ಚಿತ್ರಕಲಾ ಶಿಕ್ಷಕನ ಸಾಧನೆ
ನಿತಿನ್ ಯಾದವ್ ಮುಂಬೈನ ಚೆಂಬೂರ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಚಿತ್ರಕಲಾ ಶಿಕ್ಷಕ. ಅಷ್ಟಕ್ಕೇ ತನ್ನ ಸೇವೆಯನ್ನು ಮೀಸಲಾಗಿಟ್ಟಿದ್ದರೆ, ಯಾರಿಗೂ ಆತನ ಪರಿಚಯವಿರುತ್ತಿರಲಿಲ್ಲವೇನೋ? ಆದರೆ ಅಪರಾಧ ಸ್ಥಳದ ಸಿಸಿಟಿವಿಯಲ್ಲಿ ಮೂಡಿಬರುವ ಅಸ್ಪಷ್ಟವಾದ ಚಿತ್ರಗಳನ್ನಾಧರಿಸಿ ಆತ ಬಿಡಿಸುವ ವಕ್ತಿಯ ರೇಖಾ ಚಿತ್ರಗಳು ಅಪರಾಧಿಯನ್ನು ಪತ್ತೆಹಚ್ಚಲು ನೆರವಾಗಿವೆ. ಇತ್ತೀಚೆಗೆ ನಡೆದ ಪತ್ರಕರ್ತೆಯ ಮೇಲಿನ ಅತ್ಯಾಚಾರ ಆರೋಪಿಗಳನ್ನು ಇದೇರೀತಿ ರೇಖಾಚಿತ್ರ ಬಿಡಿಸಿ ಪತ್ತೆಹಚ್ಚಲು ಈತ ನೆರವಾಗಿದ್ದಾರೆ. ಮುಂಬೈ ಪೊಲೀಸರಿಗಂತೂ ನಿತಿನ್ ಯಾದವ್ ಅಂದರೆ ತುಂಬಾ ವಿಶ್ವಾಸ. ಏಕೆಂದರೆ ಯಾವುದೇ ಸಮಯದಲ್ಲಿಯೂ ಯಾದವ್ ಅವರಿಗೆ ತನ್ನ ನೆರವು ನೀಡಲು ಸದಾ ಸಿದ್ಧ. ಕಳೆದ ಇಪ್ಪತ್ತೈದು ವರ್ಷಗಳಿಂದ ತನ್ನ ಈ ಕಾಯಕವನ್ನು ಸೇವಾಭಾವನೆಯಿಂದ ಮಾಡುತ್ತಿದ್ದು, ಇದುವರೆಗೂ ನೂರಾ ಐವತ್ತಕ್ಕೂ ಹೆಚ್ಚು ಅಪರಾಧಿಗಳನ್ನು ಪತ್ತೆ ಹಚ್ಚಲು ಇವರು ನೆರವಾಗಿದ್ದಾರೆ. ಎಷ್ಟೋ ವೇಳೆ ಅಪರಾಧಿ ಜಗತ್ತಿನಿಂದ ಇವರಿಗೆ ಪ್ರಾಣ ಬೆದರಿಕೆ ಬಂದದ್ದೂ ಇದೆ. ಅಪರಾಧಿಗಳನ್ನು ನೋಡಿದವರಿಂದ ವಿಷಯ ಸಂಗ್ರಹಿಸಿ ಸಹ ಇವರು ಅಪರಾಧಿಗಳ ರೇಖಾ ಚಿತ್ರ ಬಿಡಿಸುವುದರಲ್ಲಿ ಪರಿಣತಿ ಪಡೆದಿದ್ದಾರೆ. ವಿವಿಧ ಬಗೆಯ ಮುಖವಿನ್ಯಾಸದ, ಮೂಗು, ಬಾಯಿ, ಕಿವಿ ವಿನ್ಯಾಸದ ಚಿತ್ರಗಳನ್ನು ಬಿಡಿಸಿರುವ ಒಂದು ಪುಸ್ತಕದ ಆಲ್ಬಂ ಇವರ ಬಳಿ ಇದೆ. ಅದರ ಸಹಾಯದಿಂದ ಅಪರಾಧಕ್ಕೆ ಸಾಕ್ಷಿಯಾಗಿರುವವರ ಸಹಾಯದಿಂದ ರೇಖಾಚಿತ್ರ ಬಿಡಿಸುತ್ತಾರೆ. ಒಂದು ರೇಖಾಚಿತ್ರ ಬಿಡಿಸಲು ಅವರಿಗೆ ಎರಡರಿಂದ ಎರಡೂವರೆ ಗಂಟೆಗಳ ಅವಧಿ ಬೇಕಾಗುತ್ತದೆ. ತುಂಬಾ ಬಡಕುಟುಂಬದಿಂದ ಬಂದ ಯಾದವ್ ಚಿಕ್ಕವಯಸ್ಸಿನಲ್ಲಿಯೇ ನಾಮಫಲಕಗಳನ್ನು ಬರೆಯುವುದು, ನಂಬರ್ ಪ್ಲೇಟ್ ಬರಹ, ಬ್ಯಾನರ್ ರಚಿಸುವುದು ಮುಂತಾದ ಕೆಲಸಗಳಿಂದ ಅಲ್ಪಸ್ವಲ್ಪ ಹಣ ಸಂಪಾದಿಸಿ, ಓದು ಮುಂದುವರೆಸಿದರು. ನಂತರ ಜೆಜೆ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ತರಬೇತಿ ಹೊಂದಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಒಮ್ಮೆ ಪೋಲಿಸರಿಗೆ ಹೀಗೆ ಒಂದು ರೇಖಾ ಚಿತ್ರವನ್ನು ರಚಿಸಿಕೊಟ್ಟಿದ್ದು ತನಿಖೆಯಲ್ಲಿ ಸಹಾಯವಾಯಿತಾದ್ದರಿಂದ ಪೊಲೀಸ್ ಇಲಾಖೆಗೆ ಇವರನ್ನು ಪದೇ ಪದೇ ಸಂಪರ್ಕಿಸುವಂತಾಯಿತು. ತಮ್ಮ ಸೇವೆಗೆ ಅವರು ಯಾವುದೇ ಸಂಭಾವನೆ ಸ್ವೀಕರಿಸದೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾದರೂ ತಮ್ಮಿಂದ ಸಮಾಜಕ್ಕೆ ಅಲ್ಪ ಸೇವೆ ದೊರೆಯುತ್ತದೆಂಬ ನಂಬಿಕೆ ಅವರದು. ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಚಿತ್ರಕಲಾ ತರಗತಿಗಳನ್ನು ನಡೆಸಿ, ಆಸಕ್ತರಿಗೆ ಚಿತ್ರಕಲೆಯನ್ನು ಕಲಿಸುತ್ತಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

