ಒತ್ತಡಕ್ಕೆ ಮಣಿದು ಸುಗ್ರೀವಾಜ್ಞೆ ರದ್ದು
ಕ್ರಿಮಿನಲ್ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಸಂಸದ-ಶಾಸಕರಿಗೆ ಸುಪ್ರೀಮ್ ಕೋರ್ಟಿನ ತೀರ್ಪಿನಿಂದ ರಕ್ಷಣೆ ಅಗತ್ಯವೆಂದು ಭಾವಿಸಿ, ಸರ್ಕಾರ ಸಿದ್ಧಪಡಿಸಿದ ತುರ್ತು ಶಾಸನದ ಕರಡಿಗೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದ ಅನಂತರ ರಾಷ್ಟ್ರಪತಿಯ ಅಂಕಿತಕ್ಕೆ ರವಾನಿಸಿದ ದಾಖಲೆ ಇನ್ನೂ ಅಲ್ಲೇ ಇದೆ.
ಸುಪ್ರೀಮ್ ಕೋರ್ಟಿನ ತೀರ್ಪನ್ನು ಪರಿಶೀಲಿಸಿದ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ತೀರ್ಪು ಕಠೋರವಾಯಿತೆನ್ನುವ ಅಭಿಪ್ರಾಯ ಮೂಡಿದ್ದರಿಂದ ಅದರ ಪರಿಣಾಮದಿಂದ ಚುನಾಯಿತ ಪ್ರತಿನಿಧಿಗಳನ್ನು ರಕ್ಷಿಸುವ ವಿಧೇಯಕ ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿದೆ.
ಈ ಹಂತದಲ್ಲಿ ಸಚಿವ ಸಂಪುಟದ ತುರ್ತುಶಾಸನ ಜಾರಿಗೆ ತರುವ ಪ್ರಯತ್ನ ಎಷ್ಟರ ಮಟ್ಟಿಗೆ ಸಮರ್ಥನೀಯ ಎನ್ನುವುದು ತೀವ್ರ ಸ್ವರೂಪದ ವಾದ- ವಿವಾದಕ್ಕೆ ತುತ್ತಾದಾಗಲೇ ರಾಹುಲ ಗಾಂಧಿ ಇದ್ದಕ್ಕಿದ್ದಂತೆ ಸಿಡಿದೆದ್ದು ಆರ್ಡಿನೆನ್ಸ್- ನಾನ್ಸೆನ್ಸ್ ಹೇಳಿಕೆಯ ಮೂಲಕ ದೇಶಕ್ಕೆ ದೇಶವೇ ಚಕಿತವಾಗುವಂತೆ ಮಾಡಿದ್ದು ಈಚಿನ ಘಟನೆ.
ಘಟನೆಯ ಅನಂತರ ಕಾಂಗ್ರೆಸ್ನ ಅನೇಕ ನಾಯಕರು ತುರ್ತು ಶಾಸನ ಬೇಕಾಗಿಲ್ಲ ಎಂದರು. ಹಿಂದೆ ಇಂತಹದ್ದೇ ವಿಧೇಯಕವನ್ನು ಮಂಡಿಸಲು ಒಪ್ಪಿಗೆ ನೀಡಿದ್ದ ಪ್ರಧಾನ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿಯೂ ತುರ್ತು ಶಾಸನದ ಉದ್ದೇಶವನ್ನು ಪ್ರತಿಭಟಿಸಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದಿಢೀರನೆ ಕರಡು ಶಾಸನಕ್ಕೆ ಸಹಿ ಹಾಕದೇ ಹಿರಿಯ ಸಚಿವರಿಂದ ವಿವರಣೆ ಕೇಳಿದಾಗ, ಇಡೀ ದೇಶದಲ್ಲಿ ಎಲ್ಲ ಕಡೆ ವಿಚಾರ ವಿನಿಮಯ, ಬಿಸಿ ಬಿಸಿ ಚರ್ಚೆ ಆರಂಭವಾದಾಗ, ಸಹಜವಾಗಿಯೇ ಅದರಲ್ಲಿ ಪಕ್ಷ ರಾಜಕೀಯದ ಪ್ರವೇಶವಾಯಿತು.
ಆ ಕಾಲದ ಒಂದು ವಿಪರ್ಯಾಸ ಎಂದರೆ, ಇದ್ದಕ್ಕಿದ್ದಂತೆ ಬಹುತೇಕ ರಾಜಕೀಯಪಕ್ಷಗಳು ತುರ್ತು ಶಾಸನದ ವಿರುದ್ಧದ ನಿಲವನ್ನು ತಳೆದಿದ್ದರೂ ಈ ಹಂತದಲ್ಲಿ ಅದನ್ನು ತಡೆ ಹಿಡಿದ ಕೀರ್ತಿಗಾಗಿ ಕಾದಾಡಲು ತೊಡಗಿದವು. ಈ ಕಾದಾಟದಲ್ಲಿ ರಾಹುಲ ಗಾಂಧಿ ಅವರೇ ಕೇಂದ್ರ ವ್ಯಕ್ತಿ. ಸಹಜವಾಗಿಯೇ ಅವರು ಮೌನವ್ರತಕ್ಕೆ ಶರಣಾದರು.
ಅವರ ನಿಲವಿನ ತಿರುಳನ್ನು ಪ್ರಶ್ನಿಸದೇ ಇದ್ದ ಪ್ರತಿಪಕ್ಷಗಳು ಹಾಗೂ ಸ್ವತಂತ್ರ ಟೀಕಾಕಾರರು ರಾಹುಲ ಗಾಂಧಿ ಅನುಸರಿಸಿದ ಮಾರ್ಗವನ್ನು ಕಟುವಾಗಿಯೇ ಖಂಡಿಸಿ, ಇದೊಂದು ನಾಟಕ ಎನ್ನುವ ಮಟ್ಟಕ್ಕೂ ಹೋದರು.
ಇದೆಲ್ಲ ನಡೆದಾಗ ಪ್ರಧಾನಿ ಮನಮೋಹನ ಸಿಂಗ್ ಅವರು ನ್ಯೂಯಾರ್ಕ್ನಲ್ಲಿದ್ದರು. ಅಲ್ಲಿ ಏನೂ ಮಾತನಾಡದೇ ಸುಮ್ಮನಿದ್ದ ಪ್ರಧಾನಿ ತವರಿಗೆ ಬರುವಾಗ ವಿಮಾನದಲ್ಲೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ರಾಹುಲ ಗಾಂಧಿಯ ವರ್ತನೆಯ ವಿಚಾರದಲ್ಲಿ ಅಸಮಾಧಾನವನ್ನು ಪ್ರಕಟಿಸಿದ್ದೂ ಆಯಿತು. ಇದೆಲ್ಲ ನಡೆದಿದ್ದು ಮಂಗಳವಾರ.
ಬುಧವಾರ ಗಾಂಧಿ ಜಯಂತಿ. ರಜಾ ದಿನ. ಆದರೂ ಸಚಿವ ಸಂಪುಟದ ಸಭೆಯನ್ನು ಕರೆಯಲಾಯಿತು. ರಾಹುಲ ಗಾಂಧಿ ಪ್ರಧಾನಿಯನ್ನು ಭೇಟಿ ಮಾಡಿ ತಮ್ಮ ನಿಲವನ್ನು ವಿವರಿಸಿದರು. ಅದಕ್ಕೆ ಮುಂಚೆ ಬರೆದಿದ್ದ ಪತ್ರದಲ್ಲಿ ಪ್ರಧಾನಿಯನ್ನು ಹೊಗಳಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಸಂಪೂರ್ಣವಾಗಿ ಪ್ರಧಾನಿಯ ಬೆಂಬಲಕ್ಕಿದೆ ಎನ್ನುವ ಭರವಸೆ ನೀಡಿದ್ದರು.
ರಾಹುಲ್- ಸೋನಿಯಾ ಮಾತುಕತೆ, ಪ್ರಧಾನಿ- ರಾಷ್ಟ್ರಪತಿಯ ಭೇಟಿ, ಕಾಂಗ್ರೆಸ್ ಪ್ರಮುಖರ ಸಭೆ, ಪ್ರತಿಪಕ್ಷಗಳ ನಾಯಕರ ಕೂಟಗಳು, ಎಲ್ಲ ನಡೆದ ಅನಂತರ ಸಚಿವ ಸಂಪುಟದಲ್ಲೇ ಅಂತಿಮ ನಿರ್ಧಾರ ಎನ್ನುವ ಸಂವಿಧಾನಕ್ಕೆ ಅನುಗುಣವಾದ ಮಾತೂ ಹೊರಬಿತ್ತು. ಆದರೆ ಆ ವೇಳೆಗೆ ತುರ್ತು ಶಾಸನ, ಅದರ ಈಗಿನ ಅವತಾರದಲ್ಲಿ ಜಾರಿಗೆ ಬರುವ ಪ್ರಶ್ನೆಯೇ ಉಳಿದಿರಲಿಲ್ಲ. ತುರ್ತು ಶಾಸನದ ಕರಡು ರಾಷ್ಟ್ರಪತಿ ಭವನದಲ್ಲಿ ಇದ್ದಾಗಲೇ ಲಾಲೂ ಪ್ರಸಾದ ಯಾದವ್ ಮತ್ತು ರಾಜ್ಯ ಸಭೆಯ ಕಾಂಗ್ರೆಸ್ ಸದಸ್ಯ ರಷೀದ್ ಮಸೂದ್ ಅವರಿಬ್ಬರೂ ಕ್ರಿಮಿನಲ್ ಆರೋಪಗಳ ಮೇಲೆ ನಡೆದ ವಿಚಾರಣೆಯ ಅನಂತರ ಶಿಕ್ಷೆಗೆ ಒಳಗಾಗಿದ್ದರು.
ಬುಧವಾರದ ಸಚಿವ ಸಂಪುಟದ ಸಭೆಯಲ್ಲಿ ವಿಧೇಯಕ ಮತ್ತು ತುರ್ತು ಶಾಸನವನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಸಂಸತ್ತಿನಲ್ಲಿ ಒಪ್ಪಿಗೆಗೆ ಬಾಕಿ ಇದ್ದ ಜನತಾ ಪ್ರಾತಿನಿಧ್ಯ ಕಾಯ್ದೆಯ ಮಸೂದೆಯನ್ನು ಹಿಂತೆಗೆದುಕೊಳ್ಳುವ ಸಂಪುಟ ನಿರ್ಧಾರವು ಸರ್ವಾನುಮತದ್ದಾಗಿತ್ತು ಇದರೊಂದಿಗೆ ರಾಜಕೀಯದಲ್ಲಿ ಎದ್ದಿದ್ದ ಕ್ಷೋಭೆ ಶಮನಗೊಂಡು ನಿರಾಳದ ಸನ್ನಿವೇಶ ಉಂಟಾಗಿದೆ. ಇದರ ಶ್ರೇಯ ಕೊನೆಗೂ ಪಡೆದುಕೊಂಡವರು ರಾಹುಲ್ ಗಾಂಧಿಯೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

