ಸಂಪಾದಕೀಯ

ಲೋಕಸಭೆಯಲ್ಲಿ ಆಮ್ ಆದ್ಮಿ ಪೇಟೆ-ಪಟ್ಟಣದ ಆಸಕ್ತಿ

Published On :

ರಾಷ್ಟ್ರೀಯ ರಾಜಧಾನಿಯಾದ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಚುನಾವಣೆಯ ಸಾಧನೆಯನ್ನು ಸೀಮಿತವಾದದ್ದು ಎಂದು ಬಣ್ಣಿಸಬಹುದಾದರೂ, ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಲು ಆ ಪಕ್ಷದ ಪ್ರಕಟಿತ ನಿರ್ಧಾರ, ಇಡೀ ದೇಶದಲ್ಲಿ ಅಲ್ಲದಿದ್ದರೂ, ಎಲ್ಲ ಪ್ರದೇಶಗಳ ಪೇಟೆ - ಪಟ್ಟಣಗಳಲ್ಲಿ ಆಸಕ್ತಿಯನ್ನು ಕೆರಳಿಸಿರುವುದು ನಿಜ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ದೆಹಲಿಯಲ್ಲಿ ಆಮ್ ಆದ್ಮಿಯ ಚುನಾವಣೆಯ ಯಶಸ್ಸಿನ ಹಿಂದೆ ವರ್ಷದಿಂದಲೂ ಜನಲೋಕಪಾಲ ಕಾಯಿದೆಗಾಗಿ ವಿಖ್ಯಾತ ನಿರಶನ ಸತ್ಯಾಗ್ರಹಿ ಅಣ್ಣಾ ಹಜಾರೆ ತಂಡದ ಹೋರಾಟದ ಹಿನ್ನೆಲೆ ಇತ್ತು. ಪ್ರಚಾರ ಮಾಧ್ಯಮದ "ಪ್ರಚಂಡ" ಎನ್ನಬಹುದಾದ ಬೆಂಬಲವೂ ಇತ್ತು. ಈಗಾಗಲೇ ಆಮ್ ಆದ್ಮಿ ಪಾರ್ಟಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ರಾಷ್ಟ್ರೀಯ ಜೀವನದಲ್ಲಿ ಪಾಲುಗೊಳ್ಳುವ ಬಯಕೆ ಪ್ರತಿಷ್ಠಿತ - ಭದ್ರಲೋಕದ ಸಮಾಜದ ಅನೇಕರನ್ನು ಬಾಧಿಸುತ್ತಿರುವಂತಿದೆ. ಮೀರಾ ಸನ್ಯಾಲ್, ಕ್ಯಾಪ್ಟನ್ ಗೋಪಿನಾಥ್, ಸಮೀರ್ ನಾಯರ್, ವಿ. ಬಾಲಕೃಷ್ಣನ್ ಅವರಂತಹವರೆಲ್ಲ ಪಕ್ಷವನ್ನು ಸೇರಲು ಸಿದ್ಧರಾಗಿದ್ದಾರೆ. ಏನಿದು ಲೆಕ್ಕಚಾರ? ಸಾಮಾನ್ಯ ಜನರ ಅನಿಸಿಕೆಯಂತೆ, ಮಹಾನಗರಗಳಲ್ಲಿ, ಪೇಟೆ-ಪಟ್ಟಣಗಳಲ್ಲಿ, ಆಮ್ ಆದ್ಮಿ ಪಕ್ಷಕ್ಕೆ ಜನಬೆಂಬಲ ಸಿಗಬಹುದೆನ್ನುವ ಭಾವನೆ ಗರಿಗಟ್ಟುತ್ತಿದೆ.
543 ಲೋಕಸಭೆ ಕ್ಷೇತ್ರಗಳಲ್ಲಿ ಸುಮಾರು 113 ಕ್ಷೇತ್ರಗಳನ್ನು ನಗರ-ಪಟ್ಟಣ ಕ್ಷೇತ್ರಗಳೆಂದು ಭಾವಿಸಬಹುದು. ಸುಮಾರು 200 ಕ್ಷೇತ್ರಗಳಲ್ಲಿ, ಗ್ರಾಮೀಣ ಪ್ರದೇಶಗಳ ನಡುವೆಯೇ ಪೇಟೆ ಸ್ವರೂಪದ ಊರುಗಳೂ ಇವೆ. ಹೀಗಾಗಿ ನಗರವಾಸಿಗಳ ಬೆಂಬಲವನ್ನು ಆಮ್ ಆದ್ಮಿ ಆಕರ್ಷಿಸಿದರೆ, ಕಾಂಗ್ರೆಸ್ - ಬಿಜೆಪಿಗಳ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಸಂಭವವನ್ನು ಯಾರೂ ತಳ್ಳಿಹಾಕುವಂತಿಲ್ಲ.
ತುಂಬಾ ಹಿಂದೆ ಚಕ್ರವರ್ತಿ ರಾಜಗೋಪಾಲಚಾರಿ ಅವರ ನೇತೃತ್ವದ ಸ್ವತಂತ್ರ ಪಾರ್ಟಿ ಲೋಕಸಭೆ ಚುನಾವಣೆಯ ಕಣಕ್ಕೆ ಇಳಿದಾಗ, ಆ ಪಕ್ಷವೂ ಇದೇ ಪರಿಸ್ಥಿತಿಯಲ್ಲಿತ್ತು. ನಿಜ. ಸ್ವತಂತ್ರ ಪಾರ್ಟಿ ಚುನಾವಣೆಯಲ್ಲಿ ಬಹುಮತ ಗಳಿಸಲಿಲ್ಲ. ಆದರೆ ಮೊಟ್ಟಮೊದಲ ಬಾರಿಗೆ ಲೋಕಸಭೆಯಲ್ಲಿ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕೃತವಾಗಿ ಮನ್ನಣೆ ಪಡೆದ ಪ್ರತಿಪಕ್ಷದ ಸ್ಥಾನ - ಮಾನ ಗಳಿಸಿತ್ತು.
ಸಂಪರ್ಕ ಕ್ರಾಂತಿಯ ಫಲ ಎಲ್ಲ ಜನವರ್ಗಗಳನ್ನು ತಲುಪಿರುವ ಪ್ರಸ್ತುತ ಸನ್ನಿವೇಶದಲ್ಲಿ ಇನ್ನು ಉಳಿದಿರುವ ನಾಲ್ಕೈದು ತಿಂಗಳಲ್ಲಿ ಪಕ್ಷದ ಸಂದೇಶವನ್ನು ದೇಶದ ಮೂಲೆ ಮೂಲೆಗಳಿಗೂ ಮುಟ್ಟಿಸುವುದು ಸಾಧ್ಯ. ಹಿಂದೊಮ್ಮೆ ಕಾಂಗ್ರೆಸ್ ತನ್ನ ಹಸ್ತದ ಚಿಹ್ನೆಯನ್ನು, ಜನತಾ ಪಾರ್ಟಿಗೆ ತನ್ನ ನೇಗಿಲು ಹೊತ್ತ ರೈತನ ಚಿಹ್ನೆಯನ್ನು ದೇಶದ ಎಲ್ಲ ಕಡೆಗಳಲ್ಲೂ ಪರಿಚಯ ಮಾಡಿಕೊಡಲು ಹದಿನೈದು ದಿನಗಳೇ ಸಾಕಾಗಿತ್ತು. ಈಗ ಆ ಕೆಲಸವನ್ನು ಎಲ್ಲ ಪಕ್ಷಗಳೂ ಒಂದೇ ವಾರದಲ್ಲೇ ಮಾಡಬಹುದು.
ನಿಜ. ಲೋಕಸಭೆ ಚುನಾವಣೆಯ ಸಂಬಂಧದಲ್ಲಿ ರಾಜಕೀಯ ಪಕ್ಷಗಳು, ಶಕ್ತಿಗಳು ಯಾವ ಮಾರ್ಗದಲ್ಲಿ ಸಾಗಬಹುದೆನ್ನುವುದನ್ನು ಈಗಲೇ ಹೇಳುವಂತಿಲ್ಲ. ಪ್ರಬಲ ಪ್ರಾದೇಶಿಕ ಪಕ್ಷಗಳು ತಮ್ಮ ಏಕತೆಯನ್ನು ಕಾಪಾಡಿಕೊಂಡು ಬರಬಹುದೆಂದು ಹೇಳುವುದು ಯಾರಿಗೂ ಸಾಧ್ಯವಿಲ್ಲ.
ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವಠಾಕ್ರೆ, ರಾಜ್ ಠಾಕ್ರೆ ಅವರ ನಡುವೆ ಹಂಚಿಹೋಗುವುದೆಂದು ಯಾರು ಊಹಿಸಿದ್ದರು ಹೇಳಿ. ಅದೇ ರೀತಿ ತಮಿಳು ನಾಡಿನಲ್ಲಿ ವಯೋವೃದ್ಧ ಮುತ್ತುವೇಲು ಕರುಣಾನಿಧಿ ನಾಯಕತ್ವದ ದ್ರಾವಿಡ ಮುನ್ನೇಟ್ರ ಕಳಗಂ, ಅವರ ಇಬ್ಬರು ಪುತ್ರರಾದ ಮಾಜಿ ಉಪ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಮಾಜಿ ಕೇಂದ್ರ ಮಂತ್ರಿ ಅಳಗಿರಿ ಅವರಿಬ್ಬರ ಮಧ್ಯೆ ಹಂಚಿ ಹೋಗುವ ಸಂಭವವನ್ನು ಯಾರಾದರೂ ಕನಸು ಕಂಡಿದ್ರಾ? ಇದ್ದಕ್ಕಿದ್ದಂತೆ, ಅಣ್ಣಾ ಡಿಎಂಕೆಯ ಪ್ರಶ್ನಾತೀತ ನಾಯಕಿ, ಜಯಲಲಿತಾ ಅವರೂ ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ಕಡೆಗಾಣಿಸುವಂತಿಲ್ಲ ಎನ್ನುವ ನೋಟೀಸನ್ನೂ ನೀಡಿದ್ದಾಗಿದೆ. ರಾಹುಲ ಗಾಂಧಿ ಮುನ್ನಡೆಸಲಿರುವ ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆಯ ಜತೆ ಕೈ ಜೋಡಿಸುವುದಾಗಲಿ, ಬಿಹಾರದ ಲಾಲೂ ಪ್ರಸಾದ ಯಾದವ್‌ರನ್ನು ಅಪ್ಪಿಕೊಳ್ಳುವುದಾಗಲಿ ಸಾಧ್ಯವೇ?
ಹಿಂದೆ, 1990 ರ ದಶಕದಲ್ಲಿ ದೇವೇಗೌಡರು ಪ್ರಧಾನಿಯಾದಾಗ ಅವರ ಪಕ್ಷವಾದ ಜನತಾದಳಕ್ಕೆ ಲೋಕಸಭೆಯಲ್ಲಿ ಇದ್ದಿದ್ದು 44 ಸ್ಥಾನಗಳು ಮಾತ್ರ. ಈಗಲೂ ದೇವೇಗೌಡರು ಚುನಾವಣೆ ಪೂರ್ವದಲ್ಲಿ ಅಲ್ಲದಿದ್ದರೂ, ಚುನಾವಣೆಯ ಅನಂತರ ಜನ್ಮತಾಳಬಹುದಾದ ಮೂರನೆಯ ರಂಗದ ವಿಚಾರವನ್ನು ಆಗಾಗ ಪ್ರಸ್ತಾಪಿಸುವುದುಂಟು.
ಇವೆಲ್ಲದರ ಹಿನ್ನೆಲೆಯಲ್ಲಿ, ಈಗಿನ ಪರಿಸ್ಥಿತಿಯಲ್ಲಿ, ಆಮ್ ಆದ್ಮಿ ಪಾರ್ಟಿ ದೇಶದಲ್ಲಿ ಸುಮಾರು 150 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಸಾಧ್ಯವಾಗಬಹುದು. ದೆಹಲಿಯಲ್ಲಿ ಕೆಲವು ಜನವರ್ಗಗಳು, ವಿಧಾನಸಭೆಗೆ ಕೇಜ್ರಿವಾಲ, ಲೋಕಸಭೆಗೆ ನರೇಂದ್ರ ಮೋದಿ ಎನ್ನುವ ರೀತಿಯಲ್ಲಿ ಪ್ರಚಾರ ಮಾಡಿದ ವರದಿಗಳೂ ಇವೆ.
ತಮಗೆ ಅನುಕೂಲವಾದ ಪರಿಸ್ಥಿತಿ ನಿರ್ಮಾಣವಾದರೆ, ಸುಮಾರು 30-40 ಕ್ಷೇತ್ರಗಳಲ್ಲಿ ತಮ್ಮ ತಮ್ಮ ಪಕ್ಷಗಳನ್ನು ಗೆಲ್ಲಿಸಬಲ್ಲ ಪ್ರಾದೇಶಿಕ ನಾಯಕರು ತಲೆ ಎತ್ತಿರುವಂತಿದೆ. ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಬಿಹಾರದಲ್ಲಿ ನಿತೀಶ್ ಕುಮಾರ್, ತಮಿಳುನಾಡಿನಲ್ಲಿ ಜಯಲಲಿತಾ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಆಂಧ್ರದ ಚಂದ್ರಬಾಬು ನಾಯ್ಡು ಯಾವುದೇ ಸ್ಥಾಪಿತ ರಾಷ್ಟ್ರೀಯ ರಾಜಕೀಯ ಪಕ್ಷದ ಜತೆ ಸೇರುವಂತಿಲ್ಲ. ಮಾತುಕತೆ ನಡೆಯುತ್ತಿರಬಹುದು.
ಈಗ ಆಮ್ ಆದ್ಮಿ ಪಾರ್ಟಿ ದೆಹಲಿಗೇ ಸೀಮಿತವಾದ ಪ್ರಾದೇಶಿಕ ಪಕ್ಷದ ಮಾನ್ಯತೆ ಪಡೆಯುವುದು ಸಾಧ್ಯ. ಆದರೆ ದೇಶದ ಎಲ್ಲ ಭಾಗಗಳಲ್ಲೂ ಆ ಪಕ್ಷದ ಟೋಪಿ ಧರಿಸಿ, ಪೊರಕೆಯನ್ನು ಪ್ರದರ್ಶಿಸಲು ಸಿದ್ಧವಾಗಿರುವ ಜನರಿದ್ದಾರೆ. ಆ ಪಕ್ಷಕ್ಕೆ ರಾಷ್ಟ್ರೀಯ ಪ್ರಚಾರಕ್ಕೇನೂ ಬಡತನವಿಲ್ಲ. ಯಾರಿಗೆ ಗೊತ್ತು ರಾಜಕೀಯದಲ್ಲಿ ಯಾವಾಗ ಬೇಕಾದರೂ, ಏನು ಬೇಕಾದರೂ ಆಗಬಹುದು ಎನ್ನುವ ಮಾತು ನಿಜವಾದರೂ ಆಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.