ನರೇಂದ್ರ ಮೋದಿಯದ್ದು ವಿನಾಶದ ಹಾದಿ
ಬಾಬರಿ ಮಸೀದಿ ನಾಶಮಾಡಿದ ಬಿಜೆಪಿಗೆ ಹಿಂದೂ ಧರ್ಮದ ಪ್ರೇಮಕ್ಕಿಂತ ಮುಸ್ಲಿಮರ ಬಗೆಗಿನ ಅಸಹನೆ, ದ್ವೇಷವೇ ಮುಖ್ಯವಾಗಿರುವಂತೆ ತೋರುತ್ತಿದೆ. ದ್ವೇಷದಿಂದ, ಜೊತೆ ಬಾಳುವವರ ಮೇಲಿನ ಅಸಹನೆಯಿಂದ ದೇಶ ಕಟ್ಟುವುದಕ್ಕಾಗುವುದಿಲ್ಲ. ದ್ವೇಷ ಬಿಟ್ಟು, ಪ್ರೀತಿ ಬಿತ್ತಿ, ಸಹಬಾಳ್ವೆಯಿಂದ ದೇಶ ಕಟ್ಟಬೇಕು.
ಮೋದಿ ಇಂದು ಬಿಜೆಪಿಯ ಪರಮ ನೇತಾರ; ಏಕೈಕ ನೇತಾರ. ಅಂಥ ನೇತಾರನಿಗೆ 'ನಮೋ' ಎಂಬ ಬಿಜೆಪಿ ಪರಿವಾರದವರು ಅಂಥ ದ್ವೇಷ ಬುದ್ಧಿಯಿಲ್ಲದ ಮನಮೋಹನಸಿಂಗ್, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ದುರ್ಬಲ ನೇತಾರರು ಎಂದು ದೂಷಿಸುತ್ತಿದ್ದಾರೆ. ಯಾರೇ ಎಷ್ಟೇ ದುರ್ಬಲರಾದರೂ ಅಪಾಯಕಾರಿ ಮೋದಿಗಿಂತ ಲೇಸು. ಮೋದಿಯಂತೆ ಅವರು ಯಾರೂ ದೇಶ ನಾಶಕರಾಗುವುದು ಸಾಧ್ಯವಿಲ್ಲ.
ಭಾರತ ಉಪಖಂಡವನ್ನೇ ಯುದ್ಧದ ಸಂಕಷ್ಟಕ್ಕೆ ದೂಡಬಹುದಾದಂಥ ದುಷ್ಟ, ದುರಾಲೋಚನೆ ಮೋದಿ ಮಹಾಶಯನ ಚುನಾವಣಾ ಭಾಷಣಗಳಲ್ಲಿ ಕೇಳಿಸುತ್ತಿದೆ. ಅಣುಬಾಂಬುಗಳಿರುವ ದೇಶಗಳು ಯುದ್ಧಕ್ಕೆ ಎದುರಾಗುವಂಥ ಸಂದರ್ಭ ಉಂಟಾದದ್ದಾದರೆ ದೇಶದ ಗತಿ ಏನು? ಎರಡೂ ದೇಶಗಳ ಜನರ ಗತಿಯೇನು?
ಮತದಾರರ ಮತಿಯು, ಬುದ್ಧಿಯು ಈ ಪ್ರಶ್ನೆಯನ್ನು ಗಂಭೀರವಾಗಿ ಕೇಳಿಕೊಂಡು ಮತ ಚಲಾಯಿಸಬೇಕಾದಂಥ ಬಿಕ್ಕಟ್ಟಿನ ಚುನಾವಣೆ ಈ ಬಾರಿಯದ್ದು. 1948, 1965, 1972 ಹಾಗೂ ಕಾರ್ಗಿಲ್ನಲ್ಲಿ ಯುದ್ಧಗಳಾಗಿ ಹೇಗೊ ಮುಗಿದುಹೋದಂತೆ ಇನ್ನು ಮುಂದೆ ಭಾರತ, ಪಾಕಿಸ್ತಾನ ಯುದ್ಧವೇನಾದರೂ ನಡೆದರೆ ಅಷ್ಟು ಸುಲಭವಾಗಿ ಮುಗಿದುಹೋಗುವುದಿಲ್ಲ. ಎರಡೂ ದೇಶಗಳು, ಜನರು ಸರ್ವನಾಶವಾಗಿ ಹೋಗುತ್ತಾರೆ. ಆ ಬಗ್ಗೆ ಅನುಮಾನವೇ ಇರುವುದಿಲ್ಲ.
ಭಾರತ ಪಾಕಿಸ್ತಾನಗಳು ಹಿಂದಿನ ಯುದ್ಧಗಳು ನಡೆದಾಗ ಅಣುಬಾಂಬು ಸಾಮರ್ಥ್ಯವಿರುವ ದೇಶಗಳಾಗಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಎರಡೂ ದೇಶಗಳು ಅಣುಬಾಂಬು ಸಾಮರ್ಥ್ಯ ಹೊಂದಿವೆ. ಹಾಗಾಗಿರುವುದಕ್ಕೆ ದೀರ್ಘಕಾಲ ದೇಶವನ್ನಾಳಿದ ಕಾಂಗ್ರೆಸ್ ಕಾರಣವಲ್ಲ, ಕೆಲವೇ ಕಾಲ ಅಳಿದ ಬಿಜೆಪಿ ನೇತೃತ್ವದ ವಾಜಪೇಯಿ ಸರಕಾರ. ಬಿಜೆಪಿ ರಾಜಾಸ್ಥಾನದ ಪೋಕ್ರಾನ್ನಲ್ಲಿ ಅಣುಬಾಂಬು ಪರೀಕ್ಷೆ ನಡೆಸಿದ್ದರಿಂದಲೇ, ಪ್ರೇರಿತವಾಗಿ ಪಾಕಿಸ್ತಾನವೂ ಕೆಲವೇ ತಿಂಗಳುಗಳಲ್ಲಿ ಅಣುಬಾಂಬು ಸ್ಫೋಟ ಪ್ರಯೋಗ ನಡೆಸಿತು. ಬಿಜೆಪಿ 'ಬುದ್ಧ ನಗುತ್ತಿದ್ದಾನೆ' ಎಂಬ ವಿಕೃತ ಘೋಷಣೆಯೊಂದಿಗೆ ಪರೀಕ್ಷೆ ನಡೆಸುವ ಅವಿವೇಕ ತೋರಿಸಿತ್ತು. (ವ್ಯಕ್ತಿಯಾಗಿ ವಾಜಪೇಯಿ ಮೋದಿಯಂಥ ನೇತಾರರಾಗಿರಲಿಲ್ಲ). ಅವರು ಪ್ರಧಾನಿಯಾಗಿ ರಾಜಧರ್ಮ ಪ್ರಜ್ಞೆ, ತಕ್ಕ ಹೊಣೆಗಾರಿಕೆ ಇದ್ದವರಾಗಿದ್ದರು. ಅದರೂ ಬಿಜೆಪಿಯ ನೇತಾರರಾದ್ದರಿಂದ ಅಂಥ ಅವಿವೇಕದ ಕಾರ್ಯ ಮಾಡುವುದಕ್ಕೆ ಮುಂದಾಗುವಂಥ ಒತ್ತಡಕ್ಕೆ ಒಳಗಾಗಿದ್ದರು.
ಅಂಥ ವಾಜಪೇಯಿಯವರೇ ದೇಶದ ಪ್ರಧಾನಿಯಾಗಿ ರಾಜಧರ್ಮ ಬೋಧನೆ ಮಾಡಿದ್ದರೂ, 2002ರಲ್ಲಿ ಗಾಂಧೀಜಿ ನಾಡಾದ ಗುಜರಾತಿನಲ್ಲಿ, ಮೋದಿ ಆಳ್ವಿಕೆಯಲ್ಲಿ ಘೋರ ಹತ್ಯಾಕಾಂಡ ನಡೆದುಹೋಯಿತು. ಇಂದು ಅದು ಇತಿಹಾಸ.
ಹೆಸರಿಗೆ ಹಿರಿಯ ನೇತಾರನೆಂದು ಆಡ್ವಾಣಿಯವರೇನೊ ಬಿಜೆಪಿಯಲ್ಲಿದ್ದಾರೆ ಅಷ್ಟೆ. ಅವರೂ ಬಾಬರಿ ಮಸೀದಿ ಕರ್ಮಕಾಂಡದ ರಥಯಾತ್ರೆಯ ಅಕಾರ್ಯ, ಆಧ್ವಾನ ಮಾಡಿದ ವ್ಯಕ್ತಿ. ಅವರ ಮಾತಿಗೆ ಬಿಜೆಪಿ ಪಕ್ಷದಲ್ಲಿ ಬೆಲೆ ಇಲ್ಲ. ಅವರ ಮಾತಿಗೆ ನೆಲೆಯೂ ಇಲ್ಲ. ಹೊತ್ತಿಗೊಂದು ನಿಲುವು ತಾಳುವ ಅರಳು ಮರಳು ಅವಸ್ಥೆಯ ನೇತಾರರಾಗಿ ಇದ್ದಾರೆ ಅಷ್ಟೆ. ಮುಂದಿನ ಪ್ರಧಾನಿ ಎಂದು ಬಿಜೆಪಿ ಮೆರೆಸುತ್ತಿರುವ ಮೋದಿ ಮಹಾ ಅಪಾಯಕಾರಿ. ಅಂಥ ನರೇಂದ್ರ ಮೋದಿ ಭಸ್ಮಾಸುರ ತಳಿಗೆ ಸೇರಿದಂಥ, ಪ್ರಧಾನಿ ಹುದ್ದೆಯ ಮೋಹಿತ ನೇತಾರ. ವಾಜಪೇಯಿಯ ಸರಕಾರದ ಕಾಲದಲ್ಲಿ ಪ್ರಜಾಸತ್ತಾತ್ಮಕ ಭಾರತದ ಸಂವಿಧಾನವನ್ನು ಬದಲಿಸಲೆಂದು ರಾಷ್ಟ್ರಪತಿ ಕೆ.ಅರ್. ನಾರಾಯಣನ್ ಅವರ ಮೇಲೆ ಅನಪೇಕ್ಷಿತ ಒತ್ತಡ ಹೇರಿ ಸಂವಿಧಾನ ಪುನಾರಚನೆಗೆಂದು ಸಮಿತಿ ರಚಿಸಿತ್ತು. ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದು ಮೋದಿ ಪ್ರಧಾನಿ ಅಗುವಂತಾದರೆ ಅಂಬೇಡ್ಕರ್ ಅವರ ಸಂವಿಧಾನದ ಗತಿಯೇನಾದೀತು? ಶೋಷಿತ ಜನಸಮುದಾಯದವರ, ಅಲ್ಪ ಸಂಖ್ಯಾತರ, ಮಹಿಳೆಯರ ಸಮಾನತೆಯ ಹೋರಾಟದ ಗತಿ ಏನಾದೀತು?
ಈ ಪ್ರಶ್ನೆಯನ್ನು ಶೋಷಿತರು, ಮತಧರ್ಮ ನಿರಪೇಕ್ಷವಾದಿಗಳು(ಸೆಕ್ಯುಲರ್), ಪ್ರಜಾಪ್ರಭುತ್ವವಾದಿಗಳು ಗಂಭೀರವಾಗಿ ಕೇಳಿಕೊಳ್ಳಬೇಕಾಗಿದೆ. ಸ್ವತಂತ್ರ ಭಾರತದಲ್ಲಿ ಎಲ್ಲ ಕಷ್ಟಕಾಲದ ಚುನಾವಣೆಗಳಲ್ಲಿ ಭಾರತದ ಮತದಾರರು ವಿವೇಕದಿಂದ ಮತ ಚಲಾಯಿಸಿದ್ದಾರೆ, ಈ ಸಲವೂ ಅಂಥ ವಿವೇಕದ ನಡೆ ತಪ್ಪಲಾರರೆಂಬ ನಂಬಿಕೆ ನನ್ನದು. ಮೋದಿಯ ಹಾದಿ ವಿನಾಶದ ಹಾದಿ, ಸರ್ವಾಧಿಕಾರದತ್ತ ನಡೆಯುವ ಹಾದಿ.
-ಪ್ರೊ.ಜಿ.ಎಚ್. ನಾಯಕ, ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

