ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೇಗೆ ಶಿಕ್ಷಣ ನೀಡುತ್ತಾರೆ ಎಂಬುದರ ಬಗ್ಗೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ರೂಪಿಸಬೇಕೆಂಬ ನಿಟ್ಟಿನಲ್ಲಿ 11 ಸೂಚನೆಗಳನ್ನು ಲೋಕಾಯುಕ್ತರು ಸೂಚಿಸಿರುವ ಕುರಿತು ಪತ್ರಿಕೆಗಳಲ್ಲಿ ಬಂದಿದೆ. ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನೊಳಗೊಂಡು ಸಂಬಂಧಿಸಿ ಅಧಿಕಾರಿ ವರ್ಗವನ್ನು ಹೊಣೆಗಾರರನ್ನಾಗಿ ಮಾಡಿ ಇದರ ಅನುಷ್ಠಾನವನ್ನು 6 ತಿಂಗಳುಗಳಲ್ಲೇ ಪೂರೈಸಲು ಸೂಚಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲು ಮಾಡಿದ ವಿಚಾರ ಅಭಿನಂದನೀಯವಾದುದು. ಇದಕ್ಕೆ ಮೊದಲು ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮಕ್ಕಳ ಮನೋಸ್ಥಿತಿ ಮತ್ತು ಅವರು ಬಂದ ಪರಿಸರದ ಕುರಿತು ಸೂಕ್ಷ್ಮವಾಗಿ ಅರಿಯುವುದು ಅವಶ್ಯವಾಯಿತು. ಸರ್ಕಾರಿ ಶಾಲೆಗಳಲ್ಲೇ ಪ್ರವೇಶ ಪಡೆಯುವ ಮಕ್ಕಳ ಮನ ಮತ್ತು ಮನೆಯ ಪರಿಸರ ಹಾಗೂ ಪರಿಸ್ಥಿತಿಯನ್ನಿಲ್ಲಿ ತಿಳಿಯುವುದು ಅಗತ್ಯವಾದುದು. ಬಡತನ, ಅಜ್ಞಾನ, ಮೌಢ್ಯ, ಹೆತ್ತವರ ಹೊಡೆದಾಟ, ಬೈಗುಳ, ಕುಡಿತ ಇವೆಲ್ಲ ಸಾಮಾನ್ಯ ಬಡವರ ಹಿಂದುಳಿದವರ ಮನೆಯ ಗೋಳಿನ ಕಥೆ ಇರುತ್ತದೆ. ಈ ಶಾಲೆಯಲ್ಲಿ ಕೆಲವು ಕಡೆಗೆ ಸಂಚಾರಿ ಅರೆ ಸಂಚಾರಿ ಮತ್ತು ಬೇರೆ ಮಾತೃ ಭಾಷೆ ಮಾತನಾಡುವವರು ಕನ್ನಡ ಶಾಲೆಗಳಿಗೆ ದಾಖಲಾಗುತ್ತಾರೆ. ಇಂಥ ಪರಿಸರದಲ್ಲಿ ಬೆಳೆದ ಮಕ್ಕಳು ಸಾಮಾನ್ಯವಾಗಿ ಉಡಾಳರು ಇಲ್ಲವೆ ಮಂದ ಬುದ್ಧಿಯವರಾಗಿರುತ್ತಾರೆ. ಪ್ರತಿಕೂಲ ಪರಿಸ್ಥಿತಿಯ ಕಾರಣಕ್ಕಾಗಿ ಕಲಿಕೆಯಲ್ಲಿ ನಿರಾಸಕ್ತಿ ಹೊಂದಿದವರಾಗಿರುತ್ತಾರೆ. ಸಿರಿವಂತರ ಮನೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲದೆ ಸುಶಿಕ್ಷಿತವಾದ ವಾತಾವರಣದಲ್ಲಿ ಬೆಳೆದ ಮಕ್ಕಳು ತಮ್ಮ ಹೆತ್ತವರ ಪ್ರಭಾವದಿಂದ ಖಾಸಗಿ ಶಾಲೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಸಿದ್ಧಗೊಂಡ ಆಹಾರ ಖಾಸಗಿ ಶಾಲೆಯಾದರೆ ಕಚ್ಚಾ ಆಹಾರವನ್ನು ಸರ್ಕಾರಿ ಶಾಲೆಗಳಿಗೆ ಹೋಲಿಸಬಹುದಾಗಿದೆ. ಆರೋಗ್ಯಪೂರ್ಣರ ಆರೈಕೆಯಲ್ಲಿ ಮಹತ್ವ ಕಾಣಿಸದು. ಆದರೆ ಅನಾರೋಗ್ಯರನ್ನು ಗುಣಗೊಳಿಸುವಲ್ಲಿ ನಿಗಾ ವಹಿಸುವುದು ಹೆಚ್ಚುಗಾರಿಕೆ ಎನ್ನಬಹುದು. ಇಂಥ ಕೆಲಸದ ಜವಾಬ್ದಾರಿ ಸರ್ಕಾರಿ ಶಾಲೆಗಳ ಶಿಕ್ಷಕರದ್ದಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಡುಗಲ್ಲನ್ನು ಕಡೆದು ಮೂರ್ತಿ ನಿರ್ಮಾಣ ಮಾಡುವ ಕೆಲಸದಲ್ಲಿಯ ಶ್ರಮ ಶ್ರದ್ಧೆ ಪ್ರಶಂಸನೀಯವಾದುದು. ಸರ್ಕಾರಿ ಶಾಲಾ ಶಿಕ್ಷಕ ಇಂದು ಕೇವಲ ಬೋಧನೆಗೆ ಬದ್ಧನಾಗಿಲ್ಲ. ಬಿಸಿಯೂಟ, ಕ್ಷೀರಭಾಗ್ಯ, ಗಣತಿ, ಚುನಾವಣೆ, ಹತ್ತು ಹಲವು ದಾಖಲಾತಿ ಬರೆಯುವ ಕಾರಕೂನಕಿ ಇವೆಲ್ಲ ಅವನ ಸುತ್ತಲೂ ಇವೆ. ಖಾಸಗಿ ಶಿಕ್ಷಣ ಕ್ಷೇತ್ರ ಫಲವತ್ತಾದ ನೀರಾವರಿ ಭೂಮಿಯಾದರೆ ಬರಡು ಭೂಮಿಯಲ್ಲಿ ಬೆಳೆಯುವ ಹರಸಾಹಸ ಸರ್ಕಾರಿ ಶಾಲೆಯದ್ದಾಗುತ್ತದೆ. ಸಾಧಕರ ಮತ್ತು ಸೃಜನಶೀಲರ ಸಾಲಿನಲ್ಲಿ ಬರುವವರು ಅಧಿಕವಾಗಿ ಸರ್ಕಾರಿ ಶಾಲೆಗಳಲ್ಲಿ ಅದೂ ಮಾತೃ ಭಾಷೆಯಲ್ಲಿ ಕಲಿತವರಾಗಿದ್ದಾರೆಂಬುದು ಗಮನಾರ್ಹವಾದುದು.
-ಶಿ.ಗು. ಕುಸಗಲ್ಲ, ಬೆಳಗಾವಿ
ರಾಜಕಾರಣಿಗಳೆ ಈಗ ತೃಪ್ತಿಯಾಯಿತೇ?
ರೈತ ದೇಶದ ಬೆನ್ನೆಲುಬೆಂದು ಭಾಷಣ ಬಿಗಿಯುವ ಮಂತ್ರಿಗಳೇ, ರೈತನ ಬೆನ್ನಿಗೆ ಯಾರಿದ್ದೀರಿ? ಸಗಣಿ ಹುಳುವಿನ ಹಾಗೆ ರೈತ ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬೆಳೆದು ಕೊನೆಗೆ ಸಾಲದಲ್ಲೇ ಪ್ರಾಣ ಬಿಡಬೇಕೆ? ಆ ಭಾಗ್ಯ ಈ ಭಾಗ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರಕ್ಕೆ ರೈತರ ದೌರ್ಭಾಗ್ಯ ಕಾಣುತ್ತಿಲ್ಲವೇ? ರೈತರು ತಮ್ಮ ಪರಿಸ್ಥಿತಿಯನ್ನು ತಿಳಿಸಲು ಆತ್ಮಹತ್ಯೆ ಮಾಡಿಕೊಳ್ಳಬೇಕೇ? ನಾವೂ ರೈತರ ಮಕ್ಕಳೆಂದೇ ಹೇಳಿಕೊಳ್ಳುವ ಮಂತ್ರಿ ಮಹೋದಯರಿಗೆ ಅನ್ನದಾತನ ಸಮಸ್ಯೆಗಳು ಅರ್ಥವಾಗುವುದಿಲ್ಲವೇ? ರೈತರ ಕುರಿತಾಗಿ ನಿಮಗೆ ಯಾಕೀ ಅಸಡ್ಡೆ? ನೌಕರರು, ಕಾರ್ಮಿಕರು, ಇತರ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಇಳಿದಾಗ ತಕ್ಷಣವೇ ಸ್ಪಂದಿಸುವ ನೀವು, ರೈತರು ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟಿಸುವಾಗ ತಿರುಗಿ ನೋಡುವುದಿಲ್ಲವೇಕೆ? ಯಾವುದೋ ಒಂದು ಭಾಗ್ಯವನ್ನು ಎಲ್ಲರಿಗೂ ನೀಡಬೇಕೆಂದು ಒತ್ತಾಯಿಸುವ ವಿರೋಧ ಪಕ್ಷಗಳಿಗೂ ರೈತರ ಅಳಲಿಗೆ ಈ ಮುಂಚೆಯೇ ಧ್ವನಿಗೂಡಿಸಲಾಗಲಿಲ್ಲವೇ? ಒಟ್ಟಿನಲ್ಲಿ ರಾಜಕಾರಣಿಗಳು ಗೋಮುಖ ವ್ಯಾಘ್ರಗಳೆಂಬುದನ್ನು ರೈತ ವಿಠ್ಠಲ ಅರಭಾವಿಯ ಬಲಿಪಡೆದು ಸಾಬೀತುಪಡಿಸಿದ್ದೀರಿ. ಬಹುಶಃ ಈಗ ನಿಮಗೆ ತೃಪ್ತಿಯಾಗಿರಬಹುದಲ್ಲವೇ?
-ಬಿ.ಪ್ರಭು ಅಡವಿಹಾಳ, ಎಮ್ಮೆಟ್ಟಿ, ಹುನಗುಂದ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

