ಕ್ಯಾನ್ಸರ್ ಒಂದೇ ಅಲ್ಲ, ಸೈಕ್ಲಿಂಗ್ ಸ್ಪರ್ಧೆಯಲ್ಲೂ ಗೆಲುವು
ಕೆಲವು ಬಾರಿ ನಮ್ಮ ಆಸೆ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ನಾವಂದುಕೊಂಡಂತೆ ನಡೆಯುವುದಿಲ್ಲ. ಅನೇಕ ಎಡರುತೊಡರುಗಳಿಂದ ಕೊನೆಯವರೆಗೂ ಅವುಗಳು ಈಡೇರದಿರಬಹುದು. ಆದರೆ, ಬಲವಾದ ಆತ್ಮ ವಿಶ್ವಾಸ ಕೆಲವೊಮ್ಮೆ ಎಲ್ಲವನ್ನೂ ಹಿಮ್ಮೆಟ್ಟಿಸಿ ಗುರಿಮುಟ್ಟುವಲ್ಲಿ ನೆರವಾಗುವುದುಂಟು. ಅದಕ್ಕೊಂದು ಜೀವಂತ ನಿದರ್ಶನ, ಲ್ಯಾನ್ಸ್ ಎಡ್ವರ್ಡ್ ಆರ್ಮ್ ಸ್ಟ್ರಾಂಗ್ ಎಂಬ ಅಮೆರಿಕದ ಒಬ್ಬ ಸಾಹಸಿಯದು. ಆತ ಸೈಕ್ಲಿಂಗ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮತ್ತು ಅವನ ಜೀವನದ ಪ್ರಮುಖ ಧ್ಯೇಯ ವಿಶ್ವ ವಿಖ್ಯಾತ ಟೂರ್ ಡಿ ಫ್ರಾನ್ಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಯಾಗಬೇಕೆಂಬುದು. ಇದೊಂದು ಪ್ರತಿವರ್ಷ 21 ಹಂತಗಳಲ್ಲಿ ನಡೆಯುವ ಸಾಹಸ ಸ್ಫರ್ಧೆ. ಅದಕ್ಕಾಗಿ ಕಠಿಣ ಅಭ್ಯಾಸವನ್ನು ಕೈಗೊಂಡ. ಇನ್ನೇನು ಸ್ಫರ್ಧೆಗೆ ಭಾಗವಹಿಸಬೇಕು ಎನ್ನುವಷ್ಟರಲ್ಲಿ ವೃಷಣದ ಕ್ಯಾನ್ಸರ್‌ಗೆ ತುತ್ತಾದ. ಅದನ್ನು ನಿರ್ಲಕ್ಷಿಸಿದ ಕಾರಣಕ್ಕೆ ಆತನ ಶ್ವಾಸಕೋಶ ಮತ್ತು ಮೆದುಳಿಗೂ ಕ್ಯಾನ್ಸರ್ ಹರಡಿತು. ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದ. ಇದರ ಜೊತೆಗೆ ತೀವ್ರವಾದ ಕಿಮೋಥೆರಪಿ ಬೇರೆ. ಅವನು ಬದುಕುಳಿಯುವುದೇ ಸಾಧ್ಯವಿಲ್ಲವೆಂದು ವ್ಯೆದ್ಯರು ನಿರ್ಧರಿಸಿದ್ದರು. ಆದರೆ ಆರ್ಮ್ ಸ್ಟ್ರಾಂಗ್ ಮೊದಲು ಸಾವನ್ನು ಗೆದ್ದು ನಂತರ ಸೈಕ್ಲಿಂಗ್ ಸ್ಪರ್ಧೆ ಗೆಲ್ಲಲು ದೃಢನಿಶ್ಚಯ ಮಾಡಿದ. ಮಲಗಿದ್ದಲ್ಲಿಯೇ ಕ್ಯಾನ್ಸರ್ ಕುರಿತು ಅಧ್ಯಯನ ಮಾಡಿದ. ವ್ಯೆದ್ಯರ ಸಲಹೆಯನ್ನು ಚಾಚೂತಪ್ಪದೆ ಪಾಲಿಸಿದ. ಅವನ ಮನೋ ನಿರ್ಧಾರ ಅಚಲವಾಗಿತ್ತು. ಅಂಥ ಖಾಯಿಲೆಯಲ್ಲಿಯೂ ಅವನು ಟೂರ್ ಡಿ ಫ್ರಾನ್ಸ್ ಗೆಲ್ಲಲೇಬೇಕೆಂಬ ಛಲ ಹೊಂದಿದ್ದ. ದೀರ್ಘ ಚಿಕಿತ್ಸೆಯಿಂದ ಹಾಗೂ ಅಗಾಧ ಮನೋಬಲದಿಂದ ಕ್ಯಾನ್ಸರ್ ರೋಗದಿಂದ ಕೊನೆಗೂ ಮುಕ್ತನಾದ. ಅವನು ಬದುಕುಳಿಯುವುದೇ ಇಲ್ಲವೆಂದು ತಿಳಿದಿದ್ದ ವೈದ್ಯರಿಗೆ ಅಚ್ಚರಿ ಮೂಡಿಸಿದ್ದ. ಇನ್ನು ಸೈಕ್ಲಿಂಗ್ ತರಬೇತಿ ಪಡೆದು ಕಠಿಣ ಪರಿಶ್ರಮದಿಂದ ಅಭ್ಯಾಸಕ್ಕೆ ತೊಡಗಿದ. ಏಕೆಂದರೆ ಈ ಸ್ಫರ್ಧೆ ಅವನಿಗೆ ಅತ್ಯಂತ ಸವಾಲಿನದಾಗಿತ್ತು. ಗಂಟೆಗೆ ಕನಿಷ್ಠ 40 ಕಿ.ಮೀ.ದೂರದಂತೆ ಒಟ್ಟು 3404 ಕಿಮೀ.ದೂರವನ್ನು ಕ್ರಮಿಸಬೇಕಾಗಿತ್ತು. ಅದೂ ಬೆಟ್ಟ - ಗುಡ್ಡ, ಕಾಡು-ಮೇಡು, ನದಿಗಳ ಮೂಲಕ ಸಾಗುವ ದುರ್ಗಮ ಮಾರ್ಗ. ಇಂತಹ ಸ್ಫರ್ಧೆಯನ್ನು ಅಚ್ಚರಿ ಎನಿಸುವಂತೆ 1999 ರಿಂದ 2005 ರವರೆಗಿನ ಎಲ್ಲ ಟೂರ್ ಡಿ ಫ್ರಾನ್ಸ್ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಗೆಲುವು ಸಾಧಿಸಿ ಇತಿಹಾಸವನ್ನೇ ನಿರ್ಮಿಸಿದ. 1997ರಲ್ಲಿ ಲಿವ್ ಸ್ಟ್ರಾಂಗ್ ಫೌಂಡೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಕ್ಯಾನ್ಸರ್ ರೋಗಿಗಳ ಕಲ್ಯಾಣಕ್ಕೆ ತನ್ನನ್ನು ತೊಡಗಿಸಿಕೊಂಡ. 2012 ರಲ್ಲಿ ಮಾದಕ ದ್ರವ್ಯ ಸೇವನೆಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಸ್ಫರ್ಧೆಯಿಂದ ಬಹಿಷ್ಕೃತನಾದ. ಆದರೆ ಇಂದಿಗೂ ತನ್ನ ಪ್ರತಿಷ್ಠಾನದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಆರ್ಮ್ ಸ್ಟ್ರಾಂಗ್ ಇತರರಿಗೆ ಸ್ಫೂರ್ತಿದಾಯಕನಾಗಿದ್ದಾನೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

