ಸಂಪಾದಕೀಯ

ಬೆಳ್ಳಾವೆ ವೆಂಕಟನಾರಣಪ್ಪನವರ ತತ್ವ ನಿಷ್ಠೆ

Published On :

ಬೆಳ್ಳಾವೆ ವೆಂಕಟನಾರಣಪ್ಪನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಪ್ರಧ್ಯಾಪಕರಾಗಿದ್ದವರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 1916 ರಲ್ಲಿಯೇ ಕಾರ್ಯದರ್ಶಿಯಾಗಿ, ನಂತರದ ದಿನಗಳಲ್ಲಿ ಕೋಶಾಧ್ಯಕ್ಷರಾಗಿ, ಸೇವೆ ಸಲ್ಲಿಸಿದರು. ಅಲ್ಲದೆ, ಶ್ರೀ ರಾಮಕೃಷ್ಣ ವಿದ್ಯಾರ್ಥಿ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಬೆಂಗಳೂರು ಸಿಟಿ ಸಹಕಾರಿ ಸೊಸೈಟಿಯ ಅಧ್ಯಕ್ಷರಾಗಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು. ಅವರಿಗೆ "ರಾಜಸೇವಾಸಕ್ತ" ಬಿರುದು ಸಹ ದೊರಕಿತ್ತು. ಬೆಳ್ಳಾವೆಯವರ ಹೆಸರು ಕೇಳಿದರೆ ಸಾಕು ಕನ್ನಡ ಸಾಹಿತ್ಯ ಪರಿಷತ್ತಿನ ನೆನಪು ಬರುತ್ತದೆ. ಏಕೆಂದರೆ ಯಾವುದೇ ಸ್ಥಾನವಿರಲಿ, ಇಲ್ಲದಿರಲಿ, ಪರಿಷತ್ತಿನ ಸೇವಕರಾಗಿ, ಕಸ ಹೊಡೆಯುವುದರಿಂದ ಹಿಡಿದು, ಗ್ರಂಥ ಸಂಪಾದನೆಯವರೆಗೆ ಅವರು ತೋರುತ್ತಿದ್ದ ಆಸಕ್ತಿ ಇತರರಿಗೆ ಮಾರ್ಗದರ್ಶಿಯಾಗಿತ್ತು. ಮಿರ್ಜಾ ಇಸ್ಮಾಯಿಲ್ ತಮ್ಮ ಶಿಷ್ಯನಾದದ್ದು ಹೆಮ್ಮೆಯ ವಿಷಯ ಎಂದವರು ಹೇಳುತ್ತಿದ್ದರು. ಅವರು ದಿವಾನರಾಗಿದ್ದಾಗ ಪರಿಷತ್ತಿಗೆ ಭೇಟಿ ನೀಡಿ ಅಲ್ಲೊಂದು ವಿಶಾಲವಾದ ಸಭಾ ಮಂಟಪ ಕಟ್ಟಿಸಲು ನೆರವಾದರು. ಬೆಳ್ಳಾವೆಯವರು ಪರಿಷತ್ತಿನ ಸುತ್ತ ವಿವಿಧ ಗಿಡಗಳನ್ನು ನೆಡಿಸಿ ತಾವೇ ಸ್ವತಃ ನೀರು ಹಾಕಿ ಬೆಳೆಸುತ್ತಿದ್ದರು.
ಗೋಡೆಗೆ ಮೊಳೆ ಹೊಡೆಯುವಾಗ ಅಕಸ್ಮಾತ್ ಗಾರೆ ಕಿತ್ತು ಬಂದರೆ, ಅದಕ್ಕೆ ಗಾಯಮಾಡಬೇಡಪ್ಪಾ ಎಂದು ಕೆಲಸದವರಿಗೆ ಹೇಳುತ್ತಿದ್ದರು. ಪರಿಷತ್ತಿನ ಕಾಗದ ಪತ್ರಗಳ ವ್ಯವಸ್ಥಿತ ವಿಲೇವಾರಿ, ಕನ್ನಡಿಯಂತಹ ಲೆಕ್ಕಪತ್ರಗಳು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುವ ಮನೋಭಾವ ಇವೆಲ್ಲ ಅವರ ನಿಸ್ವಾರ್ಥ ಸೇವೆಗೆ ನಿದರ್ಶನಗಳು. ಸಾರ್ವಜನಿಕ ಸಂಘ ಸಂಸ್ಥೆಗಳನ್ನು ಕಟ್ಟುವವರು ಬೆಳ್ಳಾವೆಯವರನ್ನು ಮೇಲ್ಪಂಕ್ತಿಯಾಗಿಟ್ಟುಕೊಳ್ಳಬೇಕು, ಹಾಗಿತ್ತು ಅವರ ಕಾರ್ಯವೈಖರಿ. ಒಮ್ಮೆ ಅವರು ಅಗ್ರಿಕಲ್ಚರ್ ಅಂಡ್ ಎಕ್ಸ್ಪರಿಮೆಂಟಲ್ ಯೂನಿಯನ್ ಸದಸ್ಯರಾಗಿದ್ದಾಗ ಅದರ ನಿರ್ದೇಶಕರಾಗಿದ್ದ ಟಿ.ಜಿ.ರಾಮಯ್ಯನವರೊಡನೆ ಅಗತ್ಯ ಕೆಲಸವೊಂದಕ್ಕೆ ಪ್ರವಾಸಹೋಗಿದ್ದರು. ಪ್ರಯಾಣ ಭತ್ಯೆಗೆ ಅರ್ಹರಾಗಿದ್ದರೂ ಸಹ ಅದಕ್ಕಾಗಿ ಅರ್ಜಿ ಹಾಕಲಿಲ್ಲ. ಏಕೆಂದರೆ ಅವರ ಪ್ರಕಾರ ತಾವು ರಾಮಯ್ಯನವರ ಕಾರಿನಲ್ಲಿ ಹೋಗಿದ್ದರಿಂದ ಮತ್ತು ತಾವು ಪ್ರತ್ಯೇಕವಾಗಿ ಪ್ರವಾಸ ಹೋಗದೇ ಇದ್ದುರಿಂದ ಭತ್ಯೆ ಪಡೆಯಲು ಅರ್ಹರಾಗಿಲ್ಲವೆಂಬುದೇ ಆಗಿತ್ತು. ಆದರೂ ರಾಮಯ್ಯನವರು ಬಲವಂತವಾಗಿ ಟಿ.ಎ.ಬಿಲ್ಲಿಗೆ ಸಹಿಹಾಕಿಸಿ, ವಾಹನ ವೆಚ್ಚ ಬರುವಂತೆ ಮಾಡಿದರು. ಆದರೆ ಬೆಳ್ಳಾವೆಯವರು ಅದನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಳ್ಳದೆ, ಹೆಚ್ಚಿಗೆ ಬೆಳೆಯುವ ಬೆಳೆಗಾರನಿಗೆ ಬಹುಮಾನರೂಪದಲ್ಲಿ ನೀಡಿದರು. ತ್ರಿಕರಣ ಶುದ್ಧಿಯಿಂದ ವೆಂಕಟನಾರಣಪ್ಪನವರು ಸಾರ್ವಜನಿಕ ಕ್ಷೇತ್ರಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿ ಪ್ರಾತಃಸ್ಮರಣೀಯರಾಗಿದ್ದಾರೆ.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.