ ನೋಡದ ಈ ಬಾಲಕ ಚಿಕ್ಕಂದಿನಿಂದಲೂ ದನಕಾಯುವ ಕಾಯಕವನ್ನು ಮಾಡಿಕೊಂಡಿದ್ದ. ಅದೇ ಮೊದಲ ಬಾರಿಗೆ ಬಸ್ನಲ್ಲಿ ಪಯಣಿಸಿದ್ದ! ಗಡಿಯಾರವನ್ನೆಂದೂ ನೋಡಿರಲಿಲ್ಲ. ಮೂಲೆಯೊಂದರಲ್ಲಿ ಕುಳಿತು ತನ್ನನ್ನು ಒಂಟಿಯಾಗಿ ಬಿಡಲು ಅಂಗಲಾಚಿ ಕೇಳಿಕೊಳ್ಳುತ್ತಿದ್ದ. ಇಂತಹ ಬಾಲಕನನ್ನು ಕರೆತಂದು ಅವನಿಗೆ ಇಂಗ್ಲಿಷ್ ಕಲಿಸಿ, ಕಂಪ್ಯೂಟರ್ ಶಿಕ್ಷಣ ನೀಡಿ ಸುಶಿಕ್ಷಿತನನ್ನಾಗಿ ಮಾಡಿದ್ದು "ಹೆಡ್ ಹೆಲ್ಡ್ ಹೈ" ಸಂಸ್ಥೆಯ ರಾಜೇಶ್ ಭಟ್. ಗ್ರಾಮೀಣ ಪ್ರದೇಶದಲ್ಲಿರುವ ಇಂತಹ ನಿರಕ್ಷರ ಕುಕ್ಷಿಗಳನ್ನು ಕರೆತಂದು ಶಿಕ್ಷಣ ನೀಡಿ ಅವರೂ ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸುವ ಉನ್ನತ ಧ್ಯೇಯವನ್ನಿರಿಸಿಕೊಂಡ ಈ ಸಂಸ್ಥೆಯ ಹೆಮ್ಮೆಯ ಕಾಣಿಕೆ , ರಮೇಶ. ಇವನೊಂದಿಗೆ ಯಾವುದೇ ಶೈಕ್ಷಣಿಕ ಹಿನ್ನಲೆಯಿಲ್ಲದ ಎಂಟು ಯುವಕರನ್ನು ಕರೆತಂದು ಅವರಿಗೂ ಶಿಕ್ಷಣ ನೀಡಿ ಜೀವನದಲ್ಲಿ ತಮ್ಮ ಕಾಲಿನ ಮೇಲೆ ನಿಲ್ಲಲು ಅನುವು ಮಾಡಿಕೊಟ್ಟ ಕೀರ್ತಿ ಈ ಸಂಸ್ಥೆಗೆ ಸೇರುತ್ತದೆ. ರಮೇಶನಿಗೆ ಇಂಗ್ಲಿಷಿನಲ್ಲಿ ತನ್ನ ಹೆಸರನ್ನು ಹೇಳಲು ಮೊದಲು ಕಲಿಸಿಕೊಡಲಾಯಿತು. ನಂತರದ ಎರಡು ದಿನಗಳು ಅವನಿಗೆ ಇಂಗ್ಲಿಷ್ ಅಕ್ಷರಾಭ್ಯಾಸ. ಸರಿಯಾಗಿ ಉಚ್ಚಾರಣೆ ಸಹ ಬಾರದ ಈ ಬಾಲಕ ಕ್ರಮೇಣ ಕಲಿಯುವುದರಲ್ಲಿ ಆಸಕ್ತಿ ಕಂಡುಕೊಂಡ. 2008 ರ ಹೊತ್ತಿಗೆ ಆಶ್ಚರ್ಯಕರ ರೀತಿಯಲ್ಲಿ ತನ್ನ ಜೀವನವನ್ನೇ ಬದಲಿಸಿಕೊಂಡ. ಕಂಪ್ಯೂಟರನ್ನು ಉಪಯೋಗಿಸುವುದು, ಗೂಗಲ್ನಲ್ಲಿ ಹುಡುಕಾಟ ನಡೆಸುವುದು, ವೇಗವಾಗಿ ಟೈಪ್ ಮಾಡುವುದು..ಇತ್ಯಾದಿ ಪರಿಣತಿ ಪಡೆದ. ತನ್ನ ನಡೆನುಡಿಗಳಲ್ಲಿ, ಉಡುಪಿನಲ್ಲಿ ಆಧುನಿಕ ಬದಲಾವಣೆಯನ್ನು ಮಾಡಿಕೊಂಡ. ಅವನನ್ನು ದನಗಾಹಿಯಾಗಿದ್ದಾಗ ನೋಡಿದವರಾರೂ ಗುರುತು ಹಿಡಿಯಲಾರದಷ್ಟು ಬದಲಾಗಿದ್ದ. ಕೆಲವು ತಿಂಗಳುಗಳ ನಂತರ ತನ್ನ ಮನೆಯ ಸಮಾರಂಭವೊಂದಕ್ಕೆ ಹೋದಾಗ ಸ್ವತಃ ಅವನ ತಾಯಿಯೇ ಅವನನ್ನು ಗುರುತು ಹಿಡಿಯದೆ ಯಾರೋ ದೊಡ್ಡ ಮನುಷ್ಯರು ಬಂದಿದ್ದಾರೆಂದು ಗೌರವ ತೋರಿಸಿದರಂತೆ!
ರಮೇಶ ಈಗ ಬಿ.ಪಿ.ಓ ಒಂದರಲ್ಲಿ ಮುಖ್ಯಸ್ಥನಾಗಿ ಅದ್ಭುತ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸೇರಿದ್ದಾನೆ. ಈಗ ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡುವ ರಮೇಶ್ ಸಭೆ ಸಮಾರಂಭಗಳಲ್ಲಿ, ರಾಷ್ಟ್ರೀಯ ಟಿವಿ ಚಾನೆಲ್ನಲ್ಲಿ ಭಾಗವಹಿಸಿ ತನ್ನ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮಟ್ಟಿಗೆ ಪ್ರಗತಿ ಸಾಧಿಸಿದ್ದಾನೆಂದರೆ ಅಚ್ಚರಿಯಾಗದಿರದು. ರಿಲೆಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಈ ತರುಣನನ್ನು ಭೇಟಿಮಾಡಿ ಶ್ಲಾಘಿಸಿದ್ದಾರೆ. ಇದೀಗ ಇಂಗ್ಲಿಷನ್ನು ನಿರರ್ಗಳವಾಗಿ ಮಾತನಾಡುವ ರಮೇಶ್, ತನ್ನ ಹಾಗೇ ಅವಕಾಶ ವಂಚಿತರನ್ನು ಗುರುತಿಸಿ ಅವರ ಜೀವನವನ್ನೂ ಹಸನು ಗೊಳಿಸಬೇಕೆಂದು ಪ್ರಯತ್ನಿಸುತ್ತಿದ್ದಾನೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

