ಮಾತಾಡಿ ಮೌಲ್ಯ ಕಳೆದುಕೊಳ್ಳುವುದೇಕೆ?
'ಮೋದಿಯವರು ಆಳುವ ನಾಡಿನಲ್ಲಿ ಬದುಕಿರಲು ನಾನು ಇಷ್ಟಪಡಲ್ಲ' ಹೀಗೆಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿವರು ಹೇಳಿದ್ದಾರೆ. ಇದು ಅವರ ಹಲವು ಹೇಳಿಕೆಗಳಂತೆಯೇ ವಿವಾದ ಹುಟ್ಟು ಹಾಕಿದೆ. ಅವರಿಗೆ ವರವೋ, ಶಾಪವೋ ತಿಳಿಯದು. ಅವರ ಹೇಳಿಕೆಗಳೆಲ್ಲವೂ ವಿವಾದಗಳಾಗಿ ತಿರುವು ಪಡೆಯುತ್ತವೆ. ಆದರೆ ವಿವಾದಾಸ್ಪದ ಹೇಳಿಕೆ ನೀಡುತ್ತಾರೋ ಅಥವಾ ಪ್ರಚಾರದ ತಂತ್ರವೋ ತಿಳಿಯದು. ಆದರೆ ಅವರ ಹೇಳಿಕೆಗಳಿಗೆ ಪ್ರತಿಯಾಗಿ ವಿರುದ್ಧ ಅಭಿಪ್ರಾಯಗಳೇ ಹೆಚ್ಚು ಮೂಡಿ ಬರುವುದು ವಿಪರ್ಯಾಸವೇನೋ? ಈ ಹೇಳಿಕೆ, ಪ್ರತಿಹೇಳಿಕೆಗಳಿಂದ ಜನಸಾಮಾನ್ಯನಿಗೆ ಭರಪೂರ ಮನರಂಜನೆಯ ಜೊತೆಗೆ ಅವರ ಬಗೆಗೆ ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳುವ ಅವಕಾಶವೂ ದೊರೆಯುತ್ತಿದೆ. ಆದರೆ ಕೆಲವು ಅಭಿಪ್ರಾಯಗಳನ್ನು ನೋಡಿದಾಗ, ಛೆ ಒಬ್ಬ ಜ್ಞಾನಪೀಠ ಪುರಸ್ಕೃತ ಸಾಹಿತಿಯನ್ನು ಈ ಮಟ್ಟಕ್ಕೆ ಇಳಿಸಬಾರದಿತ್ತು ಎನಿಸಿ ನೋವಾಗುತ್ತದೆ. ಆದ್ದರಿಂದ ಅನಂತಮೂರ್ತಿಯವರು ಮಾತಾಡುವ ಮೊದಲು ಮತ್ತೊಮ್ಮೆ ಮಗದೊಮ್ಮೆ ಚೆನ್ನಾಗಿ ಯೋಚಿಸಿ ಮಾತಾಡುವುದೊಳಿತು. ಇಲ್ಲವಾದಲ್ಲಿ ಕುಸಿಯುವುದು ಅವರ ಮೌಲ್ಯವೇ ಜೊತೆಗೆ ಜ್ಞಾನಪೀಠ ಮೌಲ್ಯ ಕೂಡ!
- ಶೀಲಾ ಸತ್ಯೇಂದ್ರಸ್ವಾಮಿ, ಚಾಮರಾಜನಗರ
ಕೋತಿರಾಮನಿಗಿರಲಿ ಪ್ರೋತ್ಸಾಹ
ಚಿತ್ರದುರ್ಗದ ಹೆಸರಾಂತ ಸಾಹಸಿಗ ಕೋತಿ (ಜ್ಯೋತಿ) ರಾಮನ ಪ್ರತಿಭೆ ಸಾಹಸ ಮತ್ತು ಕೋಟೆಯನ್ನು ನೋಡಲು ಬರುವ ಪ್ರವಾಸಿಗರಿಗೆ ಮನರಂಜನೆಯನ್ನು ನೀಡುತ್ತಿರುವ ಕೋತಿರಾಮನನ್ನು ಸರ್ಕಾರ ಗುರ್ತಿಸಿ ನೆರವು ನೀಡುವುದರ ಜೊತೆಗೆ ಪ್ರೋತ್ಸಾಹ ಸಿಗುವಂತೆ ಮಾಡಬೇಕು. ಇತ್ತೀಚೆಗೆ ಜೋಗ ಜಲಪಾತದಿಂದ 2 ಶವಗಳನ್ನು ಎತ್ತಿದ್ದಾನೆ. ಅಂತಹ ಬೃಹತ್ ಜಲಪಾತವನ್ನು ನೋಡಿದರೆ ಭಯವಾಗುತ್ತದೆ. ಅಂತಹುದರಲ್ಲಿ ತನ್ನ ಜೀವದ ಹಂಗು ತೊರೆದು ಜಲಪಾತಕ್ಕಿಳಿದು ಶವಗಳನ್ನು ಹೊರತೆಗೆಯುವುದರೊಂದಿಗೆ ಸಾಹಸವನ್ನು ಪ್ರದರ್ಶಿಸಿದ್ದಾನೆ. ಸರ್ಕಾರವು ಅನೇಕ ಅಪ್ರಯೋಜಕ ಯೋಜನೆ, ಕಾರ್ಯಕ್ರಮಗಳಿಗೆ ಬೇಕಾದಷ್ಟು ಹಣ ಬಿಡುಗಡೆ ಮಾಡುತ್ತದೆ. ಬಡ ಕುಟುಂಬದ, ಸಾಹಸವನ್ನು ಪ್ರದರ್ಶಿಸುತ್ತಿರುವ ಮನರಂಜನೆಯನ್ನು ನೀಡುತ್ತಿರುವ ಕೋತಿ ರಾಮನಿಗೆ ಅಗತ್ಯ ನೆರವು ಮತ್ತು ಪ್ರೋತ್ಸಾಹವನ್ನು ಸರ್ಕಾರ ನೀಡಲೇಬೇಕು.
- ಹೇಮಂತಕುಮಾರ್ ವೈ, ಚಿತ್ರದುರ್ಗ ಜಿಲ್ಲೆ.
ಎಂತಹ ವಿಪರ್ಯಾಸ?
ವಿಕೃತ, ಅಬದ್ಧ, ಅವಹೇಳನಕಾರಿ ಹೇಳಿಕೆಗಳು, ಲೇಖನಗಳು ಮೋದಿಯವರ ಬಗ್ಗೆ ಬರೆದು ಸಂತೋಷಿಸುವ, ಪೈಶಾಚಿಕವಾಗಿ ಬಿಂಬಿಸುವವರಿಗೆ, ಈಗ ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ತೇಜೋವಧೆಯಾಗಿದೆಯಂತೆ! ಇವರು ಮಾತ್ರ ನರಹಂತಕ, ಕೋಮುವಾದಿ, ಸರ್ವಾಧಿಕಾರಿ ಎಂದು ಹೇಳಿಕೆ, ಲೇಖನಗಳನ್ನು ಬರೆದು ಮೋದಿಯವರ ವ್ಯಕ್ತಿತ್ವವನ್ನು ತೇಜೋವಧೆ ಮಾಡಬಹುದು. ಅದು ಅವರ ಜನ್ಮಸಿದ್ಧಹಕ್ಕು ಕೂಡ ಅಂತೆ. ಅದನ್ನು ಖಂಡಿಸಿ, ವಸ್ತುನಿಷ್ಠ ಲೇಖನ ಬರೆದರೆ ಸ್ವಘೋಷಿತ ಬುದ್ಧಿವಂತ ಲೇಖಕರ ಸಜ್ಜನರ ತೇಜೋವಧೆಯಂತೆ. ಇದು ಎಂಥಾ ವಿಪರ್ಯಾಸ!
- ಕೆಂಪರಾಜು ಸಿ.ಎಂ. ಸಂತೆಕೆರೆ, ಹುಣಸೂರು
ಅತಿಯಾಸೆ ಗತಿಗೇಡು...
ಅನ್ನಭಾಗ್ಯ ಯೋಜನೆಯ ಅಕ್ಕಿ ನ್ಯಾಯಬೆಲೆ ಅಂಗಡಿಯಿಂದ ಬಿಪಿಎಲ್ ಕಾರ್ಡ್‌ದಾರರ ಮನೆಗೆ ತಲುಪುತ್ತಿಲ್ಲ. ಅದರ ಬದಲಾಗಿ ಆತನೇ ಅದನ್ನು ನ್ಯಾಯಬೆಲೆ ಅಂಗಡಿಯವನಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾನೆ. ಮಾನವನ ಬುದ್ಧಿ ವಿಪರ್ಯಾಸವೇ ಸರಿ. ಅಕ್ಕಿ, ಸೀಮೆಎಣ್ಣೆ, ಗೋಧಿ ಇತ್ಯಾದಿಗಳು ನ್ಯಾಯಬೆಲೆ ಅಂಗಡಿಯಿಂದ ದೊರೆಯದೇ ಹೋದಲ್ಲಿ ಮರುದಿನ ಊರಿನವರನ್ನು ಸೇರಿಸಿ ಪ್ರತಿಭಟನೆ ನಡೆಸುವುದರಲ್ಲಿ ನಿಸ್ಸೀಮ. ಆದರೆ ಅದೇ ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಮಾನವ ಮಾಡುವುದು ಅನ್ಯಾಯದ ಕೆಲಸ. ಈ ರೀತಿಯ ಮನುಷ್ಯನಿಗೂ ಬಿಪಿಎಲ್ ಕಾರ್ಡ್ ನೀಡಬೇಕೇ...?
- ಮೇಘಲಕ್ಷ್ಮಿ. ಎಂ. ಕುಂಡಡ್ಕ, ಪುತ್ತೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

