ಶಿಸ್ತಿನ ಶಿವಪ್ಪನಾಯಕನ ಹಿಂದಿದ್ದ ಪ್ರೇರಕ ಶಕ್ತಿ!
ಬಿದನೂರು ಸಿಂಹಾಸನವನ್ನೇರಿ, ಶಿಸ್ತಿನ ಶಿವಪ್ಪನಾಯಕನೆಂದು ಹೆಸರುಗಳಿಸಿ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ ಶಿವಪ್ಪನಾಯಕ, ಆಡಳಿತದಲ್ಲಿ ಸುಧಾರಣೆ ತಂದು ಪ್ರಸಿದ್ಧನಾಗಿದ್ದ. ಆದರೆ ಅವನ ಹಿಂದಿನ ಪ್ರೇರಕ ಶಕ್ತಿಯಾಗಿದ್ದವನು ಸಿದ್ದಯ್ಯನಾಯಕ. ಆತ ಮಂಗಳೂರು ಸಂಸ್ಥಾನವನ್ನು ಬಿದನೂರಿನ ಪರವಾಗಿ ನೋಡಿಕೊಳ್ಳುತ್ತಿದ್ದ ಅಧಿಕಾರಿ. ಅವನ ಕರ್ತವ್ಯ ನಿಷ್ಠೆ, ಸ್ವಾಮಿನಿಷ್ಠೆ, ಸಾಹಸ, ಉತ್ತಮ ಆಡಳಿತದಿಂದಾಗಿ ಶಿವಪ್ಪನಾಯಕನ ಆದರಕ್ಕೆ ಪಾತ್ರನಾಗಿದ್ದ. ಅವನನ್ನು ತನ್ನೆಡೆಗೆ ಆಕರ್ಷಿಸಿ ಹೇಗಾದರೂ ಮಾಡಿ ಒಲಿಸಿಕೊಳ್ಳಲು ಚರ್ಕಲ ರಾಜನು ಪ್ರಯತ್ನಿಸುತ್ತಲೇ ಇದ್ದನು. ದೇಕುಲ ಕೋಟೆಯನ್ನು ತನ್ನ ಸ್ವಾಧೀನಗೊಳಿಸಿದರೆ ದೊಡ್ಡ ಉಂಬಳಿಗಳನ್ನೂ, ಉನ್ನತ ಅಧಿಕಾರವನ್ನೂ ನೀಡುವುದಾಗಿ ಒಂದಲ್ಲಾ ಹಲವಾರು ಪತ್ರಗಳನ್ನು ಸಿದ್ದಯ್ಯನಿಗೆ ಆತ ಕಳುಹಿಸಿದ್ದ. ಅದನ್ನು ಓದಿ ಕೋಪಾವಿಷ್ಟನಾಗಿ ಅವುಗಳನ್ನೆಲ್ಲಾ ಸುಟ್ಟು ಹಾಕಲು ಆದೇಶಿಸಿ, ಪತ್ರ ತಂದ ಅವನ ದೂತನನ್ನು ಅವಮಾನ ಮಾಡಿ ಕಳುಹಿಸಿದ್ದ ಸಿದ್ದಯ್ಯನಾಯಕ.
ಸಿದ್ದಯ್ಯನ ಸೋದರಳಿಯ ಸುಬ್ಬರಾಯ ಎಂಬುವನು ಕುಟಿಲದಿಂದ ಆ ಪತ್ರಗಳನ್ನೆಲ್ಲಾ ಸಂಗ್ರಹಿಸಿ ತನ್ನ ಮಾವನ ಮೇಲೆಯೇ ರಾಜದ್ರೋಹದ ಅಪಾದನೆ ಮಾಡಿ ಬಸಪ್ಪನಾಯಕನ ಮೂಲಕ ಶಿವಪ್ಪನಾಯಕನಿಗೆ ದೂರು ಸಲ್ಲಿಸಿದ. ಶಿವಪ್ಪನಾಯಕನು ಪೂರ್ವಾಪರ ಆಲೋಚಿಸಿದೆ ಸಿದ್ದಯ್ಯ ಮತ್ತು ಸುಬ್ಬರಾಯನನ್ನು ಸೆರೆಮನೆಗೆ ತಳ್ಳಿಸಿದ. ಸತ್ಯಸಂಧನೂ, ಜನಾನುರಾಗಿಯೂ ಆಗಿದ್ದ ಸಿದ್ದಯ್ಯನ ಬಗ್ಗೆ ಪ್ರಜೆಗಳಿಗೆ ಭಕ್ತಿ ಗೌರವಗಳಿದ್ದವು. ಸೆರೆಮನೆಯಲ್ಲಿ ಅನ್ನ ನೀರುಗಳನ್ನು ತ್ಯಜಿಸಿ, ಕೂಡಲೇ ವಿವರವಾದ ತನಿಖೆ ಮಾಡಿ ವಿಚಾರಣೆಗೆ ಒಳಪಡಿಸಬೇಕೆಂದು ಸಿದ್ದಯ್ಯ ಆಗ್ರಹಿಸಿದ.
ಸಂಶಯಗೊಂಡ ಶಿವಪ್ಪನಾಯಕನು ಸುಬ್ಬರಾಯನನ್ನು ಕರೆಸಿ ತೀವ್ರ ವಿಚಾರಣೆ ಮಾಡಿದಾಗ ತಪ್ಪು ಸುಬ್ಬರಾಯನದೆಂದೂ, ಅವನು ಬೇಕೆಂತಲೇ ಸುಟ್ಟುಹಾಕಲು ನೀಡಿದ ಪತ್ರಗಳನ್ನು ಸುಡದೆ ಸಂಗ್ರಹಿಸಿ ತನ್ನ ಹೀನಬುದ್ಧಿಯನ್ನು ಪ್ರಕಟಿಸಿದ್ದು ತಿಳಿದುಬಂತು. ಆಗ ಸುಬ್ಬರಾಯನಿಗೆ ಕಾರಾಗೃಹ ಶಿಕ್ಷೆ ವಿಧಿಸಿ, ಸಿದ್ದಯ್ಯನನ್ನು ಬಿಡುಗಡೆ ಮಾಡಿ ಇನ್ನೂ ಹೆಚ್ಚಿನ ಅಧಿಕಾರ ನೀಡಿ ಗೌರವಿಸಿದನು. ಸಿದ್ದಯ್ಯನು ಆಡಳಿತದಲ್ಲಿ ಸುಧಾರಣೆ ತಂದು, ಕಂದಾಯ ನಿಗದಿ, ಪಾಳೆಯಗಾರರಿಂದ ಬರುವ ಪೊಗದಿ ಹಣ, ಆದಾಯ-ಖರ್ಚು, ಕೃಷಿ ಅಭಿವೃದ್ಧಿಗೆ ಕ್ರಮ ಹೀಗೆ ಅನೇಕ ಶಿಸ್ತಿನ ಕ್ರಮ ಕೈಗೊಂಡು ಶಿವಪ್ಪನಾಯಕನ ಆಡಳಿತ ಉತ್ತಮವಾಗಿ ನಡೆಯಲು ನೆರವಾದ. ಸಿದ್ದಯ್ಯನಾಯಕನ ಶಿಸ್ತು, ನಿರ್ಮಾಣ ಶಕ್ತಿಯನ್ನೂ, ಕಾರ್ಯದಕ್ಷತೆಯನ್ನೂ ಕಂಡು ಸಂತೋಷಗೊಂಡು ಯೋಗ್ಯವಾಗಿ ಗೌರವಿಸಿದನು. ಕೊನೆಗೆ ಸಿದ್ದಯ್ಯ ರಾಜನಿಗೆ ಮನವಿಮಾಡಿ ಸೆರೆಮನೆಯಲ್ಲಿ ಕೊಳೆಯುತ್ತಿದ್ದ ಸುಬ್ಬರಾಯನನ್ನೂ ಬಿಡುಗಡೆಗೊಳಿಸಿ ತನ್ನ ಉದಾರತೆಯನ್ನು ಮೆರೆದನು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

