ಕರ್ಕಿಯವರ ಪ್ರಾಮಾಣಿಕತೆ ಇತರರಿಗೆ ಮಾದರಿ
ಡಿ.ಎಸ್.ಕರ್ಕಿಯವರು ಕನ್ನಡದ ಕವಿಶ್ರೇಷ್ಠರಲ್ಲಿ ಒಬ್ಬರು. ಅವರ "ಹಚ್ಚೇವು ಕನ್ನಡದ ದೀಪ" ಗೀತೆಯನ್ನು ಗೊತ್ತಿಲ್ಲದವರು ಬಹುಶಃ ಕನ್ನಡನಾಡಿನಲ್ಲಿ ಇಲ್ಲದಿರಬಹುದು. ನಕ್ಷತ್ರಗಾನ, ಭಾವತೀರ್ಥ, ಗೀತ ಗೌರವ, ನಮನ ಮುಂತಾದ ಕವನ ಸಂಕಲನಗಳನ್ನೂ, ಎರಡು ಸಂಪಾದಿತ ಕೃತಿಗಳನ್ನೂ, ಕನ್ನಡ ಛಂದೋವಿಕಾಸ, ನಾಲ್ದೆಸೆಯ ನೋಟ ಎಂಬ ಗದ್ಯಕೃತಿಯನ್ನೂ ರಚಿಸಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ತುಂಬಾ ಅಭಿಮಾನವಿತ್ತು. ತಮ್ಮ ಕವನವೊಂದರಲ್ಲಿ "ಉಳಿದ ಹಬ್ಬ ಇರಲಿ ಬಿಡಲಿ, ನಾಡಹಬ್ಬ ನಮ್ಮದು" ಎಂದು ಬರೆದಿದ್ದಾರೆ. ಸದ್ವಿನಯ, ಸದ್ಭಾವನಾ, ಸದಾಚಾರದ ಮೂಲಕ ಆದರ್ಶವಾಗಿದ್ದವರು ದುಂಡಪ್ಪ ಸಿದ್ದಪ್ಪ ಕರ್ಕಿಯವರು. ಕೆ.ಎಲ್.ಇ ಸೊಸೈಟಿಯ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ, ನಂತರ ಉಪನ್ಯಾಸಕರಾಗಿ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಅವರ ಷಷ್ಠಬ್ಧಿ ಸಮಾರಂಭದ ಅಂಗವಾಗಿ ನಡೆದ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ನಾಲ್ಕನೇ ದರ್ಜೆ ನೌಕರರೊಬ್ಬರು, ಮಾತನಾಡುತ್ತಾ ಈ ಕೆಳಗಿನ ಘಟನೆಯನ್ನು ತಿಳಿಸಿದರು. ಅದು ಕರ್ಕಿಯವರ ವ್ಯಕ್ತಿತ್ವದ ಪರಿಚಯ ಮಾಡಿಕೊಡುವಲ್ಲಿ ಸಫಲವಾಗಿದೆ. ಕರ್ಕಿಯವರು ಪ್ರಾಚಾರ್ಯರಾಗಿದ್ದ ಸಮಯ. ಒಮ್ಮೆ ಕಾಲೇಜಿನ ನೌಕರನೊಬ್ಬ ಅನೇಕ ಪತ್ರಗಳನ್ನು ಅಂಚೆಗೆ ತೆಗೆದುಕೊಂಡು ಹೋಗಲು ಸಿದ್ಧನಾಗಿದ್ದ.
ಆಗ ಅವರು ತಮ್ಮ ಖಾಸಗಿ ಪತ್ರವೊಂದನ್ನು ಕೊಟ್ಟು, ಅದನ್ನೂ ಸಹ ಅಂಚೆ ಕಚೇರಿಗೆ ಒಯ್ದು ಡಬ್ಬಿಗೆ ಹಾಕಲು ತಿಳಿಸಿದರು. ಅಲ್ಲದೆ ತಮ್ಮ ಪತ್ರಕ್ಕೆ ಹಚ್ಚಬೇಕಿದ್ದ ಅಂಚೆ ಚೀಟಿಗಾಗಿ ಅಗತ್ಯ ಹಣವನ್ನು ನೀಡಲು ಹೋದರು. ಅದಕ್ಕೆ ಆತ ಅವರ ಕಾಗದಕ್ಕಾಗಲೇ ಕಾಲೇಜಿನ ಅಂಚೆ ಚೀಟಿಯನ್ನು ಹಚ್ಚಲಾಗಿದೆಯೆಂದೂ, ಪ್ರಾಚಾರ್ಯರು ಹಣ ನೀಡುವ ಅವಶ್ಯಕತೆ ಇಲ್ಲವೆಂದೂ ತಿಳಿಸಿದ. ಅದಕ್ಕೆ ಕರ್ಕಿಯವರು ಸಮ್ಮತಿಸದೆ, ತಮ್ಮ ಖಾಸಗಿ ಪತ್ರಕ್ಕೆ ಕಾಲೇಜಿನ ಹಣ ಉಪಯೋಗಿಸಿದರೆ ಅದು ಅಧಿಕಾರ ದುರುಪಯೋಗವಾಗುವುದೆಂದೂ, ಅದನ್ನು ಕಿತ್ತು ಹಾಕಿ ಬೇರೆ ಅಂಚೆ ಚೀಟಿಯನ್ನು ಕೊಂಡು ತಂದು ಅದನ್ನು ಹಚ್ಚಿ ಹಾಕಬೇಕೆಂದು ಸೂಚಿಸಿದರು. ಇದೊಂದು ಸಣ್ಣ ಘಟನೆಯಾಗಿರಬಹುದು. ಆದರೆ, ಇದು ಕರ್ಕಿಯವರ ಪ್ರಾಮಾಣಿಕ ನಡವಳಿಕೆಯನ್ನು ಸೂಚಿಸುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

