ಚುನಾವಣೆ ಸಮೀಕ್ಷೆ ಫಲಿತಾಂಶ ಜನರ ಮೇಲೆ ಪ್ರಭಾವ ಸಾಧ್ಯವೇ?
ಉತ್ತರ ಭಾರತದ ಐದು ರಾಜ್ಯಗಳ ವಿಧಾನ ಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಉಳಿದಿರುವಾಗಲೇ ಚುನಾವಣೆ ಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಬಾರದೆನ್ನುವ ಆದೇಶದ ವಿಚಾರ ಕಳೆದ ಕೆಲವು ತಿಂಗಳಿಂದಲೂ ಚರ್ಚೆಯ ಹಂತದಲ್ಲಿದ್ದರೂ, ಇನ್ನೂ ಚುನಾವಣೆ ಆಯೋಗ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ.
ಈ ವಿಚಾರದಲ್ಲಿ ಈಗಾಗಲೇ ಸಾರ್ವಜನಿಕ ಜೀವನದ ಹಲವು ವಲಯಗಳ ಪ್ರತಿನಿಧಿಗಳ ಅಭಿಪ್ರಾಯವನ್ನು ಆಯೋಗ ಸಂಗ್ರಹಿಸಿದೆ. ಈಗ ಪ್ರಮುಖ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹದ ಹಂತವನ್ನು ಆಯೋಗ ಮುಟ್ಟಿದೆ.
ಚುನಾವಣೆ ಆಯೋಗದ ಪ್ರಮುಖರ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆ ಸಮೀಕ್ಷಾ ಫಲಿತಾಂಶವನ್ನು, ಮತದಾನ ಪೂರ್ತಿಯಾಗಿ ಮುಗಿಯುವವರೆಗೂ ಪ್ರಕಟಿಸುವುದನ್ನು ನಿಷೇಧಿಸುವ ದಿಕ್ಕಿನಲ್ಲಿ ಆಯೋಗದ ಒಲವು ಕಂಡು ಬಂದಿರುವಂತಿದೆ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳ ಅಭಿಪ್ರಾಯ, ಅನಿಸಿಕೆಗಳು ಸ್ಪಷ್ಟವಾಗಿ ಪ್ರಕಟವಾಗಿಲ್ಲ. ಆದರೆ ಸಮೂಹ ಮಾಧ್ಯಮ ಪ್ರಪಂಚ ಆಯೋಗದ ಸಲಹೆಯನ್ನು ಒಪ್ಪಿಲ್ಲ. ಈಗಾಗಲೇ ಸಮೀಕ್ಷಾ ಫಲಿತಾಂಶಗಳ ಪ್ರಕಟಣೆಗೆ ಕೆಲವು ಬಗೆಯ ನಿಯಂತ್ರಣಗಳಿರುವುದೂ ನಿಜ.
ಚುನಾವಣೆ ಆಯೋಗದ ದೃಷ್ಟಿಯಲ್ಲಿ, ಪ್ರಾಯಶಃ ಸಮೀಕ್ಷಾ ವರದಿಗಳ ಫಲಿತಾಂಶ ಪ್ರಕಟಣೆ ಮತದಾರರ ಮೇಲೆ ಅಹಿತಕರವಾದ ಅಥವಾ ಅನಾರೋಗ್ಯಕರವಾದ ರೀತಿಯ ಪ್ರಭಾವ ಬೀರಬಹುದು ಎಂದಿರಬಹುದು. ಹಾಗಿದ್ದರೆ, ಅದು ಮತದಾರನ ಸ್ವತಂತ್ರ ಆಯ್ಕೆಯ ಹಕ್ಕನ್ನು ಮೊಟಕುಗೊಳಿಸುತ್ತದೆ.
ಆದರೆ ಇದುವರೆಗೆ, ಚುನಾವಣೆ ಸಮೀಕ್ಷೆ ಫಲಿತಾಂಶ ಪ್ರಕಟಣೆ ಮತದಾರರ ಮನಸ್ಸಿನ ಮೇಲೆ ಮಾಡಬಹುದಾದ ಪರಿಣಾಮ ಕುರಿತಂತೆ ಯಾವ ಅಧ್ಯಯನವೂ ನಡೆದಿಲ್ಲ. ಈಗ ಕೇಳಿ ಬಂದಿರುವ ಮಾತುಗಳಿಗೆ ಕೇವಲ ಭಾವನೆ ಅಥವಾ ಅನಿಸಿಕೆಗಳೇ ಆಧಾರ.
ಈ ವಿಚಾರದಲ್ಲಿ ಯಾರೂ ಶಾಸ್ತ್ರೀಯವಾದ ಅಧ್ಯಯನ ನಡೆಸಿಲ್ಲ. ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ವ್ಯಾಪಕವಾಗಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಿದ್ದು 1957ರಲ್ಲಿ. ಅದನ್ನು ಪ್ರಕಟಿಸಿದ ಸಂಸ್ಥೆ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪೀನಿಯನ್. ಸೂತ್ರದಾರ, ಈಸ್ಟರ್ನ್ ಎಕಾನಮಿಕ್ಸ್ ಪತ್ರಿಕೆಯ ಖ್ಯಾತನಾಮ ಸಂಖ್ಯಾ ಶಾಸ್ತ್ರ ತಜ್ಞ ಇ.ಪಿ.ಡಬ್ಲ್ಯೂ. ಡಿ'ಕಾಸ್ಟ.
ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಈ ಪ್ರವೃತ್ತಿ ಬಲವಾಗಿ ಬೇರೂರಿದೆ. ತಂತ್ರಜ್ಞಾನದ ಬಳಕೆಯಲ್ಲೂ ಪ್ರಗತಿಯಾಗಿದೆ. ತಪ್ಪುಗಳು ಆಗಿಲ್ಲ ಎಂದೇನೂ ಅಲ್ಲ. ಆದರೆ ಮುಖ್ಯವಾಹಿನಿಯ ಸಮೀಕ್ಷೆಗಳಲ್ಲಿ ಉದ್ದೇಶ ಪೂರ್ವಕವಾಗಿ ಯಾವುದೇ ಒಂದು ಸಿದ್ಧಾಂತ ಅಥವಾ ಪಕ್ಷದ ಪರವಾಗಿಯೋ, ವಿರುದ್ಧವಾಗಿಯೋ ಸಮೀಕ್ಷಾ ಫಲಿತಾಂಶ ಪ್ರಕಟವಾದ ಉದಾಹರಣೆಗಳಿಲ್ಲ.
ಆದರೆ, ಕಳೆದ ಚುನಾವಣೆಯ ಅನಂತರ ಇದ್ದಕ್ಕಿದ್ದಂತೆ ಚುನಾವಣೆ ಸಮೀಕ್ಷೆಗಳ ಸಂಖ್ಯೆ ಹೆಚ್ಚಾದಾಗ, ಎಲ್ಲ ವಲಯಗಳಂತೆ ಇಲ್ಲೂ ದುರುದ್ದೇಶದ ಪ್ರಯತ್ನ ನಡೆಸುವ ಕೆಟ್ಟ ಸಂಸ್ಥೆಗಳು ಪ್ರಾದೇಶಿಕ ಮಟ್ಟದಲ್ಲಿ ತಲೆ ಎತ್ತಿದಾಗ, ಅನೇಕರು ಎಲ್ಲ ಬಗೆಯ ಸಮೀಕ್ಷೆಗಳ ಫಲಿತಾಂಶಗಳನ್ನು ಶಂಕಿಸಲು ಆರಂಭಿಸಿದರು. ಅಧಿಕಾರದಲ್ಲಿರುವ ಪಕ್ಷಗಳಿಗೆ ಇದು ಒಂದು ಅಸ್ತ್ರದಂತೆ ಸಿಕ್ಕಿದಂತಾಯಿತು. ಈಗ ಚುನಾವಣೆ ಆಯೋಗವೇ ಗಂಭೀರವಾಗಿ ವಿಷಯದ ಪರಿಶೀಲನೆಗೆ ಮುಂದಾಗಿದೆ.
ಚುನಾವಣೆ ಸಮೀಕ್ಷೆಯ ಪದ್ಧತಿಗೆ ಶಾಸ್ತ್ರ ಬದ್ಧವಾದ ಸಂಖ್ಯಾಶಾಸ್ತ್ರದ ನಿಯಮಗಳು, ಸಂಪ್ರದಾಯಗಳೇ ಆಧಾರ. ಅದು ವೈಜ್ಞಾನಿಕವಾದ ವಿಚಾರ. ಇಂತಹ ಸಮೀಕ್ಷೆ ಜನರ ಮೇಲೆ ಕೆಟ್ಟ ಪರಿಣಾಮ ಬೀರುವುದೆಂದು ಭಾವಿಸುವುದಾದರೆ, ಹೋರಾರತ್ನ ಪಂಡಿತೋತ್ತಮರು ಕವಡೆಯನ್ನು ಉರುಳಿಸಿ ಲೆಕ್ಕ ಹೇಳುವ ಫಲಿತಾಂಶ ಪ್ರಕಟಣೆಗೆ ಯೋಗ್ಯವೇ?
ಇಲ್ಲಿ ಅಭಿವ್ಯಕ್ತಿ ಸ್ವಾಂತ್ರ್ಯದ ಪ್ರಶ್ನೆಯೂ ಅಡಗಿದೆ. ಅದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

