ಯಾವ ನಿರ್ಮಾಣವಾಗಿದೆ?
ಕಾಂಗ್ರೆಸ್ಸಿನವರ 'ಭಾರತ್ ನಿರ್ಮಾಣ್' ಜಾಹೀರಾತನ್ನು ದಿನವಿಡೀ ಟಿವಿಗಳಲ್ಲಿ ನೋಡಿ ಜನ ಬೇಸತ್ತಿದ್ದಾರೆ. ಹಿಂದಿನ ಅರವತ್ತು ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಭಾರತ ನಿರ್ಮಾಣ ಆಗಿರುವುದಕ್ಕಿಂತ ನಿರ್ನಾಮ ಆಗಿರುವುದೇ ಹೆಚ್ಚು. ಈಗ ಎಲ್ಲೆಡೆ ರಾಹುಲ್ ಗಾಂಧಿ ಹೋಗಿ ಭಾರತ್ ನಿರ್ಮಾಣ್ ರ್ಯಾಲಿ ಆಯೋಜಿಸಿ ಎಲ್ಲಾ ಅಭಿವೃದ್ಧಿ ಕೆಲಸ ತಮ್ಮ ಪಕ್ಷವೇ ಮಾಡಿದ್ದು ಎಂದು ಬಡಾಯಿ ಕೊಚ್ಚುತ್ತಿದ್ದಾರೆ. ದೆಹಲಿ ಮತ್ತು ಬೆಂಗಳೂರಿನ ಮೆಟ್ರೊ ರೈಲುಗಳನ್ನು ತಾನೇ ಮಾಡಿದ್ದು ಎನ್ನುವ ರಾಹುಲ್ ಗಾಂಧಿಯವರಿಗೆ ಹರಿಹರ-ಕೊಟ್ಟೂರು ರೈಲ್ವೇ ಲೈನು ಕೇವಲ ಐದು ಕಿಲೋಮೀಟರ್ ಉದ್ದದ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗದೇ 15 ವರ್ಷದಿಂದ ನೆನೆಗುದಿಗೆ ಬಿದ್ದಿರುವುದು ಗೊತ್ತಿದೆಯೇ? ನೆಲಮಂಗಲ- ಶ್ರವಣ ಬೆಳಗೊಳ- ಹಾಸನ ನಡುವಿನ ಹೊಸ ರೈಲು ಮಾರ್ಗವು ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ನಾಲ್ಕು ಗಂಟೆ ಕಡಿಮೆ ಮಾಡುತ್ತದೆ. ಆದರೆ ಕುಣಿಗಲ್ನಲ್ಲಿ ಈ ಮಾರ್ಗದ ನಡುವೆ ಬರುವ ಬೆಂಗಳೂರಿನ ಶರಾಬು ದೊರೆಯ ಕುದುರೆ ಫಾರ್ಮ್ ಉಳಿಸುವ ಸಲುವಾಗಿ ರೇಲ್ವೆ ಮಂತ್ರಿಗಳು ಈ ರೈಲು ಮಾರ್ಗವನ್ನು ಅನುಷ್ಠಾನಗೊಳಿಸುತ್ತಿಲ್ಲ. ಇವೆಲ್ಲ ಭಾರತ ನಿರ್ಮಾಣ ಮಾಡುವವರ ಗಮನಕ್ಕೆ ಬಂದಿಲ್ಲವೇ?
- ರಾಮಕೃಷ್ಣ ಏ. ಕೆ., ಮಂಗಳೂರು
ಮತ್ತೊಂದು ಮುಖದ ಪರಿಚಯ
ದಿ. 30.1.14ರ ನೂರೆಂಟು ನೋಟ ಅಂಕಣದ ಮೂಲಕ 30 ವರ್ಷಗಳ ಹಿಂದೆ ನಡೆದಿದ್ದ "ಸಿಖ್ ನರಮೇಧದ ರಾಕ್ಷಸೀ ಕೃತ್ಯ"ವನ್ನು ನಮ್ಮ ಮುಂದಿಟ್ಟು ನಿಜಕ್ಕೂ ನಮ್ಮ ಕಣ್ಣುಗಳನ್ನು ತೋಯಿಸಿ ಬಿಟ್ಟರು. ಈ ಮೂಲಕ ಈ ದೇಶದ ಮುಗ್ಧ ಜನರ ಕಣ್ಣುಗಳಿಗೆ ದೇವಮಾನವರಂತೆ ಗೋಚರಿಸುವ ವ್ಯಕ್ತಿಗಳ ನಿಜರೂಪವನ್ನು ಬಯಲುಗೊಳಿಸಿದರೂ, ಈಗಾಗಲೇ ಪಠ್ಯಪುಸ್ತಕಗಳ ಮೂಲಕ, ಜನಪರ ಯೋಜನೆಗಳಿಗೆ ಅವರುಗಳ ಹೆಸರು ಇಡುವುದರ ಮೂಲಕ, ನಾಣ್ಯಗಳಲ್ಲಿ ಅವರುಗಳ ಮುಖವನ್ನು ಟಂಕಿಸುವುದರ ಮೂಲಕ, ಮಹಾತ್ಮನನ್ನು ಅತಿಶಯೋಕ್ತಿ ಕ್ರಿಯೆಗಳಿಂದ ವೈಭವೀಕರಿಸಿ ಅದರಿಂದ ಬರುವ 'ಗಾಂಧಿ' ಎಂಬ ಹೆಸರಿನ ಫಲವನ್ನು ತಿಂದು ಬಲಿಯುವುದರ ಮೂಲಕ ಈ ದೇಶದ ಅಮಾಯಕ ಜನಮನಗಳಲ್ಲಿ ಪರೋಕ್ಷವಾಗಿ ಒತ್ತಿರುವ ಛಾಪನ್ನು (ಅಥವಾ ಚುನಾವಣಾ ಪ್ರಚಾರವನ್ನು) ಇಂಥ ಸಾವಿರ ಸತ್ಯಗಳ ಕೂಗುಗಳು ಗುಡುಗಿದರೂ ಸಹ ಅಳಿಸಲಾಗದೆಂಬ ಸತ್ಯವೂ ಎಲ್ಲರಿಗೂ ತಿಳಿದಿರುವಂಥದ್ದೆ. ಈ ನೋವುಗಳನ್ನುಂಡೇ 'ಬದುಕಬೇಕೆಂಬುದೇ ನಮ್ಮ ಭಾರತ ಭಾಗ್ಯವಿಧಾತ'ರು ಬರೆದಿರುವ ಲಿಖಿತ.
- ಶಿವರಾಜ್. ಎಸ್., ಸಂಡೂರು
ನಾಪತ್ತೆಯಾದವರು ಎಲ್ಲಿ?
ರಾಜ್ಯದಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ವಿದ್ಯಾಭ್ಯಾಸಕ್ಕೆ ಹೋದ 163 ಮಂದಿ ನಾಪತ್ತೆಯೆಂದರೆ ಚರ್ಚಾರ್ಹ ವಿಷಯವೇ. ಇವರು ಸುದ್ದಿಯಿಲ್ಲದೆ ಎಲ್ಲಿಗೆ ಹೋದರು? ಇದನ್ನು ಯಾರ ವಿಫಲತೆಯೆನ್ನೋಣ? ಈ ವಿದ್ಯಾರ್ಥಿಗಳಿಗೆ ಭರವಸೆ ನೀಡಿ ಕರೆಸಿಕೊಂಡ ಮಹರ್ಷಿ ಮಹೇಶ ಯೋಗಿಗಳನ್ನು ನಮ್ಮ ನ್ಯಾಯಾಲಯ ವಿಚಾರಿಸಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಜಾರಿಯಾಗಲಿ. ನಾಪತ್ತೆಯಾದವರು ಹೋದರೆಂದು ನಿರ್ಲಕ್ಷಿಸುತ್ತಾ ಹೋದರೆ ಅಧ್ಯಯನಕ್ಕೆ ಹೋದವರೆಲ್ಲಾ ಸುದ್ದಿಯಿಲ್ಲದೆ ನಾಪತ್ತೆಯಾಗುತ್ತಾರೆ. ಈಗಾಗಲೇ ನಾಪತ್ತೆಯಾದವರನ್ನು ಪತ್ತೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಮುಂದೆ ವಿದೇಶಕ್ಕೆ ಹೋಗುವವರೆಲ್ಲಾ ಅವರು ಕಲಿಯಲು ಹೋಗುವ ಜಾಗದ ಪೂರ್ಣ ವಿಳಾಸ ಕೊಟ್ಟು ಹೋಗಬೇಕಾದ ಪರಿಸ್ಥಿತಿ ಬಂದೀತು.
- ರಕ್ಷಿತಾ. ಹೆಚ್., ಪತ್ರಿಕೋದ್ಯಮ ವಿದ್ಯಾರ್ಥಿ, ಪುತ್ತೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

