ಅಡ್ಡ ಪಲ್ಲಕ್ಕಿ ಯಾರಿಗೂ ಅಡ್ಡಿಯಾಗಲಾರದು
ಇತ್ತೀಚೆಗೆ ಜೇವರ್ಗಿ ತಾಲೂಕಿನಲ್ಲಿ ನಡೆದ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಧಾರ್ಮಿಕ ಸಂಪ್ರದಾಯದ ಭಕ್ತರ ಭಕ್ತಿ-ಶ್ರದ್ಧೆಯ ಪೂಜ್ಯರ ಸ್ಥಾನಮಾನಕ್ಕೆ ದೊರೆತ ವಿಜಯದ ವಿಜಯೋತ್ಸವ.
ಒಂದೇ ವೇದಿಕೆಯಲ್ಲಿ ನೂರಾರು ಪೂಜ್ಯರ ಇಬ್ಬರು ಜಗದ್ಗುರುಗಳ ದಿವ್ಯ ದರ್ಶನದಿ ಭಕ್ತಾದಿಗಳು ಪುನೀತರಾದಕ್ಷಣ ಅದು. ನಿಜವಾದ ಹಬ್ಬವೇ ಸರಿ. ಗುರುವಿನ ಮೆರವಣಿಗೆ ಇದು ಭಕ್ತರ ಭಕ್ತಿಯ ಪ್ರೀತಿ ತೋರುವ ಒಂದು ವಿಧವೇ ಹೊರತು ಅಮಾನವೀಯವಲ್ಲ.
ಡಾ.ಎಂ.ಚಿದಾನಂದ ಮೂರ್ತಿಯವರ 'ಅಡ್ಡಪಲ್ಲಕ್ಕಿ ಉತ್ಸವ: ಇತಿಹಾಸ, ವಿಶ್ಲೇಷಣೆ' ಲೇಖನ ಸಮಯೋಚಿತವಾದರೂ ಹೀಗೆಯೇ ಒಂದೊಂದು ಸಂಪ್ರದಾಯಗಳನ್ನು ವೈಚಾರಿಕತೆಯ ನೆಪವೊಡ್ಡಿ ಕೈ ಬಿಡುತ್ತ ಹೋದರೆ ಮುಂದೊಂದು ದಿನ ಅವುಗಳ ಸುಳಿವಿಲ್ಲದಂತಾಗುವುದು. ಅಷ್ಟಕ್ಕೂ ಅಡ್ಡಪಲ್ಲಕ್ಕಿಯಿಂದ ಯಾರಿಗೂ ನಷ್ಟವಿಲ್ಲ. ಹೊರುವ ಭಕ್ತರ ಭಕ್ತಿ ಇರುವವರೆಗೆ ಗುರುಗಳ ಅಡ್ಡಪಲ್ಲಕ್ಕಿಗೆ ಅಡ್ಡಿಯಿಲ್ಲ. ಹೇಳಿ ಕೇಳಿ ಇಂದಿನ ಪೀಳಿಗೆ ಗುರುಹಿರಿಯರಿಗೆ ತೋರಿಸುವ ಗೌರವ-ಭಕ್ತಿ ಅಷ್ಟಕ್ಕಷ್ಟೆ. ಈ ಸಂಪ್ರದಾಯಗಳಿಂದಲಾದರೂ ಅವರಲ್ಲಿ ಗುರುಗಳ ಬಗೆಗೆ ಗೌರವ ಭಕ್ತಿಗಳ ಚಿಂತನೆಗೆ ಚಾಲನೆ ದೊರೆತು ಈ ವಿದಧ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶವಾಗುವುದು. ಹಾಗಾಗಿ ಅಡ್ಡಪಲ್ಲಕ್ಕಿ ಯಾರಿಗೂ ಅಡ್ಡಿಯಾಗಲಾರದೆಂದು ನನ್ನ ಅನಿಸಿಕೆ. ಅದೊಂದು ಭಕ್ತಿಯ ವಿಧವೇ ಹೊರತು ಉದ್ದೇಶಪೂರ್ವಕವಾಗಿ ಯಾರನ್ನೋ ತುಳಿಯುವ ಉದ್ದೇಶವಲ್ಲ. ಬೇಕಾದವರು ಪಾಲ್ಗೊಳ್ಳಲಿ ಬೇಡವಾದವರು ದೂರವಿರಲಿ. ಅದು ಬಿಟ್ಟು ಒಂದು ಸಮೂದಾಯ ಪೂಜನೀಯ ರೀತಿಯಲ್ಲಿ ಆರಾಧಿಸುವ ಪದ್ಧತಿಗೆ ಹಾಗೂ ಪೂಜ್ಯರಿಗೆ ಅವಮಾನಿಸುವುದು ಸರಿಯಲ್ಲ.
-ಜ್ಯೋತಿಲತಾ ಬಸವರಾಜ ತಳಿಬಿಡಿ, ಯಾದಗಿರಿ
ಅಭ್ಯರ್ಥಿಗಳನ್ನು ಈಗಲೇ ಗುರುತಿಸಿ
ಮುಂಬರುವ ಲೋಕಸಭಾ ಚುನಾವಣೆಗೆ ಬಹಳ ಕಾಲ ಉಳಿದಿಲ್ಲ. ಇದೇ ಪ್ರಥಮ ಬಾರಿಗೆ ಇಷ್ಟವಿಲ್ಲದ ಅಭ್ಯರ್ಥಿಗಳನ್ನು ಮತದಾನದ ವೇಳೆ ತಿರಸ್ಕರಿಸುವ ಮಹೋನ್ನತ ಅಧಿಕಾರವನ್ನು ಸುಪ್ರೀಂಕೋರ್ಟ್ ಮತದಾರನಿಗೆ ನೀಡಿದೆ. (ಆದಾಗ್ಯೂ ಜನಪ್ರಾತಿನಿಧ್ಯ ಕಾಯ್ದೆಗೆ ಇನ್ನೂ ಸಾಕಷ್ಟು ತಿದ್ದುಪಡಿಗಳ ಅವಶ್ಯಕತೆ ಇದೆ) ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಚಿಸುವ ಅಭ್ಯರ್ಥಿಗಳು ಹಾಗೂ ಸ್ಪರ್ಧಿಸಲಿಚ್ಚಿಸುವ ಕ್ಷೇತ್ರಗಳು ಈಗಲೇ ಗುರ್ತಿಸಲ್ಪಟ್ಟಲ್ಲಿ, ಆಯಾ ಕ್ಷೇತ್ರದ ಮತದಾರರೊಂದಿಗೆ, ಕ್ಷೇತ್ರದ ಅವಶ್ಯಕತೆಗಳು ಮತ್ತು ರಾಜ್ಯದ/ರಾಷ್ಟ್ರದ ಹಿತದೃಷ್ಟಿಯಿಂದ ಆಗಬೇಕಾದ ಕಾರ್ಯಗಳೇನು, ಮತದಾರರ ಅಂತರಾಳವೇನು, ಈ ಸಮಸ್ಯೆಗಳ ಪರಿಹಾರಕ್ಕೆ ಅಭ್ಯರ್ಥಿಗಳು ಯಾವ ರೀತಿ ಸ್ಪಂದಿಸುತ್ತಾರೆಂಬ ಅಂಶವನ್ನೊಳಗೊಂಡಂತೆ ಇನ್ನಿತರ ಎಲ್ಲಾ ವಿಷಯಗಳ ಕುರಿತು ಮತದಾರ ಮತ್ತು ಅಭ್ಯರ್ಥಿ- ಇವರಲ್ಲಿ ಸೂಕ್ತ ವಿಚಾರ-ವಿನಿಮಯ ಸಾಧ್ಯ. ಮತದಾರನಿಗೂ ಅಭ್ಯರ್ಥಿಯ ಬಗ್ಗೆ ಮಾಹಿತಿ ಪಡೆಯಲು ಸಹಕಾರಿ. ಈ ಪ್ರಕ್ರಿಯೆ ಅರ್ಹ ವ್ಯಕ್ತಿಯನ್ನು ಚುನಾಯಿಸಲು ಸಾಕಷ್ಟು ಸಹಕಾರಿಯಾಗಬಹುದು.
-ಕೆ.ಟಿ.ಕಣ್ಣನ್, ಬೆಂಗಳೂರು
ಕಾಲಕ್ಕೆ ತಕ್ಕಂತಿರಬೇಕಲ್ಲವೇ ಆಚರಣೆ?
ಅಕ್ಟೋಬರ್ 12ರ ಸಂಚಿಕೆಯಲ್ಲಿ ಪ್ರಕಟವಾದ 'ಆಚರಣೆಗೂ ಶೋಷಣೆಗೂ ವ್ಯತ್ಯಾಸವಿಲ್ಲವೇ?' ಅಂಕಣಕ್ಕೆ ನನ್ನ ಪ್ರತಿಕ್ರಿಯೆ. ಲೇಖನ ಒಪ್ಪತಕ್ಕದ್ದೇ. ಆದರೆ, ಕಾಲಕ್ಕೆ ತಕ್ಕಂತೆ ಅನೇಕ ಸ್ವಾಮೀಜಿಗಳು ಸ್ವಯಂ ಪ್ರೇರಿತರಾಗಿ ಅಡ್ಡ ಪಲ್ಲಕ್ಕಿಯನ್ನು ನಿಲ್ಲಿಸಿದ್ದಾರೆ. ಉದಾಹರಣೆಗೆ- ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು. ಹೀಗಿರುವಾಗ 'ಈಗಿನ ಕಾಲಮಾನಕ್ಕೆ ಹೊಂದದ, ಅರ್ಥವಿಲ್ಲದ, ದೇಹಕ್ಕಾಗಲೀ, ದೇಶಕ್ಕಾಗಲೀ ಯಾವುದಕ್ಕೂ ಉಪಯೋಗಕ್ಕೆ ಬಾರದ ಈ ಅಡ್ಡ ಪಲ್ಲಕ್ಕಿಯನ್ನು ಇನ್ನಾದರೂ ನಿಲ್ಲಿಸಿರಪ್ಪ. ಇದರ ಬದಲಿಗೆ ಸಮಾಜಕ್ಕೆ ಒಳಿತಾಗುವಂತಹ ಯಾವುದಾದರೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿರಿ' ಎಂದು ತಮ್ಮ ಭಕ್ತ ವೃಂದಕ್ಕೆ ಅಡ್ಡಪಲ್ಲಕ್ಕಿಯನ್ನೇರುವ ಸ್ವಾಮೀಜಿಗಳು ಆದೇಶಿಸಿದರೆ, ಆ ಸ್ವಾಮೀಜಿಗಳ ಮೇಲೆ ಇನ್ನೂ ಹೆಚ್ಚು ಭಕ್ತಿ, ಗೌರವ ಉಂಟಾಗುತ್ತದೆ. ಅವರವರ ನಂಬಿಕೆ ಆಚರಣೆ ವೈಯಕ್ತಿಕವಾದದ್ದು ನಿಜ. ಆದರೆ, ಸಮಾಜವನ್ನು ತಿದ್ದಿ ಮುನ್ನಡೆಸಬೇಕಾದ ಗುರುಗಳು ಅರ್ಥವಿಲ್ಲದ ಆಚರಣೆಗಳನ್ನು ನಿಲ್ಲಿಸಲು ಪ್ರಯತ್ನಿಸಬೇಕು ಅಲ್ಲವೇ?
-ಮುರುಗೇಶ, ಚಿತ್ರದುರ್ಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

