ಸಂಪಾದಕೀಯ

ಕನ್ನಡಿಗರ ಅಸ್ಮಿತೆ ರೂಪಿಸುವ ಕೆಲಸವಾಗಲಿ

Published On :

ಪ್ರಾಚೀನ ಕಾಲದಿಂದಲೂ ನಮ್ಮ ಅಸ್ಮಿತೆ ಅನೇಕ ರೀತಿಯಲ್ಲಿ ಕ್ಷೀಣಿಸುತ್ತಾ ಬಂದಿದೆ. ಯಾವುದೇ ವಿಷಯದಲ್ಲಿ ಉತ್ತರ ಭಾರತ ಹಾಗೂ ನೆರೆಯ ಪ್ರಾಂತಗಳನ್ನು ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಾ ಬಂದ ಕಾರಣ, ನಮ್ಮೊಳಗಿನ ಕನ್ನಡಿಗ ಕಳೆದು ಹೋಗಿ ಅನ್ಯ ಪ್ರಾಂತೀಯ ವ್ಯಕ್ತಿ ಮತ್ತು ವಿಷಯ ನೆಲೆಗೊಂಡಿದೆ. ಇದನ್ನು ದೂರ ಸರಿಸಿ ಕನ್ನಡಿಗರ ಅಸ್ಮಿತೆಯನ್ನು ರೂಪಿಸುವ ಕೆಲಸ ಆಡಳಿತದಲ್ಲಿರುವ ಸರ್ಕಾರ ಹಾಗೂ ಸಾಮಾನ್ಯರು ಮಾಡಬೇಕಿದೆ. ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಇಂತಹ ಯಾವುದೇ ಕ್ಷೇತ್ರದಲ್ಲಿ ಕನ್ನಡತನಕ್ಕೆ ಆದ್ಯ ಸ್ಥಾನ ನೀಡುತ್ತಾ ಅನ್ಯ ಸಂಸ್ಕೃತಿಗಳನ್ನು ಪೂರಕವಾಗಿ ಬಳಸಿಕೊಳ್ಳುವ ವಿವೇಕ ಕನ್ನಡಿಗರಲ್ಲಿ ಜಾಗೃತವಾಗಬೇಕಿದೆ.
ಬದುಕಿನ ಎಲ್ಲ ಕ್ಷೇತ್ರಗಳನ್ನು ಆಳುವುದು ರಾಜಕೀಯವೇ ಆಗಿರುವುದರಿಂದ ಆ ಕ್ಷೇತ್ರದ ಮುಖಂಡ ಎನಿಸಿರುವ ಮುಖ್ಯಮಂತ್ರಿ ಆದಿಯಾಗಿ ಶಾಸಕರು, ಸಂಸದರು ಮೊದಲು ಕನ್ನಡಿಗರಾಗುವುದು ಅವಶ್ಯವಿದೆ. ದುರ್ದೈವದ ಸಂಗತಿ ಎಂದರೆ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ರಾಜ್ಯ ದೊಡ್ಡದು, ರಾಜ್ಯಕ್ಕಿಂತ ರಾಷ್ಟ್ರ ದೊಡ್ಡದು ಎಂಬ ತಿಳಿವಳಿಕೆ ಇಂದು ತಿರುವು-ಮುರುವು ಆಗಿದೆ. ರಾಷ್ಟ್ರಕ್ಕಿಂತ ರಾಜ್ಯ, ರಾಜ್ಯಕ್ಕಿಂತ ಪಕ್ಷ ಹಾಗೂ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವೆನಿಸಿ ಸಾಮೂಹಿಕ ಜಾಗೃತಿ ಕುಂದುತ್ತಾ ನಡೆದಿದೆ.
ರಾಜಕೀಯದಲ್ಲಿ ವಂಶ ಪಾರಂಪರ್ಯ ಆಡಳಿತ ಮುಂದುವರೆದು ಪ್ರಾಚೀನ ಪಾಳೆಗಾರಿಕೆಯ ಇನ್ನೊಂದು ಮುಖವಾಗಿದೆ. ರಾಜ್ಯಕ್ಕಾಗಿ ನಾನು ಎನ್ನುವುದನ್ನು ನನಗಾಗಿ ರಾಜ್ಯ ಎಂಬಂತಹ ಭಾವನೆ ಬೆಳೆದು ರಾಜ್ಯ ಸಣ್ಣದಾಗುತ್ತಾ ವ್ಯಕ್ತಿ ದೊಡ್ಡವನಾಗುತ್ತಾ ನಡೆದಿದ್ದಾನೆ. ಈ ದೋಷ ಶಿಕ್ಷಣ, ಕಲೆ, ಧರ್ಮ ಇತ್ಯಾದಿ ಕ್ಷೇತ್ರಗಳಿಗೆ ಅನ್ವಯಿಸುತ್ತಿರುವುದರಿಂದ ಕನ್ನಡ ನಾಡಿನ ಭವಿಷ್ಯದ ಬಗ್ಗೆ ಭಯ ಹುಟ್ಟುತ್ತಿದೆ. ಕಾರಣ, ವ್ಯಕ್ತಿತ್ವದ ಸಾಮಾಜೀಕರಣದ ಕಡೆಗೆ ನಾವೆಲ್ಲ ಗಮನಕೊಟ್ಟು ರಾಜ್ಯ ಮತ್ತು ರಾಷ್ಟ್ರಗಳ ಸರ್ವತೋಮುಖ ಬೆಳವಣಿಗೆಗೆ ಕಂಕಣ ಬದ್ಧರಾಗಬೇಕು.
ಸರ್ಕಾರದ ಎಲ್ಲ ಇಲಾಖೆಗಳು, ಬ್ಯಾಂಕ್, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದ ಅನುಷ್ಠಾನ ಆಗುವಂತೆ ಮುಖ್ಯಮಂತ್ರಿಗಳು ಗಮನಹರಿಸಬೇಕು. ಕನ್ನಡವೇ ಪ್ರಧಾನವಾಗಿ ಇಂಗ್ಲಿಷ್ ಭಾಷೆಯನ್ನು ಪೂರಕವಾಗಿ ಬಳಸುವಂತೆ ಎಚ್ಚರ ವಹಿಸಬೇಕಿದೆ. ಕನ್ನಡ ನಾಡು-ನುಡಿ ಉಳಿಸುವುದು ಬರೀ ಮುಖ್ಯಮಂತ್ರಿ ಅಥವಾ ಸರ್ಕಾರದ ಕೆಲಸವಲ್ಲ. ಇದು ಪ್ರತಿಯೊಬ್ಬ ಕನ್ನಡಿಗನಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರು ಜಾಗೃತರಾಗಬೇಕು.
- ಡಾ.ಎಂ.ಎಂ.ಕಲ್ಬುರ್ಗಿ

ಎಟಿಎಂನಲ್ಲಿ ನಕಲಿ ನೋಟುಗಳು
ಎಟಿಎಂ ಯಂತ್ರದಲ್ಲಿ ಆಗಾಗ್ಗೆ ನಕಲಿ ನೋಟುಗಳು ಸಿಗುತ್ತಿರುವುದು ಸರ್ವೇಸಾಮಾನ್ಯವಾಗಿ ಹೋಗಿವೆ. ಇತ್ತೀಚೆಗೆ ಕೋಲಾರದ ಒಬ್ಬ ವ್ಯಾಪಾರಿಯು ಎಟಿಎಮ್‌ನಿಂದ 5000 ರೂಪಾಯಿಗಳನ್ನು ಪಡೆದಾಗ ನಾಲ್ಕು 1000 ರೂಪಾಯಿ ನೋಟುಗಳು ಮತ್ತು ಎರಡು 500 ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿರುವುದು ವರದಿಯಾಗಿದೆ.
ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದರೆ ಸಾಮಾನ್ಯವಾಗಿ ಅವರು ಒಪ್ಪಿಕೊಳ್ಳುವುದಿಲ್ಲ. ಆದುದರಿಂದ ಠೇವಣಿದಾರರು ಹಣವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ, ಈ ವಿಷಯವನ್ನು ಬೆಳಕಿಗೆ ತಂದಾಗ ದೂರು ಕೊಟ್ಟವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ. ಒಂದು ಅಥವಾ ಎರಡು ನಕಲಿ ನೋಟುಗಳು ಎಟಿಎಂನಿಂದ ಹಣ ಪಡೆದಾಗ ಪತ್ತೆಯಾಗಿರುವ ಪ್ರಕರಣ ಈ ಹಿಂದೆಯೂ ಬೇಕಾದಷ್ಟು ಇವೆ.  ಆದರೆ ಈಗ ಎಟಿಎಂನಿಂದ ಬಂದ ಎಲ್ಲಾ ಹಣವೂ ನಕಲಿ ಕರೆನ್ಸಿಯಾಗಿರುವುದು ಆಘಾತಕಾರಿ ಬೆಳವಣಿಗೆ.  ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆಯಾಗಬಾರದು. ಅದಕ್ಕೆ ಬ್ಯಾಂಕಿನಿಂದ ಎಟಿಎಂ ಯಂತ್ರಕ್ಕೆ ಹಣವನ್ನು ಲೋಡ್ ಮಾಡುವ ಮುನ್ನ ಪ್ರತಿ ನೋಟಿಗೂ ಎಟಿಎಂ ಎಂಬ ಸೀಲನ್ನು ಅಥವಾ ಇನ್ನಾವುದಾದರೂ ಗುರುತನ್ನು ಮೂಡಿಸಬೇಕು. ಎಟಿಎಂ ಬಳಕೆದಾರರಿಗೆ ರಕ್ಷಣೆ ದೊರೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಕ್ತ ಕ್ರಮ ಕೈಗೊಳ್ಳಬೇಕು.  
- ಕೆ.ವಿ. ಸೀತಾರಾಮಯ್ಯ, ಹಾಸನ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.