ಸಂಪಾದಕೀಯ

ಕೆ.ಪಿ.ಎಸ್.ಸಿ. ತನಿಖಾ ವರದಿ ಗಂಭೀರ ಪರಿಶೀಲನೆ ಬೇಕು

Published On :

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು ಹಾಗೂ ಸಿಬ್ಬಂದಿಯ ವಿರುದ್ಧ ಅನೇಕರು ಮಾಡಿದ್ದ ಆರೋಪಗಳನ್ನು ಕುರಿತಂತೆ, ಸರ್ಕಾರದ ಆದೇಶದಂತೆ, ವಿಶೇಷ ತನಿಖೆ ನಡೆಸಿರುವ ಸಿಐಡಿ ದಳದ ಮಧ್ಯಂತರ ವರದಿ ಸರ್ಕಾರವನ್ನು ತಲುಪಿದೆ.
 ಆ ವರದಿಯಲ್ಲಿ ಅಡಕವಾಗಿರುವ ವಿಷಯಗಳನ್ನು ಈಗಲೇ ಬಹಿರಂಗಪಡಿಸುವುದು ಉಚಿತವೂ ಅಲ್ಲ, ಕಾಯಿದೆಗೂ ವಿರುದ್ಧವಾದದ್ದು. ಆದರೆ ಆರೋಪಗಳನ್ನು ಹೊರಿಸಿದ್ದವರು ಒದಗಿಸಿದ್ದ ಸಾಕ್ಷ್ಯ ಆಧಾರಗಳನ್ನು ಗಮನಿಸಿದರೆ, ವರದಿಯಲ್ಲಿ ಆಯೋಗದ ಕೆಲವು ಸದಸ್ಯರು ಹಾಗೂ ಸಿಬ್ಬಂದಿಯ ವರ್ತನೆ ಕುರಿತು ತೀವ್ರ ಸ್ವರೂಪದ ಆರೋಪಗಳಿಗೆ ಸಾಕಷ್ಟು ಪುರಾವೆ ಸಿಕ್ಕಿದೆ ಎಂದು ಭಾವಿಸಲಿಕ್ಕೆ ಅವಕಾಶವಿದೆ.
ಈಗ ಸಿಐಡಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಪ್ರಸ್ತಾಪವಾಗಿರುವುದು 362 ಪ್ರೊಬೇಷನರಿ ಗೆಜೆಟೆಡ್ ಹುದ್ದೆಗಳಿಗೆ ನೇಮಕವಾದವರಲ್ಲಿ ಹಲವು ಅನರ್ಹರಿಗೆ ಅವಕಾಶ ಸಿಕ್ಕಿದೆ ಎನ್ನುವುದು.
ಪ್ರಕಟಿತ ಆರೋಪಗಳಂತೆ ಆಯೋಗದ ಸದಸ್ಯರು ಸಂದರ್ಶನದ ಅಂಕಗಳನ್ನು ಕೊಡುವಾಗ ಉದ್ದೇಶ ಪೂರ್ವಕವಾಗಿ ಕೆಲವರಿಗೆ ಒಲಿದಿದ್ದರಿಂದ ಅರ್ಹರಿಗೆ ಅನ್ಯಾಯವಾಗಿದೆ ಎನ್ನುವುದಕ್ಕೆ ಸಾಕಷ್ಟು ನಂಬಲರ್ಹವಾದ ಪುರಾವೆ ಸಿಕ್ಕಿದೆ ಎನ್ನುವ ಮಾತು ವ್ಯಾಪಕವಾಗಿ ಕೇಳಿ ಬಂದಿದೆ.
ಲೋಕಸೇವಾ ಆಯೋಗದಿಂದ ಆಯ್ಕೆಯಾದವರ ಪಟ್ಟಿಯಲ್ಲಿ ಪಕ್ಷಪಾತದ ಸೋಂಕಿದೆ ಎನಿಸಿದರೂ ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಭವಿಷ್ಯದಲ್ಲಿ ಈ ಅಧಿಕಾರಿಗಳೇ ಆಡಳಿತದ ಸ್ಥಂಭಗಳಂತಿರುವ ಸ್ಥಾನಗಳಲ್ಲಿ ಅಧಿಕಾರವನ್ನು ಚಲಾಯಿಸುವುದು. ಅವರಿಂದ ನ್ಯಾಯ ಸಿಗುವುದಿಲ್ಲ.
ಯಾವುದೇ ರೀತಿಯ ಆಮಿಷ, ಪ್ರಭಾವಕ್ಕೆ ಒಳಗಾಗದೇ ನ್ಯಾಯವಾಗಿ, ಕಾಯಿದೆಗೆ ಅನುಗುಣವಾಗಿ ನೇಮಕ ನಡೆಯಬೇಕೆನ್ನುವ ಉದ್ದೇಶದಿಂದಲೇ ಸರ್ಕಾರದ ಆದೇಶಗಳ ವ್ಯಾಪ್ತಿಯಿಂದ ಹೊರಗಿರುವ ಸ್ವಾಯತ್ತ ಆಯೋಗದ ವ್ಯವಸ್ಥೆಯನ್ನು ತುಂಬಾ ಹಿಂದೆಯೇ ರೂಪಿಸಿದ್ದು.
ಈಚಿನ ದಿನಗಳಲ್ಲಿ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಪ್ರಾಮಾಣಿಕತೆಯನ್ನು ಶಂಕಿಸುವ ರೀತಿಯಲ್ಲಿ ಅನೇಕ ವರದಿಗಳು, ಭ್ರಷ್ಟಾಚಾರದ ಪ್ರಕರಣಗಳು ಬಹಿರಂಗವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಿಐಡಿಯ ಮಧ್ಯಂತರ ವರದಿಯ ಅಧ್ಯಯನ ಹಾಗೂ ಅದರ ಶಿಫಾರ್ಸುಗಳನ್ನು ಸರಿಕಂಡ ಕಡೆಗಳಲ್ಲಿ ಜಾರಿಗೆ ತರುವುದರಲ್ಲಿ ಹಿಂದೆ-ಮುಂದೆ ನೋಡಬಾರದು.
ಈಗ ಮುಖ್ಯಮಂತ್ರಿ ಚೀನಾ ಪ್ರವಾಸಕ್ಕೆ ತೆರಳಿದ್ದಾರೆ. ಅವರು ಹಿಂತಿರುಗಿದ ಕೂಡಲೇ ಲೋಕಸೇವಾ ಆಯೋಗದ ವ್ಯವಹಾರ, ಅವ್ಯವಹಾರಗಳನ್ನು ಕುರಿತ ಸಿಐಡಿ ವರದಿಯನ್ನು ಪರಿಶೀಲಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು.
ತಪ್ಪಿತಸ್ಥರು ಯಾರೇ ಆಗಿರಲಿ ಅವರ ಹಿನ್ನೆಲೆಯನ್ನು ಲೆಕ್ಕಕ್ಕಿಡದೇ ಶಿಕ್ಷೆಗೆ ಗುರಿಪಡಿಸಬೇಕು. ಅಷ್ಟೇ ಅಲ್ಲ ಯಾರಾದರೂ ಅಧಿಕಾರಿಗಳು ವಾಮ ಮಾರ್ಗದಿಂದ ಅವರಿಗೆ ಸಲ್ಲದ ನೌಕರಿಯನ್ನು ಗಿಟ್ಟಿಸಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಜರುಗಿಸಬೇಕು. ಇಂತಹ ಕ್ರಮಗಳೇ ಸರ್ಕಾರದಲ್ಲಿ ಜನರ ವಿಶ್ವಾಸವನ್ನು ಮೂಡಿಸುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.