ಮುಲಾಯಂ ಸಿಂಗ್‌ರ ಕೂಟದ ಕಲ್ಪನೆ ಎಲ್ಲಿಂದ ಬಂದಿದ್ದು?
ಈಗಿನ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ರಾಜ್ಯಗಳೆಂದರೆ ಉತ್ತರ ಪ್ರದೇಶ ಮತ್ತು ಬಿಹಾರ ಎನ್ನುವ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಉತ್ತರ ಪ್ರದೇಶ ಎಂದ ಕೂಡಲೇ ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಅವರ ಹೆಸರನ್ನು ಹೇಳಲೇಬೇಕು.
ಅಂತಹ ವ್ಯಕ್ತಿತ್ವ ಅವರದ್ದು. ಇತರೆ ಹಿಂದುಳಿದ ಜನ ವರ್ಗಗಳ ಕೈಗೇ ಅಧಿಕಾರ ಎನ್ನುವುದು ಅವರ ಘೋಷಣೆ. ಆ ಘೋಷಣೆ ಈಡೇರಬೇಕಾದರೆ ಸಂಸತ್ತಿನ ಮಟ್ಟಿಗಾದರೂ ಒಂದು ಸಂಯುಕ್ತ ರಂಗ ಅಸ್ತಿತ್ವದಲ್ಲಿ ಬರಬೇಕು. ಈಗಿನ ವಾತಾವರಣದಲ್ಲಿ ಅಂತಹ ಒಂದು ರಂಗ ಅಥವಾ ಕೂಟಕ್ಕೆ ಅವಕಾಶಇದ್ದಂತಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನೇತೃತ್ವದ ಕೂಟಗಳು ತಮ್ಮದೇ ಆದ ರೀತಿಯಲ್ಲಿ ಮೂರನೆಯ ರಂಗದ ಕೂಟ ರಾಜಕೀಯಕ್ಕೆ ಅವಕಾಶ ಕೊಡುವುದಿಲ್ಲ. ಅದೇನೂ ರಹಸ್ಯವಲ್ಲ.
ಆದರೂ ಮುಲಾಯಂ ಸಿಂಗ್ ಯಾದವ್ ಅವರಂತಹವರಿಗೆ ಅವಕಾಶ ಸಿಕ್ಕಾಗಲೆಲ್ಲ ಮೂರನೆಯ ರಂಗದ ಮಾತಾಡುವುದು ಒಂದು ರೀತಿಯಲ್ಲಿ ತೆವಲೇ ಆಗಿಬಿಟ್ಟಿದೆ.
ಅಲ್ಲಿ-ಇಲ್ಲಿ ಯಾರೋ ಪ್ರಶ್ನೆ ಕೇಳಿದಾಗ ಚುರುಕಿನ ಉತ್ತರ ಕೊಡುವುದರ ಜತೆಗೇ ಉತ್ತರ ಪ್ರದೇಶ ರಾಜಕಾರಣದ ವಿಚಾರ ಕುರಿತು ಮಾತಾಡಿದ ಮುಲಾಯಂ ಸಿಂಗ್ ಯಾದವ್ ತಮ್ಮ ಮನದ ಅಂತರಾಳದ ಒಂದು ಮೂಲೆಯಲ್ಲಿ ತೃತೀಯ ರಂಗದ ಭವಿಷ್ಯದ ವ್ಯಕ್ತಿತ್ವದ ಸ್ವರೂಪದ ಚಿಂತನೆ ನಡೆದಿರುವಂತಿದೆ. ಹಿಂದಿನ ತೃತೀಯ ರಂಗದ ಪ್ರಣಾಳಿಕೆಯ ಯಾವುದಾದರೊಂದು ವಿಚಾರದಲ್ಲಿ ಕೇಂದ್ರೀಕೃತ ಗಮನವನ್ನು ಹರಿಸಿ, ಆ ಸಮಸ್ಯೆಯ ನಿವಾರಣೆಯ ಪ್ರಯತ್ನ ಮುಲಾಯಂ ಸಿಂಗ್ ಯಾದವ್‌ರಿಗೆ ಅಗತ್ಯವೆಂದು ಕಂಡುಬಂದಂತಿದೆ.
ಇಂತಹ "ಕನಸಿನ ರಂಗಕ್ಕೆ" ಅಖಿಲ ಭಾರತ ಮನ್ನಣೆಯನ್ನು ಗಳಿಸಿಕೊಡಲು ವಾಮಪಂಥೀಯರು ಬೇಕೇಬೇಕು. ಹಾಗೆಂದು ಮುಲಾಯಂ ಸಿಂಗ್ ಅವರು ನಂಬಿರುವಂತಿದೆ. ವಾಮ ಪಂಥೀಯರ ಸೈದ್ಧಾಂತಿಕ ಚಿಂತನೆಗೆ ಮುಸಲ್ಮಾನರ ಸಂಖ್ಯಾ ಬಲವನ್ನು ಜೋಡಿಸುವುದು ಸದ್ಯಕ್ಕೆ ಅವರ ಉದ್ದೇಶ. ಕೆಲವು ಶಕ್ತಿಗಳಿಗೆ ಅದು ಹಿಡಿಸಿದೆ. ಕೆಲವರಿಗೆ ಹಿಡಿಸಿಲ್ಲ. ವಾಮಪಂಥೀಯರು- ಮುಸ್ಲಿಮರ ಏಕತೆಯ ವಿಚಾರದಲ್ಲಿ ಮುಲಾಯಂಸಿಂಗ್ ಬಹುಕಾಲದಿಂದ ಮಾತನಾಡುತ್ತಲೇ ಇದ್ದಾರೆ. ಅವರ ಆತ್ಮೀಯರ ಕನಸೂ ಅದೇ.
ಆದರೆ, ಪ್ರಧಾನಿ ಪೀಠದ ಮೇಲೆ ಒಂದು ಕಣ್ಣನ್ನು ಇಟ್ಟಿರುವ ಮಾಯಾವತೀ, ಜಯಲಲಿತಾ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಅವರೆಲ್ಲ ಬಡಪೆಟ್ಟಿಗೆ ಯಾದವ ಜನಾಂಗವನ್ನು ನಂಬುವುದು ಕಷ್ಟ. ಮುಲಾಯಂ ಸಿಂಗ್ ಅವರೂ ಈಗ ಗೊಂದಲದಲ್ಲಿ ಬಿದ್ದಿದ್ದಾರೆ.
ಉದಾಹರಣೆಗೆ ಮಾಯಾವತೀ, ಜಯಲಲಿತಾ ಹಾಗೂ ಮಮತಾ ಬ್ಯಾನರ್ಜಿ ಅವರೆಲ್ಲ ಹಿಂದಿನ ಪ್ರಯೋಗಗಳಂತೆ ಅರೆಬರೆ ಸಿದ್ಧತೆಯ ಆಧಾರದ ಮೇಲೆ ಮೂರನೆಯ ರಂಗದ ಹೊಸ ಅಸ್ತಿತ್ವದ ಮಾತನ್ನಾಡುವುದೇ ಬೇಡವೆನ್ನುವ ನಿರ್ಧಾರಕ್ಕೆ ಬಂದಂತಿದೆ. ಈಗ ಪ್ರಸ್ತಾಪವಾಗುತ್ತಿರುವುದು ಚುನಾವಣೆ ಫಲಿತಾಂಶದ ಪ್ರಕಟಣೆಯ ಅನಂತರದ ಪರಿಸ್ಥಿತಿಯಲ್ಲೇ ಮೂರನೆಯ ರಂಗದ ಸ್ವರೂಪದ ವಿಚಾರ. ಸದ್ಯಕ್ಕೆ ಅದು ಅಮೂರ್ತ. ಅದಕ್ಕೊಂದು ಆಕಾರ ಮುಂದೆ ಬಂದರೂ ಆಶ್ಚರ್ಯವೂ ಇಲ್ಲ. ಯಾರಿಗೆ ಗೊತ್ತು ರಾಜಕೀಯದಲ್ಲಿ ಯಾವಾಗ ಏನಾಗತ್ತೋ? ಎನ್ನುವುದು.
ಸದ್ಯಕ್ಕೆ ಮುಲಾಯಂ ಸಿಂಗ್ ಯಾದವ್ ಮುಸ್ಲಿಮರ ಬೆಂಬಲದ ಮೇಲೆ ಕಣ್ಣಿಟ್ಟು, ಆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲು ನೀತಿಯ ಸೌಲಭ್ಯಗಳನ್ನು ಒದಗಿಸುವ ಭರವಸೆಯ ಮಾತಾಡಿದ್ದಾರೆ. ಆ ಪ್ರಯತ್ನ ಹಿಂದೆ ವಿಫಲವಾಗಿತ್ತು. ಹಾಗೆಂದ ಮಾತ್ರಕ್ಕೆ ಕನಸು ಕಾಣುವುದೇ ತಪ್ಪೇನು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

