ಮನಕಲಕುವ ಘಟನೆ ನೀಡಿದ ಪ್ರೇರಣೆ
ನಾರಾಯಣನ್ ಕೃಷ್ಣನ್ ಮಧುರೈ ಬೆಂಗಳೂರಿನ ತಾಜ್ ಹೊಟೇಲಿನ ಪ್ರಶಸ್ತಿ ವಿಜೇತ ಮಾಜಿ ಬಾಣಸಿಗ. ಯೂರೋಪಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಹೆಚ್ಚು ಆದಾಯತರುವ ನೌಕರಿ ಸಿಕ್ಕಾಗ ಆತನಿಗಾದ ಆನಂದ ಅಷ್ಟಿಷ್ಟಲ್ಲ. ಹೀಗಾಗಿ ಯೂರೋಪಿಗೆ ತೆರಳಲು ಎಲ್ಲ ಸಿದ್ಧತೆ ನಡೆದು, ಹೊರಡುವ ದಿನವೂ ನಿಗದಿಯಾಗಿತ್ತು. ಒಮ್ಮೆ ಅವರು ದಾರಿಯಲ್ಲಿ ಹೋಗುತ್ತಿರುವಾಗ ಕಂಡ ಒಂದು ದೃಶ್ಯ ಅವರ ಮನಕಲಕಿತು. ಒಬ್ಬ ಭಿಕ್ಷುಕ ಹಸಿವೆಯನ್ನು ತಾಳಲಾರದೆ ತನ್ನ ಮಲವನ್ನೇ ತಿನ್ನುತ್ತಿದ್ದ! ಆಗ ನಾರಾಯಣನ್ ಕೃಷ್ಣನ್ ಅಲ್ಲಿಯೇ ಸಮೀಪದ ಹೊಟೇಲಿನಿಂದ ಕೆಲವು ಇಡ್ಲಿಗಳನ್ನು ತಂದು ಆ ಭಿಕ್ಷುಕನ ಕೈ ತೊಳೆದು ಆತನಿಗೆ ತಿನ್ನಲು ಕೊಟ್ಟರು. ಅವನ ಹಸಿವೆ ಎಷ್ಟಿತ್ತೆಂದರೆ ಇಡ್ಲಿಯನ್ನು ಅಷ್ಟು ವೇಗವಾಗಿ ವ್ಯಕ್ತಿಯೊಬ್ಬ ತಿಂದಿದ್ದನ್ನು ನಾರಾಯಣನ್ ಆ ಹಿಂದೆ ಎಂದೂ ನೋಡೇ ಇರಲಿಲ್ಲ. ಹಸಿವಿನ ಅಗಾಧತೆಯನ್ನು ನೋಡಿ ಅವರ ಮನಸ್ಸಿನಲ್ಲಿ 'ಇಂಥವರಿಗಾಗಿ ಏನಾದರೂ ಮಾಡಬೇಕೆಂಬ' ನಿರ್ಧಾರ ಮೂಡಿತು. ತಮ್ಮ ಯೂರೋಪ್ ಪ್ರವಾಸವನ್ನು ರದ್ದು ಮಾಡಿ, 'ಅಕ್ಷಯ' ಹೆಸರಿನ ಒಂದು ಟ್ರಸ್ಟ್ ಸ್ಥಾಪಿಸಿದರು. 2003 ರಿಂದಲೂ ಪ್ರತಿನಿತ್ಯ ಈ ಟ್ರಸ್ಟ್ ವತಿಯಿಂದ ಮಧುರೈನ ಸುಮಾರು 450 ಭಿಕ್ಷುಕರಿಗೆ ದಿನದ ಮೂರೂ ಹೊತ್ತು ಬಿಸಿಯೂಟವನ್ನು ಬಡಿಸಲಾಗುತ್ತಿದೆ. ಅದಕ್ಕಾಗಿ ಪ್ರತಿನಿತ್ಯ ಇಪ್ಪತ್ತು ಸಾವಿರ ರುಪಾಯಿಗಳ ವೆಚ್ಚವಾಗುತ್ತಿದೆ. ಸಮಾಜ ಸೇವೆಯ ಬಗ್ಗೆ ಆಸಕ್ತಿಯಿರುವ ಕೆಲ ಯುವಕರು ನಾರಾಯಣನ್ ಅವರಿಗೆ ಸಹಕರಿಸುತ್ತಿದ್ದಾರೆ. ಆಹಾರ ತಯಾರಿಸಲು ಐದು ಜನ ಅಡಿಗೆಯವರನ್ನು ನೇಮಿಸಿಕೊಳ್ಳಲಾಗಿದೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬಿಸಿಬಿಸಿ ಇಡ್ಲಿ, ಉಪ್ಪಿಟ್ಟು, ವಡ, ಚಟ್ನಿ ಮತ್ತು ಸಾಂಬಾರ್ ಮಧ್ಯಾಹ್ನ ರುಚಿಯಾದ ಅನ್ನ ಸಾಂಬಾರ್, ಪಲಾವ್, ಪಲ್ಯ, ಮೊಸರು, ರಾತ್ರಿ ಹೊತ್ತು ಚಪಾತಿ, ಪರೋಟ, ಬಿಸಿಬೇಳೆ ಭಾತ್ ಹೀಗೆ ತರಹೆವಾರಿ ರುಚಿಕಟ್ಟಾದ ಆಹಾರವನ್ನು ಒದಗಿಸಲಾಗುತ್ತಿದೆ. ಪ್ರತಿ ದಿನ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಇವರ ಕಾಯಕ ನಡೆಯುತ್ತಿರುತ್ತದೆ. ಅದಕ್ಕಾಗಿ ಒಂದು ನೀಲಿ ಬಣ್ಣದ ಓಮ್ನಿ ವಾಹನವನ್ನು ಬಳಸಲಾಗುತ್ತಿದೆ. ಅಲ್ಲದೆ ಈ ಸೌಲಭ್ಯವನ್ನು ಮಧುರೈನ ಸುತ್ತಮುತ್ತ 50 ಕಿ.ಮೀ.ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ. ತಮ್ಮ ಪೂರ್ವಿಕರ ಮನೆ ಬಾಡಿಗೆಯಿಂದ ಬರುವ ಆದಾಯ ಮತ್ತು ದಾನಿಗಳಿಂದ ಬಂದ ದೇಣಿಗೆಯ ನೆರವಿನಿಂದ ಈ ಕಾರ್ಯ ನಡೆಸುತ್ತಿರುವ ನಾರಾಯಣನ್ ಇದೀಗ ನೆಲೆಯಿಲ್ಲದ ಇಂತಹವರಿಗಾಗಿ 3.5 ಎಕರೆ ಪ್ರದೇಶದಲ್ಲಿ 24 ಸಾವಿರ ಚದುರ ಕಟ್ಟಡವನ್ನು ಕಟ್ಟಿಸುತ್ತಿದ್ದಾರೆ. ಅದರಲ್ಲಿ ಇಂತಹ ನಿರಾಶ್ರಿತರಿಗೆ ನೆಲೆ ಕಲ್ಪಿಸುವ ಯೋಜನೆ ಅವರದು. ಅದರಲ್ಲಿ ಕೈತೋಟ, ಉಪ್ಪಿನಕಾಯಿ ತಯಾರಿ ಘಟಕವನ್ನು ಸ್ಥಾಪಿಸಿ ಅದರಿಂದ ಸ್ವಲ್ಪ ಆದಾಯ ಗಳಿಸುವ ಚಿಂತನೆಯಿದೆ. ನಾರಾಯಣನ್ ಕೃಷ್ಣನ್ ಅವರಿಗೆ ಸಿಎನ್ಎನ್, 2010 ನೇ ಸಾಲಿನ ವಿಶ್ವದ ಹತ್ತು ಹೀರೋಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿಕೊಟ್ಟು ಗೌರವಿಸಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

