ಸಂಪಾದಕೀಯ

ಉದ್ಯಮ ವಲಯ, ಅಧಿಕಾರಶಾಹಿ ಅಧಿಕಾರಸ್ಥರು ಪೇಚಿನಲ್ಲಿ

Published On :

ರಾಷ್ಟ್ರೀಯ ಮಟ್ಟದಲ್ಲಿ ಗುರುವಾರದ ಕೆಲವು ಬೆಳವಣಿಗೆಗಳಿಂದ ದೇಶದ ಮೇಲ್ಪದರದ ಜನ ವರ್ಗಗಳ ನಾಯಕರಲ್ಲಿ ಅಲ್ಲ ಕಲ್ಲೋಲ, ತಳಮಳ, ಕಳವಳ ಕಂಡು ಬಂದಿದ್ದು ಸಹಜವೇ. ಇದರಲ್ಲಿ ಪ್ರಧಾನಿಯ ಪಾಲೂ ಇದೆ ಎಂದು ಅನೇಕರು ಬಹಿರಂಗವಾಗಿ ಹೇಳಿದರೂ, ಪ್ರಧಾನಿ ಕಾರ್ಯಾಲಯ ಗಂಭೀರ ಮೌನವನ್ನು ಪ್ರದರ್ಶಿಸಿರುವುದು ಆಶ್ಚರ್ಯವೇ.
2-ಜಿ ತರಂಗಾಂತರ ಹಂಚಿಕೆಯ ಹಗರಣದ ವಿಚಾರಣೆ ಕಾಲದಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿದ್ದ ಮಾಜಿ ಕಾರ್ಪೊರೇಟ್ ವ್ಯವಹಾರಸ್ಥೆ ನೀರಾ ರಾಡಿಯಾ ಟೆಲಿಫೋನ್ ಟೇಪ್‌ಗಳಲ್ಲಿ ಕ್ರಿಮಿನಲ್ ಪ್ರಸ್ತಾಪ ಕಂಡು ಬಂದಿದೆ ಎಂದು ಶಂಕಿಸಲಾದ ಹದಿನಾಲ್ಕು ನಿರ್ದಿಷ್ಟವಾದ ವಿಷಯಗಳ ಸಮಗ್ರ ತನಿಖೆ ನಡೆಸಬೇಕೆಂದು ಸುಪ್ರೀಮ್ ಕೋರ್ಟಿನ ಒಂದು ಪೀಠ ಸಿಬಿಐಗೆ ಆದೇಶ ನೀಡಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಿಬಿಐ ಸಲ್ಲಿಸಿರುವ ಪೂರ್ವಭಾವಿ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಬಹಿರಂಗವಾಗಿ ಏನನ್ನೂ ಹೇಳದೇ  ವರದಿಯ ಕೆಲವು ಪ್ಯಾರಾಗಳ ಸಂಖ್ಯೆಯನ್ನಷ್ಟೇ ಸೂಚಿಸಿದ್ದು ಗಮನಾರ್ಹ.
   ಕಾರ್ಪೊರೇಟ್ ಸುಲ್ತಾನರ, ಅಧಿಕಾರ ಷಾಹಿಯ ಮಹಾಮಹಿಮರ, ಅಧಿಕಾರಸ್ಥ ರಾಜಕೀಯ ಸಾಮ್ರಾಟರ ನಡುವಣ ಅಪವಿತ್ರ ಮೈತ್ರಿಯ ಬೇರುಗಳು ತುಂಬಾ ಆಳಕ್ಕೆ ಇಳಿದಿರುವಂತಿದೆ ಎನ್ನುವುದು ಪೀಠದ ಒಬ್ಬ ನ್ಯಾಯಮೂರ್ತಿಯ ಉದ್ಗಾರ. ಸೂಚ್ಯವಾಗಿ ಸುಪ್ರೀಮ್ ಕೋರ್ಟಿನ ಒಬ್ಬ ನ್ಯಾಯಾಧೀಶರ ವರ್ತನೆಯ ಪ್ರಸ್ತಾಪವೂ ಈ ಟೇಪ್‌ನಲ್ಲಿ ಇದೆ ಎನ್ನುವ ಇಂಗಿತವೂ ಇದೆ. ಕೇಂದ್ರದ ಸಂಯುಕ್ತ ಪ್ರಗತಿಪರ ಕೂಟ ಸರ್ಕಾರದ ಪ್ರಮುಖರು ಚಡಪಡಿಸಬೇಕಾಂದತಹ ವಿಚಾರಗಳೂ ಇವೆಯಂತೆ. ಈಗಾಗಲೇ ಕೆಲವು ಉದ್ಯಮ ಪತಿಗಳು ತಮ್ಮ ಜೀವನದ ಖಾಸಗಿ ರಹಸ್ಯಗಳನ್ನು ಬಯಲುಗೊಳಿಸ ಬಾರದೆನ್ನುವ ಅರ್ಜಿಗಳನ್ನು ಸಲ್ಲಿಸಿದ್ದೂ ಆಗಿದೆ. ಸಿಬಿಐ, ಸುಪ್ರೀಮ್ ಕೋರ್ಟ್ ಅಪೇಕ್ಷಿಸಿರುವ ವರದಿಯನ್ನು ಸಲ್ಲಿಸ ಬೇಕಾಗಿರುವುದು ಡಿಸೆಂಬರ್ ಮೂರನೆಯ ವಾರದಲ್ಲಿ. ಆ ವೇಳೆಗೆ ನ್ಯಾಯಪೀಠದ ನ್ಯಾಯಮೂರ್ತಿ ಸಿಂಘ್ವಿ ಅವರು ನಿವೃತ್ತರಾಗಿರುತ್ತಾರೆ. ನಿರೀಕ್ಷಿಸಿದಂತೆಯೇ ಒಡಿಶಾದ ಕಲ್ಲಿದ್ದಲು ಗಣಿಗಳಲ್ಲಿ ಎರಡು ಬ್ಲಾಕ್‌ಗಳ ಗುತ್ತಿಗೆಯನ್ನು ಕುಮಾರ ಮಂಗಳಂ ಬಿರ್ಲಾ ಮಾಲೀಕತ್ವದ ಹಿಂಡಾಲ್ ಕೋ (ಹಿಂದೂಸ್ಥಾನ್ ಅಲ್ಯೂಮಿಲಿಯಂ) ಮತ್ತು ಇಂಡಾಲ್ ಕೋ (ಇಂಡಿಯನ್ ಅಲ್ಯೂಮಿನಿಯಂ) ಕಂಪನಿಗಳಿಗೆ ವಹಿಸಿ ಕೊಡುವ ನಿರ್ಧಾರ ಕುರಿತಂತೆ ಮಾತಿನ ಸಮರ ಕೂರಂಬು ವಿನಿಮಯದ ಹಂತ ತಲುಪಿದೆ.
ಕುಮಾರ ಮಂಗಳಂ ಹಾಗೂ ಆಗಿನ ಕಲ್ಲಿದ್ದಲು ಮಂತ್ರಾಲಯದ ಕಾರ್ಯದರ್ಶಿ ಪಿ.ಸಿ. ಪಾರಖ್ ಅವರ ಹೆಸರುಗಳನ್ನು ಸಿಬಿಐ ತನ್ನ ಮೊದಲ ಮಾಹಿತಿಯ ವರದಿಯಲ್ಲಿ ನಮೂದಿಸಿ ಅವರಿಬ್ಬರ ಕಾರ್ಯಾಲಯಗಳ ಮೇಲೆ ದಾಳಿ ನಡೆಸಿ ಶೋಧಿಸಿದ್ದನ್ನು ಉದ್ಯಮಪತಿಗಳ ಪ್ರಾತಿನಿಧಿಕ ಸಂಘಟನೆಗಳು, ವಿಶ್ವ ವಿಖ್ಯಾತ ಉದ್ಯಮಿಗಳು, ಅವರ ವಕ್ತಾರರು ತೀವ್ರವಾಗಿ ಖಂಡಿಸಿ, ಇಂತಹ ವರ್ತನೆಯಿಂದ ದೇಶದಲ್ಲಿ ಬಂಡವಾಳ ಹೂಡುವವರು ಹಿಂದೆ-ಮುಂದೆ ನೋಡಬೇಕಾಗಿದೆ ಎಂದಿದ್ದಾರೆ. ಮುಂದಿನ ಕ್ರಮ ಕುರಿತು ಆ ಸಂಘಟನೆಗಳ ಪ್ರತಿನಿಧಿಗಳು ಸಮಾಲೋಚನೆ ನಡೆಸುತ್ತಿದ್ದಾರೆ.
ಒಂದು ರೀತಿಯಲ್ಲಿ ದೇಶವನ್ನು ಮತ್ತೆ ಲೈಸೆನ್ಸ್ ಪರ್ಮಿಟ್ ರಾಜ್ ಕಡೆಗೇ ಕೊಂಡೊಯ್ಯಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಮುಖ್ಯಮಂತ್ರಿ ನವೀನ ಕಟ್ಟ  ನಾಯಕ ಅವರು ಪ್ರಧಾನಿಗೆ ಬರೆದಿದ್ದ ಪತ್ರದ ಪ್ರಸ್ತಾಪವೂ ಸಾಕಷ್ಟು ರಾಜಕೀಯ ಬಿಸಿಯನ್ನು ಮುಟ್ಟಿಸಿದೆ. ನವೀನ ಪಟ್ನಾಯಕ ಅವರು ಪತ್ರ ಬರೆದಿದ್ದು ಒಡಿಶಾದ ಪ್ರಗತಿಯ ದೃಷ್ಟಿಯಿಂದ ಎಂದು ಸಮರ್ಥಿಸಿಕೊಂಡಿದ್ದಾರೆ. ಅಧಿಕಾರ ಷಾಹಿಯ ಪ್ರತಿನಿಧಿಗಳು (ಈಗ ಅಧಿಕಾರದಲ್ಲಿರುವವರಲ್ಲ, ನಿವೃತ್ತರಾದವರು. ಅವರ ಮೂಲಕ ಈಗ ಅಧಿಕಾರದಲ್ಲಿರುವವರೇ ಮಾತನಾಡಿರುವುದೂ ಸ್ಪಷ್ಟ) ಇಂತಹ ವರ್ತನೆಯ ಪರಿಣಾಮವಾಗಿ ಭವಿಷ್ಯದಲ್ಲಿ ಯಾವ ಸಂಭಾವಿತ ಅಧಿಕಾರಿಯೂ ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳುವುದೇ ಇಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ಟಿಪ್ಪಣಿಗಳನ್ನು ಮಂತ್ರಿಗಳಿಗೆ ರವಾನಿಸಿ, ಅವರ ಆದೇಶವನ್ನು ಕಾಯುತ್ತಾ ಸುಮ್ಮನೆ ಕೂಡುತ್ತಾರೆ ಎನ್ನುವ ಬೆದರಿಕೆಯನ್ನೂ ಹಾಕಲಾಗಿದೆ.
ನೀರಾ ರಾಡಿಯಾ ಟೇಪ್ ಹಗರಣ, ಕಲ್ಲಿದ್ದಲ ಗಣಿಗಾರಿಕೆಯ ಬ್ಲಾಕ್‌ಗಳ ಹಂಚಿಕೆಗೆ ಸಂಬಂಧಿಸಿದಂತೆ, ಮಾಧ್ಯಮ ಪ್ರಪಂಚಕ್ಕೆ ದಾಖಲೆಗಳಿಗೇನೂ ಬರವಿಲ್ಲ. ಸುಪ್ರೀಮ್ ಕೋರ್ಟಿನ ಪೀಠವೇ ರಹಸ್ಯಗಳು ಸೋರಿಹೋಗುತ್ತಿರುವ ಮಾತನ್ನು ಆಡಿದೆ. ಮೊದಲ ಮಾಹಿತಿ ವರದಿ, ಯಾವುದೇ ತೀರ್ಮಾನವನ್ನೂ ಪ್ರಕಟಿಸುವುದಿಲ್ಲ. ಅದು ತನಿಖೆಯ ಆರಂಭದ ಕ್ರಿಯೆ ಮಾತ್ರ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಎಲ್ಲರೂ ಪ್ರಸ್ತಾಪಿಸುತ್ತಿರುವುದು ಆ ದಾಖಲೆಯನ್ನೇ. ಇಷ್ಟೇ ಸಾಲದೆಂಬಂತೆ, ಸಿಬಿಐ, ಬಿರ್ಲಾ ಕಾರ್ಯಾಲಯದಲ್ಲಿ 25 ಕೋಟಿ ರುಪಾಯಿಗಳಷ್ಟು ನಗದು ಹಣ ಸಿಕ್ಕಿತ್ತು ಎಂದು ಪ್ರಕಟಿಸಿರುವುದು ಇನ್ನೊಂದು ವಿವಾದವನ್ನು ಸೃಷ್ಟಿಸಿದೆ.
ಅನಂತರ ಸಿಬಿಐ ನೀಡಿದ ವಿವರಣೆಯಲ್ಲಿ ನಗದು ಹಣದ ಪ್ರಮಾಣ 24 ಲಕ್ಷಕ್ಕೆ ಇಳಿದು, ಉಳಿದಿದ್ದು ವಿಕಾಸ ಪತ್ರ, ಸೇವಿಂಗ್ಸ್ ಸರ್ಟಿಫಿಕೇಟ್, ಚಿನ್ನ ಕೊಳ್ಳಲು ಕೊಂಡಿದ್ದ ಇನ್ವಾಯ್ಸ್ (ರಸೀತಿ) ಎಂದು ತಿಳಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕಲ್ಲಿದ್ದಲು ಗಣಿಗಳ ಹಂಚಿಕೆಗೆ ಸಂಬಂಧಿಸಿದ ಎಲ್ಲ ಆದೇಶಗಳಿಗೂ ಪ್ರಧಾನಿ ಮನಮೋಹನ ಸಿಂಗ್ ಅವರ ಹಸ್ತಾಕ್ಷರದ ಸಹಿಗಳಿವೆಯಂತೆ. ಮುಂದಿನವಾರದ ವಾಕ್‌ಸಮರಕ್ಕೆ ಸಾಕಷ್ಟು ಗ್ರಾಸ ಸಿದ್ಧವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.