ಸ್ವಂತ ಹಣದಿಂದ ಸಂಬಳ ನೀಡಿದ ಮಹಾನುಭಾವ
ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಮ್ಮ ನಾಡಿನ ಹೆಮ್ಮೆಯ ಕೈಗಾರಿಕೆ. ಇದು ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಪ್ರಾರಂಭಗೊಂಡು ಲಾಭದಲ್ಲಿ ನಡೆಯುತ್ತಿದ್ದ ಸಂಸ್ಥೆಯಾಗಿತ್ತು. ಇಂತಹ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ದೊಡ್ಡ ದೊಡ್ಡ ಪೈಪ್ಗಳಿಗೆ ಅಧಿಕ ಬೇಡಿಕೆಯಿದ್ದು ಅದಕ್ಕಾಗಿಯೇ ಇದ್ದ ಪೈಪ್ಗಳನ್ನು ತಯಾರಿಸಿ, ಮಾರಾಟಮಾಡಿ ಲಾಭ ಸಹ ಗಳಿಸುತ್ತಿತ್ತು. ಆದರೆ ಇದ್ದಕ್ಕಿದ್ದಂತೆ 1932ರ ಸಮಯದಲ್ಲಿ ಆ ಪೈಪ್ಗಳಿಗೆ ಬೇಡಿಕೆ ಕಡಿಮೆಯಾಗಿ ತಯಾರಾದ ಕೊಳವೆಗಳೆಲ್ಲ ಕಾರ್ಖಾನೆಯಲ್ಲಿಯೇ ಪೇರಿಸಲ್ಪಟ್ಟಿದ್ದವು. ಹೀಗಾಗಿ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸಂಬಳ ಕೊಡಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಕಾರ್ಮಿಕರು ಇಲ್ಲದ ಬವಣೆಗೆ ಸಿಲುಕಿದರು. ಆಗ ಅಲ್ಲಿ ಜನರಲ್ ಮ್ಯಾನೇಜರ್ ಆಗಿದ್ದವರು ವೆಂಕಟನಾರಾಯಣಪ್ಪ ಎಂಬುವವರು. ಅವರಿಗೆ ಕಾರ್ಮಿಕರ ಪರಿಸ್ಥಿತಿ ಕಂಡು ತುಂಬಾ ಬೇಸರವಾಯಿತು. ಸರ್ಕಾರ ಸಹ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿ, ಬೇಕಾದರೆ ಪೈಪ್ ಫೌಂಡ್ರಿಯನ್ನು ಮುಚ್ಚಲು ಸಲಹೆ ನೀಡಿದರು. ಆದರೆ ವೆಂಕಟನಾರಾಯಣಪ್ಪನವರಿಗೆ ಅದು ಸರಿಕಾಣಲಿಲ್ಲ. ಏಕೆಂದರೆ ಹಾಗೇನಾದರೂ ಮುಚ್ಚಿದರೆ ಅನೇಕರು ಕೆಲಸ ಕಳೆದುಕೊಳ್ಳುವ ಭೀತಿ ಇತ್ತು. ವೇತನವನ್ನೇ ಕೊಡದಿದ್ದರೆ ಕಾರ್ಮಿಕರು ಹೇಗೆ ತಾನೇ ಜೀವನ ಮಾಡಲು ಸಾಧ್ಯ ಎಂಬುದನ್ನು ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದರು. ಎಲ್ಲ ಕಾರ್ಮಿಕರನ್ನು ಒಂದೆಡೆ ಸೇರಿಸಿ, ಕಾರ್ಖಾನೆಯ ಆರ್ಥಿಕ ದುಸ್ಥಿತಿಯನ್ನು ವಿವರಿಸಿ, ಪೈಪ್ ಫೌಂಡ್ರಿಯಲ್ಲಿ ಕೆಲಸ ನಿಲ್ಲಿಸದೆ ಉತ್ಪಾದನೆಯನ್ನು ಹೆಚ್ಚು ಮಾಡಲು ಮನವಿ ಮಾಡಿಕೊಂಡರು. ಅಲ್ಲದೆ ಕಾರ್ಖಾನೆಯಲ್ಲಿ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲದ ಕಾರಣ ವೇತನ ನೀಡಲಾಗುತ್ತಿಲ್ಲವೆಂದೂ, ತಾವೇ ತಮ್ಮ ಕೈಯಿಂದ ಅರ್ಧ ತಿಂಗಳ ಸಂಬಳ ನೀಡುವುದಾಗಿ ವಾಗ್ದಾನ ಮಾಡಿದರು. ಅದಕ್ಕೆ ಕಾರ್ಮಿಕರು ಒಪ್ಪಿ ಕೆಲಸ ನಿರ್ವಹಿಸಿದರು. ನಂತರ ವೆಂಕಟನಾರಾಯಣಪ್ಪನವರು ತುಂಬಾ ಪರಿಶ್ರಮಪಟ್ಟು ಭಾವನಗರದಿಂದ ಪೈಪುಗಳಿಗೆ ಬೇಡಿಕೆಯನ್ನು ಗಿಟ್ಟಿಸಿದರು. ಅವರಿಗೆ ಹೋದ ಜೀವ ಬಂದಂತಾಯಿತು. ಅಲ್ಲಿಗೆ ಪೈಪುಗಳನ್ನು ಕಳಿಸಿಯಾದ ಮೇಲೆ ಬಂದ ಹಣದಿಂದ ಕಂಪನಿಯ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿ ಎಲ್ಲ ಕಾರ್ಮಿಕರಿಗೂ ಬಾಕಿ ವೇತನವನ್ನು ಪಾವತಿಸಿದರು. ಇದು ಎಲ್ಲ ಕಾರ್ಮಿಕರಿಗೂ ಸಂತಸ ನೀಡಿದ್ದಲ್ಲದೆ, ತಮ್ಮ ತಾಪತ್ರಯ ಕಡಿಮೆಯಾದ ಬಗ್ಗೆ ಸಮಾಧಾನ ಉಂಟುಮಾಡಿತು. ಹೀಗೆ ಕಾರ್ಮಿಕರ ಹಿತದೃಷ್ಟಿಯಿಂದ ತಮ್ಮ ಸ್ವಂತ ಹಣವನ್ನೇ ಕಾರ್ಮಿಕರಿಗೆ ನೀಡಿ ಅವರಿಂದ ಪ್ರೀತಿ ಮತ್ತು ಗೌರವವನ್ನು ಸಂಪಾದಿಸಿದ, ಮಾನವೀಯ ಗುಣಗಳನ್ನು ಮೆರೆದ ಅಧಿಕಾರಿಯೆಂದು ಹೆಸರು ಗಳಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

