ಸಂಪಾದಕೀಯ

ಬ್ರಿಟಿಷರ ಕಣ್ತಪ್ಪಿಸಲು ಹೆಸರು ಬದಲಾವಣೆ

Published On :

1910ರ ಆಸುಪಾಸು. ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆಂದು ಕನಸಿನಲ್ಲಿಯೂ ಭಾವಿಸದೇ ಇರುವ ಪರಿಸ್ಥಿತಿ. ಆಂಗ್ಲ ಅಧಿಕಾರಿಗಳ ದಬ್ಬಾಳಿಕೆ ಹೆಚ್ಚಾಗಿತ್ತು. ಹಮೀರ್‌ಪುರ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಉಪ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಧನ್‌ಪತ್‌ರಾಯ್ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ವ್ಯಕ್ತಿ. ಅವರು ತಮ್ಮ ಕಾವ್ಯನಾಮ ನವಾಬ್‌ರಾಯ್ ಹೆಸರಿನಲ್ಲಿ ಒಂದು ಕಥಾ ಸಂಕಲನವನ್ನು ಆಗಲೇ ಪ್ರಕಟಿಸಿದ್ದರು. ಅವೆಲ್ಲ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸುವ ಕಥೆಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಸುರಿಸುವ ಒಂದು ಹನಿ ರಕ್ತ ಅಮೂಲ್ಯವಾದ ರತ್ನದಂತೆ ಎಂದು ಒಂದು ಕಥೆಯಲ್ಲಿ ಬರೆಯಲಾಗಿತ್ತು. ಇಂತಹ ದೇಶಭಕ್ತಿಯನ್ನು ಸಾರುವ ಅನೇಕ ಕಥೆಗಳು ಇದರಲ್ಲಿದ್ದವು. ಹೀಗಾಗಿ ಈ ಪುಸ್ತಕ ಸರ್ಕಾರದ ಗಮನಕ್ಕೆ ಬಂದು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಿದ್ಧತೆ ನಡೆದಿತ್ತು. ಅದೇ ವೇಳೆಯಲ್ಲಿ ಧನಪತ್‌ರಾಯ್ ಅವರಿಗೆ ಜಿಲ್ಲಾ ಕಲೆಕ್ಟರರಿಂದ ಬುಲಾವು ಹೋಯಿತು. ಸರ್ಕಾರಿ ನೌಕರರಾದ ಧನಪತ್‌ರಾಯ್ ಹೆದರುತ್ತಾ ಕಲೆಕ್ಟರರನ್ನು ಭೇಟಿ ಮಾಡಿದರು. ಅವರ ಕಥಾ ಸಂಕಲನವನ್ನು ಹಿಡಿದೆತ್ತಿ ತೋರಿಸುತ್ತಾ 'ಇದನ್ನು ಬರೆದವರು ತಾವೆಯೋ?' ಎಂದು ಕೇಳಿದರು ಕಲೆಕ್ಟರ್. ರಾಯ್ ಅವರ ಜಂಘಾಬಲವೇ ಕುಸಿದು ಹೋಯಿತು. ನಿಜವನ್ನು ಒಪ್ಪಿಕೊಳ್ಳಲೇಬೇಕಾಯಿತು. ಕಲೆಕ್ಟರ್ ಪ್ರಕಾರ ಕಥೆಗಳು ಸಂಚಿನಿಂದ, ರಾಜದ್ರೋಹದಿಂದ ಕೂಡಿರುವುದರಿಂದ ಲೇಖಕರ ಬಳಿಯಿರುವ ಎಲ್ಲಾ ಪುಸ್ತಕಗಳನ್ನೂ ತಂದು ಸರ್ಕಾರಕ್ಕೆ ಒಪ್ಪಿಸಲು ಆದೇಶ ನೀಡಲಾಯಿತು. ಆದರೆ ಬರವಣಿಗೆ ಅವರ ಜೀವನದ ಅವಿಭಾಜ್ಯ ಅಂಗವಾಗಿದ್ದು ಅದನ್ನವರು ಬಿಟ್ಟುಕೊಡಲು ಸಾಧ್ಯವಾಗದೇ ಒದ್ದಾಡಿ ಹೋದರು. ಕೊನೆಗೆ ಧನಪತ್‌ರಾಯ್ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಬರೆಯಲಾರಂಭಿಸಿದರು. ಆಗ ಅವರ ಹೆಸರು ಪ್ರೇಮ್‌ಚಂದ್ ಆಗಿತ್ತು. ಆ ಹೆಸರಿನಲ್ಲಿ ಅವರೆಷ್ಟು ಪ್ರಸಿದ್ಧರಾದರೆಂದರೆ, ಆ ಹೆಸರಿನಲ್ಲಿಯೇ ಅವರು ಅನೇಕ ಅಮೋಘ ಕೃತಿಗಳನ್ನು ರಚಿಸಿ ಜನಪ್ರಿಯತೆಯ ತುತ್ತ ತುದಿಗೇರಿದರು. ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ಅವರಿಗೆ ಹದಿನೈದು ವರ್ಷವಾದರೂ ಹಿಂ ದಿಕಲಿಕೆ ಸಾಧ್ಯವಾಗಿರಲಿಲ್ಲ. ರೇನಾಲ್ಡ್‌ನ ಕಾದಂಬರಿಗಳನ್ನು, ಹಿಂದೂ ಪುರಾಣಗಳನ್ನು ಉರ್ದುವಿನಲ್ಲಿಯೇ ಓದುತ್ತಿದ್ದರು. ಆದರೆ ವಿಶೇಷವೆಂದರೆ ಅವರು ಉರ್ದುವಿನಲ್ಲಿ ಬರೆದರೂ ಅವರ ನೂರಾರು ಕಥೆಗಳು, ಹಲವಾರು ಕಾದಂಬರಿಗಳು, ಜೀವನ ಚರಿತ್ರೆ, ನಾಟಕಗಳು ಮತ್ತು ಮಕ್ಕಳ ಸಾಹಿತ್ಯ ಅರಳಿದ್ದು ಮಾತ್ರ ಹಿಂದಿಯಲ್ಲಿ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.