ಇದೇನಾ ಸಭ್ಯತೆ?
ರಾಹುಲ್ರ ಕರ್ನಾಟಕ ಯಾತ್ರೆಯ ಸಂದರ್ಭದಲ್ಲಿ ಕಿಕ್ಕಿರಿದಿದ್ದ ಮಹಿಳಾ ಸಮುದಾಯ(?)ವನ್ನು ನೋಡಿದ ಸಂಸ್ಕೃತಿ ಸಚಿವೆ ಉಮಾಶ್ರೀಯವರಿಗೆ ಬಹುಶಃ ಭಾವೋನ್ಮಾದ ಉಕ್ಕಿ ಬಂದಿರಬೇಕು. ಅದರಲ್ಲೂ ಯುವರಾಜರೆದುರು ಚಪ್ಪಾಳೆ ಗಿಟ್ಟಿಸುವುದು ಸಾಮಾನ್ಯ ಸಾಧನೆಯೇ? ಹಾಗಾಗಿ ತಮ್ಮ ನಾಟಕರಂಗದ, ಸಿನಿಮಾ ದಿನಗಳಲ್ಲಿನ ಎನ್.ಎಸ್.ರಾವ್ರೊಡಗಿನ ಡೈಲಾಗ್ಗಳು ನೆನಪಾಗಿರಬೇಕು. ಪುಂಖಾನುಪುಂಖವಾಗಿ ಹರಿದ ವಾಗ್ಝರಿಗೆ ಚಪ್ಪಾಳೆ ಬಿದ್ದಿದ್ದು ಕೇಳಿ ವೇದಿಕೆಯಲ್ಲಿದ್ದವರಿಗೂ ಹೊಟ್ಟೆಕಿಚ್ಚಾಗಿರಬೇಕು. ಆದರೆ ಸಂಸ್ಕೃತಿ ಸಚಿವೆಯಾಗಿ, ಸಭೆಯ ಗಾಂಭೀರ್ಯವನ್ನೂ ಲೆಕ್ಕಿಸದೆ, ಮಹಿಳೆಯರೂ ಸೇರಿದಂತೆ ಮರ್ಯಾದಸ್ತರೆಲ್ಲರೂ ತಲೆ ತಗ್ಗಿಸುವಂತೆ ನಾಲಿಗೆ ಹರಿಬಿಡುವ ಅಗತ್ಯವಿತ್ತೇ ಎಂಬುದು ಈಗಿನ ಪ್ರಶ್ನೆ. ರಾಜಕೀಯದಲ್ಲಿ ನೈತಿಕತೆಯ ಪ್ರಶ್ನೆ ಬಂದರೆ ಎಲ್ಲರೂ ಗಾಜಿನ ಮನೆವಾಸಿಗಳೇ. ನ್ಯಾಯಾಲಯದ ಆದೇಶದ ಮೇರೆಗೆ ಪೋಲೀಸರ ದಿಗ್ಬಂಧನದಲ್ಲಿ ಪಿತೃತ್ವ ನಿರೂಪಿಸಬೇಕಾದ ಎನ್.ಡಿ.ತಿವಾರಿಯಾಗಲಿ, ಅಮಾಯಕಳ ಮೇಲಿನ ಅತ್ಯಾಚಾರ ಆರೋಪಿ ರಾಜಾಸ್ಥಾನದ ಮಾಜಿ ಮಂತ್ರಿಯಾಗಲಿ, ಕಾರ್ಯಾಲಯದಲ್ಲಿಯೇ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಚಿತ್ರಿಸಲ್ಪಟ್ಟು ನಂತರ ಸುದ್ದಿ ಹರಡದಂತೆ ಸ್ಟೇ ತಂದ ವಕ್ತಾರ ಮಹಾಶಯರಾಗಲೀ ಬೇರೆ ಪಕ್ಷದವರೇನಲ್ಲ. ನಮ್ಮ ರಾಜ್ಯದಲ್ಲೂ ಸಿಕ್ಕಿ ಹಾಕಿಕೊಂಡಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಶ್ರೀ ರಾಮಚಂದ್ರನ ಅಪರಾವತಾರ ಎಂದು ಭಾವಿಸಬೇಕಿಲ್ಲ. ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಪಳಗಿರುವ ಉಮಾಶ್ರೀಯವರಿಗೆ ಇದು ತಿಳಿಯದ್ದೇನಲ್ಲ. ಇವರು ಅಧಿಕಾರ ವಹಿಸಿಕೊಂಡ ಮೇಲೂ ಹಸುಳೆಗಳೂ ಸೇರಿದಂತೆ ಅಮಾಯಕರ ಮೇಲಿನ ಅತ್ಯಾಚಾರ ಪ್ರಕರಣಗಳು ಎಷ್ಟು ನಡೆದಿವೆ, ಎಷ್ಟು ಮಂದಿಗೆ ಶಿಕ್ಷೆ ವಿಧಿಸಲಾಗಿದೆ, ಅಂತಹ ಪ್ರಕರಣಗಳ ಪುನರಾವರ್ತನೆಯಾಗದಂತೆ ಕೈಗೊಂಡಿರುವ ಕ್ರಮಗಳೇನು? ಸದನದಲ್ಲಿ ಸರ್ಕಾರವೇ ಒಪ್ಪಿಕೊಂಡಿರುವಂತೆ ತೀವ್ರಗತಿಯಲ್ಲಿ ಹೆಚ್ಚಿರುವ ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣಗಳು ತಾರ್ಕಿಕ ಪರಿಹಾರ ಕಂಡಿವೆಯೇ ಎಂಬುದನ್ನು ಸಚಿವೆ ವಿವರಿಸಿದ್ದರೆ ಮಹಿಳೆಯರ ಬಗೆಗಿನ ಇವರ ಕಾಳಜಿಯನ್ನು ಮೆಚ್ಚಬಹುದಿತ್ತು. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಬೇಕಾದ ಕಾನೂನುಗಳನ್ನು ರೂಪಿಸಿ ಅನುಷ್ಠಾನ ಗೊಳಿಸಬೇಕಾದ ಹೊಣೆಗಾರಿಕೆ ಆಳುವ ಸರ್ಕಾರದ್ದು ಎಂಬುದನ್ನು ಮರೆಯುವಂತಿಲ್ಲ. ಅಂತಹ ಕಾನೂನುಗಳು, ಅದನ್ನು ಜಾರಿಗೆ ತರುವ ಸರ್ಕಾರಗಳು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ಮಹಿಳಾ ಸಬಲೀಕರಣ ಸಾಧ್ಯವಾಗಬಹುದು. ಬಾಯಿ ಚಪಲಕ್ಕೆ ಆಡುವ ಮಾತುಗಳು ಚಪ್ಪಾಳೆ ಗಿಟ್ಟಿಸಬಲ್ಲವೇ ವಿನಾ ಸಂಸ್ಕೃತಿ ಸಚಿವೆಗೆ ಶೋಭೆ ತರಲಾರವು ಎಂಬುದನ್ನು ಅವರು ಮನಗಾಣಬೇಕು.
- ನಾ.ದಿನೇಶ್ ಅಡಿಗ, ಮೈಸೂರು
ಯಾಕಾಗಿ ಈ ಅಪವ್ಯಯ?
ಚುನಾವಣೆಗಾಗಿ ಎರಡು ಕ್ಷೇತ್ರಗಳಲ್ಲಿ ಕೆಲವು ರಾಜಾಕಾರಣಿಗಳು ಸ್ಪರ್ಧಿಸುವ ಚಪಲ ಹೊಂದಿರುತ್ತಾರೆ. ಈ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮತ್ತೊಂದು ಕ್ಷೇತ್ರವನ್ನು ತೆರವುಗೊಳಿಸಬೇಕಾಗುತ್ತದೆ. ಆಗ ಅಲ್ಲಿ ಮರುಚುನಾವಣೆ ಆಗಬೇಕು. ಮತ್ತೆ ಲಕ್ಷಾಂತರ ರುಪಾಯಿ ಖರ್ಚು, ಸರ್ಕಾರಿ ಯಂತ್ರಗಳ ಕಾರ್ಯಕ್ಕೆ ತೊಡಕು. ಇದೆಲ್ಲಾ ಬೇಕಾ? ಹಾಗೆಯೇ, ವಿಧಾನಸಭೆ/ಲೋಕಸಭೆಗೆ ಆಯ್ಕೆಯಾಗಿರುವ ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಅವಧಿಗೆ ಮುನ್ನವೇ ರಾಜಿನಾಮೆ ನೀಡಿ ಮತ್ತೊಂದು ಚುನಾವಣೆಯಲ್ಲಿ ಭಾಗವಹಿಸುವ ಚಪಲ ಹೊಂದಿರುತ್ತಾರೆ. ಉದಾಹರಣೆಗೆ ಯಡಿಯೂರಪ್ಪ, ಅಶೋಕ್, ಸದಾನಂದಗೌಡ ಮೊದಲಾದವರು ವಿಧಾನಸಭೆ/ಪರಿಷತ್ ಸದಸ್ಯರಾಗಿದ್ದಾಗ್ಯೂ ಇದೀಗ ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಯಾರಾಗಿದ್ದಾರೆ. ಇದರಿಂದ ಹಾಲಿ ಪ್ರತಿನಿಧಿಸುತ್ತಿರುವ ಅವರ ಕ್ಷೇತ್ರಗಳು ಅನಾಥವಾಗಿ ಅಲ್ಲಿ ಮರುಚುನಾವಣೆಯ ಅನವಶ್ಯಕ ಖರ್ಚು ಆಗಬೇಕಾಗುತ್ತದೆ. ಅವರ ಮನಸ್ಸಿನಲ್ಲಿ ಈಗ ಪ್ರತಿನಿಧಿಸುತ್ತಿರುವ ಕ್ಷೇತ್ರದ ಸರ್ವಾಂಗೀಣ ಪ್ರಗತಿ ಮಾಡಿ ಮುಗಿಸಿದ್ದೇವೆ ಎಂಬ ಭಾವನೆಯೋ ಅಥವಾ ಇಲ್ಲಿ ಕಾರ್ಯನಿರ್ವಹಿಸಲು ನಾನು ಅಸಮರ್ಥ ಎಂಬ ಭಾವನೆಯೇ ಎಂಬುದನ್ನು ಅಂತಹ ರಾಜಕಾರಣಿಗಳೇ ಉತ್ತರಿಸಬೇಕು. ಚುನಾವಣಾ ಆಯೋಗವು ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸುವುದನ್ನು ಹಾಗೂ ಅವಧಿಗೆ ಮುನ್ನ ರಾಜಿನಾಮೆಯನ್ನು (ಸೂಕ್ತ ಕಾರಣವಿಲ್ಲದೆ) ನೀಡುವುದನ್ನು ನಿಷೇಧಿಸಬೇಕು. ಈ ಬಗ್ಗೆ ಚಿಂತನೆ ಜರೂರು ಆಗಲೇಬೇಕಾಗಿದೆ.
- ಎಲ್.ಎಂ. ಮಾಧವಶಾಸ್ತ್ರಿ, ಶಿವಮೊಗ್ಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

