ಸಂಪಾದಕೀಯ

ಕುಷ್ಠರೋಗಿಗಳ ಸೇವೆಗೆ ಮುಡಿಪಾದ ಜೀವನ

ಕೆಲವು ವೈದ್ಯರು ತಮ್ಮ ಜೀವನವನ್ನು ಜನ ಸೇವೆಗೆ ಮೀಸಲಾಗಿಟ್ಟರೆ, ಹೆಚ್ಚಿನ ಜನ ಹಣಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡಿರುತ್ತಾರೆ. ಹೀಗೆ ತಮ್ಮ ಜೀವನವನ್ನು ...

Published On :

ಕೆಲವು ವೈದ್ಯರು ತಮ್ಮ ಜೀವನವನ್ನು ಜನ ಸೇವೆಗೆ ಮೀಸಲಾಗಿಟ್ಟರೆ, ಹೆಚ್ಚಿನ ಜನ ಹಣಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡಿರುತ್ತಾರೆ. ಹೀಗೆ ತಮ್ಮ ಜೀವನವನ್ನು ಸೇವೆಗಾಗಿ ಮೀಸಲಾಗಿಟ್ಟ ಕೆಲವೇ ಜನರಲ್ಲಿ ಡಾ.ನೀಲಕಂಠರಾವ್ ಸಹ ಒಬ್ಬರು. ಅದರಲ್ಲಿಯೂ ತಾವೇ ಕ್ಷಯರೋಗಿಯಾಗಿದ್ದರೂ, ವಿದೇಶದಲ್ಲಿ ಉನ್ನತ ವೈದ್ಯಕೀಯ ವ್ಯಾಸಂಗ ಮಾಡಿ, ಭಾರತಕ್ಕೆ ಬಂದ ಈ ಕನ್ನಡಿಗ, ಹಣ ಸಂಪಾದನೆಯತ್ತ ಗಮನ ಕೊಡದೆ ಕುಷ್ಠರೋಗಿಗಳ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟಿದ್ದರು. ಮೂಲತಃ ಮುಳುಬಾಗಿಲಿನವರಾದ ರಾಯರು, ಕೆಲಕಾಲ ವೈದ್ಯರಾಗಿ ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಓದುವಾಗಲೇ ಕ್ಷಯರೊಗಕ್ಕೆ ತುತ್ತಾದರೂ ವೈದ್ಯರಾಗಬೇಕೆಂಬ ತಮ್ಮ ಛಲವನ್ನು ಮಾತ್ರ ಅವರು ಬಿಡಲಿಲ್ಲ. 1981 ರಲ್ಲಿ ಪೌನಾರ್ ಆಶ್ರಮದಲ್ಲಿ ಗಾಂಧೀ ಸ್ಮಾರಕ ಕುಷ್ಠರೋಗ ಚಿಕಿತ್ಸಾ ಕೇಂದ್ರ ಪ್ರಾರಂಭವಾದಾಗ ಅದರ ಚುಕ್ಕಾಣಿ ಹಿಡಿದು, ಗ್ರಾಮಾಂತರ ಪ್ರದೇಶದಲ್ಲಿ ನೆಲೆಸಿದ್ದ ನೂರಾರು ರೋಗಿಗಳಿಗೆ ಅವರಿದ್ದಲ್ಲಿಯೇ ಹೋಗಿ ಚಿಕಿತ್ಸೆ ನೀಡುವ ಅವರ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕುಷ್ಠರೋಗವೆಂದರೆ ಅಸಹ್ಯ ಪಡುತ್ತಿದ್ದ ಕಾಲದಲ್ಲಿ ತಾವೇ ಸ್ವತ- ವ್ರಣಗಳನ್ನು ತೊಳೆದು, ಔಷಧೋಪಚಾರ ಮಾಡುತ್ತಿದ್ದರು. ಕೆಲವೊಮ್ಮೆ ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಬೇಕಾಗಿತ್ತು. ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಸ್ವತಃ ಆಸಕ್ತಿ ತೋರಿಸಿ, ಈ ಕೇಂದ್ರಕ್ಕೆ ಸಹಾಯ ಮಾಡಿದ್ದರು. ರೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ರಾಯರು ಚಿಕಿತ್ಸೆಯ ಜೊತೆ ಸಾಂತ್ವನವನ್ನೂ ನೀಡಿ ಅವರ ಕೀಳರಿಮೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದರು. ರಾಯರ ಅವಿರತ ಸೇವೆಯನ್ನು ವಿನೋಬಾಜಿಯವರು ಅವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದರು. ತೀವ್ರ ಅನಾರೋಗ್ಯದಿಂದ ಇನ್ನು ಕೆಲಸ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ರಾಯರು ಕುಷ್ಠರೋಗ ಪ್ರತಿಷ್ಠಾನದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದರು. ನಂತರ ಕರ್ನಾಟಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾಗಿ ಸಹ ಸೇವೆ ಸಲ್ಲಿಸಿದರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದಾಗ ಅದನ್ನು ಕುಷ್ಠರೋಗಿಗಳಿಗೆ ಅರ್ಪಿಸಿದರು. ರೋಗಿಗಳ ಸೇವೆಯನ್ನು ನಿಷ್ಠೆಯಿಂದ ಮಾಡಿದ ಡಾ.ನೀಲಕಂಠರಾವ್ ಎಂದೆಂದಿಗೂ ಸ್ಮರಣಾರ್ಹರು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.