ಸಂಪಾದಕೀಯ

ಕಾವೇರಿ ವಿವಾದಕ್ಕೆ ಯಾರು ಹೊಣೆ?

Published On :

ಕಾವೇರಿ ವಿವಾದಕ್ಕೆ ಜಯಲಲಿತಾ ಮತ್ತು ದೇವೇಗೌಡರೇ ಮೂಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ. ತಮ್ಮ ಪಕ್ಷದ ಮುಖ್ಯಮಂತ್ರಿಗಳೇ ಆಗಿದ್ದ ಎಸ್.ಎಂ. ಕೃಷ್ಣರವರು ರಾತ್ರೋರಾತ್ರಿ ತಮಿಳುನಾಡಿಗೆ ನೀರನ್ನು ಬಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗಿದ್ದ ಆಯ್ಕೆ ಎರಡು. ಒಂದು, ಸುಪ್ರೀಂ ಕೋರ್ಟ್ ಸೂಚನೆಯನ್ನು ಪಾಲಿಸಲೇಬೇಕಾದದ್ದು. ಎರಡು, ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿದ್ದರಿಂದ, ನೀರು ಬಿಡುವುದರಿಂದ ಕರ್ನಾಟಕದ ರೈತರ ಹಿತಕ್ಕೆ ಧಕ್ಕೆ ಎಂದು ಭಾವಿಸಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದದ್ದು. ಇದರಲ್ಲಿ ಮೊದಲನೆಯದನ್ನು ಅವರು ಆಯ್ಕೆ ಮಾಡಿಕೊಂಡು ಸುಪ್ರೀಂ ಕೋರ್ಟ್ ಸೂಚನೆಗೆ ಗೌರವವನ್ನೂ ನೀಡಿದರು ಮತ್ತು ತಮ್ಮ ಸ್ಥಾನವನ್ನೂ ಉಳಿಸಿಕೊಂಡರು. ಕರ್ನಾಟಕದ ರೈತರ ಹಿತ ಬಯಸಿ ಅವರು ತಮ್ಮ ಕುರ್ಚಿ ತ್ಯಾಗ ಮಾಡುವುದಕ್ಕೆ ಮುಂದಾಗಲಿಲ್ಲ. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ತೆಲಂಗಾಣ ರಾಜ್ಯವನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನವರೂ ಸೇರಿ ಅನೇಕ ಪಕ್ಷದವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದರು. ಮುಖ್ಯಮಂತ್ರಿಯವರೂ ಈ ಕೆಲಸವನ್ನು ಮಾಡಿದರು. ನಮ್ಮಲ್ಲಿ ಕಾವೇರಿ ತೀರ್ಪಿನಿಂದ ಆದ ಅನ್ಯಾಯಕ್ಕೆ ಎಷ್ಟು ಜನ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟಿದ್ದಾರೆ? ಕಾವೇರಿ ನದಿ ಪ್ರಾಧಿಕಾರದ ಮುಖ್ಯಸ್ಥರು ಪ್ರಧಾನಿಗಳು. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರೇ ಆದ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದವರೇ ಪ್ರಧಾನಿಯಾಗಿದ್ದರೂ ಕರ್ನಾಟಕಕ್ಕೆ ನ್ಯಾಯವನ್ನು ಒದಗಿಸುವಂತೆ ಯಾವ ಒತ್ತಡವನ್ನೂ ಹೇರಲಿಲ್ಲ. ಹಾಗೆ ಮಾಡಿದ್ದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೃಪೆಯಿಲ್ಲದೆ ಪ್ರಧಾನಿಯವರು ಏನನ್ನೂ ಮಾಡಲಾರರು ಎಂಬುದನ್ನು ಅರಿತೇ ಕಾಂಗ್ರೆಸ್ ನಾಯಕರು ಪ್ರಧಾನಿಯವರ ಮನವೊಲಿಸಲು ಪ್ರಯತ್ನ ಮಾಡಲಿಲ್ಲವೇ? ಸೋನಿಯಾ ಮತ್ತು ರಾಹುಲ್ ಇವರುಗಳನ್ನು ಭೇಟಿ ಮಾಡಿ ಕರ್ನಾಟಕಕ್ಕೆ ನ್ಯಾಯ ಒದಗಿಸುವಂತೆ ಕೇಳುವ ಧೈರ್ಯ ಕರ್ನಾಟಕ ಕಾಂಗ್ರೆಸ್ ನಾಯಕರಾರಿಗೂ ಇಲ್ಲ ಎಂಬುದು ಸ್ಪಷ್ಟ. ತಮ್ಮ ಪಕ್ಷದವರೇ ಪ್ರಧಾನಿಯಾಗಿದ್ದರೂ ಕಾಂಗ್ರೆಸ್ ನಾಯಕರು ಯಾವ ಪ್ರಯೋಜನವನ್ನೂ ಪಡೆಯಲು ಶಕ್ತರಲ್ಲದೆ ಇರುವಾಗ ಜಯಲಲಿತಾ ಮತ್ತು ದೇವೇಗೌಡರನ್ನೇಕೆ ನಿಂದಿಸಬೇಕು? ಜಯಲಲಿತಾ ತಮ್ಮ ರಾಜ್ಯದ ಹಿತವನ್ನು ಬಯಸಿ ಅದಕ್ಕೆ ತಕ್ಕ ಕ್ರಮಗಳನ್ನನುಸರಿಸಿದ್ದಾರೆ.  ತೀರ್ಪು ಅವರ ಪರ ಬಂದಿದೆ. ತೀರ್ಪಿನಂತೆ ನಡೆದುಕೊಳ್ಳಬೇಕಾದದ್ದು ಕರ್ನಾಟಕದ ಯಾವುದೇ ಮುಖ್ಯಮಂತ್ರಿಯ ಕರ್ತವ್ಯ ಕೂಡ. ಕರ್ನಾಟಕದ ರೈತರಿಗೆ ಅನ್ಯಾಯವಾದರೂ ಪರವಾಗಿಲ್ಲ. ದೇವೇಗೌಡರಿಗೆ ಮತ್ತು ಬಿಜೆಪಿ ಸರ್ಕಾರಕ್ಕೆ ಕಾವೇರಿ ನೀರು ವಿಷಯದಲ್ಲಿ ತೀರ್ಪು ತಮಿಳುನಾಡು ಪರ ಬಂದು ಮುಖಭಂಗವಾದರೆ ಸಾಕು ಎಂದು ಕಾಂಗ್ರೆಸ್ ನಾಯಕರು ಬಯಸುತ್ತಿದ್ದರೇ ಹೊರತು, ಬೇರೇನೂ ಅವರಿಗೆ ಬೇಕಿಲ್ಲ.  ಈಗಲೂ ಅಷ್ಟೆ. ಕಾವೇರಿ ನೀರಿನ ವಿಷಯ ಚುನಾವಣಾ ವಸ್ತು. ಚುನಾವಣೆ ಕಳೆದ ನಂತರ ಜಯಲಲಿತಾರವರು ಕಾವೇರಿ ನೀರಿನ ವಿಷಯದಲ್ಲಿ ತಗಾದೆ ಶರು ಮಾಡುವವರೆವಿಗೂ ನಮ್ಮ ನಾಯಕರಾರಿಗೂ ಈ ವಿಷಯವೇ ನೆನಪಿನಲ್ಲಿರುವುದಿಲ್ಲ.  
-ಕೆ.ವಿ. ಸೀತಾರಾಮಯ್ಯ, ಹಾಸನ


ಯೋಜನೆಗಳು ಯಾರಿಗಾಗಿ?

ಚುನಾವಣಾ ಜನಾಭಿಪ್ರಾಯ ಸಂಗ್ರಹ ಆಧರಿತ ಸಮೀಕ್ಷಾ ವರದಿಗಳ ಪ್ರಕಾರ ರೈತ ಸಮುದಾಯದ ಬಹುದೊಡ್ಡ ಸಂಖ್ಯೆಯ ಜನರು ಅವಕಾಶ ಸಿಕ್ಕರೆ, ತಮ್ಮ ಕಸುಬನ್ನು ಬದಲಾಯಿಸಲು ಹಳ್ಳಿಯನ್ನು ಬಿಟ್ಟು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗಲು ಸಿದ್ಧ ಎನ್ನುವ ಅಭಿಪ್ರಾಯ ಬಂದಿರುವುದು ದುರದೃಷ್ಟಕರ. ಹಾಗಾದರೆ ಇದುವರೆಗೂ ಸರ್ಕಾರಗಳು ಕೈಗೊಂಡಿರುವ ಹಲವು ಕೋಟಿಗಳ ಯೋಜನೆಗಳು ಯಾರಿಗಾಗಿ? ಇದನ್ನು ಗಮನದಲ್ಲಿರಿಸಿಕೊಂಡು ಯುವಜನರು ಕೃಷಿಯಿಂದ ಬರುವ ಲಾಭವನ್ನು ಅರಿತು ಮುನ್ನಡೆಯಬೇಕಾಗಿದೆ.
-ಸುಷ್ಮ ಕ್ರಾಸ್ತಾ, ವಿವೇಕಾನಂದ ಕಾಲೇಜು, ಪುತ್ತೂರು.


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.