ಹಿಂದು ದೇವಾಲಯದಲ್ಲೊಬ್ಬ ಮುಸ್ಲಿಂ ಪೂಜಾರಿ
ಗುಜರಾತಿನ ಕಾಲವಾಡದ ಶೀತಲಾ ದೇವಿಯ ದೇವಾಲಯ ಹಿಂದಿನಿಂದಲೂ ಐಶ್ವರ್ಯದಿಂದ ಕೂಡಿದ ಸಂಪದ್ಭರಿತ ದೇವಾಲಯ. ಹೀಗಾಗಿ ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯ 1336ರಲ್ಲಿ ಮಲ್ಲಿಖಾಫರ್ ನೇತೃತ್ವದಲ್ಲಿ ದೇವಾಲಯಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿತು. ಇದನ್ನು ತಿಳಿದ ದೇವಾಲಯದ ಅರ್ಚಕ ಚಿಂತಾಮಣಿ ಅಲ್ಲೇ ಸಮೀಪದಲ್ಲಿದ್ದ ದರ್ಗಾದ ನಿವಾಸಿ ಫಕೀರ್ ಪೀರ್ ಬಾಬಾನ ಮೊರೆ ಹೋಗಿ ಸುಲ್ತಾನನಿಗೆ ಬುದ್ಧಿಹೇಳಲು ವಿನಂತಿಸಿದ. ಅದರಂತೆ ಫಕೀರನು ಸುಲ್ತಾನನಿಗೆ ಯಾವ ಕಾರಣಕ್ಕೂ ಕಾಲವಾಡದ ದೇವಾಲಯದ ಮೇಲೆ ದಾಳಿಮಾಡಬಾರದೆಂದು ಸಂದೇಶ ಕಳುಹಿಸಿದ. ಆದರೆ ಸುಲ್ತಾನ ಕೇಳಿದರೆ ತಾನೆ? ಅವನ ಸುಸಜ್ಜಿತ ಸೈನ್ಯ ದೇವಾಲಯದಿಂದ ಕೆಲವೇ ಗಜಗಳ ದೂರದಲ್ಲಿ ಬೀಡು ಬಿಟ್ಟಿತು. ಆಗಲೂ ಫಕೀರನು ಸುಲ್ತಾನನಿಗೆ ಅಲ್ಲಿಂದ ಹೊರಟುಹೋಗಬೇಕೆಂತಲೂ, ಹಾಗೇನಾದರೂ ಹೋಗದಿದ್ದರೆ ತಾನು ಅಲ್ಲಾನ ಸೈನ್ಯತಂದು ಹೋರಾಡುವುದಾಗಿಯೂ ಬೆದರಿಸಿದನು. ಆದರೆ ಸ್ವತಃ ಸುಲ್ತಾನ ದೇವಾಲಯದ ಮೇಲೆ ದಾಳಿ ಮಾಡುವ ನಿರ್ಧಾರದಿಂದ ದೂರ ಸರಿಯಲಿಲ್ಲ. ದೇವಾಲಯವನ್ನು ಲೂಟಿ ಮಾಡಲು ಆದೇಶ ನೀಡಿದ ಸುಲ್ತಾನನು ಮನ್ನುಗ್ಗುತ್ತಿದ್ದಂತೆ ಅವನ ಕಣ್ಣುಗಳು ಮಂಜಾಗಿ ಏನೂ ಕಾಣದಂತಾಯಿತು. ಎಷ್ಟೇ ಪ್ರಯತ್ನ ಪಟ್ಟರೂ ಎದುರಿಗಿನ ಯಾವ ವಸ್ತುವೂ ಕಾಣದಾಗಿ ಅಕ್ಷರಶಃ ಕುರುಡನೇ ಆಗಿಹೋದ. ಏಕೋ ತನ್ನ ಕಾರ್ಯ ಅಲ್ಲಾನಿಗೆ ಸರಿಕಾಣಲಿಲ್ಲ ಎಂದೆನಿಸಿ, ಫಕೀರನ ಮೊರೆಹೋದ. ತನ್ನ ತಪ್ಪನ್ನು ಕ್ಷಮಿಸಬೇಕೆಂತಲೂ ತನಗೆ ಹೋದ ದೃಷ್ಟಿ ಭಾಗ್ಯ ಮರಳಿಸಬೇಕೆಂದೂ ಪರಿಪರಿಯಾಗಿ ಬೇಡಿಕೊಂಡ. ಆಗ ಫಕೀರ ಸುಲ್ತಾನನಿಗೆ ಬುದ್ಧಿಹೇಳಿ, ತನ್ನ ಸೈನ್ಯವನ್ನು ತೆಗೆದುಕೊಂಡು ತಕ್ಷಣ ವಾಪಸ್ಸು ಹೋದರೆ ಕಣ್ಣುಬರುವುದೆಂದು ಆದೇಶಿಸಿದ. ಅದೇ ರೀತಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ಸೈನ್ಯಕ್ಕೆ ಹಿಂದಿರುಗಲು ಆದೇಶಿಸಿದ. ಆಗ ಅವನಿಗೆ ದೃಷ್ಟಿ ಹಿಂದಿರುಗಿತು ಮತ್ತು ದೇವಾಲಯ ರಕ್ಷಿಸಲ್ಪಟ್ಟಿತು. ಇದರಿಂದ ಸಂತೋಷಗೊಂಡ ಹಿಂದುಗಳು ಚಿಂತಾಮಣಿಯ ನೇತೃತ್ವದಲ್ಲಿ ಫಕೀರನ ಬಳಿ ಬಂದು ತಮ್ಮ ಕೃತಜ್ಞತೆಯನ್ನು ಅರ್ಪಿಸಿದರಲ್ಲದೆ. ದೇವಾಲಯದ ಪೂಜಾಕಾರ್ಯವನ್ನು ನೆರವೇರಿಸುವಂತೆ ವಿನಂತಿಸಿದರು! ಅವರ ಮಾತಿಗೆ ಮೊದಲು ಒಪ್ಪದಿದ್ದರೂ ಕೊನೆಗೆ ಸಮ್ಮತಿಸಿದ ಫಕೀರ ದೇವಿಯ ಪೂಜೆಯನ್ನು ಮಾಡಿದ. ಅಂದಿನಿಂದ ಇಂದಿನವರೆಗೆ ಕಾಲವಾಡದ ಶೀತಲಾದೇವಿಯ ದೇವಾಲಯದಲ್ಲಿ ಒಬ್ಬ ಹಿಂದು, ಒಬ್ಬ ಮುಸ್ಲಿಂ ಅರ್ಚಕ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗೆ ಹಿಂದು-ಮುಸಲ್ಮಾನರ ಐಕ್ಯತೆಗೆ ಕಾರಣೀಭೂತರಾದ ಫಕೀರ್ ಪೀರ್ಬಾಬಾನನ್ನು ಜನ ಇಂದಿಗೂ ಪೂಜಿಸುತ್ತಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

