ಶೇಷಣ್ಣನವರನ್ನು ತಟ್ಟಿದ ವಾಸುದೇವಾಚಾರ್ಯರ ಪಟ್ಟು
ವೀಣೆ ಶೇಷಣ್ಣನವರು ಅದ್ಭುತ ವೀಣಾ ವಾದಕರಾಗಿ, ಅಪ್ರತಿಮ ಸಂಗೀತಗಾರರಾಗಿ ಹೆಸರುಗಳಿಸಿದ್ದರು. ವೀಣೆಯನ್ನು ವೆಂಕಟಸುಬ್ಬಯ್ಯನವರಿಂದ ಮತ್ತು ಸಂಗೀತವನ್ನು ಮೈಸೂರು ಸದಾಶಿವರಾಯರಿಂದ ಕಲಿತಿದ್ದರು. ಮೈಸೂರು ಅರಮನೆಯಲ್ಲಿ ಆಸ್ಥಾನ ಕಲಾವಿದರಾಗಿದ್ದರೂ ಆಗಾಗ್ಗೆ ಬೇರೆ ಬೇರೆ ಭಾಗಗಳಿಗೆ ಹೋಗಿ ಸಂಗೀತ ಕಚೇರಿ ನೀಡುತ್ತಿದ್ದರು. ಹಾಗೆ ಹೋಗುವಾಗ ಯಾರಾದರೂ ಸಂಗೀತಗಾರರನ್ನೂ ತಮ್ಮ ಜೊತೆಗೆ ಕರೆದೊಯ್ಯುತ್ತಿದ್ದರು. ಒಮ್ಮೆ ಶೇಷಣ್ಣನವರು ಕೊಯಮತ್ತೂರಿನ ಧನಿಕರೊಬ್ಬರ ಮನೆಗೆ ತಮ್ಮ ವೀಣಾವಾದನದ ಕಚೇರಿ ನೀಡಲು ಹೋಗಿದ್ದರು. ಆಗ ಅದೇತಾನೆ ಇನ್ನೂ ಸಂಗೀತ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದ ಮೈಸೂರು ವಾಸುದೇವಾಚಾರ್ಯರನ್ನೂ ಕರೆದೊಯ್ದಿದ್ದರು. ಅಂದು ನಾಲ್ಕಾರು ಗಂಟೆ ಕಛೇರಿ ಮಾಡಿ ಎಲ್ಲರನ್ನೂ ತಣಿಸಿದ ಮೇಲೆ ತಮಾಷೆಗಾಗಿ ವಾಸುದೇವಾಚಾರ್ಯರನ್ನು ತೋರಿಸಿ, ಅವರೊಬ್ಬ ಅದ್ಭುತ ಸಂಗೀತಗಾರರೆಂದು ಪರಿಚಯ ಮಾಡಿಕೊಟ್ಟರು. ಅಲ್ಲಿ ಸೇರಿದ್ದ ಎಲ್ಲರೂ ವಾಸುದೇವಾಚಾರ್ಯರಿಗೆ ಹಾಡಬೇಕೆಂದು ದುಂಬಾಲು ಬಿದ್ದರು. ಆದರೆ ಬಾಯಿ ಬಿಡುವುದೇ ತಡ, ಸಭೆಯಲ್ಲಿ ನಗು, ಚಪ್ಪಾಳೆ, ಕುಚೋದ್ಯ ಎಲ್ಲವೂ ಪ್ರಾರಂಭವಾಯಿತು. ಇದರಿಂದ ಅವಮಾನಗೊಂಡ ಆಚಾರ್ಯರು ತಗ್ಗಿಸಿದ ತಲೆಯನ್ನು ಮೇಲೆತ್ತಲಿಲ್ಲ. ಸಂಗೀತದಲ್ಲಿ ಆದ ಅಪಮಾನ, ಅವರನ್ನು ಸಂಗೀತ ಕಲಿಯಲು ಪ್ರೇರೇಪಿಸಿತು. ಸಂಗೀತವನ್ನು ಶೇಷಣ್ಣನವರಿಂದಲೇ ಕಲಿತು ಅವರಿಂದಲೇ ಶಹಭಾಶ್ಗಿರಿ ಗಿಟ್ಟಿಸಲು ನಿರ್ಧಾರ ಮಾಡಿದರು. ರೈಲು ಹತ್ತಿದಾಗಲೇ ತಮಗೆ ಸಂಗೀತ ಕಲಿಸಬೇಕೆಂದು ದುಂಬಾಲು ಬಿದ್ದರು. ಅದಕ್ಕೆ ಶೇಷಣ್ಣನವರು, 'ನಿಮಗೂ ಸಂಗೀತಕ್ಕೂ ಬಲುದೂರ. ಸಂಗೀತದ ಗೋಜು ಬೇಡ' ಎಂದು ಬುದ್ಧಿವಾದ ಹೇಳಿದರು. ಆದರೂ ತಮಗೆ ಸಂಗೀತ ಪಾಠ ಅವರಿಂದಲೇ ಆಗಬೇಕೆಂದು ಪಟ್ಟು ಹಿಡಿದರು. ಆಗ ಶೇಷಣ್ಣನವರು, ಅವರಿಗೆ ಶಂಕರಾಭರಣ ರಾಗದ ಅಟ್ಟತಾಳದ ವರ್ಣವೊಂದನ್ನು ಹೇಳಿಕೊಟ್ಟು ಅದನ್ನು ಬೆಂಗಳೂರಿನ ಕಂಟೋನ್ಮೆಂಟ್ ಸ್ಟೇಷನ್ನಿಗೆ ತಲುಪುವುದರೊಳಗೆ ಕಲಿತು ಒಪ್ಪಿಸಬೇಕೆಂದು ತಾಕೀತು ಮಾಡಿದರು. ಇಲ್ಲವಾದರೆ ಸಂಗೀತದ ಆಸೆ ಬಿಡುವುದರ ಜೊತೆಗೆ, ತಮ್ಮ ಜನಿವಾರವನ್ನೂ ತ್ಯಜಿಸಬೇಕಾಗುತ್ತದೆಂಬ ಎಚ್ಚರಿಕೆಯನ್ನೂ ನೀಡಿದರು. ಅದನ್ನೊಂದು ಸವಾಲಾಗಿ ಸ್ವೀಕರಿಸಿದ ವಾಸುದೇವಾಚಾರ್ಯರು ಪ್ರಯಾಣದುದ್ದಕ್ಕೂ ಅಭ್ಯಾಸ ಮಾಡಿ ಕಂಟೋನ್ಮೆಂಟ್ ಸ್ಟೇಷನ್ನಿನಲ್ಲಿಯೇ ಮೊದಲಿನಿಂದ ಕೊನೆಯವರೆಗೂ ತಪ್ಪದಂತೆ ವರ್ಣವನ್ನು ಅತ್ಯಂತ ಸೊಗಸಾಗಿ ಹಾಡಿ ತೋರಿಸಿದರು. ಅದನ್ನು ಕೇಳಿ ಶೇಷಣ್ಣನವರ ಕಣ್ಣಂಚಿನಲ್ಲಿ ನೀರಾಡಿದವು. ಅವರನ್ನು ಬಾಚಿ ತಬ್ಬಿಕೊಂಡು, ತಮ್ಮ ಅಹಂ ಅನ್ನು ಜಯಸಿದ್ದಕ್ಕೆ ಕೃತಜ್ಞತೆ ಅರ್ಪಿಸಿ, ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

