ಸಂಪಾದಕೀಯ

ಬಡ ವಿದ್ಯಾರ್ಥಿಗಳ ಆಶಾಕಿರಣ

Published On :

2000ರಲ್ಲಿ ಒಬ್ಬ ಬಡ ವಿದ್ಯಾರ್ಥಿ, ಆನಂದ್ ಎಂಬ ಪದವೀಧರ ಯುವಕನ ಬಳಿ ಬಂದು ತಾನು ಐಐಟಿ  ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿರುವುದಾಗಿಯೂ ತನಗೆ ತರಬೇತಿ ನೀಡಬೇಕೆಂದು ವಿನಂತಿಸಿದ. ಅವನಿಗೆ ಬೇರೆ ಸಂಸ್ಥೆಗೆ ಸೇರಿ ತರಬೇತಿ ಪಡೆಯಲು ಆರ್ಥಿಕ ಪರಿಸ್ಥಿತಿ ಅವಕಾಶ ನೀಡಿರಲಿಲ್ಲ. ಆಗ ಆನಂದನಿಗೆ ಅನ್ನಿಸಿತು ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏಕೆ ಮಾರ್ಗದರ್ಶನ ನೀಡಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಜೆಇಇ) ಪ್ರವೇಶ ಪರೀಕ್ಷೆಗೆ ತಯಾರು ಮಾಡಬಾರದು ಎಂದು. ಹೀಗೆ ರೂಪು ತಾಳಿದ್ದೇ 'ಸೂಪರ್ 30 ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌'. 2002ರಲ್ಲಿ ಬಿಹಾರದ ಪಾಟ್ನಾದಲ್ಲಿ ಪ್ರಾರಂಭವಾದ ಈ ಸಂಸ್ಥೆ ಆರ್ಥಿಕವಾಗಿ ಹಿಂದುಳಿದ 30ಜನ ಪ್ರತಿಭಾವಂತರಿಗೆ ತರಬೇತಿ ನೀಡಲು ಪ್ರಾರಂಭಿಸಿತು. ಹೀಗೆ 2012 ರ ವೇಳೆಗೆ ಆನಂದ್ ತರಬೇತಿ ನೀಡಿದ 300 ವಿದ್ಯಾರ್ಥಿಗಳಲ್ಲಿ 263 ಜನ ವಿದ್ಯಾರ್ಥಿಗಳು ಐಐಟಿಗೆ ಆಯ್ಕೆಯಾದರು. ಆನಂದ್ ತನ್ನ ವಿದ್ಯಾರ್ಥಿ ಜೀವನದಿಂದಲೂ ಗಣಿತದಲ್ಲಿ ಅಪಾರ ಆಸಕ್ತಿ ಹೊಂದಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಆಯ್ಕೆಯಾಗಿದ್ದ. ಆದರೆ ತಂದೆಯ ಸಾವು ಮತ್ತು ಆರ್ಥಿಕ ಸಂಪನ್ಮೂಲಗಳಿಲ್ಲದೆ ವಿದ್ಯಾಭ್ಯಾಸ ಸಾಧ್ಯವಾಗಲಿಲ್ಲ. 1992 ರಿಂದಲೂ ಗಣಿತವನ್ನು ಕಲಿಸುತ್ತಿದ್ದ ಆನಂದ್ ಎರಡು ಮಕ್ಕಳಿಂದ ತನ್ನ ತರಬೇತಿ ಶಾಲೆಯನ್ನು ಪ್ರಾರಂಭಿಸಿ ಪ್ರತಿವರ್ಷ ಪ್ರತಿಭಾನ್ವಿತ 30  ಬಡ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹೀಗಾಗಿ ಇವರ ಶಾಲೆಗೆ 'ಸೂಪರ್ 30' ಎಂದೇ ಹೆಸರಿಡಲಾಗಿದೆ. ಪ್ರತಿ ವರ್ಷ ಇಲ್ಲಿಗೆ ಸೇರಿದ ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಐಐಟಿಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿರುವುದು. ಇನ್ನೊಂದು ವಿಶೇಷವೆಂದರೆ ಆನಂದ್ ತನ್ನ ಈ ಸೇವೆಗೆ ಸರ್ಕಾರದಿಂದಾಗಲೀ, ಸಂಘಸಂಸ್ಥೆಯಿಂದಾಗಲೀ, ಯಾರಿಂದಲಾದರಾಗಲೀ ಧನ ಸಹಾಯ ಪಡೆಯದೇ ಇರುವುದು. ಈ ಸಾಧನೆಯನ್ನು ಡಿಸ್ಕವರಿ ಛಾನಲ್ ಒಂದು ಗಂಟೆಯ ಕಾಲ ಪ್ರಸಾರ ಮಾಡಿ ಪ್ರೋತ್ಸಾಹಿಸಿದೆ. ಅದೇ ರೀತಿ ಬಿಹಾರ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ 'ಮೌಲಾನಾ ಅಬ್ದುಲ್ ಕಲಾಂ ಅಜಾದ್‌' ಶಿಕ್ಷಣ ಪುರಸ್ಕಾರ್ ನೀಡಿ ಗೌರವಿಸಿದೆ. ಟೈಂ ಪತ್ರಿಕೆ ಇವರ ಸೂಪರ್ 30 ಶಾಲೆಯನ್ನು ಏಷ್ಯಾದ ಅತ್ಯುತ್ತಮ ಶಾಲೆ ಎಂದು ಪರಿಗಣಿಸಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಹ ಈ ಶಾಲೆಯ ಹೆಸರು ದಾಖಲಾಗಿದೆ. ವಿಶ್ವದ 20 ಸಾಹಸೀ ಶಿಕ್ಷಕರಲ್ಲಿ ಆನಂದ್ ಸ್ಥಾನ ಗಳಿಸಿದ್ದಾನೆ. ದೇಶ ವಿದೇಶಗಳ ಅನೇಕ ಉದ್ದಿಮೆಗಳು ತಮ್ಮ ಉದ್ಯಮದಲ್ಲಿ ಸೇವೆ ಸಲ್ಲಿಸಲು ಆನಂದ್‌ಗೆ ಕರೆ ನೀಡಿದಾಗಲೂ ಅದನ್ನೆಲ್ಲ ತಿರಸ್ಕರಿಸಿ, ತಾನು ಭಾರತದ ಅತಿ ಬಡ ವಿದ್ಯಾರ್ಥಿಗಳ ಜೀವನ ಉತ್ತಮ ಪಡಿಸುವ ಕಾರ್ಯದಲ್ಲೇ ಮುಂದುವರಿಯುತ್ತೇನೆ ಎನ್ನುತ್ತಾನೆ. ಅಮಿತಾಭ್ ಬಚ್ಚನ್ ಮತ್ತಿತರ ನಟರು ಇವರಿಂದ ಮಾರ್ಗದರ್ಶನ ಪಡೆದದ್ದುಂಟು. ಬಿರ್ಲಾ ಸನ್ ಲೈಫ್ ಪ್ರಶಸ್ತಿ ಸಹ ಪಡೆದ ಆನಂದ್- 'ನಾನು ಸೇವೆ ಸಲ್ಲಿಸುತ್ತಿರುವುದು ಪ್ರಚಾರಕ್ಕಲ್ಲ ಒಂದು ಸ್ಪಷ್ಟ ಉದ್ದೇಶಕ್ಕಾಗಿ' ಎನ್ನುತ್ತಾನೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.