ಸಂಪಾದಕೀಯ

ಶರದ್ ಪವಾರ್ ಅನಿಸಿಕೆಗಳು: ಭವಿಷ್ಯದ ಇಣಕು ನೋಟ

Published On :

ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ದೀರ್ಘ ಕಾಲದ ರಾಜಕೀಯ ಅನುಭವವಿದೆ. ದಶಕಗಳ ರಾಜಕೀಯ ಜೀವನದಲ್ಲಿ ಅವರು ಒಮ್ಮೆ (ರಾಜೀವ ಗಾಂಧಿ ಹತ್ಯೆಯ ಅನಂತರ) ಪ್ರಧಾನಿ ಪೀಠವನ್ನೇರಲು ಭಗೀರಥ ಪ್ರಯತ್ನ ನಡೆಸಿದ್ದರು. ಅವರ ಮನಸ್ಸಿನಲ್ಲಿ ಈಗಲೂ ಸೋನಿಯಾ ಗಾಂಧಿ- ನರಸಿಂಹರಾಯರಿಬ್ಬರೂ ಸೇರಿ ತಮಗೆ ಆಗ ಅನ್ಯಾಯ ಮಾಡಿದರೆನ್ನುವ ಭಾವನೆ ಇದೆ.
ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ಕಾಂಗ್ರೆಸ್ಸಿನಲ್ಲಿ ತಾವಿರುವುದಿಲ್ಲ ಎಂದು ಹೇಳಿ, ಪಕ್ಷವನ್ನೇ ಹೋಳು ಮಾಡಿದ ಮರಾಠಾ ಸರದಾರ, ಅನಂತರ ಅವಕಾಶ ಸಿಕ್ಕಾಗ, ತಮ್ಮ ರಾಷ್ಟ್ರೀಯತಾ ಕಾಂಗ್ರೆಸ್ ಪಕ್ಷವನ್ನು  ಕಾಂಗ್ರೆಸ್ಸಿನ (ಆಗಲೂ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರು) ಸಂಗಾತಿ ಪಕ್ಷವನ್ನಾಗಿ ಪರಿವರ್ತಿಸಿ, ಆ ಕೂಟದ ಸರ್ಕಾರದಲ್ಲೇ ಮಂತ್ರಿ ಸ್ಥಾನ ಪಡೆದ ವ್ಯಕ್ತಿ.
ಅಗತ್ಯ ಬಿದ್ದರೆ ರಾಷ್ಟ್ರೀಯ ರಾಜಕೀಯದ ಆಗು ಹೋಗುಗಳನ್ನು ಕುರಿತು ಗಂಟೆ ಗಟ್ಟಲೆ ಮಾತನಾಡಬಲ್ಲರು. ಈಗಿನ ಪ್ರಾದೇಶಿಕ ನಾಯಕರ ನಿಕಟ ಪರಿಚಯವಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಸದ್ಯದ ಚುನಾವಣೆ ನಂತರದ ರಾಜಕೀಯ ಸ್ವರೂಪವೇನಿರಬಹುದು ಎನ್ನುವುದನ್ನು ತಿಳಿಯಲು ಅವರ ಸಂದರ್ಶನ ನಿಜಕ್ಕೂ ಒಂದು ದಾರಿದೀಪ ಇದ್ದಂತೆ. ಅಂತಹ ಒಂದು ಸಂದರ್ಶನ ಪ್ರಕಟವಾಗಿದೆ.
ಮೇಲ್ನೋಟಕ್ಕೆ ಈಗ ಶರದ್ ಪವಾರ್‌ರ ಹೆಸರನ್ನು ಯಾರೂ ಪ್ರಧಾನಿ ಪೀಠಕ್ಕೆ ಸೂಚಿಸುತ್ತಿಲ್ಲ. ಅವರೇ ನೇರವಾಗಿ ತಮ್ಮ ಹೆಸರನ್ನೇ ಮುಂದಿಟ್ಟುಕೊಂಡು ಮಾತನಾಡುವುದು ಅಸಹನೀಯ. ಸಂದರ್ಶನದಲ್ಲಿ ಅವರು ಸ್ಪಷ್ಟವಾಗಿ ಒಪ್ಪಿಕೊಂಡಿರುವ ವಿಚಾರ ಎಂದರೆ ಭಾರತೀಯ ಜನತಾ ಪಾರ್ಟಿಯೇ ಲೋಕಸಭೆಯಲ್ಲಿ ಮೊದಲ ಪಕ್ಷವಾಗುವ ಸಂಭವ ಇದೆ ಎನ್ನುವುದು. ಅಷ್ಟೇ ಸ್ಪಷ್ಟವಾಗಿ ಅವರು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಬರುವುದಿಲ್ಲ ಎಂದೂ ನಂಬಿದ್ದಾರೆ.
ಹಾಗಿದ್ರೆ ಸರ್ಕಾರ ರಚಿಸುವುದು ಯಾರು?
ಕಾಂಗ್ರೆಸ್ ಬೆಂಬಲ ಪಡೆದ ಇನ್ನೊಂದು ಕೂಟ ಅಥವಾ ಪ್ರಾದೇಶಿಕ ನಾಯಕರಾಗಿ ಪ್ರಾಬಲ್ಯವನ್ನು ಪ್ರದರ್ಶಿಸಿರುವ ಜಯಲಲಿತಾ, ಮಮತಾ ಬ್ಯಾನರ್ಜಿ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಬೆಂಬಲಿಸುವ ಕೂಟ ಎನ್ನುವುದು ಅವರ ಅನಿಸಿಕೆ.
ಈ ಆಯ್ಕೆಯನ್ನು ಇತರ ಅನೇಕ ನಾಯಕರೂ ತಮ್ಮ ಅಂತರಂಗದ ಮಾತುಕತೆಯಲ್ಲಿ ಪ್ರಸ್ತಾಪಿಸಿರುವುದುಂಟು. ಆದರೆ ಶರದ್ ಪವಾರ್ ಅವರಂತಹ ಅನುಭವಿಯಿಂದ ಇಂತಹ ಮಾತು ಕೇಳಿ ಬಂದರೆ, ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟದ ಕೂಟಧರ್ಮ ಏನಾಗಬೇಕು? ಶರದ್ ಪವಾರ್ ಆ ಕೂಟದ ಪ್ರಮುಖ ನಾಯಕರಲ್ಲಿ ಒಬ್ಬರು. ಅವರೇ ತಮ್ಮ ಕೂಟದ ಸರ್ಕಾರವಿರುವುದಿಲ್ಲ, ಆ ಕೂಟ ಬೆಂಬಲಿಸುವ ಮತ್ತೊಂದು ಗುಂಪು ಸರ್ಕಾರ ರಚಿಸಬಹುದು ಎಂದರೆ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಗಬಹುದಾದ ಕೆಟ್ಟ ಪರಿಣಾಮವನ್ನು ಶರದ್ ಪವಾರ್ ಗಮನಿಸಿದಂತಿಲ್ಲ. ಅವರಿಗೆ ಅದು ಬೇಕಾಗಿಲ್ಲ.
ಇದೇ ರೀತಿಯ ಚಿಂತನೆ ಇತರ ಪ್ರಬಲ ಪಕ್ಷಗಳ ನಾಯಕರ ತಲೆಯನ್ನೂ ಹೊಕ್ಕರೆ ಆ ಗೊಂದಲವನ್ನು ಸರಿಪಡಿಸಲು ಶರದ್ ಪವಾರ್ ಅವರಷ್ಟೇ ಹಿರಿಯ ತಲೆಯವರೆನಿಸಿದ ವ್ಯಕ್ತಿಗಳು ಬೇಕು. ಅಂತಹ ವ್ಯಕ್ತಿಗಳು, ಈಗಿನ ರಾಜಕಾರಣದಲ್ಲಿ ಬಹುಮಂದಿ ಸಕ್ರಿಯರಾಗಿಲ್ಲ.
ಶರದ್ ಪವಾರ್ ಅವರ ಸಂದರ್ಶನದಲ್ಲಿ ಒಂದು ಪದವೂ ಬಾಯಿತಪ್ಪಿ ಹೊರಗೆ ಬಂದಿದ್ದಲ್ಲ. ಹೇಳಬೇಕಾದ ವಿಚಾರ, ರೀತಿ, ಸಮಯ ಎಲ್ಲವನ್ನೂ ತಮ್ಮ ಮನಸ್ಸಿನಲ್ಲಿ ನಿರ್ಧರಿಸಿಕೊಂಡ ಅನಂತರವೇ ಅವರು ಸಂದರ್ಶನ ನೀಡಿರುವುದು. ಪವಾರ್‌ಗೆ ಅವರ ಪಕ್ಷದ ಪ್ರತಿಕ್ರಿಯೆಯ ಚಿಂತೆ ಇಲ್ಲ. ಅಲ್ಲಿ ಅವರೇ ನಾಯಕರು. ಇಂತಹ ಸಂದರ್ಶನಗಳಿಗೆ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಅದು ಇನ್ನೂ ಹೋರಾಟದ ಕಣದಲ್ಲೇ ಇದೆ. ನಿಜ. ಪವಾರ್ ಅವರ ತಲೆಮಾರಿನ ನಾಯಕರಿಗೆ ಪ್ರಧಾನಿ ಪೀಠವನ್ನೇರಲು ಇದೇ ಕೊನೆಯ ಅವಕಾಶ. ಆ ಪರಿಸ್ಥಿತಿಯೇ ಅವರ ಅನಿಸಿಕೆಗಳಿಗೆ ಪ್ರೇರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.