ಸಂಪಾದಕೀಯ

ವಾರಾಂತ್ಯದ ದುರಂತಗಳು

Published On :

ಶನಿವಾರ ಒಡಿಶಾದ ಗೋಪಾಲಪುರದ ಸುತ್ತಮುತ್ತ, ಆಂಧ್ರಪ್ರದೇಶದ ಕರಾವಳಿಯ ಉತ್ತರ ಭಾಗದ ಶ್ರೀಕಾಕುಲಂ ಸೀಮೆಯನ್ನು ಫೈಲಿನ್ ಚಂಡಮಾರುತ ಅಪ್ಪಳಿಸುವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರೀಕ್ಷಿಸಿ, ಸಾಧ್ಯವಿರುವಷ್ಟೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರಿಂದ ಈ ದುರಂತದ ಬಲಿಯ ಸಂಖ್ಯೆ ಕಡಿಮೆಯಾಗಿದ್ದು ಸಹಜವೇ.
  ಸುಮಾರು ಆರು ಲಕ್ಷ ಜನರನ್ನು ಚಂಡಮಾರುತದ ಪಥದಿಂದ ದೂರ ಸಾಗಿಸಿದ್ದು ನಿಜಕ್ಕೂ ಜಗತ್ತು ಕಂಡ ಒಂದು ಮಹಾನ್ ರಕ್ಷಣಾ ಕಾರ್ಯಕ್ರಮ. ಆದ್ದರಿಂದಲೇ 'ಫೈಲಿನ್‌' ದೈತ್ಯ ಹಾವಳಿಯಲ್ಲಿ ಸತ್ತವರ ಸಂಖ್ಯೆ 21-22ಕ್ಕೇ ಸೀಮಿತವಾಗಿದ್ದು. ಇದು ಸರ್ಕಾರದ ಸಾಧನೆ.
  ಹವಾಮಾನದ ಆಗು-ಹೋಗುಗಳನ್ನು ಊಹಿಸಬಲ್ಲ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ, ಚಂಡಮಾರುತದ "ಕೇಂದ್ರದ" ಚಲನವಲನವನ್ನು ನಿಮಿಷ ನಿಮಿಷಕ್ಕೂ ಪತ್ತೆ ಹಚ್ಚುವುದು ಸಾಧ್ಯವಾಯಿತು. ಟಿ.ವಿ. ವಾಹಿನಿಗಳು ಆ ಸಮಾಚಾರವನ್ನು ಇಡೀ ದೇಶದ ಜನರಿಗೆ ತತ್‌ಕ್ಷಣದಲ್ಲೇ ತಿಳಿಸುತ್ತಿದ್ದರಿಂದ ಮನೆಮಠಗಳನ್ನು ಬಿಟ್ಟು ಬೇರೆ ಕಡೆಗೆ ಹೋಗುವುದಕ್ಕೆ ಪ್ರತಿರೋಧ ಕಡಿಮೆಯಾಗಿತ್ತು. ಜಾಗಬಿಡಿ ಇಲ್ಲವೇ ಜೀವ ಬಿಡಿ ಎನ್ನುವ ಎಚ್ಚರಿಕೆ ತನ್ನ ಕೆಲಸ ಮಾಡಿತ್ತು.
  ಹಾಗೆಂದ ಮಾತ್ರಕ್ಕೇ ಚಂಡಮಾರುತದ "ಪ್ರಸಾದ" ಮುಗಿದು ಹೋಗಿಲ್ಲ. ಈಗಾಗಲೇ ಲಕ್ಷಗಟ್ಟಲೆ ಮನೆಗಳು ಹಾರಿ ಹೋಗಿವೆ. ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ಪತ್ತೆ ಇಲ್ಲ. ವಿದ್ಯುತ್ ಸಂಪರ್ಕ ಮತ್ತೆ ಮಾಮೂಲಾಗಲು ಸ್ವಲ್ಪ ಕಾಲ ಬೇಕು.
  ಲಕ್ಷಗಟ್ಟಲೆ (90 ಲಕ್ಷ ಎಂದು ಅಂದಾಜು) ಜನರನ್ನು ನಿರಾಶ್ರಿತರ ಕೇಂದ್ರಗಳಲ್ಲಿಟ್ಟುಕೊಂಡು, ಅವರ ಜೀವನದ ಪುನರ್‌ವ್ಯವಸ್ಥೆಗೆ ಏರ್ಪಾಟು ಮಾಡುವುದು ಸಾಮಾನ್ಯವಾದ ಕೆಲಸವಲ್ಲ. ಗೋಪಾಲಪುರ - ಶ್ರೀಕಾಕುಲಂ ಸೀಮೆಯಲ್ಲಿ ಬೆಳೆ ಹಾಳಾಗಿದೆ.
  ಅಷ್ಟೇ ಅಲ್ಲ. ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ಗದ್ದೆಗಳ ಮೇಲೂ ಆಗಲಿದೆ. ಬಿಹಾರ - ಬಂಗಾಳ - ಒಡಿಶಾದಲ್ಲಿ ವಿಪರೀತ ಮಳೆಯ ಪರಿಣಾಮವಾಗಿ ಎಲ್ಲ ನದಿಗಳಲ್ಲೂ ಪ್ರವಾಹ ಕಂಡುಬರುವುದು ಸಹಜವೇ - ಈ ಪ್ರದೇಶಗಳಲ್ಲಿ, ನಿಜವಾದ ಸ್ಥಿತಿಯಲ್ಲಿ ಜನಜೀವನ ತನ್ನ ಹಿಂದಿನ ಸ್ಥಿತಿಯನ್ನು ಮುಟ್ಟಲು ವರ್ಷಗಳೇ ಬೇಕಾಗಬಹುದು.
  ಆ ಭಾಗದ ಭಾರತೀಯರ ಸಂಕಷ್ಟವನ್ನು ಅವರೇ ಅನುಭವಿಸಬೇಕು. ಆದರೆ ಪರಿಹಾರ ಕಾರ್ಯಕ್ರಮಗಳಿಗೆ ಒಂದು ರಾಷ್ಟ್ರೀಯ ಸ್ವರೂಪವನ್ನು ಒದಗಿಸಿದರೆ, ಆ ಭಾಗದ ಜನರಲ್ಲೂ ಮರುಹುಟ್ಟಿನ ವಿಚಾರದಲ್ಲಿ ವಿಶ್ವಾಸ ಮೂಡೀತು.
  ಚಂಡಮಾರುತದ ಭೀಕರ ಸ್ವರೂಪ ನಿರೀಕ್ಷಿಸಿದಷ್ಟು ಕೆಟ್ಟದ್ದಾಗಿರಲಿಲ್ಲವೆಂದು ನಿಟ್ಟುಸಿರು ಬಿಡುವ ಸಮಯದಲ್ಲೇ, ಮಧ್ಯಪ್ರದೇಶ - ಉತ್ತರ ಪ್ರದೇಶಗಳ ಗಡಿ ಎನ್ನಬಹುದಾದ ದಾತಿಯಾ ಬಳಿಯ ರತ್ನಘರ್‌ನ ದುರ್ಗಾ ಗುಡಿಯಲ್ಲಿ ನವರಾತ್ರಿಯ ಪೂಜೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ನೂಕು ನುಗ್ಗಲಿನಲ್ಲಿ ಸುಮಾರು 115ಕ್ಕೂ ಹೆಚ್ಚಿನ ಜನ ಮೃತರಾದ ಭೀಕರ ಅಪಘಾತದ ಸುದ್ದಿ ಬಂದಿದೆ.
  ಚಂಡಮಾರುತ ನಿಸರ್ಗದ ಮುನಿಸಿನ ಪರಿಣಾಮವಾದರೆ, ರತ್ನಘರ್ ದುರ್ಗಾ ಗುಡಿಯ ಸಮೀಪದ ಸಾಮೂಹಿಕ ದುರಂತ ಒಂದು ರೀತಿಯಲ್ಲಿ ಮಾನವ ನಿರ್ಮಿತ ದುರಂತವೇ.
  ಆ ದೇವಾಲಯದಲ್ಲಿ ಶಾರದಾ ಸಪ್ತಮಿಯ ಅನಂತರದ ದುರ್ಗಾಷ್ಟಮಿಯಂದು ಜನ ಪೂಜೆಗೆ ಬರುವುದು ಹೊಸದೇನೂ ಅಲ್ಲ. ಅದು ಅನಿರೀಕ್ಷಿತವೂ ಅಲ್ಲ. ಇಲ್ಲಿ "ಸಿಂಧ್‌" ನದಿಯನ್ನು ದಾಟಿ ಗುಡಿಯ ಸಮೀಪಕ್ಕೆ ಸಾವಿರಾರು ಜನ ಬರಬೇಕು.
  2006ರಲ್ಲೇ ಒಮ್ಮೆ ಜನರ ನೂಕು ನುಗ್ಗಲ ಪರಿಣಾಮದ ಅನಾಹುತ ಸಂಭವಿಸಿದಾಗ ಮೃತರಾದವರ ಸಂಖ್ಯೆ 56 ಎಂದು ಹೇಳಲಾಗಿತ್ತು. ಅನಂತರ ಅಲ್ಲಿ ನದಿಗೆ ಒಂದು ಸೇತುವೆಯನ್ನು ನಿರ್ಮಿಸಲಾಯಿತು.
  ಈಗ 2013 ರಲ್ಲಿ ಆ ಸೇತುವೆಯಿಂದಲೇ ನೂಕುನುಗ್ಗಲಿಗೆ ಜನರು ಸಿಕ್ಕಿ ಬಿದ್ದಿದ್ದಾರೆ. ಆ ಸೇತುವೆ ಗಟ್ಟಿಯಾಗಿಲ್ಲ, ಕುಸಿದು ಬೀಳಲಿದೆ ಎನ್ನುವ ವದಂತಿಯನ್ನು ಯಾರೋ ಹಬ್ಬಿಸಿದ್ದಾರೆ. ಸೇತುವೆ ಬೀಳುವ ಮುನ್ನವೇ ಪೂಜೆ - ದರ್ಶನ ಮುಗಿಸುವ ಕಾತುರ ಜನರದ್ದು.
  ಈ ಅನಾಹುತದ ವಿಚಾರದಲ್ಲಿ ಹಬ್ಬಿರುವ ಬಗೆ ಬಗೆಯ ವದಂತಿಗಳಿಗೇನೂ ಕಡಿಮೆ ಇಲ್ಲ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು ಎನ್ನುವುದು ಒಂದು ಸುದ್ದಿ. ಪ್ರಸಾರವಾದ ಟಿವಿ ಕಾರ್ಯಕ್ರಮಗಳಲ್ಲಿ ಪೊಲೀಸರು ಲಾಠಿ ಹಿಡಿದು ಕೆಲವರನ್ನು ಅಟ್ಟಿಸಿಕೊಂಡು ಹೋಗಿದ್ದು ಕಂಡುಬಂದಿತ್ತು. ಅದು ಸೇತುವೆಯ ಮೇಲಲ್ಲ, ಮೈದಾನದಂತಹ ಪ್ರದೇಶದಲ್ಲಿ.
  ಇನ್ನೊಂದು ವದಂತಿಯಂತೆ ಪೊಲೀಸರೇ ಸೇತುವೆಯಿಂದ ಕೆಲವರನ್ನು ನದಿಗೆ ಎಸೆದರು ಎನ್ನುವುದು. ಅದಕ್ಕೆ ಚಿತ್ರೀಕರಣವಾದ ಸಾಕ್ಷ್ಯಾಧಾರ ಇಲ್ಲ.
  ಈಗ ಮಧ್ಯಪ್ರದೇಶ ಚುನಾವಣೆಯ ಜ್ವರದ ಸ್ಥಿತಿಯಲ್ಲಿದೆ. ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದ ಆಚಾರ ಸಂಹಿತೆ ಆಚರಣೆಯಲ್ಲಿದೆ. ಆದರೂ ರಾಜ್ಯ ಸರ್ಕಾರ, ಚುನಾವಣೆ ಆಯೋಗದಿಂದ ಒಪ್ಪಿಗೆ ಪಡೆದು ನೂಕುನುಗ್ಗಲಿನಲ್ಲಿ ನಿಧನರಾದವರ ಕುಟುಂಬಗಳಿಗೆ ತಲಾ ಒಂದೂವರೆ ಲಕ್ಷ ರುಪಾಯಿ ಪರಿಹಾರ ಧನವನ್ನು ಪ್ರಕಟಿಸಿದ್ದು ಒಳ್ಳೆಯ ಕ್ರಮ.
  ಇಷ್ಟೇ ಸಾಲದೆಂಬಂತೆ, ಗುಜರಾತ್ ಕರಾವಳಿಯ ಸಮೀಪದ ಸಮುದ್ರದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಭಾರತದ ಮೀನುಗಾರರ ದೋಣಿಗಳ ಮೇಲೆ ದಾಳಿ ನಡೆಸಿವೆ. ದಾಳಿಯಲ್ಲಿ ಒಬ್ಬರು ಸತ್ತಿದ್ದಾರೆ. ಮೂವತ್ತು ಮಂದಿ ಮೀನುಗಾರರನ್ನು "ಅಪಹರಿಸಲಾಗಿದೆ".
  ಇದು ಸ್ಪಷ್ಟವಾಗಿ ಮಾನವ ನಿರ್ಮಿತ ದುರಂತವೇ. ಕಳೆದ ಕೆಲವು ದಿನಗಳಿಂದಲೂ ಪಾಕಿಸ್ತಾನ, ಕಾಶ್ಮೀರದ ಗಡಿಯಲ್ಲಿ ಇತರ ಕಡೆಗಳಲ್ಲಿ ಕಾಲು ಕೆರೆಯುವಂತಹ ಕೆಲಸದಲ್ಲೇ ತೊಡಗಿರುವಂತಿದೆ. ಈಗ ಕಾಶ್ಮೀರ ಕಣಿವೆಯ ಪರ್ವತ ಸೀಮೆಯಲ್ಲಿ ಮಂಜು ಬೀಳುವ ದಿನಗಳು. ಆ ಮಂಜು ನೆಲದ ಮೇಲೆ ಹೆಪ್ಪುಗಟ್ಟಿದರೆ, ಪರ್ವತಗಳ ನಡುವಣ ದಾರಿ "ಬಂದ್‌" ಆಗಿ ಭಾರತದೊಳಗೆ ಭಯೋತ್ಪಾದಕರು ನುಸುಳುವುದು ಸಾಧ್ಯವಾಗುವುದಿಲ್ಲ. ಅದಕ್ಕೆ ಮುಂಚೆಯೇ ಅಲ್ಲಿ ಚಕಮಕಿ.
  ರಾಷ್ಟ್ರೀಯ ಹಬ್ಬವಾದ ನವರಾತ್ರಿ - ದಸರಾದ ಸಂಭ್ರಮ ಹಾಳಾಗಿದ್ದು ಈ ದುರಂತಗಳಿಂದ. ಆದರೂ ಸಂಪ್ರದಾಯವನ್ನು ಬಿಡುವುದುಂಟೆ? ಮೈಸೂರಲ್ಲಿ ನವರಾತ್ರಿ, ಉತ್ತರ ಭಾರತದ ಊರೂರುಗಳಲ್ಲಿ ರಾಮಲೀಲಾ ಉತ್ಸವ ನಡೆಯಲೇಬೇಕು. ಅದೇ ಭಾರತದ ವೈಶಿಷ್ಟ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.