ಸಂಪಾದಕೀಯ

ಡೀಸೆಲ್ ಬೆಲೆ ಹೆಚ್ಚಳ ಜನಜೀವನ ದುರ್ಭರ

Published On :

ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಅವರು ಡೀಸೆಲ್ ಮೇಲಿನ ಸಬ್ಸಿಡಿಯನ್ನು ಅಳಿಸಿ ಹಾಕಿ, ಆಮದಾದ ಇಂಧನದ ದುಬಾರಿ ಬೆಲೆಯ ಹೊರೆಯನ್ನು ಬಳಕೆದಾರರ ಮೇಲೇ ಹೇರಬೇಕಾದ ಅನಿವಾರ್ಯತೆಯನ್ನು ಒಪ್ಪಿರುವಂತಿದೆ.
ಈಗ ಡೀಸೆಲ್‌ಗೆ ಸಿಗುತ್ತಿರುವ ಸಬ್ಸಿಡಿಗೆ ಇನ್ನಾರು ತಿಂಗಳಲ್ಲಿ ಸಂಪೂರ್ಣವಾಗಿ ಕತ್ತರಿ ಹಾಕುವ ಸರ್ಕಾರದ ನಿರ್ಧಾರವನ್ನು ಪ್ರಕಟಿಸುವ ಮೂಲಕ ಒಂದು ರೀತಿಯಲ್ಲಿ ಎಲ್ಲ ವರ್ಗದ ಜನರಿಗೂ ಬೆಲೆ ಏರಿಕೆಯ ಬಿಸಿಯನ್ನು ಸಹಿಸಲು ಸಿದ್ಧರಾಗಬೇಕೆನ್ನುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಈಗಾಗಲೇ ಹಲವಾರು ತಿಂಗಳಿಂದಲೂ, ಡೀಸೆಲ್ ಬೆಲೆ ಮುಕ್ತ ಪೇಟೆಯಲ್ಲಿ ಲೀಟರ್‌ಗೆ ತಿಂಗಳಿಗೆ ಐವತ್ತು ಪೈಸೆಯಂತೆ ಏರುತ್ತಿದ್ದು, ಜನ ಬೇರೆ ಮಾರ್ಗವೇ ಕಾಣದೇ ಅದನ್ನು ಸಹಿಸಲೇಬೇಕಾಗಿದೆ. ಅದರ ಜತೆಯಲ್ಲೇ "ಒಮ್ಮೆ ಮಾತ್ರ" ಡೀಸೆಲ್ ಬೆಲೆಯನ್ನು ಲೀಟರ್‌ಗೆ ಮೂರರಿಂದ ನಾಲ್ಕು ರುಪಾಯಿಗಳಷ್ಟು ಹೆಚ್ಚಿಸಿದರೆ, ಆರು ತಿಂಗಳಲ್ಲಿ ಸಬ್ಸಿಡಿಯ ಸಮಸ್ಯೆ ಇಲ್ಲವಾಗುತ್ತದೆ ಎನ್ನುವುದು ಸರ್ಕಾರದ ನಂಬಿಕೆ.
ಆ ಮಾತು ನಿಜ. ಸರ್ಕಾರ ಡೀಸೆಲ್‌ಗೆ ಈಗ ಕೊಡುತ್ತಿರುವ ಸಬ್ಸಿಡಿಯನ್ನು ನಿಲ್ಲಿಸಿದರೆ, ಅದರ ಪೂರ್ಣ ಪ್ರಮಾಣದ ಪರಿಣಾಮವನ್ನು ಜನರೇ ಅನುಭವಿಸಬೇಕು. ಡೀಸೆಲ್ ಬೆಲೆ ಏರಿಕೆ ಎಂದರೆ ಎಲ್ಲ ವಸ್ತುಗಳ ಸಾಗಾಣಿಕೆಯ ವೆಚ್ಚವೂ ದುಬಾರಿಯಾಗಲಿದೆ. ಅದನ್ನು ಗ್ರಾಹಕರ ಮೇಲೆ ಹೇರದೆ ವಿಧಿ ಇಲ್ಲ.
ಥರ್ಮಲ್ ವಿದ್ಯುತ್ ಸ್ಥಾವರಗಳೂ ಡೀಸೆಲ್‌ನ ದೊಡ್ಡ ಬಳಕೆದಾರರೇ. ವಿದ್ಯುತ್ ದರಗಳ ಹೆಚ್ಚಳವೂ ಅನಿವಾರ್ಯ. ಸರ್ಕಾರದ ಬಜೆಟ್ ಏರುಪೇರಾಗುವುದಂತೂ ಖಚಿತ. ರೈಲ್ವೆಯ ನಿರ್ವಹಣಾ ವೆಚ್ಚ ಹೆಚ್ಚಲಿದೆ. ಆ ಹೊರೆಯನ್ನು ರೈಲ್ವೆ ವ್ಯವಸ್ಥೆಯೇ ಹೊರುವುದು ಸಾಧ್ಯವೇ ಇಲ್ಲ. ಟಿಕೆಟ್ ದರ, ಸಾಮಾನು - ಸರಂಜಾಮು ಸಾಗಾಣಿಕೆ ದರಗಳೂ ಏರಲೇ ಬೇಕು.
ಚುನಾವಣೆಯ ಮುನ್ನಾ ದಿನಗಳಲ್ಲಿ ಇಂತಹ ಕಠಿಣ ನಿರ್ಧಾರವನ್ನು ಯಾವುದೇ ಸರ್ಕಾರವಾದರೂ ಕೈಗೊಳ್ಳಲು ಹಿಂದೆ - ಮುಂದೆ ನೋಡಬೇಕು. ಆದರೆ ಮೊಯಿಲಿ ಅವರು ಮಾತ್ರ ಗಟ್ಟಿ ದನಿಯಲ್ಲೇ ಚುನಾವಣೆಗೂ ಸರ್ಕಾರದ ಈ ನಿರ್ಧಾರಕ್ಕೂ ಯಾವ ನಂಟೂ ಇಲ್ಲ ಎನ್ನುತ್ತಿದ್ದಾರೆ.
ಭಾರತದ ಇಂಧನದ ಅವಶ್ಯಕತೆ ತುಂಬಾ ಜಾಸ್ತಿ. ಆಂತರಿಕ ಉತ್ಪಾದನೆಗೂ ಬೇಡಿಕೆಗೂ ವಿಪರೀತ ಅಂತರವಿರುವುದರಿಂದ ವಿದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲೇಬೇಕು. ಕೃಷಿ ವಲಯಕ್ಕೂ ವಿಶೇಷವಾಗಿ ಬಿಸಿ ತಟ್ಟುವುದೂ ಖಚಿತ.
ಮೊಯಿಲಿ ಅವರ ನಿರೀಕ್ಷೆಯಂತೆ, ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು, ಡಾಲರ್ ವಿರುದ್ಧ ರುಪಾಯಿಯ ಮೌಲ್ಯ ಅಧಿಕವಾದರೆ, ಶೀಘ್ರದಲ್ಲಿ ತೈಲ ಸಬ್ಸಿಡಿಯ ಅಗತ್ಯವನ್ನು ಅಳಿಸಿ ಹಾಕಬಹುದು.
ಆರ್ಥಿಕ ಪರಿಸ್ಥಿತಿಯ ಸುಧಾರಣೆಗೂ ನ್ಯಾಯವಾದ ಬೆಲೆಗೆ ಇಂಧನದ ಪೂರೈಕೆಯ ವ್ಯವಸ್ಥೆ ಅಗತ್ಯ. ಆರ್ಥಿಕ ಪರಿಸ್ಥಿತಿಯ ಸುಧಾರಣೆ ಹಾಗೂ ತೈಲದ ಆಮದಿನ ವ್ಯವಹಾರಕ್ಕೂ ಗಂಟು ಹಾಕಿದರೆ, ಇಂತಹ ಮುಖ್ಯವಾದ ವಿಚಾರದಲ್ಲಿ ಜೂಜಾಟಕ್ಕೆ ಇಳಿದಂತೆಯೇ ಆಗಬಹುದು.
ಸರ್ಕಾರಕ್ಕೆ ಡೀಲೆಸ್ ಬೆಲೆಯ ಏರಿಕೆ ಒಂದು ರೀತಿಯಲ್ಲಿ ವರದಾನದಂತೆ ಕಂಡರೂ ಆಶ್ಚರ್ಯವಿಲ್ಲ. ಡೀಸೆಲ್ ಬೆಲೆ ಏರಿದರೆ, ಅದರ ಮೇಲೆ ಸವಾರಿ ಮಾಡುವ ತೆರಿಗೆಗಳ ಮೊತ್ತ ಕೂಡಾ ತಾನೇ ತಾನಾಗಿ ಹೆಚ್ಚುತ್ತದೆ. ಸರ್ಕಾರದ ವೆಚ್ಚವೂ ಹೆಚ್ಚುವುದೂ ನಿಜ. ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಇಂಧನದ ಮೇಲೆ ವಿಧಿಸುವ ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳನ್ನು ಕೈಬಿಟ್ಟು ಜನಸ್ನೇಹಿ ನೀತಿಯನ್ನು ಅನುಸರಿಸುವುದು ಸಾಧ್ಯವೇ ಇಲ್ಲವೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.