ಸಂಪಾದಕೀಯ

ಬರ ಕಾಮಗಾರಿ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ

Published On :

ರಾಜ್ಯ ಸರ್ಕಾರ ಇತ್ತೀಚಿಗೆ 125 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿತು. ಬರಗಾಲ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಲು ಲೋಕಸಭಾ ಚುನಾವಣೆ ಅಡ್ಡಿ ಬಂದಿತ್ತು. ಇದೀಗ ಚುನಾವಣೆ ಮುಗಿದಿರುವುದರಿಂದ ಸಚಿವರು, ಅಧಿಕಾರಿಗಳು, ವಿಧಾನಸೌಧದತ್ತ ಗಮನ ಹರಿಸಿ ಸಾರ್ವಜನಿಕರ ಕೆಲಸ ಕಾರ್ಯ ನಿರ್ವಹಿಸಲು ಸಕಾಲ. ರಾಜ್ಯದಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅನೇಕ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಂಡಿದ್ದರೂ, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಜಿಲ್ಲಾಡಳಿತ. ಬರಗಾಲದ ಛಾಯೆ ಆವರಿಸಿರುವುದರಿಂದ ಜಾನುವಾರುಗಳ ಮೇವಿಗೆ ತೊಂದರೆಯಾಗಿದೆ. ಕೆರೆಗಳ ಹೂಳೆತ್ತುವ ಕಾಮಗಾರಿಗಳು ಆರಂಭಗೊಳ್ಳಬೇಕಿದೆ. ಇಂಗು ಗುಂಡಿಗಳ ನಿರ್ಮಾಣ, ರಸ್ತೆ ಕಾಮಗಾರಿಗಳು, ಮೇವು ಬ್ಯಾಂಕ್ ಸ್ಥಾಪನೆ, ರೈತರಿಗೆ ಮೇವಿನ ಬೀಜ ವಿತರಣೆ ತ್ವರಿತವಾಗಿ ಆಗಬೇಕು. ಈಗಾಗಲೇ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಇರಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಬದ್ಧತೆಯಿಂದ ಕೆಲಸ ಮಾಡಿ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಾಮಗಾರಿಗಳಲ್ಲಿ ಕಳಪೆ, ಅವ್ಯವಹಾರ ನಡೆದರೆ ಲೋಕಾಯುಕ್ತರಿಂದ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಲಿ ಸರ್ಕಾರ.
ಟಿ ನೇರಲಗುಡ್ಡ ಶಿವಕುಮಾರ್, ಶಿರಾ

ಶಂಖದ ನಿಷೇಧ ಸಲ್ಲದು
ಭಗವಾನ್ ವಿಷ್ಣುವಿನ ಸನ್ನಿಧಾನ ಹೊಂದಿದ ಸಾಲಿಗ್ರಾಮವನ್ನು ಪೂಜಿಸುವಾಗ -ಪವಿತ್ರ ಶಂಖದಲ್ಲಿ ಜಲವನ್ನು ತುಂಬಿಸಿಕೊಂಡು ಸಾಲಿಗ್ರಾಮಕ್ಕೆ ಅಭಿಷೇಕ ಮಾಡಬೇಕು. ಅದರೊಂದಿಗೆ ವಿಶೇಷವಾಗಿ ತುಲಸಿ ಪತ್ರೆಯನ್ನು ಬಳಸಿಕೊಂಡು ಭಗವಂತನ ಪೂಜೆ ಮಾಡಲು ಸ್ವಯಂ ವಿಷ್ಣುವೇ ವರವನ್ನು ನೀಡಿರುವುದು ಹಿಂದೂ ಧರ್ಮ ಸಂಸ್ಕೃತಿಯಲ್ಲಿ ಪ್ರಚಲಿತವಿದೆ. ಇದು ಭಾಗವತ ಗ್ರಂಥದ ಮೂಲಕ ನೀಡಲ್ಪಟ್ಟ ನಿರ್ದೇಶನ. ಶಂಖವೆನ್ನುವುದು ಸಮುದ್ರ ಜೀವಿಯೊಂದರ ಪಳೆಯುಳಿಕೆ-ಶಂಖ ಹೊಂದಿದ ಜೀವಿ ಮೃತಪಟ್ಟ ನಂತರ ಸಮುದ್ರ ತ್ಯಾಜ್ಯವಾಗಿ ದಡ ಸೇರುತ್ತದೆ. ಅದನ್ನು ಹೆಕ್ಕಿ ತೆಗೆದು ಶುದ್ಧಗೊಳಿಸಲಾಗುತ್ತದೆ. ಪೂಜಾರ್ಹ ವಸ್ತುವಾಗಿ ಆಸ್ತಿಕರ ಬಳಕೆಗೆ ಬರುತ್ತದೆ. ಶಂಖವನ್ನು ಹೆಕ್ಕವ ಕಾಯಕವನ್ನು ಸಮುದ್ರ ತೀರದಲ್ಲಿ ಸಹಸ್ರಾರು ಬಡ ಕುಟುಂಬಗಳು ನಿರ್ವಹಿಸುತ್ತಿದ್ದು ಅದು ಅವರ ಜೀವನೋಪಾಯವಾಗಿದೆ. ಆ ಪೈಕಿ ದೊಡ್ಡ ಅಳತೆಯ ಶಂಖಗಳು ಶಂಖನಾದ ಹೊರಡಿಸುವ ಶಂಖಗಳಿಗಾಗಿ ಬಳಕೆಯಲ್ಲಿರುವುದಲ್ಲದೆ -ಶ್ರೀಹರಿಯ ಎಡಗೈಯಲ್ಲಿ ಭಕ್ತಿ ಭಾವದ ಪ್ರತೀಕವಾಗಿ ಬಳಸಲ್ಪಡುವ ಶಂಖಕ್ಕೆ ಯಾವುದೇ ನಿಷೇಧಾಜ್ಞೆ ಸಲ್ಲದು. ಶಂಖನಾದ ಹೊರಡಿಸುವುದು ಶಂಖದ ಮೂಲಕ ಅಭಿಷೇಕ ಮಾಡುವುದು ಹಿಂದೂ ಧರ್ಮ ಸಂಸ್ಕೃತಿಯ ಆರಾಧಕರಿಗೆ ಸರ್ಕಾರ ನೆಮ್ಮದಿಯನ್ನು ನೀಡಲಿ.
ಟಿ ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು

ವಾಸ್ತವ ಏನು?
ದಿ. 14.4.2014 ಅಂಬೇಡ್ಕರ್ ಜಯಂತಿಯಂದು ಕಾಂಗ್ರೆಸ್‌ನವರು ಅಂಬೇಡ್ಕರ್ ತಮ್ಮ ಸ್ವಂತ ಆಸ್ತಿ ಎನ್ನುವ ರೀತಿ ಗೌರವಾಭಿಮಾನ ವ್ಯಕ್ತಪಡಿಸಿದರು. ಆದರೆ ವಾಸ್ತವಾಂಶವೇ ಬೇರೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸಂದರ್ಭದಲ್ಲಿ ಕಾಂಗ್ರೆಸ್ ಅವರ ಬಗ್ಗೆ ನಡೆದುಕೊಂಡ ರೀತಿ ಚುನಾವಣೆಯಲ್ಲಿ ಅವರನ್ನು ಸೋಲಿಸಲು ನಡೆಸಿದ ಕುತಂತ್ರ ಅಸಹನೀಯ. ಹಾಗೆಂದೆ ಕಾಂಗ್ರೆಸ್ ಹೊತ್ತಿ ಉರಿಯುವ ಮನೆ ಎಂದು ನೊಂದು ನುಡಿದಿದ್ದಾರೆ. ಅಸ್ಪೃಶ್ಯರಿಗೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ಗೊತ್ತಿದ್ದು ದಲಿತ ಸಾಹಿತಿಯೊಬ್ಬರು ಕಾಂಗ್ರೆಸ್ ಬೆಂಬಲಿಸುತ್ತಿರುವುದು ಎಂತಹ ವಿಪರ್ಯಾಸ.
- ರಂಗರಾಜರಾವ್ ನಾಡಿಗ್, ಬೀರೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.