ಅಯ್ಯರ್ ಅವರಿಗೆ ಜೀವನ ನೀಡಿದ ಶಿವಮೊಗ್ಗ?
ಕನ್ನಡದ ಖ್ಯಾತ ನಟ, ನಿರ್ದೇಶಕ, ಚಿತ್ರಸಾಹಿತಿ ಜಿ.ವಿ ಅಯ್ಯರ್ ಅವರೊಮ್ಮೆ ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ಮುಖ್ಯ ಅತಿಥಿಗಳಾಗಿ ಹೋಗಿದ್ದರು. ಅಲ್ಲಿ ತಮಗೂ ಶಿವಮೊಗ್ಗಕ್ಕೂ ಇರುವ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಬಳ್ಳಾರಿಯಲ್ಲಿ ಗುಬ್ಬಿವೀರಣ್ಣನವರ ಕಂಪನಿಯ ನಟರಾಗಿದ್ದಾಗ ಅವರು ಮತ್ತು ಬಾಲಕೃಷ್ಣ ಎಲ್ಲರಿಗಿಂತ ಸೊಂಪಾಗಿದ್ದರಂತೆ. ಏಕೆಂದರೆ ಅವರಿಬ್ಬರೂ ಬಿಡುವಿನ ವೇಳೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೋರ್ಡ್ ಬರೆಯುವ ಹವ್ಯಾಸವನ್ನಿಟ್ಟುಕೊಂಡಿದ್ದರು. ವೀರಣ್ಣನವರ ಕಂಪನಿಗೆ ಅಲ್ಲಿ ನಷ್ಟವಾಗಿ ಎಲ್ಲ ಕಲಾವಿದರೂ ಮನೆಗೆ ತೆರಳಬೇಕೆಂದು ಸೂಚಿಸಿ ಅವರು ವಾಪಸ್ಸು ಹೋದರೂ, ಕಂಪನಿಯ ಸುಮಾರು ನಲವತ್ತು ಕಲಾವಿದರನ್ನು ಕೆಲದಿನಗಳಾದರೂ ತಮ್ಮ ದುಡಿಮೆಯಿಂದ ಸಾಕಿದ ತೃಪ್ತಿ ಅಯ್ಯರ್ ಅವರಿಗಿತ್ತು. ಕೊನೆಗೆ ಅಲ್ಲಿಂದ ಅವರು ತಲುಪಿದ್ದು ಶಿವಮೊಗ್ಗಕ್ಕೆ. ಶಿವಮೊಗ್ಗದಲ್ಲಿ ಮರುಳುಸಿದ್ದಪ್ಪ ಎಂಬ ಪೆಟ್ರೋಲ್ ಬಂಕ್ ಮಾಲೀಕರು ಯಾವಾಗಲೋ ಒಮ್ಮೆ ಅಯ್ಯರ್ ಅವರಿಗೆ "ಕಷ್ಟವಾದರೆ ಬನ್ನಿ" ಎಂದು ಹೇಳಿದ್ದರಿಂದ ಅವರಿಂದ ಸಹಾಯ ಯಾಚಿಸಲು ಬಾಲಕೃಷ್ಣ ಅವರೊಟ್ಟಿಗೆ ಶಿವಮೊಗ್ಗಕ್ಕೆ ಬಂದರು. ದುರದೃಷ್ಟವಶಾತ್ ಮರುಳುಸಿದ್ದಪ್ಪನವರು ಪರವೂರಿಗೆ ಹೋಗಿದ್ದರಿಂದ ಅನಿವಾರ್ಯವಾಗಿ ಅವರಿಬ್ಬರೂ ದಿನಕ್ಕೆ ನಾಲ್ಕು ಆಣೆ ಬಾಡಿಗೆಯ ಮೇಲೆ ತಿರುಪಳಯ್ಯ ಛತ್ರದಲ್ಲಿ ಉಳಿದುಕೊಂಡರು. ಆಗ ಅವರ ಬಳಿ ಇದ್ದದ್ದು ಒಂದೆರಡು ರುಪಾಯಿಗಳು ಮಾತ್ರ. ಬೆಳಿಗ್ಗೆ ಎದ್ದು ಸೀತಾರಾಮಯ್ಯನವರ ಹೋಟೆಲಿಗೆ ಹೋಗಿ, ಒಂದು ಇಡ್ಲಿ ಮತ್ತು ಧಾರಾಳವಾಗಿ ಸಾಂಬಾರು ಹಾಕಿಸಿಕೊಂಡು ತಿಂದು ಹೊಟ್ಟೆತುಂಬಾ ನೀರು ಕುಡಿದು, ನಂತರ ತಮ್ಮ ವಾಸ್ತವ್ಯವನ್ನು ಕೋರ್ಪಲಯ್ಯ ಛತ್ರಕ್ಕೆ ಬದಲಾಯಿಸಿದರು. ಕಾರಣ, ಅಲ್ಲಿ ಕೊಠಡಿ ಬಾಡಿಗೆ ಎರಡಾಣೆ ಇತ್ತು. ಹಣವೆಲ್ಲ ಮುಗಿದಮೇಲೆ ಪುಸ್ತಕದ ಅಂಗಡಿಯ ಬೋರ್ಡ್ ಬರೆದು ಎರಡೂವರೆ ರುಪಾಯಿ ಸಂಪಾದಿಸಿದಾಗ ಅವರಿಬ್ಬರಿಗೂ ಆದ ಸಂತಸ ಅಷ್ಟಿಷ್ಟಲ್ಲ. ಅಂದು ಹೊಟ್ಟೆತುಂಬಾ ಊಟಮಾಡಿದ್ದಲ್ಲದೆ ತಮ್ಮದೇ ಆದ ಆರ್ಯನ್ ಆರ್ಟ್ಸ್ ಎಂಬ ಅಂಗಡಿ ತೆರೆದು ಅಂದಿನಿಂದ ಬೋರ್ಡ್ ಬರೆಯಲು ಪ್ರಾರಂಭಿಸಿದರು. ಇದರಿಂದ ಅವರ ಆರ್ಥಿಕಸ್ಥಿತಿ ಸುಧಾರಿಸಿ ಒಳ್ಳೆಯ ಬಟ್ಟೆಗಳನ್ನು ಧರಿಸಿಕೊಂಡು, ಒಳ್ಳೆಯ ಊಟ ಮಾಡಿಕೊಂಡು ಸುಮಾರು ಒಂದು ವರ್ಷಕಾಲ ಇದ್ದದ್ದನ್ನು ಅಯ್ಯರ್ ನೆನಪಿಸಿಕೊಂಡು ಕೊನೆಗೆ ಒಂದು ಮಾತು ಹೇಳಿದರು. "ನನಗೆ ಕಷ್ಟಕಾಲದಲ್ಲಿ ಜೀವನ ನೀಡಿದ ಶಿವಮೊಗ್ಗವನ್ನು ನಾನು ಕೊನೆಯವರೆಗೂ ಮರೆಯುವಂತಿಲ್ಲ. ಏಕೆಂದರೆ, ಇಲ್ಲಿನ ಸಿಹಿಯಾದ ತುಂಗೆಯ ನೀರು, ಜನರ ಆತ್ಮೀಯತೆ ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿತು" ಎಂದು ಹೀಗೆ ಹೇಳುವಾಗ ಅವರ ಗಂಟಲುಬ್ಬಿ ಬಂದಿತ್ತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

