ಸಂಪಾದಕೀಯ

ನನ್ನ ಚೀನೀ ಮಿತ್ರರ ಪ್ರೀತಿಯ ಕಾಣಿಕೆ

ಭಾರತೀಯ ಸೈನಿಕರು ಯುದ್ಧದ ಸಮಯದಲ್ಲಿ ತೋರಿದ ಅಪ್ರತಿಮ ಸಾಹಸ ಸ್ಫೂರ್ತಿದಾಯಕ ಹಾಗೂ ಭಾರತೀಯರಿಗೆ ಹೆಮ್ಮೆ ತರುವ ವಿಷಯವಾಗಿದೆ. ...

Published On :

ಭಾರತೀಯ ಸೈನಿಕರು ಯುದ್ಧದ ಸಮಯದಲ್ಲಿ ತೋರಿದ ಅಪ್ರತಿಮ ಸಾಹಸ ಸ್ಫೂರ್ತಿದಾಯಕ ಹಾಗೂ ಭಾರತೀಯರಿಗೆ ಹೆಮ್ಮೆ ತರುವ ವಿಷಯವಾಗಿದೆ. ಇಂಥ ಒಂದು ಘಟನೆ ಇಲ್ಲಿದೆ. ಟಿಬೆಟ್, ಭೂತಾನ್ ಮತ್ತು ಭಾರತದ ಗಡಿಗಳು ಸೇರುವ ಭಾಗದಲ್ಲಿ ಇರುವ ಒಂದು ನದಿ ನಾಮ್ಕಾಚು. ಅದರಾಚೆಯ ಬೆಟ್ಟದಲ್ಲಿ ಬೀಡುಬಿಟ್ಟಿದ್ದ ಚೀನೀ ಸೈನಿಕರು ಭಾರತದ ಗಡಿಯೊಳಗೆ ನುಗ್ಗುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಅಕ್ಟೋಬರ್ 20, 1960 ರ ಬೆಳಿಗ್ಗೆ. ಹವಾಲ್ದಾರ್ ಮೇಜರ್ ಸೌದಾಗರ್ ಸಿಂಗ್ ಅಲ್ಲಿ ತನ್ನ ಪಡೆಯೊಂದಿಗೆ ಕಾವಲು ಕಾಯುತ್ತಿದ್ದಾಗ ಆತನ ಕಣ್ಣಿಗೆ ಬಿದ್ದ ಚೀನೀ ಸೈನಿಕರನ್ನು ಬರಿ ಕಣ್ಣಿನಲ್ಲೇ ನೋಡಿ ಸುಮಾರು ಇನ್ನೂರೈವತ್ತು ಜನ ಇರಬಹುದೆಂದು ಲೆಕ್ಕ ಹಾಕಿದ. ಅವನ ಸೇನಾಪಡೆಯ ಎಲ್ಲರೂ ತಮ್ಮ ಕೈಲಿದ್ದ ಕೋವಿಯನ್ನು ಸಿದ್ಧಪಡಿಸಿಕೊಂಡು ತಮ್ಮ ಬೆರಳನ್ನು ಕೋವಿಯ ಕುದುರೆಯ ಮೇಲೆ ಇಟ್ಟುಕೊಂಡು ತಮ್ಮ ನಾಯಕನ ಆಜ್ಞೆಗಾಗಿ ಕಾಯುತ್ತಿದ್ದರು. ಅಷ್ಟರಲ್ಲಿ ಶತ್ರು ಸೈನಿಕರು ನದಿಯ ಎರಡು ಸೇತುವೆಯನ್ನು ದಾಟಿ, ಮೂರನೇ ಸೇತುವೆ ಸಮೀಪಿಸುತ್ತಿದ್ದರು. ಸೌದಾಗರ್ ಸಿಂಗ್ ಆದೇಶಿಸಿದ ಕೂಡಲೇ ಹಾರಿದ ಗುಂಡುಗಳು ಸುಮಾರು ಹನ್ನೆರಡು ಸೈನಿಕರ ಬಲಿ ತೆಗೆದುಕೊಂಡಿತು. ಆದರೂ ಚೀನೀಯರು ಮುನ್ನುಗ್ಗತ್ತಲೇ ಇದ್ದರು. ಅವರ ಮುಖಗಳೀಗ ಸ್ಪಷ್ಟವಾಗಿ ಕಾಣುತ್ತಿದ್ದವು. ಅವರು ಭಾರತದ ಸೈನಿಕರತ್ತ ಗುಂಡುಹಾರಿಸುತ್ತಿದ್ದರು. ಭಾರತೀಯ ಸೈನಿಕರನೇಕರು ವೀರಸ್ವರ್ಗ ಸೇರಿದರು. ಮೇಜರ್ ಕ್ರೋಧದಿಂದ ಕಿಡಿಕಾರುತ್ತಿದ್ದ. ತಕ್ಷಣ ಅಲ್ಲಿಯೇ ಇದ್ದ ಬಂಡೆಯ ಹಿಂದೆ ಅಡಗಿ ಕುಳಿತು ತನ್ನ ಬಂದೂಕಿನಿಂದ ಮುಂದೆ ಬರುತ್ತಿದ್ದ ಶತ್ರು ಸೈನಿಕರನ್ನು ಏಕಾಂಗಿಯಾಗಿ ಸೆದೆಬಡಿಯತೊಡಗಿದ. ಕೊನೆಗೆ ತನ್ನ ಬಂದೂಕಿನ ಗುಂಡುಗಳು ಮುಗಿದಾಗ ಒಂದು ಕ್ಷಣ ಮೌನವಾದ. ಚೀನೀ ಸೈನಿಕನೊಬ್ಬ ಕೈಯಲ್ಲಿ ಬಂದೂಕ ಹಿಡಿದು ಗಾಬರಿಯಿಂದ ನಿಂತಿದ್ದ. ಇದೇ ಸುಸಮಯವೆಂದು ಭಾವಿಸಿ ಸೌದಾಗರ್ ಸಿಂಗ್ ತನ್ನ ಸನೀನಿನಿಂದ ಅವನ ಎದೆಯನ್ನು ಸೀಳಿ ಅವನ ಬಂದೂಕನ್ನು ಕಿತ್ತುಕೊಂಡು ಬಂಡೆಯ ಹಿಂದಿನಿಂದ ಮತ್ತೆ ಗುಂಡಿನ ದಾಳಿ ಪ್ರಾರಂಭಿಸಿದ. ಅನೇಕ ಚೀನೀ ಸೈನಿಕರು ಸತ್ತುಹೋದರು. ಮೇಜರ್ನ  ದಾಳಿಯನ್ನು ತಾಳಲಾರದೆ, ಅನೇಕ ಚೀನೀ ಸೈನಿಕರು ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಚೆಲ್ಲಾಪಿಲ್ಲಿಯಾಗಿ ತಮ್ಮ ಗಡಿಯತ್ತ ಓಡಿ ಹೋಗುತಿದ್ದರು. ಬ್ರಿಗೇಡಿನ ಕೇಂದ್ರಕ್ಕೆ ಸೌದಾಗರ್ ಸುರಕ್ಷಿತವಾಗಿ ಹಿಂದಿರುಗಿದಾಗ ಅವರಿಗೆ ವೀರೋಚಿತ ಸ್ವಾಗತ ನೀಡಲಾಯಿತು. ಆಗ ಹೆಮ್ಮೆಯಿಂದ ತನ್ನ ಕೈಲಿದ್ದ ರೈಫಲ್ಲನ್ನು ಎತ್ತಿ ಹಿಡಿದು ಎಲ್ಲರಿಗೂ ತೋರಿಸಿ, ಹೇಳಿದ, "ನನ್ನ ಚೀನೀ ಮಿತ್ರರ ಪ್ರೀತಿಯ ಕಾಣಿಕೆ ಇದು". ಸೌದಾಗರ್ ಸಿಂಗ್ನ ಶೌರ್ಯವನ್ನು ಪರಿಗಣಿಸಿ ಸರ್ಕಾರ ಪರಮವೀರ ಚಕ್ರ ನೀಡಿ ಗೌರವಿಸಿತು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.