ಮೌನ ಮುರಿದ ಪ್ರಧಾನಿ
ಎಂಟು ವರ್ಷಗಳ ಹಿಂದೆ, ಒಡಿಶಾದ ಕಲ್ಲಿದ್ದಲು ಗಣಿಗಾರಿಕೆಯ ಗುತ್ತಿಗೆ ಹಂಚಿಕೆಯ ವ್ಯವಹಾರದಲ್ಲಿ ಈಗ ಎದ್ದಿರುವ ವಿವಾದದಲ್ಲಿ, ಪ್ರಧಾನಿ ಮನಮೋಹನ ಸಿಂಗ್ ಅವರು ತಾಳಿದ್ದ ಮೌನವನ್ನು ಶನಿವಾರ ಮುರಿದು ವಿವಾದವನ್ನು ಸ್ವಲ್ಪ ತಿಳಿಗೊಳಿಸಲು ಪ್ರಯತ್ನಿಸಿದ್ದರೂ ಇನ್ನೂ ಬಗ್ಗಡ ಹಾಗೇ ಉಳಿದಿದೆ.
ಪ್ರಧಾನಿ ರಷ್ಯಕ್ಕೆ ತೆರಳುವ ಮುನ್ನ ಪ್ರಕಟವಾದ ಪ್ರಧಾನಿ ಕಾರ್ಯಾಲಯದ ದೀರ್ಘ ಹೇಳಿಕೆಯಲ್ಲಿ ಒಡಿಶಾದ ಕಲ್ಲಿದ್ದಲು ಗಣಿಗಳ ಎರಡು ಬ್ಲಾಕ್ಗಳನ್ನು ಸರ್ಕಾರಿ ಸಂಸ್ಥೆಗಳಾದ ನೈವೇಲಿ ಲಿಗ್ನೈಟ್ ಕಂಪೆನಿ ಹಾಗೂ ಮಹಾನದಿ ನಿಗಮದ ಜತೆ ಸೇರಿ ಕುಮಾರ ಮಂಗಳಂ ಬಿರ್ಲಾ ಸ್ವಾಮ್ಯದ ಹಿಂಡಾಲ್ ಕಂಪೆನಿಯೂ ಸೇರಿಕೊಂಡು ಸ್ಥಾಪಿಸಿರುವ ಒಂದು ಜಂಟಿ ಸಂಸ್ಥೆಗೆ ಗುತ್ತಿಗೆ ನೀಡುವ ವಿಚಾರ ಪ್ರಧಾನಿಗೆ ಗೊತ್ತಿತ್ತೆಂದೂ, ಆ ಕಾಲದಲ್ಲಿ ಕಲ್ಲಿದ್ದಲ ಮಂತ್ರಾಲಯದ ಹೊಣೆಯನ್ನೂ ಹೊತ್ತಿದ್ದ ಮನಮೋಹನ ಸಿಂಗ್, ಕಾರ್ಯದರ್ಶಿ ಪಾರಖ್ ಮಾಡಿದ್ದ ಸಲಹೆಯನ್ನು ಒಪ್ಪಿ ಅದಕ್ಕೆ ಸಹಿ ಮಾಡಿದ್ದರೆಂದೂ ತಿಳಿಸಲಾಗಿದೆ.
ಕಳೆದ ವಾರವೆಲ್ಲ ಸಿಬಿಐ ತನಿಖಾ ದಳ ಮಗುಮ್ಮಾಗಿ ಬಳಸುತ್ತಿದ್ದ "ಸತ್ತೆಯಲ್ಲಿ ವಿಧಿವತ್ತಾಗಿ ಅಧಿಕಾರವನ್ನು ಪಡೆದಿರುವವರು" ಎನ್ನುವ ನಿಗೂಢ ಪದಕ್ಕೆ ಶನಿವಾರ ಸ್ಪಷ್ಟವಾದ ವ್ಯಾಖ್ಯಾನ ಸಿಕ್ಕಂತೆ ಆಯಿತು. ಆ ಅಧಿಕಾರವನ್ನು ಪಡೆದಿದ್ದು, ಅದನ್ನು ವಿಧಿವತ್ತಾಗಿ ಚಲಾಯಿಸಿದ್ದು ಪ್ರಧಾನಿ ಮನಮೋಹನ ಸಿಂಗ್ ಅವರೇ ಎನ್ನುವುದು ಈಗ ಅಧಿಕೃತವಾಗಿಯೇ ಪ್ರಕಟವಾಗಿದೆ.
ಹಿಂದೆ ಮಂತ್ರಾಲಯದ ಕಾರ್ಯದರ್ಶಿ ಪಾರಖ್ ಅವರು ಸಾರ್ವತ್ರಿಕವಾಗಿ ಕಲ್ಲಿದ್ದಲ ಗಣಿಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಬೇಕೆನ್ನುವ ಸೂತ್ರವನ್ನು ಪ್ರತಿಪಾದಿಸಿ, ಅನಂತರ ಸರ್ಕಾರಿ ಸಂಸ್ಥೆಗಳಾದ ನೈವೇಲಿ ಲಿಗ್ನೈಟ್ ಹಾಗೂ ಮಹಾನದಿ ನಿಗಮಗಳಿಗೆ ವಹಿಸಬೇಕೆಂದು ಹೇಳಿ, ಕೊನೆಯಲ್ಲಿ ಕುಮಾರ ಮಂಗಳಮ್ ಬಿರ್ಲಾ ತಮ್ಮನ್ನು ಹಾಗೂ ಪ್ರಧಾನಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಅನಂತರ ಮೂರೂ ಸಂಸ್ಥೆಗಳ (ನೈವೇಲಿ, ಮಹಾನದಿ, ಹಿಂಡಾಲ್ಕೋ) ಜಂಟೀ ವ್ಯವಹಾರಕ್ಕೆ ಒಪ್ಪಿಸಬಹುದೆಂದು ಶಿಫಾರ್ಸು ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಪ್ರಧಾನಿ ಪರವಾದ ಹೇಳಿಕೆಯಲ್ಲಿ ನೇರವಾದ ಉತ್ತರವಿಲ್ಲದೇ ಹೋದರೂ ಪರೋಕ್ಷವಾಗಿ ಇಡೀ ವ್ಯವಹಾರ ನ್ಯಾಯವಾದ ರೀತಿಯಲ್ಲೇ ನಡೆದಿದೆ. ಆ ವಿಚಾರದಲ್ಲಿ ಪ್ರಧಾನಿಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ ಎನ್ನುವ ಮಾತೂ ಇದೆ.
(ಇದುವರೆಗೆ ಇನ್ನೂ ಆ ಗಣಿಗಳಿಂದ ಒಂದು ಹಿಡಿ ಕಲ್ಲಿದ್ದಲೂ ಯಾರಿಗೂ ಸಿಕ್ಕಿಲ್ಲ. ಈಗ ಬಿರ್ಲಾ ವಿದ್ಯುತ್ ಯೋಜನೆ ತಯಾರಾಗಿರುವಂತಿದೆ. ನೈವೇಲಿ-ಮಹಾನದಿ ನಿಗಮಗಳಲ್ಲಿ ಕೆಲಸ ಆರಂಭವಾದಂತಿಲ್ಲ).
ಇವೆಲ್ಲದರ ನಡುವೆಯೇ, ಸುಪ್ರೀಮ್ ಕೋರ್ಟಿನ ಆದೇಶದಂತೆ, ಕಲ್ಲಿದ್ದಲು ಗಣಿಗಳ ಗುತ್ತಿಗೆಯ ಹಂಚಿಕೆಯ ಒಳ ವಿವರಗಳ ತನಿಖೆ ನಡೆಸುತ್ತಿರುವ ಸಿಬಿಐ, ನಿರ್ದಿಷ್ಟ ವಿಷಯಗಳಲ್ಲಿ ತನಿಖೆ ನಡೆಸುವುದಕ್ಕೆ ಯಾವ ಅಭ್ಯಂತರವೂ ಇಲ್ಲ ಎನ್ನುವುದೂ ಈಗ ಸ್ಪಷ್ಟವಾಗಿದೆ. ಆದರೆ, ಪ್ರಧಾನಿ ಕಾರ್ಯಾಲಯದ ಹೇಳಿಕೆಯ ಅನಂತರ, ಸಿಬಿಐ ತನಿಖೆ ತನ್ನ ಮಾರ್ಗವನ್ನು ಬದಲಾಯಿಸುವ ಸಂಭವ ನಿಚ್ಚಳವಾಗಿ ಕಂಡುಬಂದಿದೆ.
ಕಲ್ಲಿದ್ದಲು ಮಂತ್ರಾಲಯದ ಜವಾಬ್ದಾರಿಯಿಂದ ಮುಕ್ತವಾದ ಅನಂತರ (2006-07) ಪಾರಖ್ ನಿವೃತ್ತರಾಗಿ, ಕಾಯಿದೆಯಂತೆ ಎರಡು ವರ್ಷಗಳ ಕಾಲ ಯಾವುದೇ ಬೇರೆ ಉದ್ಯೋಗಕ್ಕೆ ಸೇರದೆ, ಅವಧಿ ಕಳೆದ ಮೇಲೆ ಹೈದರಾಬಾದ್ ಮೂಲದ ನವಭಾರತ್ ಕಂಪನಿಯ ನಿರ್ದೇಶಕರಾಗಿ ಸೇರಿಕೊಂಡಿದ್ದರಿಂದ ಆ ಸಂಸ್ಥೆಯ ವ್ಯವಹಾರಗಳನ್ನು ಸಿಬಿಐ ಪರಿಶೀಲಿಸುತ್ತಿದೆ. ಇದರಲ್ಲಿ ಕೆಲವು ವ್ಯವಹಾರಗಳು ಪಾರಖ್ ಕಂಪನಿಗೆ ಸೇರುವ ಮುನ್ನ ನಡೆದ ವ್ಯವಹಾರಗಳು. ಅದು ಪಾರಖ್ ಅವರಿಗೆ ಎಷ್ಟರ ಮಟ್ಟಿಗೆ ಗೊತ್ತಿತ್ತೋ ಯಾರಿಗೂ ಗೊತ್ತಿರುವಂತಿಲ್ಲ.
ಈ ತನಿಖೆಯ ವ್ಯವಹಾರದಲ್ಲಿ ಒಂದು ಕಡೆ ದೇಶದ ವಿಖ್ಯಾತ ಉದ್ಯಮಪತಿಗಳು ಪ್ರಕಟಿಸಿರುವ ಆಕ್ರೋಶ, ಅಧಿಕಾರಿಷಾಹಿಯ ಅತ್ಯುನ್ನತ ಸ್ಥಾನಗಳನ್ನು ನಿಭಾಯಿಸಿದ್ದರೂ ಪ್ರತ್ಯಕ್ಷವಾಗಿ ವಾಗ್ವಾದಕ್ಕೆ ಇಳಿದ ಸಂಬಂಧದಲ್ಲಿ ಸಿಬಿಐ ಮೂಲಗಳ ಅಘೋಷಿತ ವಕ್ತಾರರು ತಮ್ಮ ಬಳಕೆಯ ಭಾಷೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡಿರುವುದು ಗಮನಾರ್ಹ.
ಇದುವರೆಗೆ ಇದ್ದ ವ್ಯಕ್ತಿಗಳನ್ನು "ಪ್ರಶ್ನಿಸುವುದು" ಎನ್ನುವ ಬಳಕೆಯನ್ನು ಕೈ ಬಿಟ್ಟು ಸಂಬಂಧಪಟ್ಟವರನ್ನು "ಸಂದರ್ಶಿಸಿ" ಮಾಹಿತಿ ಪಡೆಯುವುದು ಎನ್ನುವ ಬಳಕೆಯನ್ನು ಜಾರಿಗೆ ತಂದಿರುವುದು ಪೊಲೀಸ್ ಭಾಷೆಯಲ್ಲೇ ಒಂದು ದೊಡ್ಡ ಬದಲಾವಣೆ ಎನ್ನಲಾಗಿದೆ. ಅಷ್ಟರ ಮಟ್ಟಿಗೆ ಸಿಬಿಐ ಸಾರ್ವಜನಿಕರ ಪ್ರಕಟಿತ ಅಭಿಪ್ರಾಯವನ್ನು ಗಮನಕ್ಕೆ ತಂದುಕೊಂಡಿದ್ದೇ ಒಂದು ಸಾಧನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

